‘ಕಿರಗೂರಿನ ಗಯ್ಯಾಳಿಗಳು’ ಖ್ಯಾತಿಯ ಮಾನಸ ಜೋಶಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಎವಿಡೆನ್ಸ್‌’ ಸಿನಿಮಾದ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಪ್ರವೀಣ್‌ ಸಿ ಪಿ ಕತೆ, ಚಿತ್ರಕಥೆ ರಚಿಸಿ ಸಿನಿಮಾ ನಿರ್ದೇಶಿಸಿದ್ದಾರೆ. ಕೊಲೆಯೊಂದರ ಪತ್ತೇದಾರಿಕೆಯ ಸುತ್ತ ಹೆಣೆದ ಕಥಾವಸ್ತು ಚಿತ್ರದ್ದು.

ಪ್ರವೀಣ್‌ ಸಿ ಪಿ ಕತೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಎವಿಡೆನ್ಸ್’ ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಚಿತ್ರದ ‘ಅಯ್ಯಯ್ಯೋ ಅರೆಮನಕೆ’ ಲಿರಿಕಲ್ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಕೊಲೆಯೊಂದು ನಡೆದಾಗ ಅದರ ಸಾಕ್ಷ್ಯಾಧಾರಗಳನ್ನು ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಚಿತ್ರದಲ್ಲಿದೆ. ನಿರ್ಮಾಪಕ ಸುರೇಂದ್ರ ಶೆಟ್ಟಿ ಈ ಕುರಿತು ಮಾತನಾಡಿ, ‘ನಾನು ಚಿತ್ರರಂಗಕ್ಕೆ ಹೊಸಬ. ಪ್ರವೀಣ್ ಬರೀ 2 ಪಾತ್ರ ಇಟ್ಟುಕೊಂಡು ಮಾಡಿದ್ದೇನೆ ಎಂದಾಗ ಆಸಕ್ತಿದಾಯಕವೆನಿಸಿ ಕೈ ಹಾಕಿದೆವು. ನಂತರ ಅದು ಮಲ್ಟಿಪಲ್ ರೋಲ್ ಆಯ್ತು. 15 ಲಕ್ಷ ಹೋಗಿ ಡಬಲ್ ಆಯ್ತು. ಮುಂದಿನ ತಿಂಗಳು ಸಿನಿಮಾ ಬಿಡುಗಡೆಯಾಗುತ್ತಿದೆ’

ನಿರ್ದೇಶಕ ಪ್ರವೀಣ್‌ ತಮ್ಮ ಸಿನಿಮಾದ ಬಗ್ಗೆ ಮಾತನಾಡಿ, ‘ನಿರ್ಮಾಪಕರಿಲ್ಲ ಅಂದ್ರೆ ನಾನಿಲ್ಲ, ರೋಬೋ ಗಣೇಶ್, ಮಾನಸ ಜೋಷಿ ಎಲ್ಲರೂ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆತ್ಮಹತ್ಯೆ ಪ್ರಕರಣ ತನಿಖೆ ಮಾಡಲು ಬರುವ ವಿಶೇಷ ತನಿಖಾಧಿಕಾರಿಯಾಗಿ ಮಾನಸ ಜೋಷಿ ನಟಿಸಿದ್ದು, 360 ಡಿಗ್ರಿ ಶಾಟ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಎವಿಡೆನ್ಸ್’ ಪದದ ಸುತ್ತ ನಡೆಯುವ ಕಥೆಯಿದು. ಕೋವಿಡ್ ಸಮಯದಲ್ಲಿಎರಡೇ ಪಾತ್ರ ಅಂತ ಸ್ಟಾರ್ಟ್ ಮಾಡಿದೆವು. ನಂತರ ಕಮರ್ಷಿಯಲ್ಲಾಗಿರಲೆಂದು ಬೇರೆ ಪಾತ್ರಗಳನ್ನು ನೈಜವಾಗಿ ತೋರಿಸಿದ್ದೇವೆ. 10 ಜನ ನಿರ್ಮಾಪಕರು ಕೈ ಜೋಡಿಸಿದ್ದರಿಂದಲೇ ಸಿನಿಮಾ ಆಗಿದೆ’ ಎಂದರು.

ನಟ ಆಕರ್ಷ್ ಆದಿತ್ಯ ಅವರು ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಇದು ಅವರ 2ನೇ ಚಿತ್ರ. ಕಾರ್ತೀಕ್ ವರ್ಣೇಕರ್, ರೇಣು ಶಿಕಾರಿ, ಪವನ್ ಸುರೇಶ್, ಶಿವಕುಮಾರ್ ಆರಾಧ್ಯ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರವಿಂದ್ ಅಚ್ಚು, ಎಂ ಎನ್ ರವೀಂದ್ರ ರಾವ್ (ದೂರದರ್ಶನ), ಪ್ರಶಾಂತ್ ಸಿ ಪಿ ರಮೇಶ್ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ‌ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗಲ ಹೊರವಲಯದಲ್ಲಿ ಸಿನಿಮಾ ಚಿತ್ರಿಸಲಾಗಿದೆ. ಚಿತ್ರದಲ್ಲಿ ‘ಜೋಶ್’ ಖ್ಯಾತಿಯ ರೋಬೊ ಗಣೇಶನ್ ನಾಯಕನಾಗಿ ನಟಿಸಿದ್ದು, ‘ಕಿರಗೂರಿನ ಗಯ್ಯಾಳಿಗಳು’ ಖ್ಯಾತಿಯ ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ರಚಿತಾ, ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಶಶಿಧರ ಕೋಟೆ, ಮನಮೋಹನ್ ರೈ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ, ಡಾ ವಿ ನಾಗೇಂದ್ರ ಪ್ರಸಾದ್ ಮತ್ತು ಪ್ರವೀಣ ಹಾಗೂ ಕಾರ್ತೀಕ್ ಸಾಹಿತ್ಯ ರಚಿಸಿದ್ದು, ಹನುಮಯ್ಯ ಬಂಡಾರು ಮತ್ತು ಆರ್ ಚಂದ್ರಶೇಖರ್‌ ಪ್ರಸಾದ್ ಅವರ ಸಂಭಾಷಣೆ, ರವಿ ಸುವರ್ಣ ಅವರ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಸಂಕಲನ, ಕರಿಯ ನಂದ ಮತ್ತು ರಘು ಆರ್ ಜೆ ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. Shri Dhruthi production ಹಾಗೂ Roshira production ಬ್ಯಾನರ್‌ ಅಡಿಯಲ್ಲಿ ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ್‌ಪ್ರಭು ಕೆ, ಕೆ. ಮಾದೇಶ್, ನಟರಾಜ್ ಸಿ ಎಸ್ ಚಿತ್ರ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here