ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ‘ಡೋಂಟ್ ಲುಕ್ ಅಪ್’ ತಾಂತ್ರಿಕವಾಗಿ ಅಚ್ಚುಕಟ್ಟಾಗಿರುವ ಸಿನಿಮಾ. ಆದರೆ ಲೇವಡಿ-ವಿಡಂಬನೆಯ ಅತಿಯಾದ ಬಳಕೆ ಚಿತ್ರಕ್ಕೆ ಹೇಗೆ ಘಾಸಿಯಾಗಬಹುದು ಎಂಬುದಕ್ಕೆ ಉದಾಹರಣೆ ಆಸ್ಕರ್ ವಿಜೇತ ನಿರ್ದೇಶಕರ ಈ ಚಲನಚಿತ್ರ.
ಪೂರ್ತಿ ವಿಶ್ವವೇ ಕೊನೆಗೊಳ್ಳುವ ದಿನದ ಕತೆ ಹಾಲಿವುಡ್‌ಗೆ ಹಿಂದಿನಿಂದಲೂ ಅಚ್ಚುಮೆಚ್ಚು. ಅಂಥ ಕತೆಯುಳ್ಳ ಹಲವು ಸಿನಿಮಾಗಳು ಇಂಗ್ಲೀಷಲ್ಲಿ ಬಂದಿವೆ. ಅಂಥದ್ದೇ ಮತ್ತೊಂದು ಕತೆ ‘ಡೋಂಟ್ ಲುಕ್ ಅಪ್’. ಆ ಬಗೆಯ ಇತರೆ ಸಿನಿಮಾಗಳಂತೆ ಭೀತಿ ಉಂಟು ಮಾಡುವ ಬದಲು ತುಸು ಹಾಸ್ಯ, ಲಘು ಲೇವಡಿ ಮತ್ತು ಬಿಗಿ ವಿಡಂಬನೆ ಇಲ್ಲಿ ಕತೆಯ ಮೂಲ ಉದ್ದೇಶಿತ ಅಂಶ. ಅಮೆರಿಕ ಸರ್ಕಾರದ ನೀತಿಗಳು ವಿಡಂಬನೆಗೆ ಒಳಪಟ್ಟರೆ ಸಾರ್ವಜನಿಕ ಜೀವನದಲ್ಲಿರುವ ಪ್ರಮುಖ ವ್ಯಕ್ತಿಗಳನ್ನು ಲೇವಡಿಗೆ ಈಡು ಮಾಡಲಾಗಿದೆ.
ಡಾ. ಮಿಂಡಿ (ಲಿಯೋನಾರ್ಡೋ ಡಿಕಾಪ್ರಿಯೋ) ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುವ ಕೇಟ್ ಡಿಬಿಯಾಸ್ಕಿ (ಜೆನ್ನಿಫರ್ ಲಾರೆನ್ಸ್) ಕ್ಷುದ್ರಗ್ರಹವೊಂದನ್ನು ಗಮನಿಸುತ್ತಾಳೆ. ಐದಾರು ಕಿಲೋಮೀಟರ್ ವ್ಯಾಸವಿರುವ ಅದು ಭೂಮಿಯ ಪಥದಲ್ಲೇ ಇದೆ. ಬಂದಪ್ಪಳಿಸಿದರೆ ಎಂಟು ಅಣುಬಾಂಬ್ ಸ್ಫೋಟದಷ್ಟು ವಿಧ್ವಂಸಕ. ಲೆಕ್ಕ ಹಾಕಿದಾಗ ಇನ್ನೇನು ಆರೇ ತಿಂಗಳಲ್ಲಿ ದುರಂತ ಸಂಭವಿಸಲಿದೆ ಎಂಬುದು ವಿಜ್ಞಾನಿಗಳಿಗೆ ಖಾತರಿಯಾಗುತ್ತದೆ.
ಈ ಘನ ಗಂಭೀರ ವಿಚಾರವನ್ನು ಅಮೆರಿಕದ ಅಧ್ಯಕ್ಷರಿಗೆ ತಿಳಿಸಲು ನಾಸಾ ಜತೆಯಾಗುತ್ತದೆ. ಆದರೆ ಅಧ್ಯಕ್ಷೆಗಾಗಲೀ, ಆಕೆಯ ತಂಡಕ್ಕಾಗಲಿ ಈ ಸಂಭಾವ್ಯ ದುರಂತ ದೊಡ್ಡದೆನಿಸುವುದಿಲ್ಲ, ಅವರ ಪಾಲಿಗೆ ಆರು ತಿಂಗಳ ಒಳಗೆ ಬರಲಿರುವ ಮಧ್ಯಾವಧಿ ಚುನಾವಣೆಯೇ ಚಿಂತಾಜನಕ ವಿಚಾರ. ಕ್ಷುದ್ರಗ್ರಹ ಎಂಬ ಪ್ರತಿಮೆ ಬಳಸಿ ಈ ಸಿನಿಮಾ ಹೇಳುತ್ತಿರುವುದು ಜಾಗತಿಕ ತಾಪಮಾನ ಏರಿಕೆಯ ವಿಷಯ.
ಅಧ್ಯಕ್ಷರ ಶೀತಲ ಪ್ರತಿಕ್ರಿಯೆ ನಿರೀಕ್ಷಿತ ಫಲ ನೀಡದ ಕಾರಣ ಈ ವಿನಾಶಕಾರಿ ಸುದ್ದಿಯನ್ನು ಮಾಧ್ಯಮಗಳ ಮುಂದೆ ಇರಿಸಲಾಗುತ್ತದೆ. ಮಾಧ್ಯಮದ ದೆಸೆಯಿಂದ ಈ ವಿಚಾರ ಭಾರಿ ಚರ್ಚೆಗೆ ಒಳಪಡಬಹುದೆಂಬ ವಿಜ್ಞಾನಿಗಳ ನಿರೀಕ್ಷೆಗೆ ಮತ್ತೆ ಬೀಳುವುದೂ ತಣ್ಣೀರೇ. ಟಿವಿ ಮಾಧ್ಯಮಗಳಿಗೆ ಜಗತ್ತಿನ ನಿರ್ನಾಮಕ್ಕಿಂತಲೂ ಹೆಚ್ಚು ಪ್ರಮುಖವಾಗುವುದು ಪಾಪ್ ಹಾಡುಗಾರ್ತಿ ಹಾಗೂ ಆಕೆಯ ಬಾಯ್ ಫ್ರೆಂಡ್ ನಡುವಿನ ಬ್ರೇಕಪ್. ಮದುವೆಯಾಗುವ ಮೊದಲೇ ವಿಚ್ಛೇದನಕ್ಕೆ ಸಿದ್ಧವಾದ ಸಂಬಂಧವನ್ನು ಸ್ಟುಡಿಯೋದಲ್ಲೇ ಸರಿಪಡಿಸುವುದು ಟಿವಿ ಮಾಧ್ಯಮದ ಪ್ರಮುಖ ಆದ್ಯತೆ.
