ಹಿಂದಿ ಚಿತ್ರನಿರ್ಮಾಪಕ, ಪತ್ರಕರ್ತ, ಕವಿ ಪ್ರತೀಶ್ ನಂದಿ ನಿನ್ನೆ (ಜನವರಿ 8) ಅಗಲಿದ್ದಾರೆ. ಭಿನ್ನ ಜಾನರ್‌ಗಳ ಸಿನಿಮಾ ನಿರ್ಮಾಪಕರಾಗಿ ಅವರು ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಅವರ ನಿರ್ಮಾಣದ ಸಿನಿಮಾಗಳು ಬಹಳಷ್ಟು ಕಲಾವಿದರು ಹಾಗೂ ತಂತ್ರಜ್ಞರ ವೃತ್ತಿಬದುಕಿಗೆ ತಿರುವಾಗಿವೆ.
ಹೆಸರಾಂತ ಪತ್ರಕರ್ತ, ಕವಿ, ಸಿನಿಮಾ ನಿರ್ಮಾಪಕ ಪ್ರಿತೀಶ್ ನಂದಿ ನಿನ್ನೆ (2025 ಜನವರಿ 8) ನಮ್ಮನ್ನಗಲಿದ್ದಾರೆ. 1951 ಜನವರಿ 15 ರಂದು ಜನಿಸಿದ ಪ್ರಿತೀಶ್ ಅವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದು 1983-1991ರ ಅವಧಿಯಲ್ಲಿ ‘ದಿ ಇಲ್ಯುಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದ ಸಂಪಾದಕರಾಗಿದ್ದರು. ‘ದಿ ಇಂಡಿಪೆಂಡೆಂಟ್’, ‘ಫಿಲ್ಮ್ ಫೇರ್’ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಅವರು ಕವಿ, ನಿರೂಪಕರೂ ಹೌದು. ಇಂಗ್ಲಿಷ್ ಸಾಹಿತ್ಯದಲ್ಲಿ ಅಪಾರ ಜ್ಞಾನಹೊಂದಿದ್ದ ಅವರು 40ಕ್ಕಿಂತಲೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಬಂಗಾಳಿ, ಉರ್ದು ಮತ್ತು ಪಂಜಾಬಿ ಕವನಗಳನ್ನು ಅವರು ಇಂಗ್ಲಿಷಿಗೆ ಅನುವಾದ ಮಾಡಿದ್ದರು. 1990ರಲ್ಲಿ ದೂರದರ್ಶನದಲ್ಲಿ ‘ದಿ ಪ್ರತೀಶ್ ನಂದಿ ಶೋ’ ಕಾರ್ಯಕ್ರಮದಲ್ಲಿ ಅವರು ಹಲವು ಖ್ಯಾತನಾಮರನ್ನು ಸಂದರ್ಶಿಸಿದ್ದರು.
ಸಿನಿಮಾರಂಗದಲ್ಲಿ ‘ನಂದಿ’ ಛಾಪು | ಸಾಹಿತ್ಯ, ಪತ್ರಿಕಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪ್ರಿತೀಶ್ ನಂದಿ ಬಾಲಿವುಡ್‌ನಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು. 2001ರಲ್ಲಿ ಸಿನಿಮಾ ನಿರ್ಮಾಣಕ್ಕಿಳಿದು ಮೂರು ಚಿತ್ರಗಳನ್ನು ನಿರ್ಮಿಸಿದರೂ ಹಿಟ್ ಆಗಿದ್ದು ‘ಸುರ್’ ಸಿನಿಮಾ. 2002ರಲ್ಲಿ ತೆರೆಕಂಡ ತನುಜಾ ಚಂದ್ರ ನಿರ್ದೇಶನದ ‘ಸುರ್’ ಸಂಗೀತ ಪ್ರಧಾನ ಸಿನಿಮಾ. ಗೌರಿ ಕಾರ್ಣಿಕ್ ಮತ್ತು ಸಿಮೋನ್ ಸಿಂಗ್ ಮತ್ತು ಗಾಯಕ ಲಕ್ಕಿ ಅಲಿ ಹಾಡಿ ನಟಿಸಿದ ‘ಆ ಭೀ ಜಾ… ಆ ಭೀ ಜಾ’ ಹಾಡು ಇಂದಿಗೂ 90 ಕಿಡ್ಸ್‌ಗೆ ಎವರ್ ಗ್ರೀನ್ ಸಾಂಗ್ ಆಗಿ ಉಳಿದುಕೊಂಡಿದೆ. ಅದೇ ವರ್ಷ ಇದಕ್ಕಿಂತ ತೀರಾ ಭಿನ್ನವಾಗಿ ಅಮಿತಾಬ್ ಬಚ್ಚನ್, ಸಂಜಯ್ ದತ್ ಮತ್ತು ಸುನೀಲ್ ಶೆಟ್ಟಿ ಮೊದಲಾದವರು ನಟಿಸಿದ ಆಕ್ಷನ್ ಕ್ರೈಂ ಥಿಲ್ಲರ್ ಸಿನಿಮಾವಾಗಿತ್ತು ‘ಕಾಂಟೆ’.
