ಅಕ್ರಮ ವಲಸಿಗರ ಅನಿವಾರ್ಯತೆ, ಅವರು ಎದುರಿಸುವ ಕಷ್ಟಗಳ ಕುರಿತು ಹೇಳುತ್ತಾ, ಚಿತ್ರ ಗಡಿ ಇಲ್ಲದ ಜಗತ್ತಿನ ಪರಿಕಲ್ಪನೆಯನ್ನು ಬಿತ್ತುತ್ತದೆ. ಗಂಭೀರವಾದ ವಿಷಯವೊಂದನ್ನು ಮನರಂಜನೀಯವಾಗಿ ಹೇಳಿ, ಸಮರ್ಥವಾಗಿ ಸಂದೇಶವನ್ನು ದಾಟಿಸುವುದು ನಿರ್ದೇಶಕ ಹಿರಾನಿ ಶೈಲಿ. ಅವರ ನಿರ್ದೇಶನದ ಉಳಿದ ಸಿನಿಮಾಗಳಿಗೆ ಹೋಲಿಸಿದರೆ ‘ಡಂಕಿ’ ಕೊಂಚ ದುರ್ಬಲ ಎನಿಸುತ್ತದೆಯಾದರೂ, ಈ ವರ್ಷದ ಉತ್ತಮ ಸಿನಿಮಾಗಳ ಸಾಲಲ್ಲಿ ಖಂಡಿತಾ ನಿಲ್ಲುತ್ತದೆ.

ಈ ವರ್ಷ ಎರಡು ಭರ್ಜರಿ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿ, ಕೋವಿಡ್ ನಂತರದಲ್ಲಿ ಬಾಲಿವುಡ್‌ ಅನ್ನು ಕಟ್ಟಿಹಾಕಿದ್ದ ಸೋಲಿನ ಸರಪಳಿಯನ್ನು ತುಂಡರಿಸಿದ್ದ ಶಾರುಕ್ ಖಾನ್ ತಮ್ಮ, ಹೊಸ ಸಿನಿಮಾದ ಮೂಲಕ ಮತ್ತೊಂದು ಬದಲಾವಣೆಗೂ ಕಾರಣವಾಗಿದ್ದಾರೆ. ಇತ್ತೀಚೆಗೆ ತೆರೆ ಕಾಣುತ್ತಿರುವ ದೊಡ್ಡ ಸ್ಟಾರ್‌ಗಳಿರುವ, ದೊಡ್ಡ ಬಜೆಟ್‌ನ, ದುಡ್ಡು ಮಾಡುವ ಸಿನಿಮಾಗಳೆಲ್ಲಾ ಆ್ಯಕ್ಷನ್ ಚಿತ್ರಗಳೇ ಆಗಿರುವಾಗ ಶಾರುಖ್‌ ಎಮೋಷನ್, ಡ್ರಾಮಾದತ್ತ ಮುಖ ಮಾಡಿದ್ದಾರೆ. ಹಾಗೆ ನೋಡಿದರೆ ಶಾರುಖ್, ಭಾವನಾತ್ಮಕ ಪ್ರೇಮ ಕತೆಗಳಿಂದಲೇ ಮನಗೆದ್ದವರು, ಸೂಪರ್ ಸ್ಟಾರ್ ಆದವರು. ಅಂತಹ ರೋಮ್ಯಾಂಟಿಕ್ ಹೀರೋ ಕೂಡ ಯಶಸ್ಸಿಗಾಗಿ ಈ ವರ್ಷ ಆ್ಯಕ್ಷನ್ ಚಿತ್ರಗಳ ಮೊರೆ ಹೋಗಬೇಕಾಯಿತು. ‘ಡಂಕಿ’ ಚಿತ್ರದೊಂದಿಗೆ ಶಾರುಖ್ ಮತ್ತೆ ತಮ್ಮ ಮೂಲ ಜಾನರ್‌ಗೆ ಮರಳಿದ್ದಾರೆ. ಸೋಲೇ ಕಾಣದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಎಂದಿನಂತೆ ಸಾಮಾಜಿಕ ವಿಷಯವೊಂದನ್ನು, ಹಾಸ್ಯ ಮತ್ತು ಭಾವನೆಗಳಿಂದ
ಅಲಂಕರಿಸಿ ತೆರೆಗೆ ತಂದಿದ್ದಾರೆ.

