ರೈತರ ಸಂಕಷ್ಟಗಳನ್ನು ಹೇಳುವ ‘ಕ್ಷೇತ್ರಪತಿ’, stylish ಗ್ಯಾಂಗ್‌ಸ್ಟರ್ ಸಿನಿಮಾ ‘ಬ್ಯಾಂಗ್’ ಕನ್ನಡ ಚಿತ್ರಗಳು ಇಂದು ತೆರೆಕಂಡಿವೆ. ನೈಜ ಘಟನೆಯ ಪ್ರೇರಣೆಯಿಂದ ತಯಾರಾದ ‘ಘೂಮರ್’ ಹಿಂದಿ ಸಿನಿಮಾ ಸೇರಿದಂತೆ ತೆಲುಗು ಮತ್ತು ಮಲಯಾಳಂ ಭಾಷೆಗಳ ಥ್ರಿಲ್ಲರ್ ಸಿನಿಮಾಗಳು ಇಂದು ಚಿತ್ರಮಂದಿರಕ್ಕೆ ಬಂದಿವೆ.
ಬ್ಯಾಂಗ್ | ಕನ್ನಡ | ಶಾನ್ವಿ ಶ್ರೀವಾಸ್ತವ್ ಮತ್ತು ರಘು ದೀಕ್ಷಿತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗ್ಯಾಂಗ್‌ಸ್ಟರ್ ಸಿನಿಮಾ. ಅಂಡರ್‌ವರ್ಲ್ಡ್ ಡಾನ್ ’ಡ್ಯಾಡಿ’ಯಾಗಿ ರಘು ದೀಕ್ಷಿತ್, ಶಾನ್ವಿ ‘ಲಿಯೋನಾ’ ಪಾತ್ರದಲ್ಲಿದ್ದಾರೆ. ಆರವ್, ಭೂಷಣ್ ಮತ್ತು ಸುನಿಲ್ ಆಕಸ್ಮಿಕವಾಗಿ ಇವರ ಕೈಗೆ ಸಿಕ್ಕಿ ಹಾಕಿಕೊಂಡು ಪೇಚಾಡುವ ಕಥಾಹಂದರ. UK Productions ಬ್ಯಾನರ್ ಅಡಿ ಪೂಜಾ ವಸಂತ್ ಕುಮಾರ್ ನಿರ್ಮಿಸಿರುವ ಚಿತ್ರವನ್ನು ಶ್ರೀ ಗಣೇಶ್ ಪರಶುರಾಮ್ ನಿರ್ದೇಶಿಸಿದ್ದಾರೆ. ರಿತ್ವಿಕ್ ಮುರಳೀಧರ್, ನಾಟ್ಯ ರಂಗ, ಸುನೀಲ್ ಗುಜ್ಜರ್, ಜಹಾಂಗೀರ್, ನಾಗೇಂದ್ರ ಶಾ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕ್ಷೇತ್ರಪತಿ | ಕನ್ನಡ | ಉತ್ತರ ಕರ್ನಾಟಕ ನೆಲದ ಹೋರಾಟವನ್ನು ಚಿತ್ರ ಬಿಂಬಿಸಿದೆ. ‘ಬಸವ’ ಹೆಸರಿನ ಎಂಜಿನಿಯರ್ ಆಗಿ ನವೀನ್ ಕಾಣಿಸಿಕೊಂಡಿದ್ದಾರೆ. ಭೂಮಿಕಾ (ಅರ್ಚನಾ ಜೋಯಿಸ್) ದಿಟ್ಟ ಪತ್ರಕರ್ತೆಯಾಗಿ ರೈತರಿಗೆ ಬೆಂಬಲಿಸುತ್ತಿರುತ್ತಾಳೆ. ರೈತ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಾ ರೈತರಿಗೆ ಧೈರ್ಯ ತುಂಬುವ ಕೆಲಸ ಇವಳದು. ಬಸವ (ನವೀನ್) ಸರ್ಕಾರದ ವಿರುದ್ದ ಸಿಡಿದೆದ್ದ ಯುವ ರೈತ ನಾಯಕ. ಅರ್ಚನಾ ಜೋಯಿಸ್, ನವೀನ್ ಶಂಕರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರಕ್ಕೆ ಶ್ರೀಕಾಂತ್ ಕಟಗಿ ನಿರ್ದೇಶನವಿದೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ.
