ಯಾವ ಹಂತದಲ್ಲೂ ಬೋಧನೆ ನೀಡುವ ಗೋಜಿಗೆ ಹೋಗದೆ, ಪಾತ್ರಗಳನ್ನು ವಿನಾಕಾರಣ ಆದರ್ಶಪ್ರಾಯವಾಗಿಸಲು ತವಕಿಸದೆ, ಸಹಜ ಸನ್ನಿವೇಶ, ಅತ್ಯುತ್ತಮ ಸಂಭಾಷಣೆಯ ‘ಪಂಚಾಯತ್ 2’ ತೆರೆಕಂಡಿದೆ. Amazon Prime Videoದಲ್ಲಿ ಸ್ಟ್ರೀಂ ಆಗುತ್ತಿರುವ ಎಂಟು ಕಂತುಗಳ ಸರಣಿ ಮನಗೆಲ್ಲುತ್ತದೆ ಎಂದು ಹೇಳಲು ಹಿಂಜರಿಯಬೇಕಿಲ್ಲ.

ವೆಬ್ ಸೀರೀಸ್ ಎಂದ ಕೂಡಲೇ ಒಂದೆರಡು ಡ್ರಗ್ಸ್ ಪಾರ್ಟಿ, ಒಂದಿಬ್ಬರು ಸಲಿಂಗಿಗಳ ಬದುಕನ್ನು ಹೊರತುಪಡಿಸಿ ಬರೆಯಲು ಅಸಾಧ್ಯ ಅಂದುಕೊಂಡ ಬರಹಗಾರಿಕೆ ಮಧ್ಯೆ ‘ಪಂಚಾಯತ್ 2’ ಬರಗಾಲದಲ್ಲಿ ಬೀಸುವ ತಂಗಾಳಿಯಾಗಿ ಬಂದಿದೆ. ಇಂಜಿನಿಯರಿಂಗ್ ಓದಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಬೇಕು ಎಂಬ ಹಂಬಲದಲ್ಲಿದ್ದ ಅಭಿಷೇಕ್ ತ್ರಿಪಾಠಿಗೆ (ಜಿತೇಂದ್ರ) ಪಚೌಲಿ ಎಂಬ ಕುಗ್ರಾಮದಲ್ಲಿ ಪಂಚಾಯತ್ ಕಾರ್ಯದರ್ಶಿ ಉದ್ಯೋಗ ಲಭಿಸಿತ್ತು. ಉತ್ತರ ಪ್ರದೇಶದ ಆ ಗ್ರಾಮ, ಅಲ್ಲಿನ ಮಂದಿಯ ಭಾಷೆ, ಗ್ರಾಮದೊಳಗಿನ ರಾಜಕಾರಣ, ಪಂಚಾಯತ್ ಅಧ್ಯಕ್ಷೆಯ ಪತಿಯ ದರ್ಬಾರು, ಇವೆಲ್ಲದರ ಮಧ್ಯೆ ಎಂಬಿಎ ಪ್ರವೇಶ ಪರೀಕ್ಷೆಗೆ ಓದುತ್ತಾ ಬದುಕು ಕಟ್ಟುವ ಅಭಿಷೇಕ್‌ನ ಮಹತ್ವಾಕಾಂಕ್ಷೆ ಪಂಚಾಯತ್ ಮೊದಲ ಸೀಸನ್‌ನಲ್ಲಿ ಜನಮೆಚ್ಚುಗೆ ಪಡೆದಿತ್ತು. ಈಗ ‘ಪಂಚಾಯತ್ 2’ನಲ್ಲಿ ಅದರ‌ ಮುಂದುವರಿದ ಭಾಗ ಅಷ್ಟೇ ಮನರಂಜನಾತ್ಮಕವಾಗಿದೆ.

