‘ಮಿರ್ಝಾಪುರ್’, ‘ಪಾತಾಳ್ ಲೋಕ್’ ಸರಣಿಗಳನ್ನು ನೆನಪಿಸಿದರೂ ಆ ಮಟ್ಟವನ್ನು ತಲುಪುವಲ್ಲಿ ‘ಜಹನಾಬಾದ್‌’ ಸೋಲುತ್ತದೆ. ಆದರೆ, ಒಂದು ಉತ್ತಮ ಪ್ರಯತ್ನವಂತೂ ಹೌದು. ‘ಜಹನಾಬಾದ್ – ಆಫ್ ಲವ್ ಅಂಡ್‌ ವಾರ್’ Sony Livನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನೈಜ ಘಟನೆಗಳನ್ನು ಆಧರಿಸಿದ ಹಿಂದಿ ವೆಬ್ ಸೀರಿಸ್‌ಗಳ ಪಟ್ಟಿಗೆ ಹೊಸ ಸೇರ್ಪಡೆ ‘ಜಹನಾಬಾದ್ – ಆಫ್ ಲವ್ ಅಂಡ್‌ ವಾರ್’. 2005ರಲ್ಲಿ ಬಿಹಾರದ ಜಹಾನಾಬಾದಿನಲ್ಲಿ ದೇಶದ ಅತೀ ದೊಡ್ಡ ಜೈಲ್ ಬ್ರೇಕ್ ನಡೆದಿತ್ತು. ವಾವೋವಾದಿ ನಕ್ಸಲರ ದೊಡ್ಡ ಗುಂಪು ಇಡೀ ಊರನ್ನು ಆಕ್ರಮಿಸಿ, ಕಾರಾಗೃಹವನ್ನು ವಶಪಡಿಸಿಕೊಂಡು, ಬಂಧನದಲ್ಲಿದ್ದ ಮುನ್ನೂರಕ್ಕೂ ಹೆಚ್ಚು ನಕ್ಸಲರನ್ನು ಜೈಲಿನಿಂದ ಹೊರಗೆ ತಂದಿತ್ತು. ನಿರ್ದೇಶಕ ಸುಧೀರ್ ಮಿಶ್ರಾ ಈ ಘಟನೆಯನ್ನು ಇಟ್ಟುಕೊಂಡು ಈ ಹೊಸ ವೆಬ್ ಸಿರೀಸ್ ಸೃಷ್ಚಿಸಿದ್ದಾರೆ. ಸುಧೀರ್ ಮಿಶ್ರಾ ಅವರ ಅತ್ಯಂತ ಪ್ರಸಿದ್ಧ ಚಲನಚಿತ್ರ ‘ಹಝಾರೋ ಕ್ವಾಯಿಶೇ ಐಸೇ’ ಕೂಡ ನಕ್ಸಲ್ ಚಳವಳಿ, ಕಾಲೇಜು ಜೀವನ, ಪ್ರೇಮ ಮತ್ತು ಕ್ರಾಂತಿಯ ಸುತ್ತಲೇ ಹೆಣೆದಿದ್ದ ಕಾರಣ, ಅದೇ ರೀತಿಯ ಅಂಶಗಳನ್ನು ಹೊಂದಿದ್ದ ಈ ಸೀರೀಸ್ ಸಾಕಷ್ಚು ಕುತೂಹಲ ಕೆರಳಿಸಿತ್ತು.

