ಶ್ರೀರಾಮ್‌ ರಾಘವನ್‌ನಿರ್ದೇಶನದ ‘ಮೇರಿ ಕ್ರಿಸ್ಮಸ್‌’ ತಮಿಳು – ಹಿಂದಿ ದ್ವಿಭಾಷಾ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 2024ರ ಜನವರಿ 12ರಂದು ಸಿನಿಮಾ ತೆರೆಕಾಣಲಿದೆ.

ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿರುವ ‘ಮೇರಿ ಕ್ರಿಸ್ಮಸ್‌’ ಹಿಂದಿ – ತಮಿಳು ದ್ವಿಭಾಷಾ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾವನ್ನು ಶ್ರೀರಾಮ್‌ ರಾಘವನ್‌ ನಿರ್ದೇಶಿಸಿದ್ದಾರೆ. ಚಿತ್ರದ ಟ್ರೇಲರ್‌ ಆರಂಭವಾದ ತಕ್ಷಣ ಎರಡು ಮಿಕ್ಸರ್ ಗ್ರೈಂಡರ್‌ಗಳನ್ನು ಕಾಣಬಹುದು! ಒಂದರಲ್ಲಿ ಉರಿದ ಶೇಂಗಾ, ಕೆಂಪು ಮೆಣಸಿನಕಾಯಿಗಳು ಮತ್ತು ಇನ್ನೊಂದರಲ್ಲಿ ನಿದ್ರೆ ಮಾತ್ರೆಗಳನ್ನು ಗ್ರೈಂಡ್‌ ಮಾಡಲಾಗುತ್ತದೆ. ನಂತರ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಕ್ರಿಸ್‌ಮಸ್ ಮುನ್ನಾದಿನದಂದು ಮೊದಲ ಬಾರಿಗೆ ಪರಸ್ಪರ ಭೇಟಿಯಾಗುತ್ತಾರೆ. ಇದು ಅನೇಕ ಘಟನೆಗಳಿಗೆ ಕಾರಣವಾಗಿ ಅವರನ್ನು ತೊಂದರೆಗೆ ಸಿಲುಕಿಸುತ್ತದೆ. ಸಂಜಯ್ ಕಪೂರ್ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟಿನ್ನು ಆನಂದ್ ಅವರ ವಾಯ್ಸ್‌ ಓವರ್ ಸಹ ಕೇಳಿಸುತ್ತದೆ.

ಚಿತ್ರವನ್ನು ತಮಿಳು ಮತ್ತು ಹಿಂದಿ ಎರಡು ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ, ಪೋಷಕ ನಟರಾಗಿ ಹಿಂದಿ ಆವೃತ್ತಿಯಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ನಟಿಸಿದ್ದಾರೆ. ತಮಿಳು ಆವೃತ್ತಿಯಲ್ಲಿ ರಾಧಿಕಾ ಶರತ್‌ಕುಮಾರ್, ಷಣ್ಮುಗರಾಜ, ಕೆವಿನ್ ಜಯ್ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ನಟಿಸಿದ್ದಾರೆ. ಈ ಚಿತ್ರವು ಪರಿ ಎಂಬ ಬಾಲನಟನನ್ನು ಪರಿಚಯಿಸಿದೆ. ಅಶ್ವಿನಿ ಕಲ್ಸೇಕರ್ ಮತ್ತು ರಾಧಿಕಾ ಆಪ್ಟೆ ಚಿತ್ರದ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು Sriram’s Matchbox Pictures ಮತ್ತು Ramesh Taurani’s Tips Films ಬ್ಯಾನರ್‌ ಅಡಿಯಲ್ಲಿ ರಮೇಶ್ ತೌರಾನಿ, ಸಂಜಯ್ ರೌತ್ರಾಯ್, ಜಯ ತೌರಾನಿ ಮತ್ತು ಕೇವಲ್ ಗರ್ಗ್ ನಿರ್ಮಿಸಿದ್ದಾರೆ. ಪ್ರೀತಮ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಮಧು ನೀಲಕಂದನ್‌ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶ್ರೀರಾಮ್ ರಾಘವನ್, ಅರ್ಜಿತ್ ಬಿಸ್ವಾಸ್, ಪೂಜಾ ಲಧಾ ಸೂರ್ತಿ ಮತ್ತು ಅನುಕೃತಿ ಪಾಂಡೆ ಚಿತ್ರಕಥೆ ರಚಿಸಿರುವ ಸಿನಿಮಾ ಜನವರಿ 12, 2024ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here