ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಚಿತ್ರನಿರ್ಮಾಪಕ ಆನೇಕಲ್‌ ಬಾಲರಾಜ್‌ ನಿಧನರಾಗಿದ್ದಾರೆ. ದರ್ಶನ್‌ ಅಭಿನಯದ ‘ಕರಿಯ’ ಚಿತ್ರ ಸೇರಿದಂತೆ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಚಿತ್ರನಿರ್ಮಾಪಕ ಆನೇಕಲ್‌ ಬಾಲರಾಜ್‌ (58 ವರ್ಷ) ಅಗಲಿದ್ದಾರೆ. ಇಂದು ಬೆಳಗ್ಗೆ ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಅವರು ವಾಕಿಂಗ್‌ಗೆ ತೆರಳಿದ್ದಾಗ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನವೊಂದು ಅವರಿಗೆ ಗುದ್ದಿದೆ. ಫುಟ್‌ಪಾತ್‌ ಮೇಲೆ ಬಿದ್ದ ಬಾಲರಾಜ್‌ ತಲೆಗೆ ತೀವ್ರ ಏಟು ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿರ್ಮಾಣದಲ್ಲಿ ಪ್ರೇಮ್‌ ನಿರ್ದೇಶಿಸಿದ್ದ ‘ಕರಿಯ’ ಸಿನಿಮಾ ನಟ ದರ್ಶನ್‌ ವೃತ್ತಿ ಬದುಕಿಗೆ ತಿರುವು ನೀಡಿದ ಚಿತ್ರವಾಯ್ತು. ಮುಂದೆ ಜಾಕ್‌ಪಾಟ್‌, ಕೆಂಪ, ಜನ್ಮ, ಗಣಪ, ಕರಿಯ 2 ಸೇರಿದಂತೆ ಹತ್ತು ಚಿತ್ರಗಳನ್ನು ಅವರು ನಿರ್ಮಿಸಿದ್ದರು. ಕೆಂಪ, ಜನ್ಮ, ಗಣಪ ಮತ್ತು ಕರಿಯ 2 ಚಿತ್ರಗಳಲ್ಲಿ ಅವರ ಪುತ್ರ ಸಂತೋಷ್‌ ಅಭಿನಯಿಸಿದ್ದಾರೆ. ಚಿತ್ರನಿರ್ಮಾಣ ಮಾತ್ರವಲ್ಲದೆ ಚಿತ್ರರಂಗದ ಇತರೆ ವಿಭಾಗಗಳಲ್ಲಿ ಸಕ್ರಿಯರಾಗಿದ್ದ ಬಾಲರಾಜ್‌ ಅಗಲಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

Previous articleಅಕ್ಟೋಬರ್‌ ನಂತರ ‘KGF3’ ಶೂಟಿಂಗ್‌; 2024ಕ್ಕೆ ಸಿನಿಮಾ ತೆರೆಗೆ
Next articleಫಿಲಂ ಚೇಂಬರ್ ಚುನಾವಣೆಗೆ ಸಾ.ರಾ.ಗೋವಿಂದು ತಂಡ ನಾಮಪತ್ರ ಸಲ್ಲಿಕೆ

LEAVE A REPLY

Connect with

Please enter your comment!
Please enter your name here