ಕನ್ನಡ ಚಲನಚಿತ್ರ ನಿರ್ಮಾಪಕರಿಂದ ಪೊಲೀಸ್ ಕಮೀಷನರ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರ ಭೇಟಿ. ಸ್ಟಾರ್ ಚಿತ್ರಗಳ ಬಿಡುಗಡೆ ಹಿನ್ನೆಲೆಯಲ್ಲಿ ಸಂಭವನೀಯ ಪೈರೆಸಿ ಬಗ್ಗೆ ದೂರು.

ಸರ್ಕಾರ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಭರ್ತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ, ಕನ್ನಡ ಚಿತ್ರರಂಗದಲ್ಲಿ ಉತ್ಸಾಹ ಗರಿಗೆದರಿದೆ. ಅಕ್ಟೋಬರ್ 14ರಿಂದ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆ.‌ ಈ ಕಾರಣಕ್ಕೆ ಮತ್ತೆ ಪೈರಸಿ ಭೂತ ಎಲ್ಲಿ ತಲೆ ಎತ್ತುತ್ತದೋ ಎಂಬುದು ಕನ್ನಡ ಚಿತ್ರರಂಗದ ನಿರ್ಮಾಪಕರ ಭೀತಿ.

ಇಷ್ಟು ದಿನಗಳ ಬರಗಾಲದ ನಂತರ ಸ್ಟಾರ್‌ಗಳ ಬಿಡುಗಡೆಯಿಂದಾಗಿ, ಕರ್ನಾಟಕದಲ್ಲಿ ಪೈರಸಿ ಹೆಚ್ಚಾಗುವ ಸೂಚನೆಯಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಡಿ.ಕೆ.ರಾಮಕೃಷ್ಣ ಅವರ ನೇತೃತ್ವದಲ್ಲಿ ನಿರ್ಮಾಪಕರಾದ ಕೆ.ಮಂಜು, ಜಯಣ್ಣ, ಗಣೇಶ್, ರಮೇಶ್ ಯಾದವ್, ಕೆ.ಪಿ.ಶ್ರೀಕಾಂತ್ ಮುಂತಾದ ನಿರ್ಮಾಪಕರು ಪೊಲೀಸ್ ಕಮೀಷನರ್ ಕಮಲ್ ಪಂತ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರಾದ ಸಂದೀಪ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ತಿಂಗಳಲ್ಲಿ ದುನಿಯಾ ವಿಜಯ್ ಅಭಿನಯದ ‘ಸಲಗ’ ಮತ್ತು ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದರ ನಂತರ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರ ಕೂಡ ತೆರೆಕಾಣುತ್ತಿದೆ. ಇದರ ಜೊತೆಗೆ ಇಷ್ಟುದಿನದಿಂದ ಬಿಡುಗಡೆಗೆ ಕಾಯುತ್ತಿದ್ದ ಅನೇಕ ಚಿತ್ರಗಳು ಕೂಡ ಈಗ ಚಿತ್ರಮಂದಿರಗಳತ್ತ ಮುಖ ಮಾಡಿ ನಿಂತಿವೆ. ಈ ಕಾರಣಕ್ಕಾಗಿ  ಪೈರಸಿ ಮಾಡುವವರಿಗೆ ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಾರದು ಎಂದು ನಿರ್ಮಾಪಕರ ಸಂಘದ ಸದಸ್ಯರು ಕಮಿಷನರ್ ಮತ್ತು ಸೈಬರ್ ಕ್ರೈಮ್ ಮುಖ್ಯಸ್ಥರ ಬಳಿ ಮನವಿ ಸಲ್ಲಿಸಿದ್ದಾರೆ.

LEAVE A REPLY

Connect with

Please enter your comment!
Please enter your name here