ಗರಡಿ ಮನೆಗಳ ಕುರಿತು ಹೇಳುವ ನಿರ್ದೇಶಕ ಮತ್ತು ನಿರ್ಮಾಪಕರ ಕತೆಯ ಆಶಯ ಮೆಚ್ಚುವಂಥದ್ದೆ. ಆದರೆ ಎಂದಿನ ಸೇಡಿನ ಕತೆ, ಹೊಡೆದಾಟಗಳು ಕಾಣಿಸುತ್ತಿದ್ದಂತೆ ಸಿನಿಮಾದ ಆಶಯ ಮುಕ್ಕಾಗುತ್ತದೆ. ಭಟ್ಟರು ತಮ್ಮ ಸಿನಿಮಾಗಳಲ್ಲಿ ಬಳಕೆ ಮಾಡುವ ತಮಾಷೆ, ತುಂಟತನವೂ ಅದೇಕೋ ಇಲ್ಲಿ ವರ್ಕ್ ಆದಂತಿಲ್ಲ. ‘ಗರಡಿ’ ಮಟ್ಟಿ ಇನ್ನಷ್ಟು ಹದವಾಗಿದ್ದಿದ್ದರೆ ಸಿನಿಮಾ ಮನಸ್ಸಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು.
ಯೋಗರಾಜ್ ಭಟ್ಟರ ಸಿನಿಮಾಗಳೆಂದರೆ ಅಲ್ಲಿ ಪ್ರೇಮಕತೆ, ತಮಾಷೆಯ ಜೊತೆಜೊತೆಗೆ ಫಿಲಾಸಫಿ ನೆನಪಾಗುತ್ತದೆ. ಅವರು ‘ಗರಡಿ’ ಸಿನಿಮಾ ನಿರ್ದೇಶಿಸುತ್ತಾರೆ, ಆಕ್ಷನ್ ಇರುತ್ತೆ ಎಂದಾಗಲೇ ಅಚ್ಚರಿಯಾಗಿತ್ತು. ತಮ್ಮದಲ್ಲದ ಈ ಜಾನರ್‌ನಲ್ಲಿ ಅವರು ಯಶಸ್ವಿಯಾಗುವರೇ ಎನ್ನುವ ಗೊಂದಲವಂತೂ ಇತ್ತು. ಸ್ವತಃ ಅವರು ಕೂಡ ಚಿತ್ರವನ್ನು ಸವಾಲಾಗಿ ಸ್ವೀಕರಿಸಿದ್ದರು. ಹೀಗೆ, ಮುಹೂರ್ತದ ದಿನದಿಂದಲೂ ಸುದ್ದಿಯಲ್ಲಿದ್ದ ಸಿನಿಮಾ ತೆರೆಕಂಡಿದೆ. ‘ಗರಡಿ ಮನೆ’ಯ ಕತೆ ಇರುವ ಸಿನಿಮಾ ಆಪ್ತವಾಗುತ್ತದೆಯೇ? ಇಂಥದ್ದೊಂದು ಕತೆ ಮಾಡಿಕೊಂಡಿರುವ ಭಟ್ಟರ ಆಶಯ ಒಳ್ಳೆಯದೇ ಆಗಿದ್ದರೂ ನಿರೂಪಣೆಯಲ್ಲಿ ಅವರು ಸಂಪೂರ್ಣ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗದು.
ಕುಸ್ತಿ ಪೈಲ್ವಾನನೊಬ್ಬನ ಹತ್ಯೆಯೊಂದಿಗೆ ಸಿನಿಮಾ ಶುರುವಾಗುತ್ತದೆ. ಅದು ಸಿನಿಮಾದ ಕತೆಗೆ ಮುನ್ನುಡಿ. ಪೈಲ್ವಾನ್ ಕುಟುಂಬದ ಊರಿನ ರಾಣೆ ಕುಟುಂಬದ ಯಜಮಾನಿಕೆ, ಪೈಲ್ವಾನ್ ರಂಗಪ್ಪನ ಗರಡಿ, ಇಬ್ಬರು ಅನಾಥ ಹುಡುಗರು.. ಹೀಗೆ ಮುಂದೆ ಸಿನಿಮಾ ಹೇಗೆ ಸಾಗುತ್ತದೆ ಎನ್ನುವುದರ ಒಂದು ಅಂದಾಜು ಪ್ರೇಕ್ಷಕನಿಗೆ ಸಿಕ್ಕಿಬಿಡುತ್ತದೆ. ಈ ಸಂದರ್ಭದಲ್ಲಿ ಸಿನಿಮಾವನ್ನು ಕಾಪಾಡುವುದು ಗರಡಿ ಸನ್ನಿವೇಶಗಳು. ಮುಂದಿನ ದೃಶ್ಯಗಳಲ್ಲಿ ಬೆಳೆದುನಿಂತ ಹೀರೋ, ನಾಯಕಿಯ ಪರಿಚಯದ ಹೊತ್ತಿಗೆ ಸಿನಿಮಾ ಒಂದಿಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಎಂದಿನ ಸೇಡಿನ ಕತೆ, ಹೊಡೆದಾಟಗಳು ಕಾಣಿಸುತ್ತಿದ್ದಂತೆ ಸಿನಿಮಾದ ಆಶಯ ಮುಕ್ಕಾಗುತ್ತದೆ. ಇನ್ನು ಭಟ್ಟರು ತಮ್ಮ ಸಿನಿಮಾಗಳಲ್ಲಿ ಬಳಕೆ ಮಾಡುವ ತಮಾಷೆ, ತುಂಟತನವೂ ಅದೇಕೋ ಇಲ್ಲಿ ವರ್ಕ್ ಆದಂತಿಲ್ಲ.
ಗರಡಿ ಮನೆಗಳ ಕುರಿತು ಹೇಳುವ ನಿರ್ದೇಶಕ ಮತ್ತು ನಿರ್ಮಾಪಕರ ಕತೆಯ ಆಶಯ ಮೆಚ್ಚುವಂಥದ್ದೆ. ಬಹುಶಃ ಪೈಲ್ವಾನ್ ರಂಗಪ್ಪನ ಪಾತ್ರದಲ್ಲಿ ಚಿತ್ರದ ನಿರ್ಮಾಪಕ ಬಿ ಸಿ ಪಾಟೀಲರನ್ನು ಮನಸ್ಸಿನಲ್ಲಿಟ್ಟುಕೊಂಡೇ ನಿರ್ದೇಶಕರು ಕತೆ ಮಾಡಿರುತ್ತಾರೆ. ಈ ಪಾತ್ರ ಅವರ ವಯಸ್ಸು, ವರ್ಚಸ್ಸಿಗೆ ಸೂಕ್ತ ರೀತಿಯಲ್ಲಿ ಹೊಂದುತ್ತದೆ. ಚಿತ್ರದುದ್ದಕ್ಕೂ ಕಾಣಿಸುವ ಪಾಟೀಲರು ತಮ್ಮ ಪಾತ್ರವನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಪಾಟೀಲರ ಅಳಿಯ ಸುಜಯ್ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಕುಸ್ತಿಪಟು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ಸುಜಯ್ ಪಾತ್ರವನ್ನು ಅರಿತು ನಟಿಸಿದ್ದಾರೆ. ಹಾಗಾಗಿ ಇದು ‘ಕುಟುಂಬದವರಿಗಾಗಿ’ ತಯಾರಾದ ಸಿನಿಮಾ ಏನೂ ಆಗಿಲ್ಲ. ಆದರೆ ಇಡಿಯಾಗಿ ಕತೆ, ನಿರೂಪಣೆ ಪ್ರೇಕ್ಷಕನನ್ನು ಹಿಡಿದು ಕೂರಿಸುವಲ್ಲಿ ತಡವರಿಸುತ್ತದೆ. ಚಿತ್ರದ ಆಶಯವೇ ಆದ ದೇಸಿ ಕ್ರೀಡೆ ಕುಸ್ತಿ ಪ್ರೇಕ್ಷಕನ ಮನಸಿಗೇಕೆ ಇಳಿಯುವುದಿಲ್ಲ ಎನ್ನುವುದಕ್ಕೆ ಉತ್ತರ ಸಿಗುವುದಿಲ್ಲ.
ಉತ್ತರ ಕರ್ನಾಟಕದ ಹಾವೇರಿ, ಬದಾಮಿ ಭಾಗಗಳಲ್ಲಿ ಸಿನಿಮಾದ ಬಹುಪಾಲು ಚಿತ್ರೀಕರಣ ನಡೆದಿದೆ. ಅಲ್ಲಿನ ಭೌಗೋಳಿಕ ಪರಿಸರ ಪ್ರೇಕ್ಷಕರಿಗೆ ಕಾಣಿಸುತ್ತದೆ. ಬಿಸಿಲು, ಮಾಳಿಗೆ ಮನೆ, ಬಾದಾಮಿ ದೇವಾಲಯಗಳಲ್ಲಿ ಚಿತ್ರಿಸಿದ್ದಾರೆ. ಆ ಭಾಗದ ಸ್ಲ್ಯಾಂಗ್ ಅನ್ನೇ ಬಳಕೆ ಮಾಡಿದ್ದಿದ್ದರೆ ಚಿತ್ರಕ್ಕೊಂದು ಗಟ್ಟಿಯಾದ ಪ್ರಾದೇಶಿಕತೆ ದಕ್ಕುತ್ತಿತ್ತು. ಉತ್ತರ ಕರ್ನಾಟಕದ ನೆಲ, ಅಲ್ಲಿನ ಕುಸ್ತಿ ಕಲೆ ಎಲ್ಲವೂ ಒಂದೊಕ್ಕೊಂದು ಬೆಸೆದುಕೊಳ್ಳುತ್ತಿದ್ದವು. ಸಿನಿಮಾ ನೋಡುವ ಪ್ರೇಕ್ಷಕ ಅಲ್ಲಿನ ಭೌಗೋಳಿಕ ಪರಿಸರಕ್ಕೆ ಕನೆಕ್ಟ್ ಆಗುತ್ತಿದ್ದ. ಆದರೆ ನಿರ್ದೇಶಕರು, ನಿರ್ಮಾಪಕರು ಇದನ್ನು ರಿಸ್ಕ್ ಎಂದುಕೊಂಡರೇನೋ? ಎಂದಿನ ಹಳೇ ಮೈಸೂರು ಭಾಗದ ಕನ್ನಡದಿಂದ ನಾಡಿನ ಎಲ್ಲಾ ಭಾಗದ ಪ್ರೇಕ್ಷಕರನ್ನು ತಲುಪುತ್ತೇವೆ ಎನ್ನುವ ಅಂದಾಜು ಅವರದಾಗಿರಬಹುದು.
ಉತ್ತಮ ನಾಯಕನ ಪಾತ್ರದ ನಿರೀಕ್ಷೆಯಲ್ಲಿದ್ದ ನಟ ಯಶಸ್ ಸೂರ್ಯ ಅವರಿಗೆ ನಿಜಕ್ಕೂ ಇದು ದೊಡ್ಡ ಪಾತ್ರ. ಹೆಚ್ಚಿನ ವಿದ್ಯಾಭ್ಯಾಸ ಸಿಗದ, ಅನಾಥನಾಗಿ ಬೆಳೆದ ಹುಡುಗನಾಗಿ, ಅಸಹಾಯಕ ಪ್ರೇಮಿಯಾಗಿ, ‘ಸೀಕ್ರೇಟ್ ಪೈಲ್ವಾನ್’ ಆಗಿ ಅವರು ತಮ್ಮ ಪಾತ್ರವನ್ನು ಸಲೀಸಾಗಿ ನಿಭಾಯಿಸಿದ್ದಾರೆ. ಸ್ನೇಹಿತನ ಸಿನಿಮಾ ಬೆಂಬಲಿಸುವ ಸಲುವಾಗಿ ನಟ ದರ್ಶನ್ ಚಿತ್ರದ ಒಂದು ಪಾತ್ರವಾಗಿ ತೆರೆ ಮೇಲೆ ಕಾಣಿಸುತ್ತಾರೆ. ಅವರ ಇಮೇಜಿಗೆ ಸರಿಹೊಂದುವಂತಹ ಡೈಲಾಗ್, ಹೊಡೆದಾಟದೊಂದಿಗೆ ಕ್ಲೈಮ್ಯಾಕ್ಸ್‌ಗೆ ಜೀವ ತುಂಬುತ್ತಾರೆ. ನಾಯಕನಟಿ ಸೋನಾಲ್ ಮಾಂತೆರೊ ಪಾತ್ರವನ್ನು ನಿರ್ದೇಶಕರು ಇನ್ನಷ್ಟು ಕನ್ವಿನ್ಸಿಂಗ್ ಆಗಿ ಕಟ್ಟಬಹುದಿತ್ತು. ಅನುಭವಿ ಕಲಾವಿದರಾಗಿ ರವಿಶಂಕರ್, ಧರ್ಮಣ್ಣ ತಮ್ಮ ಪಾತ್ರಪೋಷಣೆಯಿಂದ ಇಷ್ಟವಾಗುತ್ತಾರೆ. ಚಿತ್ರವನ್ನು ಎತ್ತಿಹಿಡಿಯಬೇಕಾಗಿದ್ದ ಕಲಾನಿರ್ದೇಶನ ಮತ್ತು ಸಂಗೀತ ವಿಭಾಗಗಳಲ್ಲಿ ಹೆಚ್ಚಿನ ಕೆಲಸ ಆಗಬೇಕಿತ್ತು. ‘ಗರಡಿ’ ಮಟ್ಟಿ ಇನ್ನಷ್ಟು ಹದವಾಗಿದ್ದಿದ್ದರೆ ಸಿನಿಮಾ ಮನಸ್ಸಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು.