ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೋ’ Side B ಇಂದು ತೆರೆಕಂಡಿದೆ. ಧರ್ಮಣ್ಣ ಕಡೂರು ನಟನೆಯ ‘ರಾಜಯೋಗ’ ಗಮನಸೆಳೆದಿರುವ ಈ ವಾರದ ಮತ್ತೊಂದು ಸಿನಿಮಾ. ಪಾಯಲ್ ರಜಪೂತ್ ನಟನೆಯ ‘ಮಂಗಳವಾರಂ’ ತೆಲುಗು ಮತ್ತು ‘ಫಲಿಮಿ’ ಮಲಯಾಳಂ ಸಿನಿಮಾಗಳ ಬಗ್ಗೆ ಭಾರೀ ನಿರೀಕ್ಷೆಯಿದೆ. ಫರ್ಹಾ ಖಾನ್ ನಿರ್ದೇಶನದ ‘ಖಿಚಡಿ 2’ ಹಿಂದಿ ಸಿನಿಮಾ ಕಾಮಿಡಿ ಜಾನರ್ ಪ್ರಿಯರಿಗೆ ಇಷ್ಟವಾಗಬಹುದು.
ಸಪ್ತ ಸಾಗರದಾಚೆ ಎಲ್ಲೋ Side B | ಕನ್ನಡ | ರಕ್ಷಿತ್ ಶೆಟ್ಟಿ, ಚೈತ್ರಾ ಜೆ ಆಚಾರ್ ಮತ್ತು ರುಕ್ಮಿಣಿ ವಸಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. Side Aನಲ್ಲಿ ಕಂಡ ಮನು ಇಲ್ಲಿ ಕಾಣಸಿಗುವುದಿಲ್ಲ. ಅವನು ಸಂಪೂರ್ಣ ಬದಲಾಗಿದ್ದಾನೆ. ಅವರ ದೇಹದ ತೂಕದ ಜೊತೆಗೆ ನೋವಿನ ತೂಕ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪತಿಯೊಡನೆ ಪ್ರಿಯಾ ತನ್ನ ಜೀವನವನ್ನು ಕಷ್ಟಪಟ್ಟು ಸಾಗಿಸುತ್ತಿರುತ್ತಾಳೆ. ಇವರಿಬ್ಬರ ಕಥೆ ಮುಂದೇನಾಗಬಹುದು? ಇವರಿಗೆ ಅನ್ಯಾಯ ಮಾಡಿದವರಿಗೆ ಮನು ಸೇಡು ತೀರಿಸಿಕೊಳ್ಳುತ್ತಾನಾ? ಪ್ರಿಯಾ ಬದುಕಿಗೆ ಮತ್ತೆ ಬರುತ್ತಾನಾ? ಅಥವಾ ಮನುಗೆ ಹೊಸ ಸಂಗಾತಿ ಸಿಕ್ಕು ಪ್ರಿಯಾಳನ್ನು ಮರೆಯುತ್ತಾನಾ? ಎನ್ನುವ ಪ್ರಶ್ನೆಗಳಿಗೆ Side B ಉತ್ತರ ನೀಡಲಿದೆ. ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, Paramvah Studios ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಸುನಿಲ್ ಎಸ್ ಭಾರದ್ವಾಜ್ ಸಂಕಲನ, ಗುಂಡು ಶೆಟ್ಟಿ, ಹೇಮಂತ್ ಎಂ ರಾವ್ ಚಿತ್ರಕಥೆ ರಚಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು ಮೂಲ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿದೆ.
ದಿ ವೇಕೆಂಟ್ ಹೌಸ್ | ಕನ್ನಡ | ನಟಿ ಎಸ್ತರ್ ನರೋನ್ಹಾ ರಚಿಸಿ, ನಿರ್ದೇಶಿಸಿ, ನಿರ್ಮಿಸಿ, ಸಂಗೀತ ನಿರ್ದೇಶನದ ಜೊತೆಗೆ ನಟನೆ ಸಹ ಮಾಡಿರುವ ಮಾಡಿರುವ ಸಿನಿಮಾ. ಇದೊಂದು ಖಾಲಿ ಮನೆ ಸುತ್ತ ಸಾಗುವ ಕಥೆ ಈಗಿನ ಯುವ ಜನತೆಗೆ ಬಹಳ ಕನೆಕ್ಟ್ ಆಗುವ ರೀತಿಯಲ್ಲಿದೆ. ಪ್ರೀತಿ ಮತ್ತು ಎಮೋಷನ್ ಎರಡೂ ಚಿತ್ರದಲ್ಲಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನವಿದೆ. ಈ ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರ Janet Noronha Productions
ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದೆ.