ಸಂಗೀತ, ಕಾಮಿಡಿ ಮತ್ತು ಡ್ರಾಮಾ ಸಮ್ಮಿಳಿತವಾದ ಚಿತ್ರ ‘ಝಂಕಾರ್ ಬೀಟ್ಸ್’, 2003ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಸಂಜಯ್ ಸೂರಿ, ರಾಹುಲ್ ಬೋಸ್ ಮತ್ತು ಜೂಹಿ ಚಾವ್ಲಾ ನಟಿಸಿದ್ದರು. 2004ರಲ್ಲಿ ತೆರೆಕಂಡ ‘ಚಮೇಲಿ’ ಸಿನಿಮಾದ ತೂಕವೇ ಬೇರೆ. ವೇಶ್ಯೆಯ ಪಾತ್ರದಲ್ಲಿ ಕರೀನಾ ಕಪೂರ್ ಅವರ ನಟನೆ ಅವರ ವೃತ್ತಿಜೀವನದಲ್ಲಿನ ತಿರುವು ಆಗಿತ್ತು. ಸಿದ್ಧಮಾದರಿಗಳಿಂದ ಭಿನ್ನವಾಗಿ ಸಮಾಜದಲ್ಲಿನ ವೇಶ್ಯಾವೃತ್ತಿ, ಸಾಮಾಜಿಕ ಹೋರಾಟ ಮತ್ತು ಭಾವನಾತ್ಮಕ ಸಂಬಂಧಗಳ ಕತೆ ಹೇಳಿದ ಸಿನಿಮಾವಾಗಿತ್ತು ಇದು. ಇದಾದ ನಂತರ 2005ರಲ್ಲಿ ತೆರೆ ಕಂಡ ಸೈಕಲಾಜಿಕಲ್ ಥ್ರಿಲ್ಲರ್ ‘ಶಬ್ದ್’ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಝಯೇದ್ ಖಾನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೇ ವರ್ಷ ಇವರು ನಿರ್ಮಿಸಿದ ಮತ್ತೊಂದು ಸಿನಿಮಾ ‘ಹಜಾರೋಂ ಕ್ವಾಹಿಷೇ ಐಸೀ’. ದೇಶದ ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲಿನ ಕತೆ ಹೇಳುವ ಈ ಸಿನಿಮಾ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತ್ತು.
2006ರಲ್ಲಿ ‘ಪ್ಯಾರ್ ಕೇ ಸೈಡ್ ಎಫೆಕ್ಟ್ಸ್’ ಮತ್ತು 2008ರಲ್ಲಿ ತೆರೆಕಂಡ ‘ಅಗ್ಲೀ ಔರ್ ಪಗ್ಲೀ’ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳಾಗಿದ್ದವು. 2014ರಲ್ಲಿ ತೆರೆಕಂಡ ‘ಶಾದೀ ಕೇ ಸೈಡ್ ಎಫೆಕ್ಟ್’ ವೈವಾಹಿಕ ಜೀವನದ ಸಂಕಷ್ಟಗಳನ್ನು ಹಾಸ್ಯಮಯವಾಗಿ ತೋರಿಸಿದ ಚಿತ್ರವಾಗಿದ್ದು, ಇದರಲ್ಲಿ ಫರ್ಹಾನ್ ಅಖ್ತರ್ ಮತ್ತು ವಿದ್ಯಾ ಬಾಲನ್ ನಟಿಸಿದ್ದರು. 2015ರಲ್ಲಿ ಪ್ರಿತೀಶ್ ನಂದಿ ಮತ್ತು ಅವರ ಮಗಳು ರಂಗಿತಾ ಸೇರಿ ನಿರ್ಮಿಸಿದ ಅಡಲ್ಟ್ ಕಾಮಿಡಿ ‘ಮಸ್ತಿ ಜಾದೇ’ ಹೆಸರು ಮಾಡಿತ್ತು. ಚಿತ್ರನಿರ್ಮಾಪಕರಾಗಿ ಮಾತ್ರವಲ್ಲದೆ ಉದ್ಯಮಕ್ಕೆ ಸಂಬಂಧಿಸಿದಂತೆ ಚರ್ಚೆ – ಸಂವಾದಗಳಲ್ಲಿ ಪ್ರತೀಶ್ ನಂದಿ ಪಾಲ್ಗೊಳ್ಳುತ್ತಿದ್ದರು. ಬಾಲಿವುಡ್‌ನ ಹಲವರು ತಂತ್ರಜ್ಞರು ಹಾಗೂ ಕಲಾವಿದರು ಆಪ್ತರಾಗಿದ್ದರು. ಪ್ರಿತೀಶ್ ನಿಧನಕ್ಕೆ ಬಾಲಿವುಡ್ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.