ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ‘ವರ್ಣಪಟಲ’ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವರ್ಲ್ಡ್ ಪ್ರೀಮಿಯರ್ ಫಿಲ್ಮ್‌ ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್‌ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಫಾರಿನ್ ಫೀಚರ್ ಫಿಲ್ಮ್ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

“ಎಲ್ಲರ ಅಮ್ಮಂದಿರ ತರ ನಾನು ಅಮ್ಮ ಅಲ್ಲ.. ಎಲ್ಲರ ಮಕ್ಕಳಂತೆ ನನ್ನ ಮಗಳಲ್ಲ..” ಎನ್ನುವ ಡೈಲಾಗ್‌ನಿಂದ ಶುರುವಾಗುತ್ತದೆ ‘ವರ್ಣಪಟಲ’ ಸಿನಿಮಾದ ಟ್ರೈಲರ್‌. ನೈಜಘಟನೆಯಾಧಾರಿತ ಸಿನಿಮಾದ ಟೃೈಲರ್‌ ಪ್ರೀತಿ, ಮಮತೆ, ನೋವು ಎಲ್ಲವನ್ನೂ ಒಳಗೊಂಡಿದೆ. ನಿತ್ಯಾ ತಾನು ಪ್ರೀತಿಸಿದ ಹುಡುಗ ಮೈಕಲ್‌ನನ್ನು ಮದುವೆಯಾಗುತ್ತಾಳೆ. ಮದುವೆಯ ಬಳಿಕ ಹೆಣ್ಣು ಮಗುವಿಗೆ ನಿತ್ಯ ತಾಯಿ ಆಗ್ತಾಳೆ. ಆ ಮಗುವೇ ಮೈನಾ. ಆದ್ರೆ ಎಲ್ಲಾ ಸರಿಯಿದ್ದ ನಿತ್ಯಾಳ ಬದುಕಲ್ಲಿ ಮೈನಾ ಅನ್ನೋ ಮಗಳಿಂದ ಜೀವನವೇ ಬದಲಾಗಿ ಹೋಗುತ್ತೆ. ಮೈನಾ ಆಟಿಸಂನಿಂದ ಬಳಲುತ್ತಿರುತ್ತಾಳೆ. ಇದರಿಂದ ನಿತ್ಯಾ ಸಾಕಷ್ಟು ತೊಂದರೆ ಅನುಭವಿಸುತ್ತಾಳೆ. ಆಟಿಸಂ ಸಮಸ್ಯೆಯಿಂದ ಮೈನಾಳನ್ನು ನಿತ್ಯಾ ಹೇಗೆ ಹೊರ ತರುತ್ತಾಳೆ ಎನ್ನುವುದು ಚಿತ್ರಕಥೆ.

ಆಟಿಸಂ ಸಮಸ್ಯೆ ಕುರಿತು ನಿರ್ದೇಶಕ ಚೇತನ್‌ ಮುಂಡಾಡಿ ಈ ಚಿತ್ರದಲ್ಲಿ ಬೆಳಕು ಚೆಲ್ಲಿದ್ದಾರೆ. ಜೊತೆಗೆ ತಾಯಿ ಮಗುವಿನ ಬಾಂಧವ್ಯವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಿತ್ಯಾ ಪಾತ್ರದಲ್ಲಿ ಕಿರುತೆರೆ ನಟಿ ಜ್ಯೋತಿ ರೈ ನಾಯಕಿಯಾಗಿ ನಟಿಸಿದ್ದು, ತುಳು ಸಿನಿಮಾ ನಟ ಅನೂಪ್ ಸಾಗರ್ ನಾಯಕನಾಗಿ ನಟಿಸಿದ್ದಾರೆ. ಬಹುಭಾಷಾ ನಟಿ ಸುಹಾಸಿನಿ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಧನಿಕ ಹೆಗ್ಡೆ, ಚೇತನ್ ರೈ ಮಾಣಿ, ಇಳಾ ವಿಟ್ಲಾ, ಅರವಿಂದ್ ರಾವ್‌, ಶ್ರೀಕಾಂತ್ ಹೆಬ್ಳಿಕರ್ ಇತರರು ನಟಿಸಿದ್ದಾರೆ.

ಡಾ. ಸರಸ್ವತಿ ಹೊಸದುರ್ಗ, ಕವಿತಾ ಸಂತೋಷ್ ಸಿನಿಮಾಗೆ ಚಿತ್ರಕಥೆ ರಚಿಸಿದ್ದು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಕಾರ್ತೀಕ್ ಸರಗೂರು ಅವರ ಸಾಹಿತ್ಯವಿದ್ದು, ಕಿರುತೆರೆ ನಿರ್ದೇಶಕ ವಿನು ಬಳಂಜ ಸಂಭಾಷಣೆ ಬರೆದಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ದಕ್ಷಿಣ ಕನ್ನಡದ ಮಡಂತ್ಯಾರು, ಮಂಗಳೂರು, ಮಡಿಕೇರಿ, ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಕನ್ನಡದಲ್ಲಿ ಆಟಿಸಂ ಕುರಿತು ತಯಾರಾಗಿರುವ ಮೊದಲ ಸಿನಿಮಾ ಇದು.ಕಮರ್ಷಿಯಲ್ ಸಿನಿಮಾಗಳ ನಡುವೆ ಕಥಾಪ್ರಧಾನ ಸಿನಿಮಾ ಇದು. “ಅಟಿಸಂ ಮಕ್ಕಳ ತಂದೆತಾಯಿಗಳಿಗೆ ಬಾಹ್ಯ ಬೆಂಬಲ ಕೊಡುವ ಉದ್ದೇಶ ನಮ್ಮದು. ಮನರಂಜನೆ ಜೊತೆ ಮನೋವಿಕಾಸ ನಮ್ಮ ಚಿತ್ರದ ಆಶಯ” ಎನ್ನುತ್ತಾರೆ ನಿರ್ದೇಶಕ ಚೇತನ್‌ ಮುಂಡಾಡಿ.

LEAVE A REPLY

Connect with

Please enter your comment!
Please enter your name here