ಜಹಾನಾಬಾದಿನ ಜೈಲ್ ಬ್ರೇಕ್ ಘಟನೆ, ಕಥೆಯ ಕೇಂದ್ರದಲ್ಲಿದ್ದರೂ, ಅದಕ್ಕೆ ಹೆಣೆದುಕೊಂಡಂತೆ, ಆದರೆ ಸಮಾನಾಂತರವಾಗಿ ಸಾಗುವ ಪ್ರೇಮಕತೆಯೂ ಇದರಲ್ಲಿದೆ. ಹಾಗೆ ನೋಡಿದರೆ, ಸೀರೀಸ್‌ನ ದೊಡ್ಡ ಭಾಗವನ್ನು ಈ ಪ್ರೇಮಕತೆಯಿಂದ ತುಂಬಲಾಗಿದೆ. ಜಹಾನಾಬಾದಿನ ಕಾಲೇಜಿನಲ್ಲಿ ಓದುತ್ತಿರುವ, ಯುವತಿ ಕಸ್ತೂರಿ, ತನ್ನ ಕಾಲೇಜಿಗೆ ಹೊಸದಾಗಿ ಬರುವ ಇಂಗ್ಲಿಷ್ ಪ್ರೊಫೆಸರ್ ಅಭಿಮನ್ಯು ಸಿಂಗ್‌ಗೆ ಮನಸೋಲುತ್ತಾಳೆ. ಆತನ, ವ್ಯಕ್ತಿತ್ವ, ವಿಚಾರಗಳಿಂದ ಆಕರ್ಷಿತಳಾಗುತ್ತಾಳೆ. ಬಿಹಾರದ ಆ ಸಣ್ಣ ಪಟ್ಟಣದಲ್ಲಿ ಢಾಳಾಗಿರುವ ಮತ್ತು ತೀರಾ ಸಾಮಾನ್ಯ ಎಂಬಂತೆ ಜನರು ಸ್ವೀಕರಿಸಿರುವ ಜಾತೀವಾದ ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳು ಇವರಿಬ್ಬರನ್ನು ಹತ್ತಿರಕ್ಕೆ ತರುತ್ತದೆ.

ಇದೇ ವೇಳೆ, ಜಹಾನಾಬಾದಿನ ಜೈಲಿನಲ್ಲಿ ನಕ್ಸಲ್ ಮುಖಂಡ ದೀಪಕ್‌ನನ್ನು ಬಂಧಿಸಿಡಲಾಗಿರುತ್ತದೆ. ಆತನನ್ನು ಜೈಲಿನಿಂದ ಬಿಡಿಸುವ ಸಲುವಾಗಿ ಮತ್ತೊಂಡು ಕಡೆ ವ್ಯೂಹ ರಚನೆ ನಡೆಯುತ್ತಿರುತ್ತದೆ. ಮತ್ತೊಂದೆಡೆ ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಕಸ್ತೂರಿಯ ಕುಟುಂಬಕ್ಕೆ ಹತ್ತಿರದವನಾದ, ಆ ಪ್ರದೇಶದ ಅತ್ಯಂತ ಪ್ರಭಾವಿ ವ್ಯಕ್ತಿ, ಮಾಜಿ ಶಾಸಕ ಶಿವಾನಂದ್ ಸಿಂಗ್, ಈ ಬಾರಿ ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕೆಂಬ ಹಠದಲ್ಲಿ ತಂತ್ರ ಪ್ರತಿತಂತ್ರ ನಡೆಸುತ್ತಿರುತ್ತಾನೆ. ರಾಜಕೀಯ, ಜೈಲು ಮತ್ತು ಚುನಾವಣೆ ಒಂದಕ್ಕೊಂದು ಸಂಬಂಧಪಟ್ಟಂತಹ ಕತೆಯ ಎಳೆಗಳಾಗಿ ಮೊದಲಿನಿಂದಲೂ ಕಂಡುಬಂದರೂ, ಅದರೊಳಗಿನ ಪ್ರೇಮ ಕಥಾನಕವೂ ಹೀಗೆ ಉಳಿದೆಲ್ಲಾ ಎಳೆಗಳೊಂದಿಗೆ ಹೆಣೆದುಕೊಂಡಿದೆ ಎಂಬುದು ಸೀರೀಸ್ ಕೊನೆಯ ಕೆಲವು ಎಪಿಸೋಡ್ ಬಹಿರಂಗಗೊಳಿಸುತ್ತದೆ.