ಹಾಗಾಗಿ ವಿಜ್ಞಾನಿಗಳಿಗೆ ವಿಷಯ ಪ್ರಸ್ತಾಪಿಸಲು ಸಿಗುವುದು ಕಾರ್ಯಕ್ರಮದ ಕಟ್ಟ ಕಡೆಯ ಐದು ನಿಮಿಷ ಮಾತ್ರ. ಅದರಲ್ಲೂ ಮಧ್ಯ ಬಾಯಿ ಹಾಕಿ ವಿಚಾರದ ಗಾಂಭೀರ್ಯವನ್ನು ಉಜ್ಜಿ ತೆಗೆಯುವುದು ಆ ಸುದ್ದಿ ನಿರೂಪಕರಿಗೆ ಹೇಳಿಕೊಡಬೇಕಿಲ್ಲ. ಸ್ಥಿತಿ ಹೀಗಿದ್ದಾಗ ಜಗದ ಕೊನೆ ಹತ್ತಿರವಾಗುತ್ತಿದೆ ಎಂದ ವಿಜ್ಞಾನಿಗೆ ತಲೆ ಕೆಟ್ಟು ಹದಿನಾರಾಣೆಯಾಗಲು ಬೇರೇನು ಬೇಕು ಹೇಳಿ? ಪಾಪ, ಆಕೆ ತಲೆ ಚಿಟ್ಟು ಹಿಡಿದು ಕೂಗಾಡಿಬಿಡುತ್ತಾಳೆ. ಇದರಿಂದಾಗಿ ವಿಚಾರ ಮರೆಯಾಗಿ ಕೂಗಾಟವೇ ಸುದ್ದಿಯ ಮುಖ್ಯಾಂಶವಾಗುತ್ತದೆ. ಇನ್ನೊಂದೆಡೆ, ಗಂಭೀರ್ಯ ಕಾಪಾಡಿದ ಡಾ. ಮಿಂಡಿಯನ್ನು ಆನ್‌ಲೈನ್ ಜಗತ್ತು ‘ಹ್ಯಾಂಡ್ಸಮ್ ಆ್ಯಂಡ್ ಸೆಕ್ಸಿ ಸೈಂಟಿಸ್ಟ್’ ಎಂದು ಬಣ್ಣಿಸುತ್ತದೆ. ಒಟ್ಟಿನಲ್ಲಿ ಕ್ಷುದ್ರಗ್ರಹದ ವಿಚಾರ ಜನಸಾಮಾನ್ಯರಿಗೂ ಗಂಭೀರ ವಿಚಾರ ಎಂದು ಅನಿಸುವುದೇ ಇಲ್ಲ.
ಈ ನಡುವೆ ಅಧ್ಯಕ್ಷರ ಲೈಂಗಿಕ ಹಗರಣ ಮರೆಮಾಚಲು ಇದೇ ಕ್ಷುದ್ರಗ್ರಹವನ್ನು ಆಡಳಿತ ಪಕ್ಷ ಬಳಸಿಕೊಳ್ಳುತ್ತದೆ. ಖಾಸಗಿ ಉದ್ಯಮಕ್ಕೆ ಮತ್ತಿದೇ ಕ್ಷುದ್ರಗ್ರಹವೇ ದಂಧೆ. ನೋಡುಗನ ಭಾವಕ್ಕೆ ತಲುಪಬೇಕಿರುವ ಈ ಅಂಶಗಳು ಚಿತ್ರಕತೆಯ ತಂತ್ರಗಾರಿಕೆಯಲ್ಲಿ ಕಳೆದುಹೋಗಿದೆ ಎಂಬುದೇ ವಿಪರ್ಯಾಸ.
ಆಸ್ಕರ್ ವಿಜೇತ ನಿರ್ದೇಶಕ ಮೆಕ್ ಕೇಗೆ ಸಂದೇಶ ದಾಟಿಸುವಲ್ಲಿ ಇರುವುದಕ್ಕಿಂತ ಹೆಚ್ಚಿನ ಇರಾದೆ ಲೇವಡಿ ಮಾಡುವುದರಲ್ಲಿದೆ. ವಿಜೃಂಭಿಸುವ ಲೇವಡಿ ರಸಾಸ್ವಾದನೆಗೇ ಅವಕಾಶ ಕೊಡುವುದಿಲ್ಲ. ದೃಶ್ಯಗಳ ಒಳಗೆ ಬರುವ ಬಿಡಿಬಿಡಿ ಎಡಿಟಿಂಗ್ ತಾಂತ್ರಿಕವಾಗಿ ಅತ್ಯದ್ಭುತ, ಆದರೆ ಪ್ರೇಕ್ಷಕನ ಪಾಲಿನ ವೇದನೆ. ನ್ಯೂಸ್ ಚಾನಲ್‌ಗಳಲ್ಲಿ ಸಂದರ್ಭೋಚಿತ ಮಾತನಾಡುವ ಸುದ್ದಿವಾಚಕರೂ ಸ್ಕ್ರಿಪ್ಟ್ ನೋಡಿಯೇ ಮಾತನಾಡುವುದು ಎಂದು ತೋರಿಸಲಾಗಿದ್ದರೂ ಅದು ನೋಡುಗನ ಕಣ್ಣಲ್ಲಿ ದಾಖಲಾಗುವ ಮುನ್ನವೇ ಮತ್ತೊಂದು ಫ್ರೇಮಿಗೆ ಜಾರುತ್ತದೆ. ಮಿಗಿಲಾಗಿ, ಕತೆಯ ಸಾರ ಮೊದಲಾರ್ಧದಲ್ಲೇ ಸಂಪೂರ್ಣ ತೆರೆದುಕೊಳ್ಳುವ ಕಾರಣ ನಂತರ ಸವಿಯಲು ವಿಷಯಗಳಿಲ್ಲ. ಕೊನೆಕೊನೆಗೆ ಕ್ಷುದ್ರಗ್ರಹ ಮಾಡುವ ಪರಿಣಾಮಕ್ಕಿಂತ ಸಿನಿಮಾ ಹೇಗೆ ಮುಗಿಯುತ್ತದೆ ಎಂಬ ಅಸಹನೆಯೇ ಮನಸ್ಸನ್ನು ಆವರಿಸುವುದು ಸಿನಿಮಾದ ಬಹುದೊಡ್ಡ ಸೋಲು.
ಆದಾಗ್ಯೂ ಪಾತ್ರಗಳನ್ನು ಯಾರ್ಯಾರಿಗೆ ಸಮೀಕರಿಸಲಾಗಿದೆ ಎಂಬ ಕುತೂಹಲ ಮೊದಲಾರ್ಧದಲ್ಲಿ ಇರುತ್ತದೆ ಎಂಬುದು ಸುಳ್ಳಲ್ಲ. ಡೊನಾಲ್ಡ್ ಟ್ರಂಪ್ ಎದುರು ಹೌ ಡೇರ್ ಯು ಎಂದ ಗ್ರೆಟ್ಟಾ ಥನ್ಬರ್ಗ್ ಇಲ್ಲಿ ಯುವ ವಿಜ್ಞಾನಿ ಡಿಬಿಯಾಸ್ಕಿಯಾಗಿದ್ದಾಳೆ. ಅಧ್ಯಕ್ಷೆ ಪಾತ್ರ ಡೊನಾಲ್ಡ್ ಟ್ರಂಪ್ ಆದರೆ ಜೊನಾಹ್ ಹಿಲ್ ನಿರ್ವಹಿಸಿದ ಪಾತ್ರ ಟ್ರಂಪ್‌ನ ಮಕ್ಕಳು ಹಾಗೂ ಅಳಿಯನ ಸಮೀಕರಣ. ಶತಕೋಟ್ಯಾಧಿಪತಿಯೊಬ್ಬ ಸ್ಪೇಸ್ ಎಕ್ಸ್‌ನ ಇಲಾನ್ ಮಸ್ಕ್, ಫೇಸ್ಬುಕ್ಕಿನ ಝುಕರ್‌ಬರ್ಗ್ ಹಾಗೂ ಅಮೆಜಾನಿನ ಜೆಫ್ ಬೆಸೋಸ್ ಸಮ್ಮಿಲನ. ಈ ಗಮನಿಸುವಿಕೆಯನ್ನು ನೋಡುಗನ ಮನಸ್ಸು ದಾಖಲಿಸುವುದು ಕಷ್ಟವಲ್ಲ, ಆದರೆ ಆ ಯಾವ ಪಾತ್ರಗಳೂ ಮನಮುಟ್ಟುವುದಿಲ್ಲ. ಟಿವಿ ಕಾರ್ಯಕ್ರಮಗಳೂ ಅಮೆರಿಕದ ಜನಪ್ರಿಯ ಸುದ್ದಿ ಕಾರ್ಯಕ್ರಮಗಳನ್ನು ಪ್ರತಿನಿಧಿಸುತ್ತದೆ. ಇವೆಲ್ಲದರ ನಡುವೆ ಡಿಕಾಪ್ರಿಯೊ ಅಭಿನಯ ಪ್ರಶ್ನಾತೀತ, ಆದರೂ ನಿರ್ವಹಿಸಿದ ಪ್ರಧಾನ ವಿಜ್ಞಾನಿ ಪಾತ್ರ ನೈತಿಕತೆಯ ಪರಿಧಿ ಮೀರುವ ಕಾರಣ ಅದೂ ಮನಸ್ಸಿಗೆ ಹತ್ತಿರವಾಗುವುದಿಲ್ಲ. ಆತನಿಗಾಗಿ ಮಿಡಿಯಲು ನಮ್ಮ ಹೃದಯ ಒಪ್ಪುವುದಿಲ್ಲ.
ಅನಗತ್ಯ ಕಟ್‌ಗಳಿರುವ ಕಾರಣ ಎಡಿಟಿಂಗ್ ನೋಡುವ ಅನುಭವಕ್ಕೆ ತಡೆ ಒಡ್ಡುತ್ತದೆ. ಉಳಿದಂತೆ ತಾಂತ್ರಿಕ ಅಂಶಗಳೆಲ್ಲವೂ ಅತ್ಯುತ್ತಮವೇ. ದೃಶ್ಯಕ್ಕೊಪ್ಪುವ ಹಿನ್ನೆಲೆ ಸಂಗೀತವಿದೆ, ಇಂದಿನ ದಿನಕ್ಕೊಪ್ಪುವ ಆನ್‌ಲೈನ್ ಜಗದ ಪ್ರಾತಿನಿಧ್ಯವಿದೆ. ಅವೆಲ್ಲ ಡಾಕ್ಯುಮೆಂಟರಿಯಂತೆ ದಾಖಲಾಗುತ್ತದೇ ವಿನಃ ಸಿನಿಮಾದಂತೆ ಮನಮುಟ್ಟುವುದಿಲ್ಲ. ಕೊನೆಗೆ ಬರುವ ಬಾಹ್ಯಾಕಾಶದ ಸನ್ನಿವೇಶದ ಗ್ರಾಫಿಕ್ಸ್ ನಿಜಕ್ಕೂ ಚೆನ್ನಾಗಿದೆ. ಆದರೆ ಅಷ್ಟು ಹೊತ್ತಿಗೆ ಅದನ್ನು ಆಸ್ವಾದಿಸುವ ಮನಸ್ಸೇ ಕಳೆದುಹೋಗುವ ಕಾರಣ ಗುಣಮಟ್ಟ ಅಪ್ರಯೋಜಕ.
ಅಂದಹಾಗೆ ಈ ಸಿನಿಮಾ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಪಟ್ಟಿಯಲ್ಲಿ ಅಂತಿಮ ಹಂತದವರೆಗೂ ಇತ್ತು. ಆ ಸಂಸ್ಥೆಯ ಮೇಲೆ ಹಗರಣ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪಗಳನ್ನು ಯಾಕೆ ಹೊರಿಸಲಾಗಿದೆ ಎಂಬುದು ಸಿನಿಮಾ ನೋಡಿದ ಮೇಲೆ ಅರ್ಥವಾಗುತ್ತದೆ. ಆಯ್ಕೆ ಸಮಿತಿಗೆ 20 ಲಕ್ಷ ಡಾಲರ್ ಭಕ್ಷೀಸು ನೀಡಿದ್ದ ನೆಟ್‌ಫ್ಲಿಕ್ಸ್‌ನಲ್ಲೇ ಈ ಸಿನಿಮಾ ಸ್ಟ್ರೀಂ ಆಗುತ್ತಿದೆ.