ಕನ್ನಡ ನಾಡಿನ ವನ್ಯಜಗತ್ತನ್ನು ಜಗತ್ತಿಗೆ ಪರಿಚಯಿಸುವ ಪುನೀತ್‌ ರಾಜಕುಮಾರ್‌ ಅವರ ಮಹಾತ್ವಾಕಾಂಕ್ಷೆಯ ‘ಗಂಧದ ಗುಡಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ‘ವೈಲ್ಡ್‌ ಕರ್ನಾಟಕ’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಮೋಘವರ್ಷ ಚಿತ್ರದ ನಿರ್ದೇಶಕರು. ಅತ್ಯಾಧುನಿಕ ಉಪಕರಣಗಳನ್ನು ಬಳಕೆ ಮಾಡಿ ಚಿತ್ರಿಸಿರುವ ಸಿನಿಮಾ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವರನಟ ಡಾ.ರಾಜಕುಮಾರ್‌ ಅಭಿನಯದ ‘ಗಂಧದ ಗುಡಿ’ (1973) ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಮಹತ್ವದ ಸಿನಿಮಾ. ಈ ಲ್ಯಾಂಡ್‌ಮಾರ್ಕ್‌ ಸಿನಿಮಾ ತೆರೆಕಂಡು ಸರಿಸುಮಾರು ಐದು ದಶಕಗಳ ನಂತರ ಮತ್ತೊಮ್ಮೆ ‘ಗಂಧದ ಗುಡಿ’ ಸಿನಿಮಾ ಬರುತ್ತಿದೆ. ಕನ್ನಡ ನಾಡಿನ ವನ್ಯಜಗತ್ತು, ಪ್ರಾಕೃತಿಕ ಸಂಪತ್ತನ್ನು ಪರಿಚಯಿಸುವುದರೊಂದಿಗೆ ಉತ್ತಮ ಸಂದೇಶ ಹೊಂದಿರುವ ಇದು ಸಾಕ್ಷ್ಯಚಿತ್ರವಲ್ಲ, ಬದಲಿಗೆ ಫೀಚರ್‌ ಸಿನಿಮಾ ಎನ್ನುವುದು ವಿಶೇಷ. “ಇದೊಂದು ಹೊಸ ಜಾನರ್‌ನ ಸಿನಿಮಾ. ಪ್ರೇಕ್ಷಕರಿಗೆ ಮುದ ನೀಡಲಿದೆ” ಎಂದು ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾದಲ್ಲಿ ಪುನೀತ್‌ ರಾಜಕುಮಾರ್‌ ಹೇಗೆ ಕಾಣಿಸಿಕೊಂಡಿರಬಹುದು ಎನ್ನುವ ಕುತೂಹಲ ಎಲ್ಲರದ್ದು. ಪಿಆರ್‌ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಮತ್ತು ಮಡ್‌ಸ್ಕಿಪ್ಪರ್‌ ಜೊತೆಗೂಡಿ ನಿರ್ಮಿಸಿರುವ ಚಿತ್ರಕ್ಕೆ ‘ವೈಲ್ಡ್‌ ಕರ್ನಾಟಕ’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಮೋಘವರ್ಷ ಅವರ ನಿರ್ದೇಶನವಿದೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ, ಪ್ರತೀಕ್‌ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ.