ಸೀರೀಸ್‌ಗೆ ಸ್ಪೂರ್ತಿಯಾಗಿರುವ ಜೈಲ್ ಬ್ರೇಕ್‌ನ ನಿಜವಾದ ಘಟನೆಯೇ ಅತ್ಯಂತ ರೋಚಕವಾಗಿದೆ. ಹೀಗಾಗಿ, ಕಾಲ್ಪನಿಕತೆಯನ್ನು ತುಸು ಹೆಚ್ಚಾಗಿಯೇ ಬೆರೆಸಿರುವ, ಎಲ್ಲಾ ಸೃಜನಾತ್ಮಕ ಸ್ವಾತಂತ್ರ್ಯವನ್ನು ಬಳಸಿಕೊಂಡಿರುವ ಸೀರಿಸ್ ಮತ್ತಷ್ಚು ರೋಚಕವಾಗಿರುತ್ತದೆ ಎಂಬ ನಿರೀಕ್ಷೆ ಸಹಜ. ನಿರ್ದೇಶಕರಾದ ರಾಜೀವ್ ಬರ್ನವಾಲ್ ಮತ್ತು ಸತ್ಯಾಂಶು ಸಿಂಗ್, ಕಥೆಗೆ ಬೇಕಾದ ಎಲ್ಲಾ ಮಸಾಲೆ ಮತ್ತು ನಾಟಕೀಯತೆಗಳನ್ನು ಬೆರೆಸಿ ಆಸಕ್ತಿಕರವಾದ, ಥ್ರಿಲ್ಲರ್ ಒಂದನ್ನು ನೀಡಲು ಯತ್ನಿಸಿದ್ದಾರಾದರೂ, ಹಲವು ಕಾರಣಗಳಿಂದ ಅದು ನಿರೀಕ್ಷಿತ ಮಟ್ಟವನ್ನು ತಲುಪುವುದಿಲ್ಲ. ಮೊದಲ ಎಪಿಸೋಡಿನ ಮೊದಲ ದೃಶ್ಯ, ಸೀರೀಸ್‌ಗೆ ಒಂದು ಉತ್ತಮ ಆರಂಭವನ್ನು ಒದಗಿಸಿದರೂ, ಎಪಿಸೋಡ್ ಮುಂದುವರಿದಂತೆ ಪ್ರೇಕ್ಷಕರ ಆಸಕ್ತಿಯನ್ನು ಕಾಪಿಟ್ಟುಕೊಳ್ಳುವುದರಲ್ಲಿ ವಿಫಲವಾಗುತ್ತದೆ. ಮೊದಲ ಕೆಲವು ಎಪಿಸೋಡ್‌ಗಳು ನಿಧಾನವಷ್ಟೇ ಅಲ್ಲ, ಕೊಂಚ ಸಪ್ಪೆಯೂ ಆಗಿರುವುದರಿಂದ ಸೀರೀಸ್‌ಗೆ ಅಗತ್ಯವಿರುವ ಆರಂಭಿಕ ಕುತೂಹಲವನ್ನು, ವೇಗವನ್ನೂ ನೀಡುವುದಿಲ್ಲ.

ಇದಕ್ಕೆ ಬಹುತೇಕ ಕಾರಣವೆಂದರೆ, ಈ ಎಪಿಸೋಡ್‌ಗಳು ಅಭಿಮನ್ಯು ಮತ್ತು ಕಸ್ತೂರಿಯ ನಡುವೆ ಪ್ರೇಮವನ್ನು ಅರಳಿಸುವುದರ ಮೇಲೆಯೇ ಹೆಚ್ಚು ಗಮನ ಹರಿಸುತ್ತದೆ. ವಿಪರ್ಯಾಸವೆಂದರೆ, ಈ ಪ್ರೇಮ ಪ್ರಕರಣ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆಯುವಲ್ಲಿ ವಿಫವಾಗುತ್ತದೆ. ಇಬ್ಬರ ನಡುವಣ ದೃಶ್ಯಗಳು, ಸಹಜವಾಗಿದ್ದರೂ ನೀರಸವಾಗಿವೆ. ಅಷ್ಟೇ ಅಲ್ಲದೆ, ಅದರ ಜೊತೆಜೊತೆಗೆ ಸಾಗುವ ಜೈಲಿನ ಕಥಾನಕದೊಂದಿಗೆ ಸಮರ್ಪಕವಾಗಿ ಮಿಳಿತವಾಗುವುದಿಲ್ಲ. ಹಾಗಂತ, ಸೀರೀಸ್ ಪೂರ್ತಿಯಾಗಿ ಸೋಲುವುದಿಲ್ಲ. ಸೀರೀಸ್ ಮುಂದುವರಿದಂತೆ ತನ್ನ ವೇಗ ಹೆಚ್ಚಿಸಿಕೊಂಡು, ಕೆಲವು ಎದೆಬಡಿತ ಹೆಚ್ಚಿಸುವ ದೃಶ್ಯಗಳು, ಊಹಿಸಬಹುದಾದ ಆದರೂ ಕುತೂಹಲ ತರಿಸುವ ತಿರುವುಗಳ ಮೂಲಕ ಒಂದು ಥ್ರಿಲ್ಲರ್ ಸೀರೀಸ್ ಬಯಸುವ ಸಮರ್ಪಕ ಅಂತ್ಯಕ್ಕೆ ಅಗತ್ಯವಾದ ವೇದಿಕೆಯನ್ನು ಸಜ್ಜುಗೊಳಿಸುತ್ತದೆ. ಅದರಲ್ಲೂ ಸರೆಮನೆ ಬೇಧಿಸುವ ವಿವರಗಳಿರುವ ಕೊನೆಯ ಎಪಿಸೋಡ್ ಉತ್ತಮವಾಗಿ ಚಿತ್ರಿತಗೊಂಡಿದ್ದು, ಸೀರೀಸ್‌ಗೆ ಒಂದು ರೋಚಕ ಅಂತ್ಯ ನೀಡುತ್ತದೆ.

ಜಹಾನಾಬಾದ್ ದೇಶದ ಜಾತಿವ್ಯವಸ್ಥೆ, ದಲಿತರ ಮೇಲೆ ನಡೆಯುವ ದೌರ್ಜನ್ಯ, ಅದನ್ನು ರಾಜಕಾರಣಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ರೀತಿ, ದಮನಿತರನ್ನು ಮತ್ತಷ್ಚು ತುಳಿಯುವ ವ್ಯವಸ್ಥೆಯ ವಿರುದ್ಧ ಆಯುಧ ಎತ್ತಿಕೊಂಡು ರಕ್ತ ಕ್ರಾಂತಿಯ ಮೂಲಕ ಬದಲಾವಣೆ ತರಲು ಬಯಸುತ್ತಿರುವ ನಕ್ಸಲರು, ಇವೆಲ್ಲವನ್ನು ತೆರೆಯ ಮೇಲೆ ತರುತ್ತದೆ. ಪ್ರೇಮ ಮತ್ತು ಕ್ರಾಂತಿಯನ್ನು ಒಂದಕ್ಕೊಂದು ವಿರುದ್ಧವಾಗಿಯೂ ನಿಲ್ಲಿಸುತ್ತದೆ ಮತ್ತು ಪ್ರೇಮವಿದ್ದಲ್ಲಿ ಮಾತ್ರ ಕ್ರಾಂತಿ ಸಾಧ್ಯ ಎಂದೂ ಹೇಳುತ್ತದೆ. ಹಲವಾರು ಪ್ರಮುಖ ಜನಪ್ರಿಯ ಪುಸ್ತಕಗಳನ್ನು, ಕವನಗಳನ್ನು, ಸಾಹಿತಿಗಳು, ತತ್ವಜ್ಞಾನಿಗಳ ಉಲ್ಲೇಖಗಳನ್ನು ಕಥೆಯ ಭಾಗವಾಗಿಸಿಕೊಂಡಿರುವುದು ವಿಶೇಷ.

