ರಾಜ್ – ಡಿಕೆ ಜೋಡಿಯಿಂದ ಪ್ರೇಕ್ಷಕರು ಮತ್ತೊಂದು ‘ಫ್ಯಾಮಿಲಿ ಮ್ಯಾನ್’ ನಿರೀಕ್ಷಿಸಿದ್ದರೆ, ಈ ಸರಣಿ ನಿರಾಸೆ ಮೂಡಿಸಬಹುದು. ಆದರೆ, ಅವರ ಹಿಂದಿನ ಸರಣಿ ಮತ್ತು ಸಿನಿಮಾಗಳ ಹೋಲಿಕೆಯನ್ನು ತಪ್ಪಿಸಿಕೊಂಡರೆ, ‘ಫರ್ಝಿ’ ಸೀಸನ್ ಒಂದು ಒಮ್ಮೆ ನೋಡಬಹುದಾದ ಪ್ರಯತ್ನ. ‘ಫರ್ಝಿ’ ಅಮೇಝಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ.
ಅಗಾಧವಾಗಿ ಮತ್ತು ವೇಗವಾಗಿ ಬೆಳೆಯುತ್ತಿರುವ OTT ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿರುವ ಸ್ಚಾರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗ ‘ಫರ್ಝಿ’ ವೆಬ್ ಸೀರೀಸ್ ಮೂಲಕ ವಿಜಯ್ ಸೇತುಪತಿ ಮತ್ತು ಶಾಹಿದ್ ಕಪೂರ್ ಕೂಡ ಒಟಿಟಿ ಪ್ರವೇಶಿಸಿದ ನಟರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ‘ಫ್ಯಾಮಿಲಿ ಮ್ಯಾನ್’ ಸೃಷ್ಟಿಕರ್ತರಾದ ರಾಜ್ ಮತ್ತು ಡಿಕೆ ಮತ್ತೆ ಅದೇ ಕ್ರೈಂ, ಥ್ರಿಲ್ಲರ್ ವರ್ಗಕ್ಕೆ ಸೇರಿದ ‘ಫರ್ಜಿ’ಯನ್ನು ತೆರೆಗೆ ತಂದಿದ್ದು, ಈ ಬಾರಿ ನಕಲಿ ನೋಟುಗಳ ಹಿಂದಿನ ಕತೆ ಹೇಳಿದ್ದಾರೆ.
ಯಾವುದೇ ಕಲಾಕೃತಿಯನ್ನಾದರೂ ಯಥಾವತ್ತಾಗಿ ನಕಲು ಮಾಡುವ ಸಾಮರ್ಥ್ಯ ಹೊಂದಿರುವ ಪ್ರತಿಭಾವಂತ ಚಿತ್ರ ಕಲಾವಿದ ಸನ್ನಿಗೆ(ಶಾಹೀದ್ ಕಪೂರ್) ಶ್ರೀಮಂತನಾಗುವ ಬಯಕೆ. ಜೊತೆಗೆ, ‘ಕ್ರಾಂತಿ’ ಪತ್ರಿಕೆ ನಡೆಸುತ್ತಾ ಜಗತ್ತಿನಲ್ಲಿ ಕ್ರಾಂತಿ ತರುವ ಕನಸು ಕಾಣುತ್ತಿರುವ ಸನ್ನಿಯ ಪ್ರೀತಿಯ ಅಜ್ಜ, ಮಾಧವ್ (ಅಮುಲ್ ಪಾಲೇಕರ್) ಮೇಲೆ ದೊಡ್ಡ ಸಾಲದ ಹೊರೆ ಇದೆ. ಹೀಗಾಗಿ, ತನ್ನ ಕಲೆಯನ್ನು ಬಳಸಿಕೊಂಡು ಹಣ ಗಳಿಸಲು ಯತ್ನಿಸುವ ಬದಲು, ಹಣವನ್ನೇ ಸೃಷ್ಚಿಸಿದರೆ ಹೇಗೆ ಎಂಬ ಯೋಚನೆ ಸನ್ನಿಗೆ ಬಂದಾಗ, ಪತ್ರಿಕೆಯ ಪ್ರೆಸ್‌ನಲ್ಲಿ ಕೋಟಾ ನೋಟು ಮುದ್ರಿಸುವ ಯೋಜನೆ ರೂಪುಗೊಳ್ಳುತ್ತದೆ. ಇದಕ್ಕೆ, ಅವನಿಗೆ ಜೊತೆಯಾಗುವುದು, ಪ್ರಿಂಟಿಂಗ್ ತಂತ್ರಜ್ಞಾನವನ್ನು ಅರೆದು ಕುಡಿದಿರುವ ಆತನ ಪ್ರಾಣಸ್ನೇಹಿತ ಫಿರೋಜ್ (ಭುವನ್ ಅರೋರಾ). ತನ್ನ ಅಜ್ಜನ ಜೀವವೇ ಆಗಿರುವ ಪತ್ರಿಕೆ ಮತ್ತು ಪ್ರೆಸ್ ಅನ್ನು ಉಳಿಸಲು ಎಂಬ ಕಾರಣ ಹೇಳಿಕೊಂಡು ಆರಂಭವಾಗುವ ಇವರ ಕೋಟಾ ನೋಟು ದಂಧೆ ಮುಂದೆ ದೊಡ್ಡ ಅಂತಾರಾಷ್ಟ್ರೀಯ ಖೋಟಾ ನೋಟು ಜಾಲದ ಭಾಗವಾಗುತ್ತದೆ. ಈ ನಕಲಿ ನೋಟುಗಳ ಬೃಹತ್ ಜಾಲದ ಹಿಂದಿರುವ ಕ್ರಿಮಿನಲ್ ಮನ್ಸೂರ್ ದಲಾಲ್ (ಕೆ ಕೆ ಮೆನನ್). ಆತನಿಗೆ ಬೆನ್ನು ಹತ್ತಿದ ಬೇತಾಳದಂತಿರುವವ ತನಿಖಾ ಅಧಿಕಾರಿ ಮೈಖಲ್ (ವಿಜಯ್ ಸೇತುಪತಿ). ಮನ್ಸೂರ್‌ನನ್ನು ಹಿಡಿದೇ ತೀರಬೇಕೆಂಬ ಮೈಖಲ್ ಹಠದ ಹಿಂದೆ ವೃತ್ತಿ ಮತ್ತು ವೈಯಕ್ತಿಕ ಕಾರಣಗಳೆರಡೂ ಇವೆ.
‘ಫ್ಯಾಮಿಲಿ ಮ್ಯಾನ್’ ಸೀರೀಸ್ ಮೂಲಕವೇ ಹೆಚ್ಚು ಗುರುತಿಸಿಕೊಳ್ಳುವ ರಾಜ್, ಡಿಕೆ ಆ ಬಾರಿಯೂ ಅದೇ ವರ್ಗಕ್ಕೆ – ಕ್ರೈಂ, ಥ್ರಿಲ್ಲರ್, ಕಾಮಿಡಿ – ಸೇರಿದ ವಿಷಯವನ್ನು ಆರಿಸಿಕೊಂಡಿದ್ದಾರೆ. ಹೀಗಾಗಿ, ಈ ಸರಣಿ, ಫ್ಯಾಮಿಲಿ ಮ್ಯಾನ್ ಜೊತೆ ಹೋಲಿಸಲ್ಪಡುವುದನ್ನು ತಡೆಯುವುದು ಕಷ್ಚ. ಫ್ಯಾಮಿಲಿ ಮ್ಯಾನ್‌ನಲ್ಲಿ ಭಯೋತ್ಪಾದನೆ ವಿಷಯವಾದರೆ, ಇಲ್ಲಿ ಇರುವುದು ಆರ್ಥಿಕ ಭಯೋತ್ಪಾದನೆ. ಸರಣಿಯ ಆರಂಭ ನಿಧಾನಗತಿಯಲ್ಲಿದೆ. ಮೊದಲೆರಡು ಕಂತುಗಳು ಸನ್ನಿ ಮತ್ತು ಆತನ ಪ್ರಪಂಚವನ್ನು ಪರಿಚಯಿಸುವುದರಲ್ಲೇ ಹೆಚ್ಚಿನ ಭಾಗ ಕಳೆಯುತ್ತದೆ ಮತ್ತು ಅದು ಬಹುತೇಕ ನೀರಸವಾಗಿದೆ. ಮೈಖಲ್ ಮತ್ತು ಮನ್ಸೂರ್ ಪಾತ್ರಗಳ ಪರಿಚಯವೂ ಇಲ್ಲೇ ಆದರೂ, ಒಂದು ಛೇಸ್ ದೃಶ್ಯವನ್ನು ಹೊಂದಿದ್ದರೂ, ಅವು ಯಾವುವೂ ಹೊಸದೆನಿಸುವುದಿಲ್ಲ. ಆದರೂ ಮುಂದಿನ ಕಂತುಗಳನ್ನು ನೋಡುವಂತೆ ಪ್ರೇರೇಪಿಸುವುದು ಈ ಥ್ರಿಲ್ಲರ್ ಭಾಗಗಳು ಮಾತ್ರವೇ. ಸನ್ನಿ ಆತನ ಪ್ರೇಯಸಿ ನಡುವಿನ ದೃಶ್ಯಗಳು ಸೇರಿದಂತೆ, ಸನ್ನಿಯನ್ನು ಒಳಗೊಂಡ ಬಹುತೇಕ ದೃಶ್ಯಗಳು ಅಗತ್ಯಕ್ಕಿಂತ ದೀರ್ಘವಾಗಿ ಬೋರ್ ಹೊಡೆಸುತ್ತವೆ.
