ಇಲಾಖೆಯ ಭ್ರಷ್ಟ ವ್ಯವಸ್ಥೆ ವಿರುದ್ಧ ನಿಂತು ಸೆಲ್ಯೂಟ್‌ ಗಿಟ್ಟಿಸಿಕೊಳ್ಳುವ ಪೊಲೀಸ್‌ ಆಫೀಸರ್‌ ಅರವಿಂದ ಕರುಣಾಕರನ್ ನಡೆಸುವ ಕಾರ್ಯಾಚರಣೆ ಚಿತ್ರದ ಕಥಾಹಂದರ. ದುಲ್ಕರ್‌ ಸಲ್ಮಾನ್‌ ನಟನೆಯ ‘ಸೆಲ್ಯೂಟ್‌’ ಮಲಯಾಳಂ ಸಿನಿಮಾ SonyLIV ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಸಾಮಾನ್ಯವಾಗಿ ಪೊಲೀಸ್‌ ಸಿನಿಮಾಗಳಲ್ಲಿ ಚಿತ್ರದ ಹೀರೋ ಇಲಾಖೆಯ ಭ್ರಷ್ಟ ವ್ಯವಸ್ಥೆ ಎದುರು ನಿಲ್ಲುವುದು, ಅಸಹಾಯಕನಾದಾಗ ರಾಜೀನಾಮೆ ನೀಡಿ ಹೊರಬರುವುದನ್ನು ನೋಡುತ್ತೇವೆ. ಈ ಚಿತ್ರದ ಕತೆಯೂ ಅಂಥದ್ದೇ ಆದರೂ ತುಸು ಬೇರೆ ಆಯಾಮದೊಂದಿಗೆ ಸಾಗುವುದು ಪ್ರೇಕ್ಷಕರಿಗೆ ವಿಶೇಷ ಎನಿಸಬಹುದು. ಒಂದು ಕಡೆ ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ತನ್ನತನವನ್ನೂ ಉಳಿಸಿಕೊಳ್ಳಬೇಕು, ಅದೇ ರೀತಿ ನಿರಾಪರಾಧಿಗೂ ಶಿಕ್ಷೆಯಾಗಬಾರದು, ಅಪರಾಧಿಯನ್ನೂ ಪತ್ತೆ ಹಚ್ಚಬೇಕು, ಇಂತಹ ಮಲ್ಟಿಟಾಸ್ಕ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕರುಣಾಕರನ್, ಒಳ್ಳೆಯ ಉದ್ದೇಶಗಳೊಂದಿಗೆ ಆ ಪೋಲಿಸ್‌ ವೃತ್ತಿಯನ್ನು ಆಯ್ಕೆ ಮಾಡಿಕೊಂಡವನು. ಸದ್ಯ ಆ ಇಲಾಖೆಯಲ್ಲಿನ ಹುಳುಕುಗಳು ಅವನ ಅರಿವಿಗೆ ಬಂದಿವೆ. ಮುಂದೆ ಏನು ಮಾಡ್ತಾನೆ? ಎನ್ನುವ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ.

ಪೊಲೀಸ್‌ ಇಲಾಖೆಯಲ್ಲಿ ಹೀಗೆಲ್ಲಾ ನಡೆಯುವುದಿಲ್ಲ, ಇಂತಹ ಆಫೀಸರ್ ಇರೋದಕ್ಕೆ ಸಾಧ್ಯವಿಲ್ಲ ಎನ್ನುವಂತಹ ಕತೆಯೇನಲ್ಲ ಇದು. ಚುನಾವಣೆಯ ಸಂದರ್ಭದಲ್ಲಿ ಎದುರಾಗುವ ರಾಜಕೀಯ ಒತ್ತಡ, ಅದರಿಂದ ತಪ್ಪಿಸಿಕೊಳ್ಳಲು ಸಾಮಾನ್ಯರನ್ನು ಬಲಿಪಶು ಮಾಡುವ ಇಲಾಖೆಯ ಅವ್ಯವಸ್ಥೆ – ಭ್ರಷ್ಟಾಚಾರವನ್ನು ತೆರೆದಿಡುವ ಸಿನಿಮಾ ಎಂದುಕೊಳ್ಳುವಾಗಲೇ ಚಿತ್ರಕಥೆಯು ವೃತ್ತಿಪರತೆ, ಸಾಮಾನ್ಯನ ಬದುಕು, ಮಾನಸಿಕ ಸಂಘರ್ಷ, ಲಿವ್‌ ಇನ್‌ ರಿಲೇಷನ್‌ ಶಿಪ್‌, ವಂಚನೆಯ ಜಾಲ, ಹೀಗೆ ನಾಲ್ಕಾರು ವಿಷಯಗಳನ್ನು ಜೊತೆಯಾಗಿಸಿಕೊಳ್ಳುತ್ತಾ ಸಾಗುತ್ತದೆ. ಆದರೆ ಈ ಎಲ್ಲಾ ವಿಷಯಗಳು ಪ್ರೇಕ್ಷಕರನ್ನು ತಲುಪುತ್ತವೆ ಎನ್ನುವುದು ಸಂಶಯ.

