ದೊಡ್ಮನೆಯ ಯುವರಾಜಕುಮಾರ್‌ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸಿನಿಮಾ ಯುವ. ದೊಡ್ಡ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ‘ಯುವ’ ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್‌ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದೆ.

ಯುವರಾಜಕುಮಾರ್‌ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ‘ಯುವ’. ದೊಡ್ಡ ಮಟ್ಟದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿರುವ ಈ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿಯೇ ಸಿನಿಮಾ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗ ಯಶಸ್ವಿಯಾಗಿ 3ನೇ ವಾರಕ್ಕೆ ಕಾಲಿಟ್ಟಿದೆ. ಬ್ಲಾಕ್‌ಬಸ್ಟರ್‌ ಹಿಟ್‌ಗಳಾದ ಕೆಜಿಎಫ್‌, ಕಾಂತಾರ, ರಾಜಕುಮಾರದಂತಹ ಯಶಸ್ವಿ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿ ವಿಜಯ್ ಕಿರಗಂದೂರ್ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಈ ಮೂಲಕ ಹೊಂಬಾಳೆ ಫಿಲಂಸ್‌ನ ಗೆಲುವಿನ ಓಟಕ್ಕೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಈ ಯಶಸ್ಸನ್ನು ಚಿತ್ರತಂಡ ಖುಷಿಯಿಂದ ಸಂಭ್ರಮಿಸಿದ್ದಾರೆ.

‘ರಾಜ್ಯದ ಜನತೆ ‘ಯುವ’ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈಗಲೂ ಜನ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಕನ್ನಡ ಕಲಾರಸಿಕರಿಗೆ, ಮಾಧ್ಯಮದವರಿಗೆ, ಹೊಂಬಾಳೆ ಫಿಲಂಸ್ ಸಂಸ್ಥೆಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ’ ಎಂದು ಸಂತಸಪಟ್ಟಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.

ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿರುವ ನಟ ಯುವ ಮಾತನಾಡಿ, ‘ಜನರು ನನ್ನ ಮೊದಲ ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನ ತುಂಬಿ ಬಂದಿದೆ. ಮೊದಲು ನನಗೆ ಅವಕಾಶ ನೀಡಿದ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅವರಿಗೆ, ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ನನ್ನ ಸಹ ಕಲಾವಿದರ ಹಾಗೂ ತಂತ್ರಜ್ಞರ ಪ್ರೋತ್ಸಾಹವನ್ನು ಈ ಸಮಯದಲ್ಲಿ ನೆನೆಯುತ್ತೇನೆ. ಮೊದಲ ಚಿತ್ರದಲ್ಲಿ ನನ್ನಿಂದೇನಾದರೂ ಸಣ್ಣಪುಟ್ಟ ತಪ್ಪಾಗಿದ್ದರೆ ಮುಂದಿನ ಚಿತ್ರಗಳಲ್ಲಿ ಸರಿ ಪಡಿಸಿಕೊಳ್ಳುತ್ತೇನೆ. ಜನ ಕುಟುಂಬ ಸಮೇತರಾಗಿ ಬಂದು ಚಿತ್ರವನ್ನು ನೋಡುತ್ತಿರುವುದು ಬಹಳ ಖುಷಿಯಾಗಿದೆ’ ಎಂದಿದ್ದಾರೆ.

‘ನನ್ನ ಮಗನ ಮೊದಲ ಚಿತ್ರವನ್ನು ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಮೊದಲು ಧನ್ಯವಾದ ಹೇಳುತ್ತೇನೆ. ನಂತರ ನನ್ನ ಮಗನಿಂದ ಎಲ್ಲ ರೀತಿಯ ನಟನೆಯನ್ನು ಮಾಡಿಸಿರುವ ನಿರ್ದೇಶಕ ಸಂತೋಷ್ ಆನಂದರಾಮ್‌ಗೆ ಧನ್ಯವಾದ. ಯುವನ ಸಿನಿಮಾ ಹಾದಿ ಈಗಷ್ಟೇ ಆರಂಭವಾಗಿದೆ. ‌ಮುಂದೆ ಬೇರೆಬೇರೆ ಪಾತ್ರಗಳಲ್ಲಿ ಅವನು ನಟಿಸಿ ಜನರಿಂದ ಸೈ ಎನಿಸಿಕೊಳ್ಳಬೇಕು’ ಎಂದು ಸಂತಸ ಪಟ್ಟಿದ್ದಾರೆ ರಾಘವೇಂದ್ರ ರಾಜಕುಮಾರ್. ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಾಯಕಿ ಸಪ್ತಮಿ ಗೌಡ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ರಾಘು ಶಿವಮೊಗ್ಗ ಹಾಗೂ ಛಾಯಾಗ್ರಾಹಕ ಶ್ರೀಶ ಕುದುವಳ್ಳಿ ‘ಯುವ’ ಚಿತ್ರದ ಗೆಲುವನ್ನು ಸಂಭ್ರಮಿಸಿದರು.

LEAVE A REPLY

Connect with

Please enter your comment!
Please enter your name here