ನಕಲಿ ನೋಟು ತಯಾರಿಕೆಯ ಬಗ್ಗೆಯೂ ದೀರ್ಘ, ಮಾಹಿತಿಪೂರ್ಣ ದೃಶ್ಯಗಳಿವೆ. ಇದು ಕೆಲವರಿಗೆ ಆಸಕ್ತಿ ಮೂಡಿಸಬಹುದು, ಇನ್ನೂ ಕೆಲವರಿಗೆ ಅಗತ್ಯವಿಲ್ಲದ ಮಾಹಿತಿಯಂತೆಯೂ ಎನಿಸಬಹುದು. ಅಂತೂ, ಕೋಟಾ ನೋಟಿನ ಟಾಸ್ಕ್ ಪೋರ್ಸ್ ರಚನೆಯಾಗಿ ಮತ್ತು ನಕಲಿ ನೋಟಿನ ತನಿಖೆ ವೇಗ ಪಡೆದುಕೊಂಡ ಮೇಲೆ ಸರಣಿಯೂ ನಿಧಾನವಾಗಿ ವೇಗ ಪಡೆದುಕೊಳ್ಳುತ್ತದೆ. ಹೀಗಾಗಿ, ಪ್ರೇಕ್ಷಕರು ಮೊದಲೆರಡು ಎಪಿಸೋಡ್ ದಾಟಿ ಬಿಟ್ಟರೆ ಮಾತ್ರ ನಂತರದಲ್ಲಿ ಸರಣಿಯನ್ನು ಪೂರ್ತಿ ವೀಕ್ಷಿಸುವ ಸಾಧ್ಯತೆ ಹೆಚ್ಚು.
‘ಫ್ಯಾಮಿಲ್ ಮ್ಯಾನ್’ ಸರಣಿಯಲ್ಲೂ ದಕ್ಷಿಣದ ಗಂಧವನ್ನು ಸೇರಿಸಿಕೊಂಡಿದ್ದ ರಾಜ್, ಡಿಕೆ ಈ ಬಾರಿಯೂ ಅದನ್ನು ಮುಂದುವರಿಸಿದ್ದಾರೆ. ಅವರು ತಮ್ಮ ಹಿಂದಿ ಸರಣಿಗಳಲ್ಲಿ ದಕ್ಷಿಣದ ಭಾಷೆ ಮತ್ತು ದಕ್ಷಿಣ ಮೂಲದ ಪಾತ್ರಗಳನ್ನು ಸೇರಿಸುವ ಜೊತೆಗೆ, ಆ ಪಾತ್ರಗಳಿಗೆ ಆ ಭಾಷೆ ಮಾತನಾಡಬಲ್ಲ, ಅದೇ ಪ್ರದೇಶದ ನಟರನ್ನು ಹುಡುಕುತ್ತಾರೆಂಬುದು ಸಮಾಧಾನಕಾರ. ‘ಫ್ಯಾಮಿಲಿ ಮ್ಯಾನ್’ನಲ್ಲಿ ಮುಖ್ಯ ಪಾತ್ರಧಾರಿಯ ಕುಟುಂಬಕ್ಕೆ ತಮಿಳಿನ ಸಂಬಂಧ ಜೋಡಿಸಲಾಗಿತ್ತು. ಈ ಬಾರಿ ವಿಜಯ್ ಸೇತುಪತಿ ಮತ್ತು ಆತನ ಕುಟುಂಬದ ಮೂಲಕ ತಮಿಳು, ತೆಲುಗು ಎರಡನ್ನೂ ತೆರೆಯ ಮೇಲೆ ಕೇಳಿಸಿದ್ದಾರೆ. ಜೊತೆಗೆ, ಫ್ಯಾಮಿಲಿ ಮ್ಯಾನ್‌ನಲ್ಲಿ ಕೆಲವು ಕ್ಷಣಗಳಷ್ಟೇ ಕಾಣಿಸಿಕೊಂಡರೂ, ದೊಡ್ಡ ಜನಪ್ರಿಯತೆ ಗಳಿಸಿದ್ದ ಚಲಂ ಸರ್ ಕೂಡ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ.