ದುಲ್ಕರ್‌ ಸಲ್ಮಾನ್‌ ಹುರಿಗೊಳಿಸಿದ ಮೈಕಟ್ಟು, ಪೊಲೀಸ್‌ ಆಫೀಸರ್‌ ಪಾತ್ರದ ಗಟ್ಸ್‌ ಅಭಿಮಾನಿಗಳನ್ನು ರಂಜಿಸಬಹುದು‌. ಮತ್ತೊಂದು ವರ್ಗಕ್ಕೆ ಬಿಲ್ಡ್‌ಅಪ್‌ ಕೊಟ್ಟು ಕಟ್ಟಿರುವ ಪಾತ್ರಕ್ಕೂ, ಸಾಗುವ ವಿಷಕ್ಕೂ ಸಂಬಂಧವಿಲ್ಲ ಎಂದೂ ಅನಿಸಬಹುದು. ಇನ್ನೂ ಆಳವಾಗಿ ರಾಜಕೀಯ ಮತ್ತು ಪೋಲೀಸ್ ಇಲಾಖೆಯ ಅಂತಹ ಅವ್ಯವಸ್ಥೆಯ ಕ್ರೌರ್ಯವನ್ನೋ, ಅಮಾಯಕ ಆಟೋ ಡ್ರೈವರ್ ಮುರಳಿಯ ಕರುಣಾಜನಕ ಪರಿಸ್ಥಿತಿಯನ್ನೋ ಅಥವಾ ತಾನು ಒಳ್ಳೆಯದನ್ನು ಮಾಡಬೇಕು ಎಂದುಕೊಂಡ ಅಧಿಕಾರಿಯ ಕೈ ಕಟ್ಟಿಹಾಕುವ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಬೇಕಾಗುವಷ್ಟು ಮನರಂಜನೆಯ ಸರಕನ್ನು ಸೇರಿಸಿದ್ದರೆ ಉತ್ತಮ ಆಶಯ ಹೊಂದಿರುವ ಈ ಸಿನಿಮಾ ಅತ್ಯುತ್ತಮ ಸಿನಿಮಾ ಆಗಬಹುದಿತ್ತು.

ಛಾಯಾಗ್ರಹಣ ಉತ್ತಮವಾಗಿದೆ. ಹಿನ್ನೆಲೆ ಸಂಗೀತ ಇನ್ನೂ ಹದಗೊಳ್ಳಬೇಕಿತ್ತು. ನಟ ದುಲ್ಕರ್‌ ಸಲ್ಮಾನ್‌ ಅವರು ಡ್ರಾಮಾಟಿಕ್‌ ಪಾತ್ರವನ್ನು ರಿಯಲಿಸ್ಟಿಕ್‌ ಆಗಿಸುವಲ್ಲಿ ಶ್ರಮಿಸಿದ್ದಾರೆ. ಹತ್ತಾರು ಒಳ್ಳೆಯ ಪಾತ್ರ ಮತ್ತು ವಿಷಯ ಚಿತ್ರದಲ್ಲಿ ಕಂಡೂ ಕಾಣದಂತಾಗುತ್ತವೆ. ಈ ಮಿತಿಗಳ ಮಧ್ಯೆಯೂ ‘ಸೆಲ್ಯೂಟ್’ ಬರೀ ಮನರಂಜನೆಯನ್ನೇ ಮೂಲ ಉದ್ದೇಶವನ್ನಾಗಿ ನೋಡದೆ ವಾಣಿಜ್ಯಾತ್ಮಕ ಚಿತ್ರದಲ್ಲಿಯೂ ಗಂಭೀರ ವಿಷಯಗಳನ್ನು ಚರ್ಚಿಸುವಂಥ ಒಂದು ಉತ್ತಮ ಪ್ರಯತ್ನ ಎನ್ನಬಹುದು. ಸಿನಿಮಾ SonyLIV ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here