ಮಿಸ್ಟರ್ ಪ್ರೆಗ್ನೆಂಟ್ | ತೆಲುಗು | ವಿಭಿನ್ನ ಚಿತ್ರಕಥೆ ಹೊಂದಿರುವ ಸಿನಿಮಾದಲ್ಲಿ ಸೈಯದ್ ಸೋಹೆಲ್ ರಯಾನ್, ರೂಪ ಕೊಡುವಯೂರ್, ಸುಹಾಸಿನಿ ಮಣಿರತ್ನಂ ಮತ್ತು ರಾಜಾ ರವೀಂದ್ರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗೌತಮ್ (ಸೈಯದ್ ಸೋಹೆಲ್ ರಯಾನ್), ಮಾಹಿಯನ್ನು (ರೂಪ ಕೊಡುವಯೂರ್) ಮದುವೆಯಾದ ಬಳಿಕ ಮಗುವನ್ನು ತನ್ನ ಗರ್ಭದಲ್ಲಿ ಹೊತ್ತು ಮಗುವನ್ನು ಹೆರಿಗೆ ಮಾಡಲು ನಿರ್ಧರಿಸುತ್ತಾನೆ. ದಂಪತಿಗಳು ತಮ್ಮ ಆಯ್ಕೆಯ ಪರಿಣಾಮದಿಂದಾಗಿ ಸಮಾಜದ ಕೋಪ, ಅವರ ಕುಟುಂಬದಿಂದ ಅವಮಾನ ಎದುರಿಸಬೇಕಾಗುತ್ತದೆ, ಭಾರತದ ಮೊದಲ ಪುರುಷ ಗರ್ಭದಾರಿ ಎಂದು ಪತ್ರಿಕೆ, ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಮನೆಯಿಂದ ಹೊರಬರಲಾಗದೇ ಅನೇಕ ಸಮಸ್ಯೆಗಳನ್ನು ಗೌತಮ್ ಎದುರಿಸುತ್ತಾನೆ.
ಅದೋ ದೆಯ್ಯಂ ಕಥಾ | ತೆಲುಗು | ಚಿತ್ರವು ಮೂರು ಪ್ರಮುಖ ಪಾತ್ರಗಳ ಸುತ್ತ ಸುತ್ತುತ್ತದೆ, ಅದರಲ್ಲಿ ಒಂದು ಪಾತ್ರವು ಘೋರವಾದ ಪ್ರೇತಾತ್ಮವಾಗಿದ್ದು, ಮಾರಣಾಂತಿಕ ಮನೋಭಾವನೆಗಳನ್ನು ಹೊಂದಿರುತ್ತದೆ. ಇದು ಒಬ್ಬರಿಂದ ಮೋಸಹೋಗಿ ಪ್ರಾಣ ತ್ಯಜಿಸಿ ಸೇಡಿಗಾಗಿ ಪ್ರೇತವಾಗಿ ಫಾರ್ಮ್ ಹೌಸ್ ಮತ್ತು ಹುಣಸೆ ತೋಪಿನ ಸುತ್ತಲೂ ಸುತ್ತುವ ಅಲೆದಾಡುವ ಆತ್ಮ. ಈ ಆತ್ಮವು ಮಾನವನನ್ನು ನಂಬಿ ಮತ್ತು ಅವನ ಸಹಾಯ ಕೋರಿ ತನ್ನ ಹಿಂದಿನ ಕಥೆಯನ್ನು ಬಹಿರಂಗಪಡಿಸುತ್ತದೆ, ಆದರೆ ಸಂಭವಿಸುವ ಅನೇಕ ಘಟನೆಗಳಿಂದ ನಾಯಕನೇ ಬಲಿಪಶುವಾಗುತ್ತಾನೆ. ಚಿತ್ರದಲ್ಲಿ ಅಡಿ ಹರೀಶ್ ಎನ್ ಪೂಜಾರಿ, ಪ್ರದೀಪ್, ಹಿಮಾ ಮೋಹನ್ ಮತ್ತು ಅರ್ಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹರ್ಷ ಕೋಗೋಡು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಶ್ರೀ ವಹ್ನೀಶ್ವರಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಾಗಮಣಿ ಯಡಿದಿ ನಿರ್ಮಿಸಿ, ನಿರ್ದೇಶಿಸಿದ್ದಾರೆ.
