ನಟ ರಿಷಿ ಕಪೂರ್‌ ಅಭಿನಯದ ಕೊನೆಯ ಸಿನಿಮಾ ‘ಶರ್ಮಾಜಿ ನಮ್‌ಕೀನ್‌’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಇದು ತಿಳಿಹಾಸ್ಯದ ನಿರೂಪಣೆಯ coming of age ಸ್ಟೋರಿ ಎನ್ನುತ್ತಾರೆ ಚಿತ್ರದ ನಿರ್ದೇಶಕ ಹಿತೇಶ್‌ ಭಾಟಿಯಾ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ರಿಷಿ ಕಪೂರ್‌ 2020ರ ಏಪ್ರಿಲ್‌ 30ರಂದು ಅಸುನೀಗಿದರು. 2020ರ ಆರಂಭದಲ್ಲಿ ನಟಿ ಜ್ಯೂಹಿ ಚಾವ್ಲಾ ಜೊತೆ ‘ಶರ್ಮಾಜಿ ನಮ್‌ಕೀನ್‌’ ಹಿಂದಿ ಚಿತ್ರದ ಬಹುಪಾಲು ಚಿತ್ರೀಕರಣದಲ್ಲಿ ರಿಷಿ ಪಾಲ್ಗೊಂಡಿದ್ದರು. ಕೆಲವು ಸನ್ನಿವೇಶಗಳು ಚಿತ್ರಿಸುವುದು ಬಾಕಿ ಇದ್ದಂತೆ ಅವರು ಇಹಲೋಕ ತ್ಯಜಿಸಿದರು. ಈ ಭಾಗದ ಚಿತ್ರೀಕರಣಕ್ಕೆ ನಿರ್ಮಾಪಕರು ಪರೇಶ್‌ ರಾವಲ್‌ ಅವರನ್ನು ಸಂಪರ್ಕಿಸಿದಾಗ, ಪರೇಶ್‌ ಒಪ್ಪಿ ರಿಷಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ”ab Zindagi khatti Meethi si ho jaye, toh usse thoda namkeen banana padta hai” ಎನ್ನುವ ಕ್ಯಾಪ್ಶನ್‌ನೊಂದಿಗೆ ನಟ ಪರೇಶ್‌ ಟ್ವಿಟರ್‌ನಲ್ಲಿ ಚಿತ್ರದ ನೂತನ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಇಂದು ಅಮೇಜಾನ್‌ ಪ್ರೈಮ್‌ ವೀಡಿಯೋ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದೆ. ಮಾರ್ಚ್‌ 31ರಿಂದ ಸಿನಿಮಾ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಜ್ಯೂಹಿ ಚಾವ್ಲಾ, ಸುಹೈಲ್‌ ನಯ್ಯರ್‌, ತಾರಕ್‌ ರೈನಾ, ಸತೀಶ್‌ ಕೌಶಿಕ್‌, ಶೀಬಾ ಛಡ್ಡಾ, ಇಶಾ ತಲ್ವಾರ್‌ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಎಕ್ಸೆಲ್‌ ಎಂಟರ್‌ಟೇನ್‌ಮೆಂಟ್‌ ಮತ್ತು ಮ್ಯಾಕ್‌ಗುಫಿನ್‌ ಪಿಕ್ಚರ್ಸ್‌ ನಿರ್ಮಾಣದ ಚಿತ್ರವನ್ನು ಹಿತೇಶ್‌ ಭಾಟಿಯಾ ನಿರ್ದೇಶಿಸಿದ್ದಾರೆ. “ನಿವೃತ್ತ ಜೀವನ ನಡೆಸುತ್ತಿರುವ ವ್ಯಕ್ತಿ ಅಡುಗೆ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾನೆ. ವ್ಯಕ್ತಿಯ ಪ್ರಯತ್ನ, ಪ್ರಯೋಗಗಳ ಸುತ್ತ ಹೆಣೆ ಕತೆಯಿದು” ಎನ್ನುತ್ತಾರೆ ನಿರ್ದೇಶಕ ಹಿತೇಶ್‌.

ನಾಯಕಿ ಪಾತ್ರದಲ್ಲಿ ನಟಿಸಿರುವ ನಟಿ ಜ್ಯೂಹಿ ಚಾವ್ಲಾ ಸಿನಿಮಾ ಕುರಿತು ಮಾತನಾಡುತ್ತಾ, “ಇತ್ತೀಚಿನ ವರ್ಷಗಳಲ್ಲಿ ನನಗೆ ಸಿಕ್ಕ ಲವಲವಿಕೆ, ಸುಂದರ, ತಮಾಷೆಯ ಸ್ಕ್ರಿಪ್ಟ್‌ ಇದು. ಸಂಭಾಷಣೆ ಮತ್ತು ಚಿತ್ರದ ಪ್ರತೀ ಸನ್ನಿವೇಶಗಳು ವೀಕ್ಷಕರಿಗೆ ಇಷ್ಟವಾಗುತ್ತವೆ. ಚಿಂಟೂಜಿ ಪಾತ್ರ ರಿಷಿ ಅವರಿಗೆ ಟೈಲರ್‌ ಮೇಡ್‌ ರೋಲ್‌” ಎನ್ನುತ್ತಾರೆ. “ಇಳಿವಯಸ್ಸಿನ ವ್ಯಕ್ತಿಯೊಬ್ಬರ ಜೀವನಪ್ರೀತಿಯನ್ನು ಚಿತ್ರದಲ್ಲಿ ನೋಡಬಹುದು. ಲೆಜೆಂಡರಿ ನಟನೊಂದಿಗೆ ಕೆಲಸ ಮಾಡಲು ನಮಗೆ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ. ಈ ಸಿನಿಮಾ ರಿಷಿ ಕಪೂರ್‌ ಅವರಿಗೆ ಗೌರವಪೂರ್ವಕ ನಮನ” ಎನ್ನುತ್ತಾರೆ ನಿರ್ಮಾಪಕ ರಿತೇಶ್‌ ಸಿಧ್ವಾನಿ.

Previous articleಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’
Next articleಸಿದ್ದಾರ್ಥ್‌ ಮಲ್ಹೋತ್ರಾ – ರಶ್ಮಿಕಾ ಮಂದಣ್ಣ ‘ಮಿಷನ್‌ ಮಜ್ನೂ’ ನ್ಯೂ ರಿಲೀಸ್‌ ಡೇಟ್‌

LEAVE A REPLY

Connect with

Please enter your comment!
Please enter your name here