ಸೂರಜ್‌ ಗೌಡ ನಟಿಸಿ, ನಿರ್ದೇಶಿಸಿರುವ ಸಿನಿಮಾ ‘ನಿನ್ನ ಸನಿಹಕೆ’ ಹೊಸ ತಲೆಮಾರಿನ ಲವ್‌ ಸ್ಟೋರಿ. ವರನಟ ಡಾ.ರಾಜಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಸಾಂಪ್ರದಾಯಿಕ ಪ್ರೇಮಕತೆಗಳು ಈತ ಹಳತಾಯ್ತು. ಸಂಬಂಧಗಳ ಸಂಕೀರ್ಣತೆಯನ್ನು ಬೇರೆ ಬೇರೆ ರೀತಿ ಹೇಳುವ ಸಿನಿಮಾಗಳು ಇತ್ತೀಚೆಗೆ ಹೆಚ್ಚಾಗಿ ತಯಾರಾಗುತ್ತಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ‘ನಿನ್ನ ಸನಿಹಕೆ’. ಸಿನಿಮಾ ಅಕ್ಟೋಬರ್‌ 8ರಂದು ಬಿಡುಗಡೆಯಾಗುತ್ತಿದೆ. ಇಲ್ಲಿ ಲಿವ್‌-ಇನ್‌ ರಿಲೇಶನ್‌ಶಿಪ್‌ ಕತೆಯಿಂದೆಯಂತೆ. ಪ್ರೀತಿಯ ಎಳೆಯೊಂದಿಗೆ ಅಲ್ಲಿನ ಸಂಬಂಧಗಳ ತಾಕಲಾಟ, ತೊಳಲಾಟಗಳನ್ನು ಹೇಳಹೊರಟಿದ್ದಾರೆ ಸೂರಜ್‌ಗೌಡ. ನಟರಾಗಿ ಸಿನಿಮಾಗೆ ಪರಿಚಯವಾದ ಅವರಿಗಿದು ಚೊಚ್ಚಲ ನಿರ್ದೇಶನದ ಚಿತ್ರ.

ಧನ್ಯಾ ರಾಮ್‌ಕುಮಾರ್‌

ವರನಟ ಡಾ.ರಾಜಕುಮಾರ್‌ ಅವರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ಚಿತ್ರದ ನಾಯಕನಟಿ ಎನ್ನುವ ಕಾರಣಕ್ಕೆ ಆರಂಭದಿಂದಲೂ ಈ ಸಿನಿಮಾ ಸುದ್ದಿಯಲ್ಲಿತ್ತು. ನಟ ರಾಮಕುಮಾರ್ ಮತ್ತು ಡಾ.ರಾಜ್‌ ಪುತ್ರಿ ಪೂರ್ಣಿಮಾ ಅವರ ಪುತ್ರಿ ಧನ್ಯಾ. ಸಾಕಷ್ಟು ತಯಾರಿಯೊಂದಿಗೆ ಅವರು ಕ್ಯಾಮೆರಾ ಎದುರಿಸಿದ್ದಾರೆ. ಹಾಗೆ ನೋಡಿದರೆ ಅವರು ರಾಜ್‌ ಕುಟುಂಬದಿಂದ ನಾಯಕನಟಿಯಾಗುತ್ತಿರುವ ಮೊದಲ ವ್ಯಕ್ತಿಯೂ ಹೌದು. ತಾತನ ಲೆಜೆಸಿಯನ್ನು ಘನತೆಯಿಂದ ಹೊತ್ತೊಯ್ಯುವ ವಿಶ್ವಾಸದಲ್ಲಿದ್ದಾರವರು.

ಸಂಗೀತ ಸಂಯೋಜಕ ರಘು ದೀಕ್ಷಿತ್‌

‘ವೈಟ್ ಅಂಡ್ ಗ್ರೇ ಪಿಕ್ಚರ್ಸ್‌’ ಬ್ಯಾನರ್‌ನಡಿ ಅಕ್ಷಯ್ ರಾಜಶೇಖರ್‌ ಮತ್ತು ರಂಗನಾಥ್ ಕೂಡ್ಲಿ ಸಿನಿಮಾ ನಿರ್ಮಿಸಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಚಿತ್ರವನ್ನು ತೆರೆಗೆ ತರುವುದು ತಡವಾಯ್ತು ಎನ್ನುವ ಅವರಿಗೆ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿರುವ ಆತಂಕವೂ ಇದೆ. ತಮ್ಮ ಚಿತ್ರದಲ್ಲಿ ಉತ್ತಮ ಕಂಟೆಂಟ್‌ ಇದ್ದು ಪ್ರೇಕ್ಷಕರು ಕೈಹಿಡಿಯಲಿದ್ದಾರೆ ಎನ್ನುವ ಉಮೇದು ಅವರದು. ಕಳೆದ ವರ್ಷ ‘ಲವ್‌ ಮಾಕ್‌ಟೇಲ್‌’ ಸಂಗೀತದಿಂದ ದೊಡ್ಡ ಸುದ್ದಿ ಮಾಡಿದ್ದ ರಘು ದೀಕ್ಷಿತ್‌ ಸಂಗೀತ ‘ನಿನ್ನ ಸನಿಹಕೆ’ ಚಿತ್ರಕ್ಕಿದೆ. ಗಾಯಕ, ಸಂಗೀತ ಸಂಯೋಜಕ ವಾಸುಕಿ ವೈಭವ್‌ ಹಾಡುಗಳನ್ನು ರಚಿಸಿದ್ದಾರೆ. ಯುವಕರ ಈ ಹೊಸ ಪ್ರಯೋಗದ ಬಗ್ಗೆ ಗಾಂಧಿನಗರದಲ್ಲೂ ಭರವಸೆ ಮೂಡಿದೆ.

LEAVE A REPLY

Connect with

Please enter your comment!
Please enter your name here