ಮಡಿಲೋ ಮಡಿ | ತೆಲುಗು | ಹಳ್ಳಿಯ ಸುಂದರ ಪ್ರಕೃತಿಯಲ್ಲಿ ಜೀವಿಸುವ ಅನ್ಯೋನ್ಯ ಕುಟುಂಬದ ಸನ್ನೀವೇಶಗಳ ಸುತ್ತ ಕಥೆ ಸುತ್ತುತ್ತದೆ. ಮದುವೆ, ಗಂಡ, ಮಗು ಸುಂದರ ಸಂಸಾರ ಹೀಗೆ ಕಥೆ ಮುಂದುವರೆದು ಅದರಲ್ಲಿ ಕೊಂಚ ಭಿನ್ನಾಭಿಪ್ರಾಯಗಳು ಉಂಟಾದರೂ ಇಡೀ ಜೀವನವೇ ಏರುಪೇರಾಗುವ ಘಟನೆಗಳನ್ನು ಚಿತ್ರ ಒಳಗೊಂಡಿದೆ. ಚಿತ್ರದಲ್ಲಿ ಜೈ ಎನ್, ಸ್ವೀಟಿ ಸ್ವಾತಿ, ಶ್ರೀನಿವಾಸ ರಾವ್ ಪಲ್ಲ, ಸಿರಿ, ಸುನಿತಾ, ಮನೋಹರ್, ವೇಣು ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಕಾಶ್ ಪಲ್ಲ ಚಿತ್ರಕಥೆ ರಚಿಸಿ ಸಿನಿಮಾ ನಿರ್ದೇಶಿಸಿದ್ದಾರೆ.
ಮಿಡ್ ನೈಟ್ ಕಿಲ್ಲರ್ಸ್ | ತೆಲುಗು | ತನ್ನ ಆಪ್ತ ಸ್ನೇಹಿತನ ಕೋರಿಕೆಗೆ ಬದ್ಧನಾದ ಅನ್ವರ್ ಹುಸೇನ್ (ಕುಂಚಾಕೊ ಬೋಬನ್) ವೃತ್ತಿಯಲ್ಲಿ ಮನಶ್ಶಾಸ್ತ್ರಜ್ಞನಾಗಿ ಕೊಚ್ಚಿ ಪೊಲೀಸ್ ಇಲಾಖೆಯಲ್ಲಿ ಕನ್ಸಲ್ಟಿಂಗ್ ಕ್ರಿಮಿನಾಲಜಿಸ್ಟ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಇದ್ದಕ್ಕಿದ್ದಂತೆ, ಮಧ್ಯರಾತ್ರಿಯಲ್ಲಿ ಪೋಲಿಸ್ ಕೊಲೆಗಳ ಸರಣಿಗಳೇ ಸಂಭವಿಸುವ ಪ್ರಕರಣವನ್ನು ಅನ್ವರ್ ನೋಡುತ್ತಾನೆ. ಈ ಕೊಲೆಗಳ ಹಿಂದಿನ ಅಪರಾಧಿ ಯಾರು ಎಂಬುದನ್ನು ಪತ್ತೆ
ಹಚ್ಚುತ್ತಾನೆಯೇ ಎಂಬುದು ಚಿತ್ರದ ಕಥಾಹಂದರ. ಚಿತ್ರದಲ್ಲಿ ಕುಂಚಾಕೋ ಬೋಬನ್, ಶರಾಫ್ ಯು ಧೀನ್, ಶ್ರೀನಾಥ್ ಭಾಸಿ, ಜಿನು ಜೋಸೆಫ್, ಉನ್ನಿಮಯ ಪ್ರಸಾದ್, ಹರಿಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪವಲೂರು ವಿಜಯೇಂದ್ರ ಕುಮಾರ್ ನಿರ್ಮಿಸಿದ್ದು, ರಾಜು ಶೆಟ್ಟಿ ನಿರ್ದೇಶಿಸಿದ್ದಾರೆ.