ಯಾವುದೋ ಮಹತ್ತರ ಸಂದೇಶ ಕೊಡುತ್ತಿದ್ದೇವೆ ಅಂದುಕೊಳ್ಳದೆ ಹಳ್ಳಿಯ ಜನ ಮತ್ತು ಅವರ ಬದುಕನ್ನು ಹಾಗೇ ಸುಮ್ಮನೆ ಅನಾವರಣಗೊಳಿಸಿದ್ದನ್ನು ನೋಡುವುದೇ ಬಲು ಸೊಗಸಾದ ಅನುಭವ. ‘ಪಾಂಚಾಯತ್ 2’ನ ಎಂಟೂ ಎಪಿಸೋಡುಗಳಲ್ಲಿ ಯಾವುದೇ ಆಡಂಬರವಿಲ್ಲ. ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ತೋಡಲಾದ ಕೃಷಿ ಹೊಂಡದ ಮಣ್ಣು ಮಾರಾಟ‌ ಮಾಡಲು ನಡೆಸುವ ಚೌಕಾಸಿ, ಅಧ್ಯಕ್ಷರ ಮಗಳ ಜತೆ ಕಾರ್ಯದರ್ಶಿ ಲವ್ವಲ್ಲಿ ಬಿದ್ದಿದ್ದಾನೆ ಎಂದು ಸಹಾಯಕನ ತಲೆಗೆ ಹೊಕ್ಕುವ ಸಂಶಯದಂಥ ಕ್ಷುಲ್ಲಕ‌ ವಿಚಾರಗಳಿಂದ ‘ಪಂಚಾಯತ್’ನ ಹೊಸ ಆವೃತ್ತಿ ಆರಂಭವಾಗುತ್ತದೆ. ಮೊದಲ ಆವೃತ್ತಿಯಂತೆ ಇಲ್ಲಿಯೂ ಸಂಭಾಷಣೆ ಸರಳ-ವಿರಳ-ಸುಂದರ. ಗಂಭೀರ ಸಂಭಾಷಣೆಗಳು ಸನ್ನಿವೇಶದ ಕಾರಣದಿಂದ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವಲ್ಲಿ ಯಶಸ್ವಿಯಾಗಿದೆ.

ರಸ್ತೆ ಅನುದಾನಕ್ಕಾಗಿ ವಿಧಾಯಕ್‌ನನ್ನು(ಎಂಎಲ್ಎ) ಕಾಣಲು ಹೋಗುವ ಪ್ರಧಾನ್‌ಜೀ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯ ಪರಿಸ್ಥಿತಿಗೆ ಬೀಳುವುದು, ಪೊಲೀಸರ ಅತಿಥಿಯಾಗುವುದು, ಅವರನ್ನು ಬಿಡಿಸಿದ ಕಾರಣಕ್ಕೆ ಸಚಿವ್‌ಜೀ ವಿಧಾಯಕ್‌ನಿಂದ ವಾಚಾಮಗೋಚರ ಬೈಗುಳ‌ ತಿನ್ನಬೇಕಾಗಿ ಬರುವ ಸಂದರ್ಭಗಳಲ್ಲಿ ಗ್ರಾಮೀಣ ರಾಜಕಾರಣದ ಕಮೆಂಟರಿ ರಹಿತ ಪ್ರತಿಬಿಂಬವಿದೆ. ವಿನಾ ಕಾರಣ ಬೈಗುಳ ತಿಂದುದಕ್ಕೆ ಗ್ರಾಮದ ಆಡಳಿತ ವ್ಯವಸ್ಥೆಯೇ ವಿಧಾಯಕ್‌ನನ್ನೇ ವಿರೋಧಿಸಿ ಸಚಿವ್‌ಜೀ ಕಡೆ ನಿಲ್ಲುವಾಗ ನಾಟಕೀಯ ಅನಿಸುವುದಿಲ್ಲ, ಅದು ತಳಮಟ್ಟದ ಭಾರತದ ವಾಸ್ತವ.

