ಮೊನ್ನೆ ಗೋವಾದಲ್ಲಿ ಚಿತ್ರನಿರ್ಮಾಪಕರ ಮಧ್ಯೆ ಮನಸ್ತಾಪ ತಲೆದೋರಿ ಗಲಾಟೆ ಆಗಿತ್ತು. ಈ ಸಂದರ್ಭದಲ್ಲಿ ಚಿತ್ರನಿರ್ಮಾಪಕ ಸತೀಶ್ ಅವರು ನಿರ್ಮಾಪಕ ಎ ಗಣೇಶ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಇಂದು ಈ ಬಗ್ಗೆ ಸಭೆ ನಡೆಸಿದ ವಾಣಿಜ್ಯ ಮಂಡಳಿ, ಸತೀಶ್ ಅವರ ಸದಸ್ಯತ್ವ ರದ್ದುಪಡಿಸಿ ಅಮಾನತು ಮಾಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರು ಮೊನ್ನೆ ಗೋವಾಗೆ ತೆರಳಿದ್ದರು. ಸುಮಾರು ನಲವತ್ತಕ್ಕೂ ಹೆಚ್ಚು ಜನರ ತಂಡದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಾಗಿರುವ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರೂ ಇದ್ದರು. ಗೋವಾದಲ್ಲಿ ವಾಣಿಜ್ಯ ಮಂಡಳಿ ಚುನಾವಣೆ, ಬೈಲಾಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಗಲಾಟೆ ವಿಕೋಪಕ್ಕೆ ಹೋಗಿ ದೈಹಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ನಿರ್ಮಾಪಕರಾದ ಎ ಗಣೇಶ್, ಮಂಜುನಾಥ್ ಅವರಿಗೆ ಹೆಚ್ಚು ತೊಂದರೆಯಾಗಿದೆ. ಗಣೇಶ್ ಅವರ ಹಣೆಗೆ ಗಾಯವಾಗಿ ಹೊಲಿಗೆಗಳು ಬಿದ್ದಿದ್ದರೆ, ಮಂಜುನಾಥ್ ಅವರು ಗೋವಾದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಇಂದು ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಹಲ್ಲೆ ನಡೆಸಿದ ನಿರ್ಮಾಪಕ ‘ಆಂತರ್ಯ’ ಸತೀಶ್ ಅವರನ್ನು ಅಮಾನತುಗೊಳಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಿರ್ಧರಿಸಿದೆ. ಸತೀಶ್ ಅವರನ್ನು ಅಮಾನತ್ತು ಮಾಡಲಾಗಿದೆ ಎಂದಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್. ವಾಣಿಜ್ಯ ಮಂಡಳಿಯ ತೀರ್ಮಾನಕ್ಕೆ ತಾವು ಬದ್ಧರಾಗಿರುವುದಾಗಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ನಿರ್ಮಾಪಕ ಗಣೇಶ್, ‘ಸತೀಶ್ ಮತ್ತು ಮಂಜುನಾಥ್ ನಡುವೆ ಜಗಳ ನಡೆಯುತ್ತಿತ್ತು. ನಾನು ಜಗಳ ಬಿಡಿಸುವುದಕ್ಕೆ ಹೋದೆ. ಆ ಸಂದರ್ಭದಲ್ಲಿ ಗಣೇಶ್ ನನ್ನ ಮೇಲೆ ಹಲ್ಲೆ ಮಾಡಿದರು. ನಾನು ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬೆಂಗಳೂರಿಗೆ ಬಂದು ಹೆಚ್ಚಿನ ಚಿಕಿತ್ಸೆ ಪಡೆದೆ. ಮಂಜುನಾಥ್ ಅವರು ಗೋವಾದಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಡಿಸ್ಚಾರ್ಚ್ ಆಗುತ್ತಿದ್ದಾರೆ. ನಾನು ಕೂಡ ಗೋವಾಗೆ ತೆರಳಿ ಸತೀಶ್ ವಿರುದ್ಧ ದೂರು ನೀಡಲಿದ್ದೇನೆ’ ಎಂದರು.