ಬೆಂಬಿಡದ ನಾವಿಕ | ಕನ್ನಡ | ಶ್ರೀಯಾನ್ ನಟಿಸಿ, ನಿರ್ದೇಶಿಸಿರುವ ಸಿನಿಮಾ. ಉನ್ನತ ಮಟ್ಟಕ್ಕೆ ಬೆಳೆಯಬೇಕೆಂಬ ಹಂಬಲವಿರುವ YouTube ಬ್ಲಾಗರ್ ಯುವಕನೊಬ್ಬನಿಗೆ ಸಾಮಾಜಿಕ ಮಾಧ್ಯಮದಿಂದ ಬರುವ ಕಷ್ಟಗಳು ಹೇಗಿರುತ್ತವೆ? ಇದರಿಂದ ಆತನ ಜೀವನ ಹೇಗೆ ಬದಲಾಗುತ್ತದೆ? ಈ ರೀತಿಯ ವ್ಯಕ್ತಿಗಳಿಗೆ ಹೇಗೆ ಸವಾಲುಗಳು ಎದುರಾಗುತ್ತವೆ? ಅವನಿಗೆ ತನ್ನ ಜೀವನದ ಪ್ರತಿ ಕ್ಷಣವೂ ಹೇಗೆ ಮುಖ್ಯ ಎನಿಸುತ್ತದೆ? ಎಂಬುದನ್ನು ಸಿನಿಮಾ ತೋರಿಸಲಿದೆ. ಚಿತ್ರದಲ್ಲಿ ಐಶ್ವರ್ಯಾ ಮತ್ತು ಪ್ರಿಯದರ್ಶಿನಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಜಿ ನಿರ್ಮಿಸಿರುವ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸತೀಶ್ ರಾಜೇಂದ್ರನ್ ಛಾಯಾಗ್ರಾಹಣ ನಿರ್ವಹಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ | ಕನ್ನಡ | ಆರ್ಯನ್ ಹರ್ಷ ಮುಖ್ಯಪಾತ್ರಗಳಲ್ಲಿ ನಟಿಸಿರುವ ಸಿನಿಮಾ. ಈ ಚಲನಚಿತ್ರ IT ಕ್ಷೇತ್ರದಲ್ಲಿ ಉದ್ಯೋಗಿಯಾಗಿರುವ ಯುವಕರನ್ನು ವಿಷಯವಸ್ತುವನ್ನಾಗಿ ಇಟ್ಟುಕೊಂಡು ಸಿದ್ಧವಾಗಿದೆ. ಚಿತ್ರವನ್ನು ಸ್ವತಃ IT ಉದ್ಯೋಗಿಯಾದ ಚಿಕ್ಕಣ್ಣ R ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಏರಿಯಾದ ಹೆಸರನ್ನು ಕೇಳದವರೇ ಇಲ್ಲ ಎನ್ನಬಹುದು. ಅದರಲ್ಲೂ IT ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಲ್ಲರಿಗೂ ಇದು ಹೆಚ್ಚು ಪರಿಚಿತವಾಗಿರುತ್ತದೆ. ಈಗಿನ ಯುವಕ – ಯುವತಿಯರು ಐಟಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸದಾ ಒತ್ತಡದಲ್ಲಿರುತ್ತಾರೆ. ಯಾವುದೇ ಉದ್ಯೋಗಿಯ ಒತ್ತಡದ ಕೆಲಸ ಜೀವನ ಹೇಗಿರುತ್ತದೆ ಎಂಬ ಅಂಶ ಈ ಸಿನಿಮಾದಲ್ಲಿದೆ. ಹಲವು ಅಂತರಾಷ್ಟ್ರಿಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಂಡಿದೆ. ಆರ್ಯನ್ ಹರ್ಷ ನಾಯಕನಾಗಿ ನಟಿಸಿದ್ದು ಇವರಿಗೆ ಜೋಡಿಯಾಗಿ ದಿಯಾ ಆಶ್ಲೇಶಾ ಮತ್ತು ರಕ್ಷಿತಾ ಕೆರೆಮನೆ ನಾಯಕಿಯರಾಗಿ ಅಭಿನಯಿಸಿದ್ದಾರೆ. ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವನ್ನು Bajarangi Productions ಬ್ಯಾನರ್ ಅಡಿಯಲ್ಲಿ ಚಿಕ್ಕಣ್ಣ R ಅವರೇ ನಿರ್ಮಿಸಿದ್ದಾರೆ. ವಿನು ಮನಸು ಸಂಗೀತ ಸಂಯೋಜಿಸಿದ್ದು, ಚಂದ್ರಶೇಖರ್ ಶ್ರೀವಾಸ್ತವ್ ಹಾಡುಗಳನ್ನು ಬರೆದಿದ್ದಾರೆ. ರಾಜ ಶಿವಶಂಕರ್ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಹಂಪಿ ಸುಂದರ್ ಕಲಾ ನಿರ್ದೇಶನ ಚಿತ್ರಕ್ಕಿದೆ.
