ಶಿವರಾಜಕುಮಾರ್‌ ಪುತ್ರಿ ನಿವೇದಿತಾ ನಿರ್ಮಿಸುತ್ತಿರುವ ‘ಫೈರ್ ಫ್ಲೈ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಶೂಟಿಂಗ್‌ ಮುಕ್ತಾಯವಾದ ಈ ಸಂದರ್ಭದಲ್ಲಿ ನಿವೇದಿತಾ ಚಿತ್ರತಂಡದೊಂದಿಗಿನ ನೆನಪುಗಳನ್ನು ಟ್ವಿಟರ್‌ನಲ್ಲಿ ಪತ್ರವೊಂದರ ಮೂಲಕ ಹಂಚಿಕೊಂಡಿದ್ದಾರೆ.

ವಂಶಿ ನಟಿಸಿ, ನಿರ್ದೇಶಿಸುತ್ತಿರುವ ‘ಫೈರ್ ಫ್ಲೈ’ ಸಿನಿಮಾದ ಶೂಟಿಂಗ್‌ ಮುಕ್ತಾಯಗೊಂಡಿದೆ. ಶಿವರಾಜಕುಮಾರ್‌ ಪುತ್ರಿ ನಿವೇದಿತಾ ಶ್ರೀ ಮುತ್ತು ಸಿನಿ ಸರ್ವೀಸ್‌ ಸಂಸ್ಥೆಯಡಿ ನಿರ್ಮಿಸುತ್ತಿರುವ ಚಿತ್ರವಿದು. ನಿವೇದಿತಾ ಅವರು ಟ್ವಿಟರ್‌ನಲ್ಲಿ ಪತ್ರವೊಂದರ ಜೊತೆ ಶೂಟಿಂಗ್ ಜರ್ನಿಯ ವೀಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಈ ಪತ್ರದ ಒಕ್ಕಣಿ ಇಂತಿದೆ – ‘ಚಿಕ್ಕವಳಿದ್ದಾಗಿನಿಂದಲೂ ಸಿನಿಮಾ ಮತ್ತು ಕಥೆಗಳೊಡನೆ ಬೆಳೆದವಳು ನಾನು. ಅಂದಿನಿಂದಲೂ ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ ‘ಫೈರ್ ಪ್ಲೈ’. ಈ ಚಿತ್ರದ ಚಿತ್ರೀಕರಣ ಇನ್ನೇನು ಮುಗಿಯುತ್ತಿರಲು, ಚಿತ್ರ ತಂಡದ ನಾವಿಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು, ಅತ್ಯದ್ಭುತ ಪ್ರತಿಭೆಗಳು ಹಾಗೂ ನನ್ನ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರೂ ಹಾಗೂ ಅವರೊಡನೆ ಮೂಡಿದ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು.

‘ಶುರುವಾದ ಪ್ರತಿಯೊಂದು ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ ‘ಫೈರ್ ಪ್ಲೈ’ ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ’. ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ, ಹಿರಿಯ ಕಲಾವಿದ ಮೂಗು ಸುರೇಶ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಂಶಿಗೆ‌ ಜೋಡಿಯಾಗಿ ರಚನಾ ಇಂದರ್ ಇದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ರಘು ನಿಡುವಳ್ಳಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ನಾಯಕ, ನಿರ್ದೇಶಕ ವಂಶಿಗೆ ಇಲ್ಲಿ ಜಯರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here