ನಾಗಮಂಡಲ, ಅರುಣೋದಯ, ಸ್ವಸ್ತಿಕ್ ಮುಂತಾದ ಚಿತ್ರಗಳ ನಾಯಕಿ ವಿಜಯಲಕ್ಷ್ಮಿ ಅವರು ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದರು.

ಅಕ್ಕ ಮತ್ತು ಅಮ್ಮನ ಅನಾರೋಗ್ಯದಿಂದಾಗಿ ಸಂಕಷ್ಟದಲ್ಲಿರುವ ನಟಿ ವಿಜಯಲಕ್ಷ್ಮಿ ಅವರು ಎಲ್ಲರ ಬಳಿ ಸಹಾಯ ಹಸ್ತ ಕೋರಿದ್ದರು. ಇದಕ್ಕೆ ಕೆಲವರು ಧನಾತ್ಮಕವಾಗಿ ಸ್ಪಂದಿಸಿದ್ದರೆ ಇನ್ನು ಕೆಲವರು ಅವರನ್ನು ಗೇಲಿ ಮಾಡಿದ್ದರು. ಮೊನ್ನೆ ವಿಜಯಲಕ್ಷ್ಮಿ ಅವರ ತಾಯಿ ನಿಧನ ಹೊಂದಿದರು. ಆಗ ಅವರಿಗೆ ತಾಯಿಯ ಅಂತ್ಯ ಸಂಸ್ಕಾರಕ್ಕೂ ಕಷ್ಟ ಎನ್ನುವಂಥ ಪರಿಸ್ಥಿತಿ ಇತ್ತು. ಈ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯ ಬಾಮಾ ಹರೀಶ್ ಅವರಿಗೆ ಸಹಾಯ ಮಾಡಿದ್ದರು.

ಆದರೆ ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ವಕೀಲರಾದ ಜಗದೀಶ್ ಅವರು ವಿಜಯಲಕ್ಷ್ಮಿ ಅವರ ಪರಿಸ್ಥಿತಿಯ ಬಗ್ಗೆ ಮಾತನಾಡಿ, ಚಿತ್ರರಂಗದವರು ಯಾರೂ ಈಕೆಗೆ ಸಹಾಯ ಮಾಡುತ್ತಿಲ್ಲ ಎಂದು ಸ್ಟಾರ್ ನಟರನ್ನೆಲ್ಲಾ ಆಪಾದಿಸಿ ಮಾತನಾಡಿದ್ದರು. ಅದರ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ಈ ಕಾರಣಕ್ಕೋ ಏನೋ ಇಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯರೊಡನೆ ವಿಜಯಲಕ್ಷ್ಮಿ ಅವರ ಪತ್ರಿಕಾಗೋಷ್ಠಿ ಏರ್ಪಾಡಾಗಿತ್ತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳೊಂದಿಗೆ ನಟಿ ವಿಜಯಲಕ್ಷ್ಮಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯಲಕ್ಷ್ಮಿ ಇಂದು ಕೂಡ ಎಂದಿನಂತೆ ಭಾವನಾತ್ಮಕವಾಗಿ ಮಾತನಾಡಿದರು. “ನನ್ನ ಪರಿಸ್ಥಿತಿ ಸರಿ ಇಲ್ಲ. ನಾನು ಸಹಾಯ ಕೇಳುವುದನ್ನು ನೋಡಿ ಕೆಲವರು ನನ್ನನ್ನು ಭಿಕ್ಷುಕಿ ಎಂದು ಗೇಲಿ ಮಾಡಿದರು. ಸಂತೋಷ, ನಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ನಾವೆಲ್ಲ ಒಂದಲ್ಲ ಒಂದು ರೀತಿ ಭಿಕ್ಷುಕರೇ. ನನ್ನ ಟೈಮ್ ಸರಿ ಇಲ್ಲ. ಆದರೆ ಸದ್ಯಕ್ಕೆ ವಾಣಿಜ್ಯ ಮಂಡಳಿ ನನಗೆ ಸಹಾಯ ಮಾಡುತ್ತಿದೆ. ಅಲ್ಲದೆ ಚಿತ್ರರಂಗದ ಸ್ಟಾರ್ ನಟರಾದ ಶಿವಣ್ಣ, ಪುನೀತ್, ಯಶ್ ಮುಂತಾದವರ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ನನ್ನ ಜೊತೆ ಇದ್ದಾರೆ” ಎಂದು ಹೇಳಿದ್ದಾರೆ. ಇದಲ್ಲದೆ ಕನ್ನಡ ಚಲಚಿತ್ರರಂಗದ ಸ್ಟಾರ್‌ಗಳು ಮತ್ತು ವಾಣಿಜ್ಯ ಮಂಡಳಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಕೀಲ ಜಗದೀಶ್ ಅವರ ಪರವಾಗಿ ತಾವು ಕ್ಷಮೆ ಯಾಚಿಸುವುದಾಗಿ ಕೂಡ  ವಿಜಯಲಕ್ಷ್ಮಿ ಹೇಳಿದರು.

ಇದೇ ಸಂದರ್ಭದಲ್ಲಿ ಕಷ್ಟಕಾಲದಲ್ಲಿ ವಿಜಯಲಕ್ಷ್ಮಿ ಅವರ ಜೊತೆ ನಿಂತ ಯೋಗೇಶ್, ಅವರ ಆಶ್ರಮದಲ್ಲಿ ವಿಜಯಲಕ್ಷ್ಮಿ ಅವರಿಗೆ ಸಂದಾಯವಾಗಿರುವ ಸಹಾಯಧನವಾದ 3 ಲಕ್ಷ ರುಪಾಯಿಗಳನ್ನು ವಿಜಯಲಕ್ಷ್ಮಿ ಅವರಿಗೆ ಚೆಕ್ ಮೂಲಕ ಸಂದಾಯ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯ ಪರವಾಗಿ ಮಾತನಾಡಿದ ಸುರೇಶ್, “ನಾವು ನಮ್ಮ ಚಿತ್ರರಂಗದ ಎಲ್ಲ ಸದಸ್ಯರಿಗೂ ಬೆಂಬಲವಾಗಿ ನಿಂತುಕೊಂಡಿದ್ದೇವೆ. ಈ ಬಗ್ಗೆ ವಕೀಲ ಜಗದೀಶ್ ಅವರು ಮಾತನಾಡಿರುವುದು ಸರಿಯಲ್ಲ. ಅವರಿಗೆ ಅಷ್ಟು ಕಾಳಜಿ ಇದ್ದರೆ ನಾಳೆ ನಮ್ಮ ಮಂಡಳಿಯ ಸಮ್ಮುಖದಲ್ಲಿ ಬಂದು ಮಾತನಾಡಲಿ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಬೇಕಾಬಿಟ್ಟಿ ಮಾತನಾಡುವುದು ಸರಿ ಅಲ್ಲ. ಅವರ ಮೇಲೆ ಕಾನೂನು ಪ್ರಕಾರ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here