ಸೀರಿಸ್, ಸ್ಪಷ್ಚವಾಗಿ ಜಾತಿವ್ಯವಸ್ಥೆಯ ವಿರುದ್ಧ ದ್ವನಿ ಎತ್ತುವುದು ಕಾಣುತ್ತದೆಯಾದಾರೂ, ನಕ್ಸಲ್ ವಾದದ ವಿಷಯದಲ್ಲಿ ಅದು ಏನು ಹೇಳ ಬಯಸುತ್ತದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ನಕ್ಸಲ್ ವಾದದಲ್ಲಿರುವ ಹಿಂಸೆಯನ್ನು ತೋರಿಸುವ ಜೊತೆಗೆ, ಅದಕ್ಕಿರುವ ಕಾರಣಗಳನ್ನು ಹೇಳುತ್ತದೆ. ನಕ್ಸಲ್ ಚಳವಳಿಯ ಪ್ರಮುಖ ಭಾಗವಾಗಿರುವ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಸಾಕಷ್ಚು ಮಾತನಾಡುತ್ತದೆ. ಇದರಲ್ಲಿ ನಕ್ಸಲ್ ಕಾರ್ಯಾಚರಣೆಯಲ್ಲಿ ಅತ್ಯಂತ ದೊಡ್ಡ ಪಾತ್ರ ವಹಿಸುವ ಹಾಗು ಅದರ ನಾಯಕತ್ವ ವಹಿಸುವರೆಲ್ಲಾ ಕಾಲೇಜು ಪ್ರೊಫೆಸರ್‌ಗಳೇ. ಆ ಮೂಲಕ ಅವರನ್ನು ನಕ್ಸಲ್ ವಾದಿಗಳು, ನಕ್ಸಲ್ ಪರರು ಎಂಬ ವ್ಯಾಪ್ತಿಗಷ್ಚೇ ಸೀಮಿತಗೊಳಿಸದೆ, ಶೈಕ್ಷಣಿಕ ಗುರುಗಳನ್ನು ನೇರವಾಗಿ ನಕ್ಸಲ್ ಕಾರ್ಯಾಚರಣೆಗಿಳಿಸಿ ಅವರ ಕೈಗೆ ಗನ್ ನೀಡಲಾಗುತ್ತದೆ. ಇಷ್ಟೆಲ್ಲ ದೊಡ್ಡ ಯುದ್ಧದಷ್ಚು ದೊಡ್ಡ ಕಾರ್ಯಾಚರಣೆಗೆ ಕಾರಣನಾದ ನಕ್ಸಲ್ ನಾಯಕ ದೀಪಕ್, ಅಗೊಮ್ಮೆ ಈಗೊಮ್ಮೆ ವೈಚಾರಿಕ ಮಾತನಾಡಿದರೂ, ಬಹುತೇಕ ಆತನ ವ್ಯಕ್ತಿ ಚಿತ್ರಣ ಆತ ಯಾವುದೋ ಡಾನ್ ಎಂಬ ರೀತಿಯಲ್ಲಿದೆ. ಹೀಗಾಗಿ, ಆತನ ನಕ್ಸಲ್ ಪರ ನಿಲುವುಗಳು ಪ್ರೇಕ್ಷಕರನ್ನು ತಟ್ಟಬೇಕಾದ ರೀತಿಯಲ್ಲಿ ತಟ್ಚದೆ ಹೋಗುವ ಸಾಧ್ಯತೆಯೇ ಹೆಚ್ಚಿದೆ.

