ಕಿರುತೆರೆ ನಟಿ ದಿವ್ಯಾ ಉರುಡುಗ ಮತ್ತು ಬೈಕ್‌ ರೇಸರ್‌ ನಟನೆಯ ನೂತನ ಸಿನಿಮಾ ಚಿತ್ರೀಕರಣದಲ್ಲಿದೆ. ಅರವಿಂದ್‌ ಕೌಶಿಕ್‌ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.

‘ಬಿಗ್‌ಬಾಸ್’ ಖ್ಯಾತಿಯ ಯುವಜೋಡಿ ಅರವಿಂದ್ ಕೆ ಪಿ ಮತ್ತು ದಿವ್ಯಾ ಉರುಡುಗ ತೆರೆಯ ಮೇಲೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ‘ಅರ್ಧಂಬರ್ಧ ಪ್ರೇಮಕಥೆ’ ಎಂದು ನಾಮಕರಣವಾಗಿದೆ. ಹುಲಿರಾಯ, ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಗುರುತಿಸಿಕೊಂಡವರು ಅರವಿಂದ್ ಕೌಶಿಕ್. ಬೈಕ್ ರೇಸರ್ ಅರವಿಂದ್‌ ಅವರನ್ನು ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಚಿತ್ರದ ಆಡಿಯೋ ರೈಟ್ಸ್‌ A2 ಮ್ಯೂಸಿಕ್‌ ಚಾನೆಲ್‌ಗೆ ಬಿಕರಿಯಾಗಿದೆ. ‘ಪ್ರೀತಿ ಎನ್ನುವುದು ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತೆ. ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದು ಉಳಿಯೋದು ಕಷ್ಟ. ಏಕೆಂದರೆ ಅದು ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಬದುಕಬೇಕಾಗಿರುತ್ತೆ, ಇಂಥ ಒಂದು ಲವ್‌ಸ್ಟೋರಿಯೇ ಅರ್ಧಂಬರ್ಧ ಪ್ರೇಮಕಥೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ನಿರ್ದೇಶಕ ಅರವಿಂದ್ ಕೌಶಿಕ್.

ಬಕ್ಸಸ್ ಮೀಡಿಯಾ, ಲೈಟ್‌ಹೌಸ್ ಮೀಡಿಯಾ ಮತ್ತು ಆರ್‌ಎಸಿ ವಿಷುವಲ್ಸ್ ಜೊತೆಗೂಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಸೂರ್ಯ ಛಾಯಾಗ್ರಹಣ ನಿರ್ವಹಿಸುತ್ತಿದ್ದರೆ, ಸಂತೋಷ್ ರಾಧಾಕೃಷ್ಣನ್ ಅವರು ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ಕೆಲಸವನ್ನೂ ನಿಭಾಯಿಸಿದ್ದಾರೆ. Rapper ಅಲೋಕ್, ಶ್ರೇಯಾ, ವೆಂಕಟ್‌ಶಾಸ್ತ್ರಿ, ಪ್ರದೀಪ್‌ ರೋಷನ್, ಸೂರಜ್ ಹೂಗಾರ್, ಸುಜಿತ್‌ಶೆಟ್ಟಿ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಮೇಹು ಸಂಕಲನ, ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ. ಒಂದು ವಿಶೇಷ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ತೆರೆಯ ಮೇಲೆ ಒಟ್ಟಿಗೆ ನಟಿಸುತ್ತಿರುವ ದಿವ್ಯಾ ಮತ್ತು ಅರವಿಂದ್‌ ನಿಜ ಬದುಕಿನಲ್ಲೂ ಜೋಡಿಯಾಗಲಿದ್ದಾರೆ ಎನ್ನುವ ವದಂತಿ ಇದೆ. ಸೋಷಿಯಲ್‌ ಮೀಡಿಯಾದಲ್ಲಿ ದಿವ್ಯಾ – ಅರವಿಂದ್‌ ಫೋಟೊ, ವೀಡಿಯೋಗಳು ಈ ವದಂತಿಗೆ ಇಂಬು ನೀಡುತ್ತಿವೆ.

LEAVE A REPLY

Connect with

Please enter your comment!
Please enter your name here