ಯುವನಟ ನಿಖಿಲ್‌ ಕುಮಾರ್‌ಗೆ ಇಂದು ಬರ್ತ್‌ಡೇ ಸಂಭ್ರಮ. ಸಿನಿಮಾ ಜೊತೆ ರಾಜಕೀಯದಲ್ಲೂ ಸಕ್ರಿಯರಾಗಿರುವ ನಿಖಿಲ್​ಗೆ ಅಭಿಮಾನಿಗಳು, ರಾಜಕೀಯ ನಾಯಕರು ಹಾಗೂ ಚಿತ್ರರಂಗದವರು ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಅವರ ನೂತನ ಸಿನಿಮಾದ ಟೈಟಲ್​ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಸಿನಿಮಾದಿಂದ ದೂರ ಉಳಿದು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗುತ್ತಾರೆ ಎಂದು ನಿಖಿಲ್‌ ಕುರಿತು ಸುದ್ದಿಯಾಗಿತ್ತು. ಈ ಸುದ್ದಿಯ ಬೆನ್ನಲ್ಲೇ ಅವರು ನೂತನ ಸಿನಿಮಾದ ಚಿತ್ರೀಕರಣದಲ್ಲಿ ಸದ್ದಿಲ್ಲದೆ ಪಾಲ್ಗೊಂಡಿದ್ದರು. ‘ರೈಡರ್‌’ ತೆರೆಕಂಡ ನಂತರದ ಈ ಸಿನಿಮಾ ಕುರಿತು ಅಭಿಮಾನಿಗಳಲ್ಲಿ ಕುತೂಹಲವಿತ್ತು. ಇಂದು ಅವರ ಹುಟ್ಟುಹಬ್ಬದಂದು ನೂತನ ಸಿನಿಮಾದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಯದುವೀರ’ ಎಂದು ಶೀರ್ಷಿಕೆ ನಿಗದಿಯಾಗಿದೆ. ಈ ಆಕ್ಷನ್‌ – ಫ್ಯಾಮಿಲಿ ಎಂಟರ್‌ಟೇನರ್‌ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್‌ ಬ್ಯಾನರ್‌ನಡಿ ನಿಶಾ ವೆಂಕಟ್‌ ಕೊನಂಕಿ ಮತ್ತು ಸುಪ್ರೀತ್‌ ನಿರ್ಮಿಸುತ್ತಿದ್ದಾರೆ.

ಚಿತ್ರವನ್ನು ಮಂಜು ಅಥರ್ವ ನಿರ್ದೇಶಿಸುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಮಂಜು ಚಿತ್ರರಂಗದಲ್ಲಿದ್ದಾರೆ. ಯಶ್​ ನಟನೆಯ ‘ಮಾಸ್ಟರ್‌ ಪೀಸ್‌’, ಶಿವರಾಜ್​ಕುಮಾರ್​ ಅಭಿನಯದ ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್‌ ಡೈರೆಕ್ಟರ್​ ಆಗಿ ಕೆಲಸ ಮಾಡಿದ ಅನುಭವ ಅವರದು. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ಗೆ ಕೋ-ಡೈರೆಕ್ಟರ್‌ ಆಗಿದ್ದರು. ಇದೀಗ ಅವರು ನಿಖಿಲ್‌ ಅವರ ಸಿನಿಮಾದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ನಿಖಿಲ್ ಹುಟ್ಟುಹಬ್ಬ ಚಿತ್ರದ ಟೈಟಲ್ ಇಂದು ಘೋಷಣೆ ಆಗಿದೆ. ಜತೆಗೆ ಫಸ್ಟ್ ಪೋಸ್ಟರ್ ಕೂಡ ರಿಲೀಸ್​ ಆಗಿದೆ. ಅಜನೀಶ್ ಲೋಕನಾಥ್‌ ಸಂಗೀತ ಸಂಯೋಜನೆ, ‘ಮಫ್ತಿ’, ‘ಮದಗಜ’ ಸಿನಿಮಾಗಳ ಸಿನಿಮಾಟೋಗ್ರಾಫರ್‌ ನವೀನ್‌ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ಶೂಟಿಂಗ್ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಇತರೆ ತಾರಾಬಳಗದ ಕುರಿತು ಮಾಹಿತಿ ಸಿಗಲಿದೆ.

LEAVE A REPLY

Connect with

Please enter your comment!
Please enter your name here