ಸೀರಿಸ್‌ನ ಸೌಂಡ್ ಟ್ರ್ಯಾಕ್ ಗಮನಸೆಳೆಯುವಂತಿದೆ, ಅದರಲ್ಲೂ ಮುಖ್ಯವಾಗಿ ಎರಡು ಹೋರಾಟದ ಹಾಡುಗಳು ತನ್ನ ವಿಶಿಷ್ಠತೆಯಿಂದ ನನೆಪಿನಲ್ಲುಳಿಯುತ್ತದೆ. ಅಭಿಮನ್ಯು ಸಿಂಗ್ ಪಾತ್ರದೊಳಗೆ ಇಳಿಯಲು ರಿತ್ವಿಕ್ ಬೌಮಿಕ್ ಸ್ವಲ್ಪ ಸಮಯ ತೆಗೆದುಕೊಂಡರೂ ನಂತರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹರ್ಷಿತಾ ಗೌರ್‌ಗೆ ಕಸ್ತೂರಿಯ ರೂಪದಲ್ಲಿ ತುಂಬಾ ಒಳ್ಳೆಯ ಪಾತ್ರ ದೊರೆತಿದೆ. ಆಕೆಯ ಪ್ರೇಮದಲ್ಲಿ ಬಿದ್ದ ಕಾಲೇಜು ವಿದ್ಯಾರ್ಥಿನಿಯ ಪಾತ್ರ, ಮಾಮೂಲು ಸ್ಚೀರಿಯೋಟೈಪ್‌ಗಳ ಬಲೆಗೆ ಬೀಳದೆ ತನ್ನ ಅನನ್ಯತೆಯಿಂದ ಗಮನಸೆಳೆಯುತ್ತದೆ. ತನ್ನ ಭಾವನೆಗಳ ವಿಷಯದಲ್ಲಿ, ತನಗೇನು ಬೇಕು ಎಂಬ ವಿಷಯದಲ್ಲಿ ಸ್ಪಷ್ಟತೆ ಇರುವ, ತನ್ನ ಪ್ರೇಮವನ್ನು ವ್ಯಕ್ತಪಡಿಸಲು ಹಿಂಜರಿಯದ, ಒತ್ತಡಗಳಿಗೆ ಮಣಿಯದ, ದಿಟ್ಟ ಹೆಣ್ಣಿನ ಪಾತ್ರದಲ್ಲಿ ಹರ್ಷಿತಾ ಗಮನ ಸೆಳೆಯುತ್ತಾರೆ. ರಾಜಕಾರಣಿ ಶಿವಾನಂದ ಸಿಂಗ್ ಪಾತ್ರದಲ್ಲಿ ರಜತ್ ಕಪೂರ್ ಎಂದಿನಂತೆ ತಮ್ಮ ನಟನೆಯಲ್ಲಿ ಮಿಂಚಿದ್ದಾರೆ. ಆದರೆ, ಪಾತ್ರವೇ ತಾವಾಗಿರುವಂತೆ ನಟಿಸಿರುವ ಸತ್ಯದೀಪ್ ಮಿಶ್ರಾ, ಜಹಾನಾಬಾದ್ ಎಸ್‌ಪಿಯಾಗಿ ಅತ್ಯಂತ ನೈಜ ಅಭಿನಯ ನೀಡಿದ್ದಾರೆ. ಸೀರೀಸ್‌ನಲ್ಲಿ ಇವರಿಬ್ಬರದು ಅತ್ಯುತ್ತಮ ನಟನೆ.

ಬಹುತೇಕ ಇದೇ ರೀತಿಯ ಕಥಾ ಹಂದರವನ್ನು ಮತ್ತು ಸ್ಥಳವನ್ನು ಹೊಂದಿರುವ ಮಿರ್ಝಾಪುರ್, ಪಾತಾಳ್ ಲೋಕ್ ಮುಂತಾದ ಸೀರೀಸ್‌ಗಳಿಗೆ ಹೊಲಿಸಿದರೆ ಜಹಾನಾಬಾದ್ ಆ ಮಟ್ಟವನ್ನು ತಲುಪುವಲ್ಲಿ ಸೋಲುತ್ತದೆ. ಆದರೆ, ಒಂದು ಉತ್ತಮ ಪ್ರಯತ್ನವಾಗಿಯಂತೂ ಗಮನಸೆಳೆಯುತ್ತದೆ. ‘ಜಹನಾಬಾದ್ – ಆಫ್ ಲವ್ ಆ್ಯ೦ಡ್ ವಾರ್’ Sony Livನಲ್ಲಿ ಸ್ಟ್ರೀಮ್‌ ಆಗುತ್ತಿದೆ.

Previous articleಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಡಿ.ಸಿ.ನಾಗೇಶ್‌ ನೆನಪು – ‘ಜೀವ ಬಿಂಬ’
Next articleಖೋಟಾ ನೋಟಿನ ದಂಧೆಯ ಸುತ್ತ ಶಾಹಿದ್‌ – ವಿಜಯ್‌ ಸೇತುಪತಿ ‘ಫರ್ಜಿ’

LEAVE A REPLY

Connect with

Please enter your comment!
Please enter your name here