‘ಡಂಕಿ’ ಅಕ್ರಮ ವಲಸಿಗರ ಕತೆ ಹೇಳುವ ಚಿತ್ರ. ಪಂಜಾಬಿನಲ್ಲಿ ‘ಡಂಕಿ’ ಎಂದರೆ ವಲಸಿಗರು ಅಕ್ರಮವಾಗಿ ದೇಶವೊಂದನ್ನು ಪ್ರವೇಶಿಸಲು ನಡೆಸುವ ಪ್ರಯಾಣ. ಪಂಜಾಬಿನ ಸಣ್ಣ ಪಟ್ಟಣವೊಂದರ ಮೂವರು ಸ್ನೇಹಿತರಿಗೆ ಮನು (ತಾಪ್ಸಿ ಪನ್ನು), ಬಲ್ಲಿ (ಅನಿಲ್ ಗ್ರೋವರ್) ಬಗ್ಗು (ವಿಕ್ರಮ್ ಕೋಚರ್)ಗೆ ಊರಿನ ಇತರ ಎಷ್ಟೋ ಯುವಕ – ಯುವತಿಯರಂತೆ ವಿದೇಶದ ಕನಸು. ಲಂಡನ್‌ನಲ್ಲಿ ಕೆಲಸ ಮಾಡಿ ಹಣ ಸಂಪಾದಿಸುವ ಕನಸು. ಮೂವರಿಗೂ ಹಣದ ಅವಶ್ಯಕತೆ ಇರುವುದು ಬೇರೆ ಬೇರೆ ಕಾರಣಗಳಿಗಾದರೂ, ಎಲ್ಲದರ ಮೂಲ ಒಂದೇ, ಬಡತನ. ಯುಕೆ ವೀಸಾ ಪಡೆಯುವ ಪ್ರಕ್ರಿಯೆಯಲ್ಲಿ ಹಣ ಕಳೆದುಕೊಂಡು ಮೋಸ ಹೋಗುವ ಇವರಿಗೆ ಆಕಸ್ಮಿಕವಾಗಿ ಸಿಕ್ಕಿ ಜೊತೆಯಾಗುವವ ಸೈನಿಕ ಹಾರ್ಡಿ ಸಿಂಗ್ (ಶಾರುಕ್ ಖಾನ್). ಮನುವಿನ ಪ್ರೀತಿಯಲ್ಲಿ ಬೀಳುವ ಹಾರ್ಡಿ ಮನುವಿನ ಇಂಗ್ಲೆಂಡ್‌ ಕನಸನ್ನು ತನ್ನದಾಗಿಸಿಕೊಂಡು, ಅವರ ಜೊತೆ ಪ್ರಯಾಣಕ್ಕೆ ಸಿದ್ಧವಾಗುತ್ತಾನೆ. ಆದರೆ, ವೀಸಾ ಪಡೆದುಕೊಳ್ಳಲು ವಿಫಲರಾಗುವ ಈ ತಂಡಕ್ಕೆ ಕೊನೆಗೆ ಉಳಿಯುವ ದಾರಿ ಒಂದೇ. ಅದು ಅಕ್ರಮವಾಗಿ ಇಂಗ್ಲೆಂಡ್ ತಲುಪುವುದು. ಹೀಗೆ ಆರಂಭವಾಗುವ ಅಪಾಯಕಾರಿ ಡಂಕಿ ಪ್ರಯಾಣ ಮತ್ತು ಅದರ ನಂತರದ ಪರಿಣಾಮದ ಕತೆಯನ್ನು ರಾಜ್‌ಕುಮಾರ್ ಹಿರಾನಿ ತಮ್ಮ ಎಂದಿನ ಹಾಸ್ಯಭರಿತ ಶೈಲಿಯಲ್ಲಿ ಹೇಳಿದ್ದಾರೆ.

ಕತೆಯ ಆರಂಭ ಬಹುತೇಕ ‘ತ್ರೀ ಈಡಿಯಟ್ಸ್’ ನೆನಪಿಸಿದರೆ ಅಚ್ಚರಿಯಿಲ್ಲ. ಇಲ್ಲೂ ಮೂವರು ಸ್ನೇಹಿತರು ತಮ್ಮ ಜೀವನದಿಂದ ಮರೆಯಾಗಿದ್ದ ಸ್ನೇಹಿತನನ್ನು ಹಲವು ವರ್ಷಗಳ ನಂತರ ಭೇಟಿಯಾಗಲು ಹೊರಡುತ್ತಾರೆ. ಈ ಸಿನಿಮಾದಲ್ಲೂ ಇರುವುದು ತನ್ನ ವಿಶೇಷ ಬುದ್ದಿವಂತಿಕೆಯಿಂದ ಕಷ್ಟದ ಸನ್ನಿವೇಶಗಳಿಂದ ಹೊರಬರುವ, ಅಸಾಧ್ಯವನ್ನು ಸಾಧಿಸಬಲ್ಲ ನಾಯಕ. ಸಿನಿಮಾದ ಮೊದಲಾರ್ಧದ ಬಹುತೇಕ ಹಾಸ್ಯ ಸನ್ನಿವೇಶಗಳು ನಗು ತರಿಸುವುದಿಲ್ಲ. ಅವು ಹಿರಾನಿ ಸಿನಿಮಾಗಳಲ್ಲಿ ಈಗಾಗಲೇ ನೋಡಿರುವಂತಹ ಸನ್ನಿವೇಶಗಳನ್ನೇ ಹೋಲುತ್ತವೆ. ತರಗತಿಯಲ್ಲಿ ಪಾಠದ ವೇಳೆ ನಡೆಯುವ ಹಾಸ್ಯ, ರಾತ್ರಿ ಕುಡಿದು ಯಾರದೋ ಮನೆ ಬಾಗಿಲು ಬಡಿದು ಗಲಾಟೆ ಮಾಡುವ ಸ್ನೇಹಿತರ ಪಡೆ, ಬೆಳಗ್ಗೆ ತರಗತಿಯಲ್ಲಿ ಇನ್ನೂ ಇಳಿಯದ ಹ್ಯಾಂಗೋವರ್, ಈ ನಡುವೆ ಸ್ನೇಹಿತನೊಬ್ಬನ ಆತ್ಮಹತ್ಯೆ… ಹೀಗೆ. ಆದರೆ, ದ್ವಿತಿಯಾರ್ಧದಲ್ಲಿ ಸಿನಿಮಾ ಹೆಚ್ಚು ಆಸಕ್ತಿಕರವಾಗುತ್ತಾ ಹೊಸ ವಿಷಯಗಳೊಂದಿಗೆ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.

ವಿಎಫ್ಎಕ್ಸ್, ಆ್ಯಕ್ಷನ್, ಮುಂತಾದವುಗಳ ಮೊರೆ ಹೋಗದೆ, ತಮ್ಮ ಸಿನಿಮಾವನ್ನು ಸಶಕ್ತ ಕತೆಯ ಮೇಲೆಯೇ ಕಟ್ಟಲು ಹಿರಾನಿ ಯತ್ನಿಸಿದ್ದಾರೆ. ‘ಮುನ್ನಾಭಾಯಿ’ಯಲ್ಲಿ ನಾಯಕ ರೌಡಿ ಆಗಿದ್ದರೂ ಅವನ ಕೈಯಲ್ಲಿ ಫೈಟ್ ಮಾಡಿಸದೆ, ಅವನ ಪ್ರೀತಿ, ಅಳು ಮತ್ತು ನಗು ತೋರಿಸಿದ್ದವರು ನಿರ್ದೇಶಕ ಹಿರಾನಿ. ಇಲ್ಲಿ ಕೂಡ ಅವರ ನಾಯಕನ ದೈಹಿಕ ಬಲಕ್ಕಿಂತ, ಆತನ ಬುದ್ಧಿಬಲ ಮತ್ತು ಭಾವನಾತ್ಮಕತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಹೀಗಾಗಿ, ಡಂಕಿಯಂತಹ ಹಲವು ದೇಶಗಳನ್ನು ಅಕ್ರಮವಾಗಿ ದಾಟಿ ಸಾಗಬೇಕಾದ ಅಪಾಯಕಾರಿ ಪ್ರಯಾಣ ಇದ್ದಾಗಲೂ ಸಿನಿಮಾದಲ್ಲಿ ಹೆಚ್ಚಿನ ಆ್ಯಕ್ಷನ್ ಸೀಕ್ವೆನ್ಸ್‌ಗಳಿಲ್ಲ. ನಾಯಕನಿಗೆ ಸೈನಿಕನ ಹಿನ್ನೆಲೆ ನೀಡಿರುವುದರಿಂದ ನಡುವಲ್ಲಿ ಬರುವ ಒಂದೇ ಸಣ್ಣ ಹೊಡೆದಾಟದ ದೃಶ್ಯಕ್ಕೂ ಸಮರ್ಥನೆ ದೊರೆಯುತ್ತದೆ.

ಶಾರುಕ್ ಅಭಿಮಾನಿಗಳಿಗೆ ತುಂಬಾ ದಿನಗಳ ನಂತರ ತಮ್ಮ ನೆಚ್ಚಿನ ನಾಯಕನ ಭಾವಪೂರ್ಣ ಅಭಿನಯ ನೋಡಲು ಸಿಕ್ಕಿದೆ. ಆದರೆ, ಉಳಿದೆಲ್ಲಾ ಪ್ರಮುಖ ಪಾತ್ರಧಾರಿಗಳಿಗೆ ಪಂಜಾಬಿನ ನಂಟು ಇರುವುದರಿಂದ ಅವರ ಪಂಜಾಬಿ ಸಹಜವೆನಿಸುತ್ತದೆ. ಆದರೆ, ಶಾರುಕ್ ಬಾಯಲ್ಲಿ ಪಂಜಾಬಿ ಭಾಷಾ ಶೈಲಿ ಅಷ್ಟು ಸುಲಲಿತವಾಗಿ ಕೇಳುವುದಿಲ್ಲ. ಚಿತ್ರವನ್ನು ಮುಂದೆ ಕೊಂಡೊಯ್ಯುವುದು ಪ್ರೇಮ ಕತೆಯೇ ಆದರೂ ಅದು ಹೆಚ್ಚು ನಮ್ಮನ್ನು ಆವರಿಸುವುದಿಲ್ಲ. ಇಲ್ಲಿನ ಪ್ರೇಮ ಕತೆಗೆ ಎಲ್ಲವನ್ನೂ ಮರೆಯುವಂತಹ ತೀವ್ರತೆ ಇಲ್ಲದಿರುವುದೂ ಕಾರಣವಿರಬಹುದು. ಇಲ್ಲಿನ ನಾಯಕ – ನಾಯಕಿ ಪ್ರೇಮಕ್ಕಾಗಿ ತಾವು ನಂಬಿರುವ, ಸಾಧಿಸಲು ಹೊರಟಿರುವ ಎಲ್ಲವನ್ನೂ ತ್ಯಜಿಸುವಂತಹ ಮೈಮರೆವು ಪ್ರದರ್ಶಿಸುವುದಿಲ್ಲ. ವಾಸ್ತವತೆಯ ನೆಲೆಯಲ್ಲಿ ತಮ್ಮ ಆಯ್ಕೆ ಮಾಡುತ್ತಾರೆ. ಇದು ಕತೆಯಲ್ಲಿ ಒಂದು ಖುಶಿ ಕೊಡುವ ಬದಲಾವಣೆಯೂ ಹೌದು. ಹೀಗಾಗಿ, ಮೊದಲಿಗೆ ಹೆಚ್ಚು ತಟ್ಟದ ಪ್ರೇಮ ಕತೆ ಕೊನೆಕೊನೆಗೆ ಮನಸ್ಸನ್ನು ಆರ್ಧ್ರವಾಗಿಸುತ್ತದೆ.

ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ಕಿ ಕೌಶಲ್ ಆ ಸಣ್ಣ ಕಾಲಾವಧಿಯಲ್ಲೇ ಅದ್ಭುತವಾಗಿ ನಟಿಸಿ, ಗೆಲ್ಲುತ್ತಾರೆ. ಮೂರು ಸಾಲಿನ ನಿರೂಪಣೆ ಬಿಟ್ಟರೆ, ಅವರ ಪಾತ್ರಕ್ಕೆ ಹೆಚ್ಚಿನ ಹಿನ್ನೆಲೆ ಕೊಡದೆ ಇರುವುದರಿಂದ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ತಟ್ಟುವುದು ಕಷ್ಟ. ಹೀಗಿದ್ದೂ, ಕತೆಯಲ್ಲಿರುವ ತೊಂದರೆಯನ್ನು ತಮ್ಮ ಪ್ರತಿಭೆಯಿಂದ ನಿವಾರಿಸಿರುವ ವಿಕ್ಕಿ ತಮ್ಮ ನಟನೆಯಿಂದ ಪಾತ್ರವನ್ನು ಸ್ಮರಣೀಯವಾಗಿಸಿದ್ದಾರೆ. ಚಿತ್ರ ಶಾರುಖ್ ಕೇಂದ್ರಿತವಾಗಿಲ್ಲ ಎಂಬುದು ಖುಷಿಯ ಸಂಗತಿ. ಎಲ್ಲಾ ಪಾತ್ರಗಳಿಗೂ ಸಾಕಷ್ಟು ಸ್ಕ್ರೀನ್‌ಸ್ಪೇಸ್‌ ನೀಡಲಾಗಿದೆ. ತಾಪ್ಸಿ ಪನ್ನು ಕೆಲಸ ಅಚ್ಚುಕಟ್ಟಾಗಿದೆ. ‘ಬಗ್ಗು’ವಾಗಿ ವಿಕ್ರಂ ಕೋಚರ್ ನಗಿಸುತ್ತಾರೆ. ಬೊಮ್ಮನ್ ಇರಾನಿ ಸಪ್ಪೆ ಎನಿಸುತ್ತಾರೆ. ಸಿನಿಮಾಟೋಗ್ರಫಿ, ಹಿನ್ನೆಲೆ ಸಂಗೀತ, ಎಡಿಟಿಂಗ್ ಎಲ್ಲವೂ ಚಿತ್ರಕ್ಕೆ ತಕ್ಕದಾಗಿದೆ.

ಅಕ್ರಮ ವಲಸಿಗರ ಅನಿವಾರ್ಯತೆ, ಅವರು ಎದುರಿಸುವ ಕಷ್ಟಗಳ ಕುರಿತು ಹೇಳುತ್ತಾ, ಚಿತ್ರ ಗಡಿ ಇಲ್ಲದ ಜಗತ್ತಿನ ಪರಿಕಲ್ಪನೆಯನ್ನು ಬಿತ್ತುತ್ತದೆ. ತುಂಬಾ ಗಂಭೀರವಾದ ವಿಷಯವೊಂದನ್ನು ಮನರಂಜನೀಯವಾಗಿ ಹೇಳಿ, ಸಮರ್ಥವಾಗಿ ಸಂದೇಶವನ್ನು ದಾಟಿಸುವ ಹಿರಾನಿ 5 ವರ್ಷಗಳ ನಂತರ ಚಿತ್ರ ಮಾಡಿದ್ದಾರೆ. ಆದರೆ, ಚಿತ್ರ ನೋಡುತ್ತಾ ಪ್ರೇಕ್ಷಕರು ಧಾರಾಕಾರ ಕಣ್ಣೀರು ಸುರಿಸಿದರೂ ಇಲ್ಲಿ ಸಿನಿಮಾ, ವಿಷಯದ ಆಳಕ್ಕೆ ಇಳಿದಂತೆ ಅನಿಸುವುದಿಲ್ಲ. ಹೀಗಾಗಿ, ವಿಷಯದ ಗಂಭೀರತೆಯೂ ಪೂರ್ಣವಾಗಿ ಪ್ರೇಕ್ಷಕರನ್ನು ತಟ್ಟುವುದಿಲ್ಲ. ಅವರ ಉಳಿದ ಸಿನಿಮಾಗಳಿಗೆ ಹೋಲಿಸಿದರೆ ‘ಡಂಕಿ’ ದುರ್ಬಲ ಎನಿಸುತ್ತದೆಯಾದರೂ, ಈ ವರ್ಷದ ಉತ್ತಮ ಸಿನಿಮಾಗಳ ಸಾಲಲ್ಲಿ ಖಂಡಿತಾ ನಿಲ್ಲುತ್ತದೆ. ಆ್ಯಕ್ಷನ್ ಚಿತ್ರಗಳ ಈ ಪರ್ವದಲ್ಲಿ, ಕುಟುಂಬದ ಎಲ್ಲರೂ ಕುಳಿತು ನೋಡಿ ಆನಂದಿಸಬಹುದಾದ, ನೋ-ನಾನ್‌ಸೆನ್ಸಿಕಲ್ ಚಿತ್ರವಾಗಿ ‘ಡಂಕಿ’ ಗೆಲ್ಲುತ್ತದೆ.

LEAVE A REPLY

Connect with

Please enter your comment!
Please enter your name here