ಪೆದ್ದ ಕಾಪು Part-1 | ತೆಲುಗು | ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅವನ ಹಳ್ಳಿಯ ಪ್ರಬಲ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಧೈರ್ಯದಿಂದ ಸವಾಲು ಹಾಕುವ ಯುವಕನ ಕಥೆಯನ್ನು ಚಿತ್ರ ಹೇಳುತ್ತದೆ. ಈ ಆಕ್ಷನ್ ಥ್ರಿಲ್ಲರ್ ಚಲನಚಿತ್ರವನ್ನು ಶ್ರೀಕಾಂತ್ ಅಡ್ಡಾಳ ನಿರ್ದೇಶಿಸಿದ್ದು, ವಿರಾಟ್ ಕರ್ಣ, ಪ್ರಗತಿ ಶ್ರೀವಾಸ್ತವ, ರಾವ್ ರಮೇಶ್ ಮತ್ತು ತಣಿಕೆಲ್ಲ ಭರಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೇಮ್ ಕುಮಾರ್ | ತೆಲುಗು | ಯುವಕನ ಮದುವೆ ವೈಫಲ್ಯದ ಸುತ್ತ ಚಿತ್ರಕಥೆ ಸುತ್ತುತ್ತದೆ. ಮದುವೆಯಾಗಲು ಹಂಬಲಿಸುವ ಯುವಕನಿಗೆ ವಧುಗಳು ಸಿಗದೆ, ಸಿಕ್ಕರೂ ಮದುವೆ ರದ್ದಾಗುವ ದುರದೃಷ್ಟಕರ ಘಟನೆಗಳು ಅವನ ಜೀವನದಲ್ಲಿ ಸಂಭವಿಸುತ್ತಿರುತ್ತವೆ. ಮ್ಯಾಟ್ರಿಮನಿ ವೆಬ್ ಸೈಟ್‌ಗಳಲ್ಲಿ ಸಿಗುವ ಯಾವುದೇ ವಧುಗಳು ಇವನನ್ನು ಒಪ್ಪಿಕೊಂಡರೂ ಕೊನೆಯಲ್ಲಿ ತಿರಸ್ಕರಿಸುತ್ತಿರುತ್ತಾರೆ. ಇದೆಲ್ಲವನ್ನು ಸಂಪೂರ್ಣ ಹಾಸ್ಯದ ಮೂಲಕವೇ ತೋರಿಸಲಾಗಿದೆ. ಈ ಘಟನೆಗಳಿಂದ ಬೇಸತ್ತ ಯುವಕ ಬ್ಯುಸಿನೆಸ್ ಒಂದನ್ನು ಆರಂಭಿಸಿ ಅಲ್ಲಿಯೂ ವಧು ಅನ್ವೇಷಣೆಯನ್ನು ಶುರುಮಾಡುತ್ತಾನೆ. ಅವನು ಮಾದುವೆಯಾಗುವಲ್ಲಿ ಸಫಲನಾಗುತ್ತಾನೆಯೇ ಎನ್ನುವುದನ್ನು ಚಿತ್ರ ಹೇಳುತ್ತದೆ. ಅಭಿಷೇಕ ಮಹರ್ಷಿ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸಂತೋಷ್ ಸೋಬಾನ್, ರಾಶಿ ಸಿಂಗ್, ಕೃಷ್ಣ ಚೈತನ್ಯ, ರುಚಿತಾ ಸಾದಿನೇನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಪಾಯಿಂಟ್ ರೇಂಜ್ | ಮಲಯಾಳಂ | ಚಿತ್ರಕಥೆಯು ರಾಜಕೀಯ ದ್ವೇಷಗಳು, ಹೊಡೆದಾಟಗಳು ಜೊತೆಗೆ ಪ್ರೀತಿಯ ಭಾವನೆಗಳನ್ನೊಳಗೊಂಡಿದೆ. DM ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ಶಿಜಿ ಮೊಹಮ್ಮದ್ ನಿರ್ಮಿಸಿರುವ ಚಿತ್ರವನ್ನುಸೈನು ಚಾವಕ್ಕಡನ್ ನಿರ್ದೇಶಿಸಿದ್ದಾರೆ. ಪಂಕಜ್, ಪ್ರದೀಪ್ ಬಾಬು ಮತ್ತು ಸಾಯಿ ಬಾಲನ್ ಸಂಗೀತ ಸಂಯೋಜಿಸಿದ್ದಾರೆ.