ರಾಜಯೋಗ | ಕನ್ನಡ | ಕಡೂರು ಧರ್ಮಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ. ಮನೋರಂಜನೆಯೊಂದಿಗೆ ಸಾಮಾಜಿಕ ಸಂದೇಶವನ್ನು ಹೊಂದಿದೆ. ಲಿಂಗರಾಜು ನಿರ್ದೇಶನದ ವಿಶಿಷ್ಟ ಕೌಟುಂಬಿಕ ಮನರಂಜನೆಯಲ್ಲಿ ಸಂಬಂಧಗಳ ಸಂಕೀರ್ಣತೆಗಳ ಕುರಿತ ಅಂಶಗಳಿವೆ. ʼರಾಮಾ ರಾಮಾ ರೇʼ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿದ್ದ ಧರ್ಮಣ್ಣ ಮೊದಲ ಬಾರಿಗೆ ನಾಯಕನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. Sri Ramarathna Productions ಬ್ಯಾನರ್ ಅಡಿಯಲ್ಲಿ ಕುಮಾರ ಕಂಠೀರವ ಅವರು ಚಿತ್ರ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಕ್ಷಯ್ ರಿಷಬ್ ಸಂಗೀತ ಸಂಯೋಜಿಸಿದ್ದಾರೆ.
ನೇತ್ರಂ | ಕನ್ನಡ – ತೆಲುಗು | ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಜೊತೆಗೆ ಕಣ್ಣುಗಳ ಮಹತ್ವವನ್ನು ಸಹ ತಿಳಿಸಲಿದೆ. ಚಿತ್ರದಲ್ಲಿ ರೌಡಿಗಳ ಬಳಿ ಸಿಲುಕಿರುವ ನಾಯಕಿಯನ್ನು ಕಾಪಾಡಲು ನಾಯಕ ಹರಸಾಹಸ ಪಡುತ್ತಾನೆ. ‘ನೇತ್ರಂ’ ಸಿನಿಮಾ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗಿದೆ. Jayasurya Movies ಬ್ಯಾನರ್ ಅಡಿಯಲ್ಲಿ ಮೊಕ್ತುಮ್ ಪಟೇಲ್ , ಶಾಯಿಕ್ ಶಬೀರ್ ಅಬ್ಬು ಮತ್ತು ಬಿಳ್ಳೂರ್ ಸುರೇಶ್ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗದಗ ಮೂಲದ ದಕ್ಷ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಬಿಳ್ಳೂರು ಸುರೇಶ್, ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶೀಲಾ, ತೇಜಸ್ವಿನಿ, ಧನಶ್ರೀ, ಮುದಾಸೀರ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ವೆಂಕಟೇಶ್ ಯುಡಿವಿ ಸಂಕಲನ ನಿರ್ವಹಿಸಿದ್ದಾರೆ.
ಮಂಗಳವಾರಂ | ತೆಲುಗು | ‘RX 100’ ಚಿತ್ರದ ಖ್ಯಾತಿಯ ಪಾಯಲ್ ರಜಪೂತ್ ಮುಖ್ಯಭೂಮಿಕೆಯಲ್ಲಿದ್ದು, ಹಳ್ಳಿಗಾಡಿನ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಭಯಾನಕ ದೃಶ್ಯಗಳನ್ನು ಒಳಗೊಂಡಿದೆ. ಒಂದು ಹಳ್ಳಿ ಪ್ರದೇಶದ ಜನರು ಕಣ್ಣುಗಳಲ್ಲಿ ಯಾವಾಗಲೂ ಭಯದ ಛಾಯೆ ಮೂಡಿರುತ್ತದೆ. ಏಕೆಂದರೆ ಆ ಹಳ್ಳಿಯಲ್ಲಿ ಪ್ರತೀ ಮಂಗಳವಾರ ಸಾವಾಗುತ್ತಿರುತ್ತದೆ. ವಿಚಿತ್ರ ಮುಖವಾಡವನ್ನು ಧರಿಸಿರುವ ವ್ಯಕ್ತಿಯು ಈ ಚಿತ್ರದಲ್ಲಿ ನಿಗೂಢ ಎನಿಸುತ್ತಾನೆ. ಕಥೆಯು ಆ ಮುಖವಾಡ ಧರಿಸಿರುವ ವ್ಯಕ್ತಿಯ ಸುತ್ತ ಸುತ್ತುತ್ತದೆ. ‘ಕಾಂತಾರ’ ಸಿನಿಮಾ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. A Creative Works ಮತ್ತು Mudra Media Works ಬ್ಯಾನರ್ ಅಡಿಯಲ್ಲಿ ಸ್ವಾತಿ ರೆಡ್ಡಿ ಗನುಪತಿ ಮತ್ತು ಸುರೇಶ್ ವರ್ಮಾ M ಚಿತ್ರ ನಿರ್ಮಿಸಿದ್ದಾರೆ. ನಂದಿತಾ ಶ್ವೇತಾ, ದಿವ್ಯಾ ಪಿಳ್ಳೈ, ಅಜ್ಮಲ್, ರವೀಂದ್ರ ವಿಜಯ್, ಕೃಷ್ಣ ಚೈತನ್ಯ, ಅಜಯ್ ಘೋಷ್, ಶ್ರವಣ್ ರೆಡ್ಡಿ ಮತ್ತು ಶ್ರೀತೇಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಮೈ ನೇಮ್ ಈಸ್ ಶೃತಿ | ತೆಲುಗು | ಹನ್ಸಿಕಾ ಮೊಟ್ವಾನಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಮೆಡಿಕಲ್ ಮಾಫಿಯಾ, ಸ್ಕಿನ್ ಮಾಫಿಯಾ, ಆರ್ಗನ್ ಮಾಫಿಯಾಗಳ ಸುತ್ತ ಈ ಚಿತ್ರಕಥೆ ಸುತ್ತುತ್ತದೆ. ಶ್ರೀನಿವಾಸ್ ಓಂಕಾರ್ ನಿರ್ದೇಶನದ ಈ ಚಿತ್ರವನ್ನು ರಮ್ಯಾ ಪ್ರಭಾಕರ್ ನಿರ್ಮಿಸಿದ್ದಾರೆ. ಮಾರ್ಕ್ ಕೇ ರಾಬಿನ್ ಅವರು ಸಂಗೀತ ಸಂಯೋಜಿಸಿದ್ದಾರೆ. ಆ್ಯಡ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುವ ಹುಡುಗಿ ಶೃತಿ ಪಾತ್ರದಲ್ಲಿ ಹನ್ಸಿಕಾ ಕಾಣಿಸಿಕೊಂಡಿದ್ದಾರೆ. ಹನ್ಸಿಕಾ ತಾಯಿ ಚರ್ಮರೋಗ ತಜ್ಞೆ ಆಗಿರುವುದರಿಂದ ‘ಈ ಕಥೆ ನನ್ನ ಬಳಿ ಬಂದಾಗ ಅಮ್ಮನ ಬಳಿ ಹಲವು ವಿಚಾರಗಳನ್ನು ಕೇಳಿ ತಿಳಿದುಕೊಂಡಿದ್ದೇನೆ’ ಎಂದಿದ್ದಾರೆ ಹನ್ಸಿಕಾ. ಸಿನಿಮಾದಲ್ಲಿ ಪ್ರೇಮ, ವೈದ್ಯೆಯಾಗಿ ಕಾಣಿಸಿಕೊಂಡಿದ್ದು, ಮುರಳಿ ಶರ್ಮಾ, ಪೂಜಾ ರಾಮಚಂದ್ರನ್, ರಾಜಾ ರವೀಂದ್ರ,
ಪ್ರವೀಣ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅನ್ವೇಶಿ | ತೆಲುಗು | ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ‘ವಕೀಲ್ ಸಾಬ್’ ಅನನ್ಯ ನಾಗಲ್ಲ ನಾಯಕಿಯಾಗಿ ನಟಿಸಿದ್ದಾರೆ. ನಿಗೂಢ ಹಳ್ಳಿಯೊಂದರಲ್ಲಿ ಈಗಾಗಲೇ ಮರಣ ಹೊಂದಿರುವ ಯುವತಿಯೊಬ್ಬಳ ಆತ್ಮ ಆ ಹಳ್ಳಿಗೆ ಹೊಸಬರು ಬಂದಾಗ ಜೀವಂತ ಇರುವಂತೆಯೇ ಭಾಸವಾಗುತ್ತದೆ. ಆದರೆ ಆ ಯುವತಿಯ ಬಗ್ಗೆ ವಿಚಾರಿಸಿದರೆ ಅವಳು ಸತ್ತು ಹೋಗಿ ವರ್ಷಗಳೇ ಕಳೆದಿವೆ ಸ್ವಲ್ಪ ಎಚ್ಚರಿಕೆಯಿಂದಿರಿ ಎಂದು ಆ ಹಳ್ಳಿಯ ಜನರು ಅಪರಿಚಿತರಿಗೆ ಸಲಹೆ ನೀಡುತ್ತಾರೆ. ಆದರೆ ಒಬ್ಬ ಯುವಕನಿಗೆ ಅವಳು ಬೆಂಬಿಡದೇ ಕಾಡುತ್ತಾಳೆ. ಇದರಿಂದ ಅವನು ಹೇಗೆ ತಪ್ಪಿಸಿಕೊಳ್ಳುತ್ತಾನೆ ಎಂಬುದನ್ನು ಸಿನಿಮಾ ತೋರಿಸಲಿದೆ. ಚಿತ್ರದಲ್ಲಿ ಸಿಮ್ರಾನ್ ಗುಪ್ತಾ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಧರನ್ ನಾಯಕನಾಗಿ ಅಭಿನಯಿಸಿದ್ದಾರೆ. Arunashri Entertainment ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ವಿಜಯಧರನ್ ದತ್ಲಾ, ಸಿಮ್ರಾನ್‌ಗುಪ್ತ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚೈತನ್ಯ ಭಾರದ್ವಾಜ್ ಸಂಗೀತ ಸಂಯೋಜಿಸಿದ್ದಾರೆ, ಸೈಮನ್ ಎಸ್ ಕಿಂಗ್ ಹಿನ್ನೆಲೆ ಸಂಗೀತವಿದೆ. ವಿ ಜೆ ಖನ್ನಾ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.
ಫಲಿಮಿ | ಮಲಯಾಳಂ | ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡುವ ಯುವಕ ತುಳಸಿ (ಬೇಸಿಲ್) ತನ್ನ ವಿವಾಹ ವಿಳಂಬವಾಗಿರುವುದರಿಂದ ತನ್ನ ಕುಟುಂಬವನ್ನು ಕಾಶಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನು ತನ್ನ ವಯೋವೃದ್ಧ ತಂದೆ ಹಾಗೂ ಇಡೀ ಕುಟುಂಬವನ್ನು ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ತೋರಿಸಿದೆ. ಪ್ರವಾಸವು ಅವರ ಜೀವನವನ್ನು ಅನೇಕ ರೀತಿಯಲ್ಲಿ ಬದಲಾಯಿಸುತ್ತದೆ. ಚಿತ್ರವು ಒಂದು ಅವಿಭಕ್ತ ಕುಟುಂಬದ ಸುತ್ತ ಕೇಂದ್ರೀಕೃತವಾದ ಹಾಸ್ಯದ ಕಥಾಹಂದರ. ಮದುವೆಯಾಗಲು ಕಾತುರನಾಗಿರುವ ತುಳಸಿ ಅವನ ಕುಟುಂಬ ಮತ್ತು ಸ್ನೇಹಿತರ ಸಲಹೆ ಪಡೆಯುತ್ತಿರುತ್ತಾನೆ. ತುಳಸಿಯ ಸಹೋದರ ಲಿವ್-ಇನ್ ಸಂಬಂಧವನ್ನು ಆರಿಸಿಕೊಳ್ಳುವಂತೆ ಸಲಹೆ ನೀಡುತ್ತಾನೆ, ಏಕೆಂದರೆ ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಸುಲಭವಾಗಿದೆ ಎಂಬುದು ಅವನ ಅಭಿಪ್ರಾಯ. ಹೀಗೆ ಗೊಂದಲಗಳಿಂದ ತುಳಸಿಗೆ ವಧುವನ್ನು ಹುಡುಕಲು ಅವನ ಇಡೀ ಕುಟುಂಬವು ತಿರುವನಂತಪುರದಿಂದ ವಾರಣಾಸಿಗೆ ಪ್ರಯಾಣಿಸುವ ಸುತ್ತ ಚಿತ್ರದ ಕಥಾವಸ್ತುವು ಸುತ್ತುತ್ತದೆ. Cheers Entertainments ಬ್ಯಾನರ್ ಅಡಿಯಲ್ಲಿ ಲಕ್ಷ್ಮಿ ವಾರಿಯರ್, ಗಣೇಶ್ ಮೆನನ್ ಮತ್ತು ಅಮಲ್ ಪಾಲ್ಸನ್ ನಿರ್ಮಿಸಿರುವ ಚಿತ್ರದಲ್ಲಿ ಜಗದೀಶ್, ಮಂಜು ಪಿಳೈ, ರೈನಾ ರಾಧಾಕೃಷ್ಣನ್, ಅಮಿತ್ ಮೋಹನ್ ರಾಜೇಶ್ವರಿ, ಸಂದೀಪ್ ಪ್ರದೀಪ್ ಮತ್ತು ಮೀನರಾಜ್ ಪಲ್ಲುರುತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ತಲ್ಲುಮಾಳ’ ಮತ್ತು ‘ಕಾಸರಗೋಲ್ಡ್’ ಖ್ಯಾತಿಯ ವಿಷ್ಣು ವಿಜಯ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಬಬ್ಲು ಅಜು ಛಾಯಾಗ್ರಹಣ ಮಾಡಿದ್ದು, ನಿಧಿನ್ ರಾಜ್ ಅರೋಲ್ ಸಂಕಲನ ನಿರ್ವಹಿಸಿದ್ದಾರೆ.
ಶೇಶಮ್ ಮೈಕ್-ಇಲ್ ಫಾತಿಮಾ | ಮಲಯಾಳಂ | ಕಲ್ಯಾಣಿ ಪ್ರಿಯದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವನ್ನು ಮನು ಸಿ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಮಲಬಾರ್‌ನ ಯುವ ಮುಸ್ಲಿಂ ಯುವತಿಯೊಬ್ಬಳು ತನ್ನ ಕುಟುಂಬ ಮತ್ತು ಸಮಾಜ ಮತ್ತು ಇತರರಿಂದ ವಿರೋಧವನ್ನು ಎದುರಿಸುತ್ತಿದ್ದರೂ ಫುಟ್‌ಬಾಲ್ ಕ್ರೀಡೆಯ ನಿರೂಪಕಿಯಾಗಲು ಹಂಬಲಿಸುವ ಕಥಾಹಂದರ ಚಿತ್ರದ್ದು. ಫಾತಿಮಾ ಮಹಿಳಾ ನಿರೂಪಕಿಯಾಗಲು ಸಾಕಷ್ಟು ಶ್ರಮ ಪಡುತ್ತಾಳೆ. ಆದರೆ ಅವರ ಕುಟುಂಬ ಮತ್ತು ಕ್ರೀಡಾ ಅಕಾಡೆಮಿಗಳಿಂದ ಅವಕಾಶ ದೊರೆಯುವುದಿಲ್ಲ. ಆದರೆ ಅವಳು ಎಲ್ಲಾ ಸಮಸ್ಯೆಗಳನ್ನು ದಾಟಿ ನಿಂತು ಹೇಗೆ ಪುಟ್‌ಬಾಲ್ ಕ್ರೀಡೆಯ ನಿರೂಪಕಿಯಾಗುತ್ತಾಳೆ ಎಂಬುದನ್ನು ಚಿತ್ರ ಒಳಗೊಂಡಿದೆ. ಈ ಚಿತ್ರವನ್ನು ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸಾಮಿ ಜಂಟಿಯಾಗಿ ನಿರ್ಮಿಸಿದ್ದಾರೆ. ಫೆಮಿನಾ ಜಾರ್ಜ್, ಅನೀಶ್ ಜಿ ಮೆನನ್, ಶಾಹೀನ್ ಸಿದ್ದಿಕ್ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ, ಸಂತಾನ ಕೃಷ್ಣನ್ ರವಿಚಂದ್ರನ್ ಛಾಯಾಗ್ರಹಣ, ಕಿರಣ್ ದಾಸ್ ಸಂಕಲನ ಚಿತ್ರಕ್ಕಿದೆ.