ದುಶ್ಚಟದಿಂದ ವಿಮುಕ್ತರಾಗಿ ಎಂದು ಡಂಗೂರ ಸಾರಬೇಕಾಗುವುದು ಸರ್ಕಾರಿ ಆದೇಶ. ಅದಕ್ಕಾಗಿ ಜೀಪಿಗೆ ಮೈಕ್ ಕಟ್ಟಿ ಊರ‌ ತುಂಬಾ ಘೋಷಣೆ ಕೂಗಲು ಗೊತ್ತುಮಾಡಿದ ಜೀಪಿನ ಚಾಲಕನೇ ಕಂಠಪೂರ್ತಿ ಎಣ್ಣೆ ಹಾಕಿ ಬರುವುದೂ ಕಚಗುಳಿಯಿಡುವ ವ್ಯಂಗ್ಯ. ಆದರೆ ಆತ ಎಣ್ಣೆ‌ ಮತ್ತಿನಲ್ಲಿ ಬದುಕಿನ ಬಗ್ಗೆ ಆಡುವ ಮಾತುಗಳು ಮನೆಯಿಂದ ದೂರವಿರುವ ಅಭಿಷೇಕ್‌ನ ಮನಸ್ಸು ಕಲಕುತ್ತದೆ, ಜತೆಗೆ‌ ಅಷ್ಟು ಹೊತ್ತಿಗೆ ಅಭಿಷೇಕ್ ಪಾತ್ರದ ಜತೆಗೆ‌ ಮಿಡಿಯುವ ನೋಡುಗರದ್ದೂ. ಅಂಥ ಸಂದರ್ಭದಲ್ಲಿ ಆತನಿಗೆ ಸಿಗುವ‌ ಹಳ್ಳಿ ಮನಸ್ಸಿನ ಬೆಂಬಲ ಮಹಾನಗರಿಯಲ್ಲಿ ಕೂತು ನೋಡುವವರನ್ನೂ ಒಮ್ಮೆ ಗ್ರಾಮೀಣ ಬದುಕಿನ ಕಡೆಗೆ ಆಕರ್ಷಿಸಬಹುದು. ಹಾಗೆಯೇ ಆಕರ್ಷಿತವಾಗಿ ಒಂದು ದಿನದ ರಜೆಯನ್ನು ಗ್ರಾಮದಲ್ಲಿ‌ ಕಳೆಯಲು ಬರುವ ಅಭಿಷೇಕನ ಗೆಳೆಯನ ಪಾತ್ರ ಗ್ರಾಮಗಳ ಬಗ್ಗೆ ಪಟ್ಟಣಿಗರಿಗೆ ಇರುವ ತಪ್ಪು ಕಲ್ಪನೆಯ ಸುಷ್ಪಷ್ಟ ಚಿತ್ರಣ. ಬಯಲು‌ ಶೌಚದ ಬಗ್ಗೆ ಗ್ರಾಮದಲ್ಲಿ ದಿಢೀರ್ ಪರಿಶೀಲನೆಗೆ ಬರುವ ಮೇಲಾಧಿಕಾರಿಯ ಜತೆಗಿನ ಸಂಭಾಷಣೆ ಪಾತ್ರಗಳ ಪಾಲಿಗೆ ಘನ ಗಂಭೀರ ವಿಚಾರ, ನೋಡುಗರಿಗೆ ನಗೆಬುಗ್ಗೆ. ಇಲ್ಲೆಲ್ಲೂ ಆದರ್ಶಗಳ ಬಗ್ಗೆ ಹೇಳುವ ಧಾವಂತಕ್ಕೆ ನಿರ್ಮಾತೃಗಳು ಬೀಳದೆ ವಾಸ್ತವಿಕ ನೆಲೆಗಟ್ಟು ಆಯ್ಕೆ ಮಾಡಿರುವುದೇ ‘ಪಂಚಾಯತ್’ನ ಕಥಾಸರಳತೆಗೆ ಸಾಕ್ಷಿ.

ತನ್ನ ವ್ಯಾಪ್ತಿಯಲ್ಲೇ ಸಾಧ್ಯವಾದಷ್ಟೂ ಒಳ್ಳೆಯ ಕೆಲಸ ಮಾಡೋಣವೆಂಬ ಸಚಿವ್‌ಜೀಯ ಆಶಯ ಎರಡನೇ ಆವೃತ್ತಿಯಲ್ಲಿಯೂ ಪ್ರಾಮಾಣಿಕವಾಗಿ ಮುಂದುವರಿದಿದೆ. ಲೋಡಿಗೆ ಮುನ್ನೂರರಂತೆ ಮಣ್ಣನ್ನು ಇಟ್ಟಿಗೆ ಉದ್ಯಮಿಗೆ ಮಾರಾಟ ಮಾಡಿ ಆ ಹಣದಲ್ಲಿ ಗ್ರಾಮಕ್ಕೆ ಸಿಸಿ ಟಿವಿ ಹಾಕಿಸುವ ಮಹತ್ವಾಕಾಂಕ್ಷೆ ಈಡೇರುತ್ತದೆ. ಆದರೆ ತರುವಾಯ ಸಿಸಿಟಿವಿಯ ಉಪಯೋಗ ಕಳೆದ ಚಪ್ಪಲಿ ಹುಡುಕಲು, ಹಟ್ಟಿಗೆ ಬಾರದ ಮೇಕೆಯನ್ನು ನೋಡಲು ಬಳಕೆಯಾಗುವುದು ಪಚೌಲಿಯ ವಾಸ್ತವ. ಪಟ್ಟಣ ಪ್ರದೇಶದಲ್ಲೂ ಅಂಥ ಕ್ಷುಲ್ಲಕ ಕಾರಣಗಳಿಗೇ ಸಿಸಿ ಕ್ಯಾಮರಾ ಬಳಕೆಯಾಗುತ್ತಿದ್ದಿದ್ದರೆ ಬದುಕು ಎಷ್ಟು ಸುಂದರವಿರುತ್ತಿತ್ತು ಎಂದು ಅನಿಸದಿರದು.

ಈ ಬಾರಿ ಪ್ರಧಾನ್‌ಜೀ (ಯಾದವ್) ಹಾಗೂ ರಿಂಕೂ ಕಾ ಮಮ್ಮಿ (ವಾಸ್ತವದ ಪ್ರಧಾನ್‌ಜೀ – ನೀನಾ ಗುಪ್ತಾ) ಪಾತ್ರಗಳು ಇನ್ನಷ್ಟು ತೆರೆದುಕೊಂಡು ಹೆಚ್ಚು ಪರಿಚಿತವಾಗುತ್ತವೆ. ತನ್ನ ಕಾರುಬಾರುಗಳನ್ನು ನಿರ್ವಹಿಸಲು ಗಂಡನಿಗೆ ಬಿಟ್ಟರೂ ಆಕೆಯೇನೂ ದಮನಿತ‌ ಗೃಹಿಣಿಯಲ್ಲ. ಸಂಸಾರದ ಮಟ್ಟಿಗೆ ಮಾತ್ರವಲ್ಲ, ಆಡಳಿತದ ಬಗೆಗೂ ಆಕೆ‌ ಅನಿಸಿದ್ದನ್ನು ಖಡಕ್ಕಾಗಿ ಹೇಳುವ‌ ಮಹಿಳೆ. ಆಕೆ ತೀರ್ಮಾನ ಹೇಳಿದ ಮೇಲೆ ಅದನ್ನು ಮೀರುವ‌ ಧೈರ್ಯ ಆಕೆಯ ಗಂಡನಿಗೂ ಇಲ್ಲ (ಇತರೆ ಎಲ್ಲಾ ಗಂಡಂದಿರಂತೆ). ದಶಕಗಳ ಹಿಂದಿನ ದೂರದರ್ಶನ ಧಾರಾವಾಹಿಯ ಕಾಲದಿಂದಲೇ‌ ಅವರಿಬ್ಬರದ್ದು ಅತ್ಯುತ್ತಮ ಜೋಡು ನಟನೆ. ಆ ಘಮ ಇಲ್ಲಿಯೂ ಮುಂದುವರಿದಿದೆ. ಸಹಜ ಸನ್ನಿವೇಶಗಳನ್ನೇ ಸೃಷ್ಟಿಸುತ್ತಾ ಮನರಂಜಿಸುವ ‘ಪಂಚಾಯತ್ 2’ನಲ್ಲಿ ರಿಂಕೂ ಮತ್ತು ಸಚಿವ್‌ಜೀಯ ನಡುವಿನ ಪ್ರೇಮ ಇನ್ನಷ್ಟು ಗಟ್ಟಿ ರೂಪ ಪಡೆದಿದ್ದರೆ ಒಳ್ಳೆಯದಿತ್ತೇನೋ ಎಂದು ವೀಕ್ಷಕರಿಗೇ ಅನಿಸುವ ಮಟ್ಟಿಗೆ ನಿರ್ಮಾತೃಗಳು ಸಹಜತೆಯ ಸಂಕಲ್ಪ ಪಡೆದಿದ್ದಾರೆ. ಕೊನೆಗೆ ಭಾವನಾತ್ಮಕ ಹಂತಕ್ಕೆ ತಲುಪುವ ಸರಣಿಯ ಭಾವುಕತೆಯನ್ನು ಇಲ್ಲಿ ವಿವರಿಸಿದರೆ ವೀಕ್ಷಕರಿಗೆ ಅನ್ಯಾಯವಾದೀತು. ಅದನ್ನು ನೋಡಿಯೇ‌ ಆಸ್ವಾದಿಸಬೇಕು.

ಹೆಚ್ಚೂಕಮ್ಮಿ ಮೊದಲ ಆವೃತ್ತಿಯ ಪಾತ್ರಗಳೇ ಇದ್ದು, ಅದೇ ನಮೂನೆಯ ಹಿನ್ನೆಲೆ ಸಂಗೀತ, ಅದೇ ತೆರನಾದ ವೇಗವಿರುವ ‘ಪಂಚಾಯತ್ 2’ ವಿಚಾರದಲ್ಲಿ ಬೊಟ್ಟು ಮಾಡಬಹುದಾದ ಕೊರತೆ ಎಂದರೆ ಅದರ ಒಟ್ಟು ಗಾತ್ರ. ಎಂಟು ಕಂತುಗಳು ಬಹಳ ಕಮ್ಮಿಯಾದಂತೆ ಭಾಸವಾಗುತ್ತದೆ. ಹನ್ನೆರಡಾದರೂ ಇರಬೇಕಿತ್ತು, ಛೇ ಇಷ್ಟು ಬೇಗ‌ ಮುಗಿಯಿತಲ್ಲ ಎಂದು ಅನಿಸುವ ಇನ್ನೊಂದು ಸರಣಿ ಕಳೆದ ಒಂದು ವರ್ಷದಲ್ಲಂತೂ ನೋಡಿದ ನೆನಪು ನನಗಿಲ್ಲ.

LEAVE A REPLY

Connect with

Please enter your comment!
Please enter your name here