ಆಗಸ್ಟ್ 27th | ಮಲಯಾಳಂ | ರೋಷನ್ ಎಂಬ ಯುವಕನ ತಾಯಿಯನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲ್ಲುವ ಕಥೆಯನ್ನು ಚಿತ್ರ ಹೇಳುತ್ತದೆ. ರೋಷನ್, ಪೊಲೀಸ್ ಅಧಿಕಾರಿ ತಾರಾ ಮರಿಯಮ್‌ಗೆ ಕರೆಮಾಡಿ, ‘ಗೋಪಿಕೃಷ್ಣ ಎಂಬುವಾತ ತನ್ನ ತಾಯಿಯನ್ನು ಅವಮಾನಿಸಿ ಕೆಲಸದಿಂದ ವಜಾ ಮಾಡಿದ್ದಾನೆ. ಇದೇ ವೇಳೆ ನನ್ನ ತಾಯಿ ಕೊಲ್ಲಲ್ಪಟ್ಟಿದ್ದಾಳೆ’ ಎಂದು ಹೇಳುತ್ತಾನೆ. ಮುಂದೇನಾಗಲಿದೆ ಎಂಬುದನ್ನು ಸಿನಿಮಾ ತೋರಿಸಲಿದೆ. ಕುಂಬಲಥು ಪದ್ಮ ಕಮಾರ್ ಚಿತ್ರಕಥೆ ರಚಿಸಿರುವ ಚಿತ್ರವನ್ನು ಅಜಿತ್ ರವಿ ಪೆಗಾಸಸ್ ನಿರ್ದೇಶಿಸಿದ್ದಾರೆ. ದಯ್ಯನ ಹಮೀದ್, ರಿಯಾಜ್ ಖಾನ್, ಹರೀಶ್ ಪೆರಾಡಿ, ಶರತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಡಿಜಿಟಲ್ ವಿಲೇಜ್ | ಮಲಯಾಳಂ | ಕೇರಳ ಮತ್ತು ಕರ್ನಾಟಕದ ಗಡಿಯ ಸಮೀಪವಿರುವ ಸಣ್ಣ ಹಳ್ಳಿಯ ಜನರಿಗೆ ಸಿನಿಮಾದ ಮೇಲಿರುವ ಹುಚ್ಚು ಗೀಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ನಟಿಸಲು ಇಷ್ಟವಿರುವ ಅಲ್ಲಿನ ವಲಸಿಗರನ್ನು ಬಳಸಿಕೊಂಡು ಎಪಿಸೋಡ್ – ಒಂದು, ಎಪಿಸೋಡ್ – ಎರಡು ಎಂದು ಸರಣಿಗಳನ್ನು ಚಿತ್ರಿಸುತ್ತಿರುವಾಗ ಇದನ್ನು ಅರ್ಥ ಮಾಡಿಕೊಳ್ಳದ ವಲಸಿಗರ ಪೇಚಾಟವನ್ನು ಹಾಸ್ಯದ ಮೂಲಕ ತೋರಿಸಲಾಗಿದೆ. ಹಳ್ಳಿ ವಾತಾವರಣ, ಜಾನುವಾರುಗಳು, ಹೊಲ ಗದ್ದೆಗಳು ಪ್ರಕೃತಿಯ ನೋಟಗಳು ಅದ್ಬುತವಾಗಿ ಮೂಡಿಬಂದಿವೆ. ಚಿತ್ರವನ್ನು ಫಹಾದ್ ನಂದು, ಉಲ್ಸವ್ ರಾಜೀವ್ ಚಿತ್ರಕಥೆ ರಚಿಸಿ, ನಿರ್ದೇಶಿಸಿದ್ದು, ಯುಲಿನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಅಖಿಲ್, ಆಶಿಕ್ ನಿರ್ಮಿಸಿದ್ದಾರೆ. ರಿಷಿಕೇಶ, ವೈಷ್ಣವ್, ಅಮೃತ್ ಕೆ ಶಾಂತ್, ಅಭಿನ ವಿಜಯನ್, ಪ್ರಜಿತಾ, ಆಶಿಕ್ ಮುರಳಿ, ಸುರೇಶ್ ಇಜಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಶಶಿಯುಂ ಶಕುಂತಳೆಯುಂ | ಮಲಯಾಳಂ | ಒಂದು ಹಳ್ಳಿಯೊಳಗಿನ ಎರಡು ಪ್ಯಾರಲಾಲ್ ಕಾಲೇಜುಗಳ ನಡುವಿನ ಪೈಪೋಟಿ, ಕಾಲೇಜು ಶಿಕ್ಷಕರ ನಡುವಿನ ಪ್ರೇಮ, ಪ್ರಣಯ ಮತ್ತು ಕುಟುಂಬಗಳ ನಡುವಿನ ಪೈಪೋಟಿಯೇ ಸಿನಿಮಾದ ಕಥಾಹಂದರ. ಬಿಚ್ಚಾಲ್ ಮೊಹಮ್ಮದ್ ನಿರ್ದೇಶಿಸಿದ್ದು, ಆರ್ ಎಸ್ ವಿಮಲ್, ಸಲಾಮ್ ತಾನಿಕ್ಕಟ್, ನೇಹಾ (ಆಮಿ) ನಿರ್ಮಿಸಿದ್ದಾರೆ. ಶಾಹೀನ್ ಸಿದ್ದಿಕ್, ಸಿದ್ದಿಕ್, ಆರ್ ಎಸ್ ವಿಮಲ್, ಅಸ್ವಿನ್ ಕುಮಾರ್, ಬಿನೋಯ್, ಬಾಲಾಜಿ ಸರ್ಮ್ಮಾ, ನೇಹಾ ಸಲಾಂ, ರಸ್ನಾ ಪವಿತ್ರನ್, ಸಿಂಧು ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇರಟ್ಟಚಂಗನ್ | ಮಲಯಾಳಂ | ಚಿತ್ರಕಥೆಯು DYSP ಪ್ರಮೋದ್ ಕುಮಾರ್ ಅವರ ಅವಳಿ ಸಹೋದರ ASI ವಿನೋದ್ ಕುಮಾರ್ ಅವರ ಕೊಲೆಯೊಂದಿಗೆ ಸುತ್ತುವರೆದಿದೆ. ಕೊಲೆಯಲ್ಲಿ ಮೂವರು ಶಂಕಿತರ ಸುಳಿವು ಸಿಗುತ್ತದೆ. ASI ಜಾನ್, CPO ಬಿನೀಷ್ ಮತ್ತು SCPO ಸಂದೀಪ್. ಈ ಮೂವರೂ ಸಹ ಪೊಲೀಸ್ ಅಧಿಕಾರಿಗಳು. ವಿನೋದ್ ಜೊತೆ ವಾಗಮಾನ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರ ಮಧ್ಯೆ ನಡೆದ ವಿವಿಧ
ಘಟನೆಗಳಿಂದ ವಿನೋದ್ ಮೇಲೆ ಅವರಿಗೆ ದ್ವೇಷವಿತ್ತು ಈ ಕಾರಣದಿಂದ ಇವರೇ ಕೊಲೆಮಾಡಿರಬಹುದೆಂಬ ಊಹೆಯಲ್ಲಿ ತನಿಖೆ ಆರಂಭವಾಗುತ್ತದೆ.