ಫೇಸ್ ಆಫ್ ಫೇಸ್‌ಲೆಸ್ | ಮಲಯಾಳಂ | ರಾಣಿ ಮಾರಿಯಾ ಅವರ ಸುತ್ತ ಸುತ್ತುತ್ತದೆ ಕತೆ. ಅವಳು ತನ್ನ ಧರ್ಮದ ಎಲ್ಲೆಗಳನ್ನು ಮೀರಿ, ಸಾರ್ವತ್ರಿಕ ಏಕತೆಯನ್ನು ಅರಿತು ಮಹಿಳಾ ಸಬಲೀಕರಣಕ್ಕಾಗಿ ತನ್ನ ಜೀವನವನ್ನು ಬದ್ಧವಾಗಿಟ್ಟು, ಅಸ್ಪೃಶ್ಯ ಮಹಿಳೆಯರ ಬೆಳವಣಿಗೆಗಾಗಿ ಶ್ರಮಿಸುತ್ತಾಳೆ. ಇದರಿಂದ ಅವಳು ತನ್ನ ಧರ್ಮದ ಮುಖಂಡರಿಂದ ಮತ್ತು ಸಮಾಜದ ಅನೇಕ ವ್ಯಕ್ತಿಗಳಿಂದ ತೊಂದರೆಗೀಡಾಗುತ್ತಾಳೆ. ನಂತರ ಅವಳಿಗೆ ಸಾವಿನ ಬೆದರಿಕೆ ಬರುತ್ತದೆ. ಆದರೆ ಅವಳು ತನ್ನ ಕೆಲಸವನ್ನು ಮುಂದುವರೆಸುತ್ತಾಳೆ. ಇದನ್ನು ಸಹಿಸದ ಅನೇಕರಿಂದ ರಾಣಿ ಮಾರಿಯಾಳನ್ನು ಚಾಕುವಿನಿಂದ ಹತ್ಯೆ ಮಾಡಲಾಗುತ್ತದೆ. ಮುಂದೇನಾಗಲಿದೆ ಎಂದು ಸಿನಿಮಾ ತೋರಿಸಲಿದೆ. ಈ ಚಿತ್ರವನ್ನು ಶೈಸನ್ ಪಿ ಔಸೆಫ್ ನಿರ್ದೇಶಿಸಿದ್ದಾರೆ. ವಿನ್ಸಿ ಅಲೋಶಿಯಸ್, ಜೀತ್ ಮಾಥರ್ರು ಮತ್ತು ಸೋನಲ್ಲಿ ಶರ್ಮಿಷ್ಠಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂಬು ನಾಡು ಒಂಬತ್ತು ಕುಪ್ಪಂ | ತಮಿಳು | ಮೇಲ್ವರ್ಗದವರಿಂದ ದಬ್ಬಾಳಿಕೆಗೆ ಒಳಪಟ್ಟ ಅನೇಕ ನೊಂದ ರೈತ ವರ್ಗದ ನೈಜ ಘಟನೆಯನ್ನು ಆಧರಿಸಿದ ‘ಉರಾರ್ ನಂದ ಓವಯಂ’ ಕಾದಂಬರಿಯಿಂದ ಈ ಚಲನಚಿತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಚಿತ್ರದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಮೇಲ್ವರ್ಗದ ಜನ ಯಾವ ರೀತಿ ತುಳಿತಕ್ಕೊಳಗಾಗಿ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಸಂಗಕಿರಿ ಮಾಣಿಕ್ಕಂ, ಹರ್ಷಿದಶ್ರೀ, ವಿಕ್ರಮ್, ಶ್ರುತಿ, ಪ್ರಭು ಮಾಣಿಕ್ಕಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಿ ರಾಜಾಜಿ ನಿರ್ದೇಶನ, ಓ ಮಹೇಶ್ ಛಾಯಾಗ್ರಹಣ, ಅಂಥೋನಿ ದಾಸನ್ ಸಂಗೀತ ಸಂಯೋಜನೆಯಿದೆ. ಚಿತ್ರವನ್ನು ಪುದುಕೊಟ್ಟೈ ಮತ್ತು ತಮಿಳುನಾಡಿನ ಹಲವು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ.
