ರವಿಚಂದ್ರನ್ ಅಭಿನಯದ ‘ದೃಶ್ಯ2’ ಸಿನಿಮಾ ಮುಂದಿನ ವಾರ ತೆರೆಕಾಣಲಿದೆ. ಇಲ್ಲಿಗೆ ಏಳು ವರ್ಷಗಳ ಹಿಂದೆ ಭಾಗ ಒಂದು ಬಂದಿತ್ತು. ಮೊದಲ ಪಾರ್ಟ್ ನೋಡದವರಿಗೆ, ಇಲ್ಲವೇ ಮತ್ತೊಮ್ಮೆ ಈ ಸಿನಿಮಾ ನೋಡಬಯಸುವವರಿಗೆ ನಾಳೆ ಥಿಯೇಟರ್‌ಗಳಲ್ಲಿ ‘ದೃಶ್ಯ’ ಸಿಗಲಿದೆ. ಇದೊಂದು ಹೊಸ ಪ್ರಯೋಗ.
ಪಿ.ವಾಸು ನಿರ್ದೇಶನದಲ್ಲಿ ರವಿಚಂದ್ರನ್ ಅಭಿನಯಿಸಿದ್ದ ‘ದೃಶ್ಯ’ 2014ರಲ್ಲಿ ತೆರೆಕಂಡಿತ್ತು. ಮೋಹನ್‌ಲಾಲ್ ಅವರ ಮೂಲ ಮಲಯಾಳಂ ಚಿತ್ರದ ರೀಮೇಕಿದು. ಈ ಯಶಸ್ವೀ ಸಿನಿಮಾ ನಂತರ ತಯಾರಾದ ‘ದೃಶ್ಯಂ2’ ಮಲಯಾಳಂ ಮತ್ತು ತೆಲುಗು ಅವತರಣಿಕೆ ಈ ವರ್ಷ ತೆರೆಕಂಡವು. ಇದೀಗ ಕನ್ನಡ ಅವತರಣಿಕೆ ಮುಂದಿನ ವಾರ ಬಿಡುಗಡೆಯಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ನಾಳೆ ‘ದೃಶ್ಯ’ ಮೊದಲ ಭಾಗವನ್ನು ಒಂದು ದಿನದ ಮಟ್ಟಿಗೆ ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್’ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಭಾಗವನ್ನು ನೋಡಿರದ ಪ್ರೇಕ್ಷಕರಿಗೆ ಹಾಗೂ ಏಳು ವರ್ಷದ ಹಿಂದೆ ನೋಡಿ ಮತ್ತೊಮ್ಮೆ ನೋಡ ಬಯಸುವವರ ಸಲುವಾಗಿ ನಾಳೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಕನ್ನಡದಲ್ಲಿ ‘ದೃಶ್ಯ’ ಎರಡೂ ಪಾರ್ಟ್‌ಗಳನ್ನು ನಿರ್ಮಿಸಿರುವುದು E4 ಎಂಟರ್‌ಟೇನ್‌ಮೆಂಟ್. ಹಾಗಾಗಿ ಅವರು ಮೊದಲ ಪಾರ್ಟ್ ಬಿಡುಗಡೆ ಮಾಡುತ್ತಿದ್ದು, ಇದೊಂದು ಹೊಸ ಆಲೋಚನೆ ಎನ್ನಲಾಗುತ್ತಿದೆ. ಪಿವಿಆರ್ ಎಂಎಸ್‌ಆರ್ ಎಲಿಮೆಂಟ್ಸ್ ರೆಗಾಲಿಯಾ (ಬೆಳಗ್ಗೆ 11.55), ಪಿವಿಆರ್ ಒರಾಯಿನ್ (ಮಧ್ಯಾಹ್ನ 3.30), ಸಿನಿಪೊಲಿಸ್ ಇಟಿಎ ಮಾಲ್ (ಸಂಜೆ 6.30), ಮಲ್ಲೇಶ್ವರಂ ಇನಾಕ್ಸ್‌ನಲ್ಲಿ (ಬೆಳಗ್ಗೆ 9.45) ನಾಳೆ ವಿಶೇಷ ಪ್ರದರ್ಶನಗಳು ಇರಲಿದ್ದು, ಬುಕಿಂಗ್ ಆರಂಭವಾಗಿದೆ. ಪಿ.ವಾಸು ನಿರ್ದೇಶಿಸಿರುವ ಈ ಎರಡು ಭಾಗಗಳ ಪ್ರಮುಖ ಭೂಮಿಕೆಯಲ್ಲಿ ರವಿಂಚಂದ್ರನ್ ಮತ್ತು ನವ್ಯಾ ನಾಯರ್ ನಟಿಸಿದ್ದಾರೆ. ಮೊದಲ ಭಾಗದಲ್ಲಿ ನಟಿಸಿದ್ದ ಬಹುತೇಕ ಕಲಾವಿದರು ಎರಡನೇ ಭಾಗದಲ್ಲೂ ಮುಂದುವರೆದಿದ್ದಾರೆ. ‘ದೃಶ್ಯ 2’ ಚಿತ್ರದ ವಿಶೇಷ ಪಾತ್ರದಲ್ಲಿ ಹಿರಿಯ ನಟ ಅನಂತನಾಗ್ ಅಭಿನಯಿಸಿದ್ದಾರೆ.