ನಾನ್ ಸ್ಟಾಪ್ ಧಮಾಲ್ | ಹಿಂದಿ | ಚಲನಚಿತ್ರೋದ್ಯಮವನ್ನು ಹಿನ್ನೆಲೆಯಾಗಿಟ್ಟುಕೊಂಡಿರುವ ಈ ಚಿತ್ರವು ಹಾಸ್ಯದ ಸನ್ನೀವೇಶಗಳನ್ನು ಒಳಗೊಂಡಿದೆ. ಚಿತ್ರದಲ್ಲಿ ರಾಜು (ರಾಜ್‌ಪಾಲ್) ಜನಪ್ರಿಯ ನಟಿ ಶ್ರೇಯಾ ಕಪೂರ್ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಅವನ ಕನಸು. ತಾನು ಚಲನಚಿತ್ರ ನಿರ್ಮಾಪಕನಾಗುವುದೊಂದೇ ನಟಿಯನ್ನು ಭೇಟಿಯಾಗಲು ಇರುವ ಏಕೈಕ ಮಾರ್ಗವೆಂದು ತಿಳಿದು, ಚಿತ್ರ ನಿರ್ಮಾಣಕ್ಕೆ ಹಣ ಹೊಂದಿಸಲು ಹೆಣಗಾಡುತ್ತಿರುತ್ತಾನೆ. ಅಮರ್(ಮನೋಜ್) ಒಬ್ಬ ಅವಕಾಶ ವಂಚಿತ ಚಲನಚಿತ್ರ ಬರಹಗಾರನಾಗಿದ್ದು, ಅವನು ತಮ್ಮ ಯೋಜನೆಗೆ ಬೆಂಬಲ ನೀಡುವ ಹೂಡಿಕೆದಾರರನ್ನು ಹುಡುಕುತ್ತಿರುತ್ತಾನೆ. ಸತೀಂದರ್ (ಅನ್ನು) ಜನಪ್ರಿಯ ತಾರೆಗಳೊಂದಿಗೆ ಕೆಲಸ ಮಾಡುವ ದೊಡ್ಡ ಕನಸುಗಳನ್ನು ಹೊತ್ತ ಚಲನಚಿತ್ರ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರ ಹಾಸ್ಯ ಸಂಭಾಷಣೆಗಳನ್ನು ಸಿನಿಮಾ ಒಳಗೊಂಡಿದೆ. ರಾಜ್‌ಪಾಲ್ ಯಾದವ್, ಅನ್ನು ಕಪೂರ್ ಮತ್ತು ಮನೋಜ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವನ್ನು ಇರ್ಶಾದ್ ಖಾನ್ ಚಿತ್ರಕಥೆ ಬರೆದು, ನಿರ್ದೇಶಿಸಿದ್ದಾರೆ.
ಘೂಮರ್ | ಹಿಂದಿ | ಸಮಿಯಾ ಖೇರ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ಕಾರು ಅಪಘಾತದಲ್ಲಿ ತನ್ನ ಬಲಗೈ ಕಳೆದುಕೊಂಡ ಆಕೆಗೆ ಕೋಚ್ ಅಭಿಷೇಕ್ ಬಚ್ಚನ್ ಎಡಗೈ ಬಳಸಲು ತರಬೇತಿ ನೀಡುತ್ತಾನೆ. ಇದರಿಂದ ಅವಳಿಗೆ ಟೀಮ್ ಇಂಡಿಯಾದಲ್ಲಿ ಆಡಲು ಅವಕಾಶ ಸಿಗುತ್ತದೆ. ಅಭಿಷೇಕ್ ಬಚ್ಚನ್ ಮತ್ತು ಸಮಿಯಾ ಖೇರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ನೈಜ ಘಟನೆಯಾಧರಿತ ಚಿತ್ರದಲ್ಲಿ ಶಬಾನಾ ಅಜ್ಮಿ ಮತ್ತು ಅಂಗದ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ.