ಸಿಂಪಲ್ ಸುನಿ ನಿರ್ದೇಶನದ ‘ಸಖತ್‌’ ಸಿನಿಮಾ ಮೂಲಕ ನಟ ಗಣೇಶ್ ಪುತ್ರ ವಿಹಾನ್‌ ಬೆಳ್ಳಿತೆರೆ ಪ್ರವೇಶವಾಗಿದೆ. ಅವನು ನಟಿಸಿರುವ ಸನ್ನಿವೇಶಗಳ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನಟ ಗಣೇಶ್‌ರನ್ನೇ ಹೋಲುತ್ತಾನೆ ವಿಹಾನ್‌.

ಸ್ಯಾಂಡಲ್‌ವುಡ್ ಹೀರೋಗಳ ಮಕ್ಕಳು ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವುದು ಆಗಿಂದಾಗ್ಗೆ ನಡೆದೇ ಇದೆ. ನಟ ದರ್ಶನ್‌ ಪುತ್ರ ವಿನೀಶ್‌, ಅಜಯ್ ರಾವ್ ಪುತ್ರಿ ಚರಿಷ್ಮಾ ಇತ್ತೀಚೆಗೆ ಕ್ಯಾಮೆರಾ ಎದುರು ಬಂದು ಸುದ್ದಿಯಾಗಿದ್ದರು. ಈ ಪಟ್ಟಿಗೆ ಹೊಸ ಸೇರ್ಪಡೆ ನಟ ಗಣೇಶ್ ಪುತ್ರ ವಿಹಾನ್‌. ನಾಳೆ ತೆರೆಕಾಣುತ್ತಿರುವ ಗಣೇಶ್‌ರ ‘ಸಖತ್‌’ ಸಿನಿಮಾ ಮೂಲಕ ವಿಹಾನ್ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾನೆ. ಚಿತ್ರದಲ್ಲಿ ವಿಹಾನ್‌ ‘ಜ್ಯೂ.ಬಾಲು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಚಿತ್ರದಲ್ಲಿನ ನಟ ಗಣೇಶ್‌ರ ಬಾಲ್ಯದ ಪಾತ್ರವಿದು. ತಂದೆಯನ್ನೇ ಹೋಲುವ ವಿಹಾನ್‌ ಈ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೆಯಾಗಿದ್ದಾನೆ.

ಇಂದು ಬಿಡುಗಡೆಯಾಗಿರುವ ‘ಸಖತ್‌’ ಟೀಸರ್‌ ತುಂಬಾ ವಿಹಾನ್‌ ಇದ್ದಾನೆ. ಚಿತ್ರದ ಹೀರೋ ‘ಬಾಲು’ (ಗಣೇಶ್‌) ಪಾತ್ರಧಾರಿಯ ಬಾಲ್ಯದ ತುಂಟತನಗಳನ್ನು ಹೇಳುವ ಟೀಸರ್ ಇದು. ‘ಸಖತ್‌’ ಸಿನಿಮಾ ನಾಳೆ ತೆರೆಕಾಣುತ್ತಿದೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಗಣೇಶ್‌ಗೆ ನಿಶ್ವಿಕಾ ನಾಯ್ಡು ಜೋಡಿ. ಕೆವಿಎನ್ ಪ್ರೊಡಕ್ಷನ್‌ನಡಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್  ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಮತ್ತಿತರರು ತಾರಾಬಳಗದಲ್ಲಿದ್ದಾರೆ.

Previous articleಪೊಲೀಸರ ವಿಚಾರಣೆಗೆ ಹಾಜರಾದ ಹಂಸಲೇಖ; ಠಾಣೆ ಎದುರು ಕೇಳಿ ಬಂದ ಪರ – ವಿರೋಧದ ಘೋಷಣೆ
Next articleಪುನೀತ್ ವಿಶೇ‍ಷ ಪಾತ್ರದಲ್ಲಿ ನಟಿಸಿರುವ ‘ಲಕ್ಕಿ ಮ್ಯಾನ್’; ಪ್ರಭುದೇವ ಜೊತೆಗಿನ ಡ್ಯಾನ್ಸ್ ಫೋಟೊಗಳ ಬಿಡುಗಡೆ

LEAVE A REPLY

Connect with

Please enter your comment!
Please enter your name here