‘ಗಂಧದ ಗುಡಿ’ ಸಿನಿಮಾದ ಸಿನಾಪ್ಸಿಸ್‌ ಹೇಳುವುದು ಹೀಗೆ…
“ನಾಡಿನ ಘನತೆಯನ್ನು ಜಗತ್ತಿಗೆ ಪರಿಚಯಿಸುವ ಕನಸಿನೊಂದಿಗೆ ಪುನೀತ್‌ ಅವರು ಕೈಗೊಂಡ ವಿಶಿಷ್ಟ ಪಯಣವೇ ‘ಗಂಧದ ಗುಡಿ’. ಪುನೀತ್‌ ಅವರ ದೃಷ್ಟಿಕೋನದಲ್ಲಿ ಕರ್ನಾಟಕದ ಸೊಬಗು ಅನಾವರಣಗೊಳ್ಳುವ ಹೊಸ ಬಗೆಯ ಈ ಪ್ರಯೋಗಕ್ಕೆ ‘ವೈಲ್ಡ್‌ ಕರ್ನಾಟಕ’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಅಮೋಘವರ್ಷ ಅವರ ನಿರ್ದೇಶನವಿದೆ. ಒಬ್ಬ ಸೂಪರ್‌ಸ್ಟಾರ್‌ ಮತ್ತು ವನ್ಯಜೀವಿ ಛಾಯಾಗ್ರಾಹಕ ಜೊತೆಗೂಡಿ ಒಂದು ಭೂಪ್ರದೇಶವನ್ನು ಅನ್ವೇಷಣೆ ಮಾಡಿರುವ ಚಿತ್ರವೊಂದು ಬಹುಶಃ ಜಗತ್ತಿನ ಯಾವುದೇ ಭಾಷೆಯಲ್ಲಿಯೂ ಬಂದಿಲ್ಲವೆಂದು ಹೇಳಬಹುದು. ಕನ್ನಡ ನಾಡು, ಕಾಡು, ಭಾಷೆ, ಜನ, ಸಂಸ್ಕೃತಿ… ಇವೆಲ್ಲಾ ಒಂದನ್ನೊಂದು ಬೆಸೆದುಕೊಂಡಿವೆ ಎನ್ನುವುದನ್ನು ಪುನೀತ್‌ ರಾಜಕುಮಾರ್‌ ಅರಸುತ್ತಾ ಹೋಗುವುದರ ನೈಜ ಚಿತ್ರಣವೇ ‘ಗಂಧದ ಗುಡಿ’. ಅತ್ಯಾಧುನಿಕ ಉಪಕರಣಗಳನ್ನು ಬಳಕೆ ಮಾಡಿ ನಾಡಿನ ದೃಶ್ಯವೈಭವವನ್ನು ಸೆರೆಹಿಡಿದು ಪ್ರೇಕ್ಷಕರಿಗೆ ಉಣಬಡಿಸುವುದರ ಜೊತೆಗೆ ಎಲ್ಲಿಯೂ ಬೋಧನೆ ಎನ್ನಿಸದಂತೆ ಕುತೂಹಲಕರಾಗಿ ಕಥನವನ್ನು ಕಟ್ಟುವ ಪ್ರಯತ್ನ ಈ ಚಿತ್ರದಲ್ಲಾಗಿದೆ. ಚಿತ್ರಮಂದಿರದ ಅನುಭವಕ್ಕಾಗಿಯೇ ತಯಾರಾಗಿರುವ ಸಿನಿಮಾ ನೇರವಾಗಿ ನಮ್ಮ ನಾಡಿನ ವಿಶೇಷ ತಾಣಗಳಿಗೆ ಕೊಂಡೊಯ್ದು ರೋಮಾಂಚನಗೊಳಿಸುವುದಷ್ಟೇ ಅಲ್ಲದೆ ಅವುಗಳನ್ನು ಉಳಿಸಿಕೊಳ್ಳುವುದರಲ್ಲಿ ನಮ್ಮ ಪಾತ್ರವೇನು ಎನ್ನುವುದನ್ನು ಮನದಟ್ಟು ಮಾಡಿಸಲಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ ʼಗಂಧದ ಗುಡಿʼ ಅತೀ ಶೀಘ್ರದಲ್ಲಿ ತನ್ನ ಕಂಪನ್ನು ವಿಶ್ವದೆಲ್ಲೆಡೆ ಹರಡಲಿದೆ.”

ಪುನೀತ್‌ ರಾಜಕುಮಾರ್‌ ಅವರ ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗೆ ಚಿತ್ರರಂಗದ ಸೇರಿದಂತೆ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವಿಟರ್‌ನಲ್ಲಿ ಈ ಯೋಜನೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಶುಭಾಶಯ ಕೋರಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಟೀಸರ್‌ ಶೇರ್‌ ಮಾಡಿದ್ದಾರೆ. ಅಪ್ಪು ಅಗಲಿಕೆಯ ನಂತರ ಅವರ ಸಿನಿಮಾ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ನೋವನ್ನುಂಟುಮಾಡಿದೆ.

LEAVE A REPLY

Connect with

Please enter your comment!
Please enter your name here