ಚೈತ್ರಾ | ತಮಿಳು | ಇದು 24 ಗಂಟೆಗಳಲ್ಲಿ ಕನ್ಯಾಕುಮಾರಿಯಲ್ಲಿ ನಡೆಯುವ ಕಥೆ. ಯಶಿಕಾ ಆನಂದ್, ಮನೆಯ ಟೆರಸ್ಸಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಪ್ರೇತವಾಗಿ ಬಂದು ತಾನು ಯಾಕೆ ಇಲ್ಲಿ ನಿಂತಿದ್ದೇನೆ ಮತ್ತು ಏನಾಯಿತು ಎಂದು ನಾಯಕ ಅವಿತೇಜ್ ರೆಡ್ಡಿಗೆ ತನ್ನ ಕತೆಯನ್ನು ಹೇಳಿಕೊಳ್ಳುತ್ತಾಳೆ. ಇದರಿಂದ ನಾಯಕನಿಗೆ ಅವಳ ಮೇಲೆ ಕರುಣೆ ಉಂಟಾಗಿ ಅವನು ಸಹಾಯ ಮಾಡಲು ಮುಂದಾಗುತ್ತಾನೆ. ‘ಧ್ರುವಂಗಲ್ ಪಟಿನಾರ್’ ಚಿತ್ರದ ನಟಿ ಯಶಿಕಾ ಆನಂದ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. Mars Productions ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಅವಿತೇಜ್, ಶಕ್ತಿ ಮಹೇಂದ್ರ ಪೂಜಾ, ರಮಣನ್, ಕಣ್ಣನ್, ಲೂಯಿಸ್, ಮೊಸಕುಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಕರನ್ ಮೇಯಪ್ಪನ್ ಅವರ ಸಂಗೀತ ಸಂಯೋಜನೆ, ಸತೀಶ್ ಕುಮಾರ್ ಛಾಯಾಗ್ರಹಣವಿದೆ. ಎಂ ಜೆನಿತ್‌ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಖಿಚಡಿ 2 | ಹಿಂದಿ | ಚಿತ್ರದಲ್ಲಿ ಪ್ರಫುಲ್ (ರಾಜೀವ್ ಮೆಹ್ತಾ) ಚಕ್ರವರ್ತಿಯಾಗಿ ಕಾಣಿಸಿಕೊಂಡಿದ್ದು, ಇವನ ಗಡ್ಡ, ಮೀಸೆ ಮತ್ತು ವೇಷಭೂಷಣವೇ ಒಂದು ಆಕರ್ಷಣೆಯಾಗಿದೆ. ಜಗತ್ತನ್ನು ಉಳಿಸುವ ಕಾರ್ಯಾಚರಣೆಯೇ ಸಿನಿಮಾದ ಕಥಾ ಹಂದರ. ವಿಶ್ವವನ್ನು ಉಳಿಸುವ ಕಾರ್ಯಾಚರಣೆಯಲ್ಲಿ ನಗರ, ಕಡಲತೀರ, ಹಿಮಾವೃತ ಪರ್ವತ, ಮರುಭೂಮಿ, ಗುಹೆ ಮುಂತಾದವುಗಳ ನಡುವೆ ಕಥೆ ಸಾಗುತ್ತದೆ. ಅನಂತ್ ವಿಧಾತ್, ಪ್ರತೀಕ್ ಗಾಂಧಿ, ಪರೇಶ್ ಗಣತ್ರಾ, ಕಿಕು ಶಾರದಾ, ಫ್ಲೋರಾ ಸೈನಿ ಮತ್ತು ರೆಯಾನ್ಶ್ ವೀರ್ ಚಡ್ಡಾ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ತೆರೆಕಂಡ ‘ಖಿಚಡಿ’ ಸಿನಿಮಾದ ಮುಂದುವರಿದ ಭಾಗವಿದು. ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಕುಲ್ಹಾರಿ, 2010ರಲ್ಲಿ ಬಿಡುಗಡೆಯಾದ ‘ಖಿಚಡಿ’ ಚಿತ್ರದಲ್ಲಿ ‘ಪರ್ಮಿಂದರ್’ ಪಾತ್ರ ನಿರ್ವಹಿಸಿದ್ದರು. ಅದೇ ಪಾತ್ರ ಈಗ ಪುನರಾವರ್ತನೆಯಾಗಿದೆ. ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿ ಫರ್ಹಾ ಖಾನ್ ಚಿತ್ರದಲ್ಲಿ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ. Hats Off Productions Ltd ಸಿನಿಮಾ ನಿರ್ಮಿಸಿದೆ.