ವಿಶೇಷವೆಂದರೆ, ಈ ದಕ್ಷಿಣದ ಸ್ಪರ್ಶವೇ ಇಡೀ ಸರಣಿಗೆ ಹೆಚ್ಚಿನ ಜೀವಂತಿಕೆ ಕೊಟ್ಟಿದೆ. ತಮಿಳು ಅಧಿಕಾರಿ ವಿಜಯ್ ಸೇತುಪತಿ ಹಿಂದಿ ಮಾತನಾಡುವ, ಹಿಂದಿಯಲ್ಲಿ ಬೈಯುವ ಭಾಗಗಳು ಖಂಡಿತಾ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸುತ್ತವೆ. ಸೇತುಪತಿ ತಮ್ಮ ಪಾತ್ರದೊಳಗೆ ಲೀಲಾಜಾಲವಾಗಿ ಹೊಕ್ಕು ಅಭಿನಯಿಸಿರವುದರ ಜೊತೆಗೆ, ತಮ್ಮದೇ ಉಚ್ಚಾರದಲ್ಲಿ ಹಿಂದಿಯಲ್ಲಿ ಡಬ್ ಮಾಡಿರುವುದು ಇಡೀ ಸರಣಿಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡಿದೆ. ಸೀರೀಸ್‌ನ ಬಹುತೇಕ ಹಾಸ್ಯ ಮತ್ತು ನೆನಪುಳಿಯುವಂತಹ ಕ್ಷಣಗಳನ್ನು ಪೂರೈಸಿರುವುದು ವಿಜಯ್ ಸೇತುಪತಿಯೇ. ಮೊದಲೇ ಹೇಳಿದಂತೆ ‘ಫ್ಯಾಮಿಲಿ ಮ್ಯಾನ್’ ಜೊತೆ ‘ಫರ್ಜಿ’ಯ ಹೋಲಿಕೆಯನ್ನು ತಡೆಯುವುದು ಸಾದ್ಯವಿಲ್ಲವಾದ ಕಾರಣ, ಮನೋಜ್ ಬಾಜಪೈಗೆ ಸಮಾಂತರವಾದ ಪಾತ್ರದಲ್ಲಿ ಆತನಿಗೆ ಸರಿ ಸಮನಾದ ನಟನನ್ನು ತರದೇ ಹೋಗಿದ್ದರೆ ಅಲ್ಲೇ ಸರಣಿ ಹೋಲಿಕೆಯಲ್ಲಿ ಅರ್ಧ ಸೋತು ಬಿಡುತ್ತಿತ್ತು. ಆ ಲೆಕ್ಕಾಚಾರದಲ್ಲಿ ಕೂಡ ವಿಜಯ್ ಸೇತುಪತಿ ಸೂಕ್ತ ಆಯ್ಕೆ.
