‘ಮಮ್ಮಿ’, ‘ದೇವಕಿ’ ಸಿನಿಮಾಗಳ ನಿರ್ದೇಶಕ ಲೋಹಿತ್ ಅವರ ಆಕ್ಷನ್‌ – ಥ್ರಿಲ್ಲರ್‌ ‘ಮಾಫಿಯಾ’ ಸೆಟ್ಟೇರಿದೆ. ಇಲ್ಲಿ ಮಚ್ಚು, ಲಾಂಗ್‌ ಇಲ್ಲದ ಭೂಗತ ಜಗತ್ತನ್ನು ತೋರಿಸಲಿದ್ದಾರೆ ನಿರ್ದೇಶಕರು. ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ಅದಿತಿ ನಟಿಸುತ್ತಿದ್ದು, ‘ಒರಟ’ ಪ್ರಶಾಂತ್ ಅವರಿಗೆ ಪ್ರಮುಖ ಪಾತ್ರವಿದೆ.

ನಟ ದುನಿಯಾ ವಿಜಯ್ ಅವರ ‘ಜಯಮ್ಮನ ಮಗ’, ‘ರಜನೀಕಾಂತ್‌’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಲೋಹಿತ್‌. ಮುಂದೆ ಅವರ ಸ್ವತಂತ್ರ್ಯ ನಿರ್ದೇಶನದಲ್ಲಿ ‘ಮಮ್ಮಿ’, ‘ದೇವಕಿ’ ಸಿನಿಮಾಗಳು ತೆರೆಕಂಡವು. ಅಲ್ಲಿನ ಅನುಭವದ ಹಿನ್ನೆಲೆಯಲ್ಲಿ ಇದೀಗ ‘ಮಾಫಿಯಾ’ ಆಕ್ಷನ್ – ಥ್ರಿಲ್ಲರ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇದು ಹೀರೋ ಪ್ರಜ್ವಲ್ ದೇವರಾಜ್ ಅವರ 35ನೇ ಚಿತ್ರ. ತಮ್ಮ ಸಿನಿಮಾಗಳಿಗೆ ಕೆಲಸ ಮಾಡಿದ್ದ ಲೋಹಿತ್‌ ಅವರ ಸಿನಿಮಾದ ಮೊದಲ ದೃಶ್ಯಕ್ಕೆ ನಟ ದುನಿಯಾ ವಿಜಯ್‌ ಕ್ಲ್ಯಾಪ್ ಮಾಡಿ ಹಾರೈಸಿದರು. ಲೋಹಿತ್‌ರ ಎರಡೂ ಸಿನಿಮಾಗಳ ನಾಯಕಿ ಪ್ರಿಯಾಂಕಾ ಉಪೇಂದ್ರ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.

“ಪ್ರಜ್ವಲ್ ಹಾಗೂ ನಾನು ಜಿಮ್ ಸ್ನೇಹಿತರು. ಅವರು  ನಿಗರ್ವಿ. ನಟಿ ಅದಿತಿ ಅವರು ಚಿತ್ರರಂಗಕ್ಕೆ ಮಹಾಲಕ್ಷ್ಮಿ ಇದ್ದ ಹಾಗೆ. ಅವರ ಅನೇಕ ಚಿತಗಳು ಸೆಟ್ಟೇರುತ್ತಿವೆ. ಇನ್ನು ನಿರ್ದೇಶಕ ಲೋಹಿತ್ ನನ್ನ ಅಭಿನಯದ ಜಯಮ್ಮನ ಮಗ ಹಾಗೂ ರಜನಿಕಾಂತ್ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಆಗ ಚಿಕ್ಕ ಹುಡುಗ. ಈಗಲೂ ಆತ ಚಿಕ್ಕವನೇ. ಇಡೀ ತಂಡಕ್ಕೆ ಶುಭವಾಗಲಿ. ಚಿತ್ರ ಯಶಸ್ವಿಯಾಗಲಿ” ಎಂದು ದುನಿಯಾ ವಿಜಯ್ ಹಾರೈಸಿದರು. “ನನಗೆ ‘ಮಮ್ಮಿ’ ಚಿತ್ರದ ಕಥೆ ಹೇಳಲು ಬಂದಾಗ ಲೋಹಿತ್‌ಗೆ ಹತ್ತೊಂಬತ್ತೊ ಅಥವಾ ಇಪ್ಪತ್ತು ವಯಸ್ಸು ಇರಬೇಕು. ಈಗ ‘ಮಾಫಿಯಾ’ದಂತಹ ಕಮರ್ಷಿಯಲ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅವರಿಗೆ ಶುಭಾಶಯಗಳು” ಎಂದರು ಪ್ರಿಯಾಂಕ ಉಪೇಂದ್ರ.

ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಮಾತನಾಡಿ, “ಲೋಹಿತ್ ಹೇಳಿದ ಕಥೆ ಇಷ್ಟವಾಯಿತು. ಈ ಚಿತ್ರದಲ್ಲಿ ಇನ್ಸ್‌ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದ ಯಾರೂ ಇಲ್ಲದ ಹುಡುಗನಿಗೆ ಗೆಳೆಯನ ಮೇಲೆ ಹೆಚ್ಚು ಪ್ರೀತಿ. ಆ ಗೆಳೆಯ ಕೂಡ ಇನ್‌ಸ್ಪೆಕ್ಟರ್ ಆಗಿರುರುತ್ತಾನೆ. ಆತನನ್ನು ನೋಡಿ ತಾನೂ ಇನ್‌ಸ್ಪೆಕ್ಟರ್‌ ಆಗಬೇಕೆಂದುಕೊಳ್ಳುತ್ತಾನೆ.. ಹೀಗೆ ಉತ್ತಮ ಕಥೆಯೊಂದಿಗೆ ಚಿತ್ರ ಸಾಗುತ್ತದೆ‌. ನನ್ನ ತಂದೆ ದೇವರಾಜ್ ಅವರು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ” ಎಂದರು. ಅವರು ಈ ಚಿತ್ರಕ್ಕಾಗಿ ಎರಡು ವರ್ಷಗಳಿಂದ ಬೆಳೆಸಿದ ಕೂದಲನ್ನು ಕತ್ತರಿಸಿ, ಹೊಸ ಲುಕ್ ನಲ್ಲಿ ಸಿದ್ದವಾಗಿದ್ದಾರೆ.

ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ ಅವರು ಇನ್ವೆಸ್ಟಿಗೇಷನ್ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ತಯಾರಿಯನ್ನೂ ನಡೆಸಿದ್ದಾರೆ. “ನನಗೆ ಮಾಧ್ಯಮದಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿ ಅನುಭವವಿರುವ ಕಾರಣ ಈ ಪಾತ್ರ ನಿರ್ವಹಿಸುವುದು ಸ್ವಲ್ಪ ಸುಲಭವಾಗಬಹುದು” ಎನ್ನುವ ಅವರಿಗೆ ಪ್ರಜ್ವಲ್ ಜೊತೆ ಇದು ಮೊದಲ ಸಿನಿಮಾ. “ಇದೊಂದು ಕಂಟೆಂಟ್ ಓರಿಯಂಟೆಡ್  ಚಿತ್ರ. ಇದೇ ತಿಂಗಳ ಆರನೇ ತಾರೀಖಿನಿಂದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ‌ಆನಂತರ ಹೈದರಾಬಾದ್‌ನ ರಾಮೋಜಿ‌ ಫಿಲಂ ಸಿಟಿಯಲ್ಲಿ ಚಿತ್ರೀಕರಣ. ಐದು ಹಾಡುಗಳಿದ್ದು, ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ‌ಎರಡು ಹಾಡುಗಳು ಸಿದ್ಧವಾಗಿದೆ. ತರುಣ್ ಈ ಚಿತ್ರದ ಛಾಯಾಗ್ರಹಕರು. ನಿಮ್ಮೆಲ್ಲರ ಹಾರೈಕೆ ಇರಲಿ” ಎಂದರು ನಿರ್ದೇಶಕ ಲೋಹಿತ್. ಚಿತ್ರಕ್ಕೆ ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. “ಮಾಫಿಯಾ ಅಂದರೆ ಬರೀ ಮಚ್ಚು, ಲಾಂಗು ಅಲ್ಲ. ಅದನ್ನು ಬೇರೆ ರೀತಿಯಲ್ಲೂ ಹೇಳಬಹುದು ಎಂಬುದನ್ನು ಲೋಹಿತ್ ಈ ಚಿತ್ರದಲ್ಲಿ ತೋರಿಸುತ್ತಿದ್ದಾರೆ” ಎನ್ನುತ್ತಾರೆ ಮಾಸ್ತಿ. ಇನ್ನು ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರಿಗೆ ಇದು 666ನೇ ಸಿನಿಮಾ. ಬಿ.ಕುಮಾರ್ ಸಿನಿಮಾ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here