ಸಾರಾ ಅಬೂಬಕ್ಕರ್‌ ಕಾದಂಬರಿ ಆಧರಿಸಿ ಆರ್ನಾ ಸಾದ್ಯಾ ನಿರ್ದೇಶಿಸಿರುವ ‘ಸಾರಾ ವಜ್ರ’ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಅನುಪ್ರಭಾಕರ್‌, ಸುಹಾನಾ ಸೈಯದ್‌, ರೆಹಮಾನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕಾದಂಬರಿ ಆಧರಿಸಿದ ಮತ್ತೊಂದು ಸಿನಿಮಾ ಸದ್ದಿಲ್ಲದೆ ತಯಾರಾಗಿ ಬಿಡುಗಡೆಯಾಗುತ್ತಿದೆ. ಸಾರಾ ಅಬೂಬಕ್ಕರ್‌ ಅವರ ಕೃತಿಯನ್ನು ಆಧರಿಸಿ ಆರ್ನಾ ಸಾದ್ಯಾ ಅವರು ನಿರ್ದೇಶಿಸಿರುವ ‘ಸಾರಾ ವಜ್ರ’ ಚಿತ್ರವಿದು. ಈ ಚಿತ್ರದ ಕತೆ 1989ರಿಂದ ಆರಂಭವಾಗಿ ಪ್ರಸ್ತುತ ಕಾಲಘಟ್ಟದವರೆಗೆ ಬಂದುನಿಲ್ಲುತ್ತದೆ. ತ್ರಿವಳಿ ತಲಾಖ್ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟ, ನೋವುಗಳ ಚಿತ್ರಣವಿದು. ನಾಯಕಿ ಅನು ಪ್ರಭಾಕರ್ ಬ್ಯಾರಿ ಸಮಾಜದ ಹೆಣ್ಣುಮಗಳಾಗಿ ನಟಿಸಿದ್ದಾರೆ. 20ನೇ ವಯಸ್ಸಿನಿಂದ 60 ವರ್ಷದ ಮಹಿಳೆಯಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಾರ ತೆರೆಕಾಣುತ್ತಿರುವ ಸಿನಿಮಾ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಚಿತ್ರದ ನಾಯಕಿ ಅನು ಪ್ರಭಾಕರ್‌ ಮಾತನಾಡಿ, “ನಫೀಜಾ ಎಂಬ ಮಹಿಳೆಯ ಕಥೆಯಿದು. ಈ ಥರದ ಸಿನಿಮಾಗಳನ್ನು ಅವಾರ್ಡ್, ಫಿಲಂ ಫೆಸ್ಟಿವಲ್‌ಗಳಿಗೆ ಮಾಡುತ್ತಾರೆ. ಆದರೆ ನಿರ್ಮಾಪಕರು ಕಮರ್ಷಿಯಲ್ ಆಗಿ ಥಿಯೇಟರ್‌ಗಳಲ್ಲೇ ರಿಲೀಸ್ ಮಾಡುತ್ತಿದ್ದಾರೆ. ಎಲ್ಲಾ ಹೆಣ್ಣುಮಕ್ಕಳಿಗೂ ನಾಟುವಂಥ ಯೂನಿವರ್ಸಲ್ ಸಿನಿಮಾ. ಈ ಚಿತ್ರದಿಂದ ಹತ್ತು ಹೆಣ್ಣುಮಕ್ಕಳಿಗಾದ್ರೂ ಧೈರ್ಯ ಬರಲಿ ಅನ್ನೋದೇ ನಮ್ಮ ಆಶಯ. ಸಿನಿಮಾ ನೋಡಿ ಹೊರಬಂದಮೇಲೆ ಒಂದು ನಗು ಇರುತ್ತದೆ. ಮಹಿಳೆ ಬರೆದ ಮಹಿಳಾ ಪ್ರದಾನ ಕಥೆ, ನಿರ್ದೇಶನವನ್ನೂ ಮಹಿಳೆಯೇ ಮಾಡಿರುವುದು ವಿಶೇಷ. ಪುನೀತ್ ಅವರು ನಮ್ಮ ಚಿತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದರು. ಕಾಸರಗೋಡು ಕೇರಳದಲ್ಲಿ ಬ್ಯಾರಿ ಸಮುದಾಯ ವಾಸವಿರುವ ಜಾಗದಲ್ಲೇ ಚಿತ್ರೀಕರಣ ಮಾಡಿದ್ದೇವೆ. ಅವರು ಕನ್ನಡ, ಬ್ಯಾರಿ ಮಿಕ್ಸ್ ಮಾಡಿ ಮಾತಾಡ್ತಾರೆ. ನಫೀಜಾಗೆ ಚಿಕ್ಕ ವಯಸಿನಲ್ಲೇ ಮದುವೆಯಾಗಿ 60 ವರ್ಷದವವಳಾಗುವವರೆಗೆ ಕತೆ ಸಾಗುತ್ತದೆ” ಎಂದು ಹೇಳಿದರು.

ಚಿತ್ರಕ್ಕೆ ಸಾಹಿತ್ಯ ರಚಿಸಿರುವ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು ಮಾತನಾಡಿ, “40 ವರ್ಷಗಳ ಹಿಂದಿನ ಕತೆ ಆದರೂ ಈಗಲೂ ಅನ್ವಯವಾಗುತ್ತದೆ. ಬೇರೆ ಸಮುದಾಯದ ಹೆಣ್ಣುಮಕ್ಕಳು ಏನು ತೊಂದರೆ ಅನುಭವಿಸುತ್ತಿದ್ದಾರೆಂದೂ ಈ ಚಿತ್ರದಲ್ಲಿ ಹೇಳಲಾಗಿದೆ. ಅನು ಪ್ರಭಾಕರ್, ಸುಹಾನಾ ಸಯ್ಯದ್, ರೆಹಮಾನ್ ನೈಜವಾಗಿ ಅಭಿನಯಿಸಿದ್ದಾರೆ” ಎಂದರು. ಗಾಯಕಿ ಸುಹಾನಾ ಇಲ್ಲಿ ನಾಯಕಿಯ ಸ್ನೇಹಿತೆಯಾಗಿ ನಟಿಸಿದ್ದಾರೆ. ರೆಹಮಾನ್ ಹಾಸನ್ ಗಂಡನಾಗಿ, ಸುಧಾ ಬೆಳವಾಡಿ, ರಮೇಶ್ `ಭಟ್ ತಂದೆ, ತಾಯಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕಥೆ – ಸಂಭಾಷಣೆಯನ್ನು ನರೇಂದ್ರಬಾಬು ರಚಿಸಿದ್ದಾರೆ. ಪರಮೇಶ್.ಸಿ.ಎಂ. ಛಾಯಾಗ್ರಹಣ, ಮದನ್-ಹರಿಣಿ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಸಂಭ್ರಮ ಡ್ರೀಮ್ ಹೌಸ್ ಮತ್ತು ಎಂ.ದೇವೇಂದ್ರ ರೆಡ್ಡಿ ಸಿನಿಮಾ ನಿರ್ಮಿಸಿದ್ದಾರೆ.

Previous articleಫ್ಯಾಟ್‌ ಸರ್ಜರಿ; ಕನ್ನಡ ಕಿರುತೆರೆ, ಸಿನಿಮಾ ನಟಿ ಚೇತನಾ ರಾಜ್‌ ಸಾವು
Next articleಕೋಮುವಾದದ ವಿಭಜನೆಯನ್ನು ವಿಡಂಬನಾತ್ಮಕವಾಗಿ ಅನಾವರಣಗೊಳಿಸುವ ‘ರಂಡು’

LEAVE A REPLY

Connect with



Please enter your comment!
Please enter your name here