ಉಳಿದ ಕಲಾವಿದರ ಆಯ್ಕೆಯಲ್ಲೂ ‘ಫರ್ಜಿ’ ಬಹುತೇಕ ಗೆದ್ದಿದೆ. ಅನುಭವಿ ನಟ ಕೆ ಕೆ ಮೆನನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭುವನ್ ಅರೋರ ದೊರಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಫಿರೋಝ್ ಪಾತ್ರದಲ್ಲಿ ಲವಲವಿಕೆಯಿಂದ ನಟಿಸಿ, ಗಮನಸೆಳೆಯುತ್ತಾರೆ. ಯಾಸಿರ್ ಪಾತ್ರಕ್ಕೆ ಚಿತ್ತರಂಜನ್ ಗಿರಿ ಚೆನ್ನಾಗಿ ಹೊಂದಿಕೆಯಾಗಿದ್ದರೆ, ಸಚಿವನ ಪಾತ್ರದಲ್ಲಿ ನಟಿಸಿರುವ ಝಾಕಿರ್ ಹುಸೇನ್ ಮತ್ತು ವಿಜಯ್ ಸೇತುಪತಿ ಕೆಮಿಸ್ಚ್ರಿ ಮನರಂಜಕವಾಗಿದೆ ಮತ್ತು ನಗು ಮೂಡಿಸುವಲ್ಲಿ ಸಫಲವಾಗುತ್ತದೆ. ರಾಶಿ ಖನ್ನಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ, ಮುಖ್ಯ ಪಾತ್ರದಲ್ಲಿರುವ ಶಾಹೀದ್ ಕಪೂರ್ ಕೊಂಚ ನಿರಾಸೆ ಮೂಡಿಸುತ್ತಾರೆ. ಕೆಲವು ದೃಶ್ಯಗಳಲ್ಲಿ ತಮ್ಮನ್ನು ತಾವು ಪಾತ್ರಕ್ಕೆ ಪೂರ್ತಿಯಾಗಿ ಒಪ್ಪಿಸಿಕೊಂಡ ಸಂದರ್ಭಗಳನ್ನು ಬಿಟ್ಟರೆ, ಉಳಿದ ಕಡೆಗಳಲ್ಲೆಲ್ಲಾ ಶಾಹೀದ್ ನಟನ ಬದಲು ಸ್ಟಾರ್‌ನಂತೆ ಕಾಣುತ್ತಾರೆ. ಭಾವನಾತ್ಮಕ ಮತ್ತು ರೋಮ್ಯಾಂಟಿಕ್ ದೃಶ್ಯಗಳಲ್ಲೂ ಇದೇ ತೊಂದರೆ ಎದ್ದು ಕಾಣುತ್ತದೆ. ಒಂದು ಸಮಾಧಾನವೆಂದರೆ, ಫಿರೋಜ್ ಮತ್ತು ಸನ್ನಿ ಕೆಮಿಸ್ಟ್ರಿ ಕೆಲಸ ಮಾಡಿದೆ.
ಮುಖ್ಯವಾಗಿ 8 ಎಪಿಸೋಡ್‌ಗೆ ಬೇಕಾಗುವಷ್ಚು ಸರಕು ಈ ಸರಣಿಯಲ್ಲಿ ಇಲ್ಲದಿರುವುದು ತೊಂದರೆಯೆನಿಸುತ್ತದೆ. ‘ಫ್ಯಾಮಿಲಿ ಮ್ಯಾನ್’ ಗೆಲುವಿಗೆ ಶ್ರೀಕಾಂತ್ ತಿವಾರಿಯ ವೃತ್ತಿ ಸಾಹಸಗಳು ಎಷ್ಚು ಸಹಾಯ ಮಾಡಿದ್ದವೋ ಅದಕ್ಕಿಂತ ಹೆಚ್ಚೇ ಎನ್ನುವಷ್ಚು ಆತನ ಕೌಟುಂಬಿಕ ದೃಶ್ಯಗಳು ನೆರವಾಗಿದ್ದವು. ಅಷ್ಚು ಶಕ್ತವಾದ ಮತ್ತು ಆಸಕ್ತಿ ಕೆರಳಿಸುವ ಕಥೆ ‘ಫರ್ಝಿ’ಯಲ್ಲಿ ಇಲ್ಲ. ಸ್ತ್ರೀ, ಶೋರ್ ಇನ್ ದಿ ಸಿಟಿ ಮುಂತಾದ ಚಿತ್ರಗಳ ಹಿಂದಿರುವ ರಾಜ್, ಡಿಕೆ ಜೋಡಿಯಿಂದ ಪ್ರೇಕ್ಷಕರು ಮತ್ತೊಂದು ‘ಫ್ಯಾಮಿಲಿ ಮ್ಯಾನ್’ ನಿರೀಕ್ಷಿಸಿದ್ದರೆ, ಈ ಸರಣಿ ನಿರಾಸೆ ಮೂಡಿಸಬಹುದು. ಆದರೆ, ಅವರ ಹಿಂದಿನ ಸರಣಿ ಮತ್ತು ಸಿನಿಮಾಗಳ ಹೋಲಿಕೆಯನ್ನು ತಪ್ಪಿಸಿಕೊಂಡರೆ, ‘ಫರ್ಝಿ’ ಸೀಸನ್ ಒಂದು ಒಮ್ಮೆ ನೋಡಬಹುದಾದ ಪ್ರಯತ್ನ. ‘ಫರ್ಝಿ’ ಅಮೆಝಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ.