ಅನೀಶ್‌ ತೇಜೇಶ್ವರ್‌ ಮತ್ತು ಶ್ರಾವ್ಯ ರಾವ್‌ ನಟನೆಯ ‘ಮಾಯಾನಗರಿ’ ಸಿನಿಮಾ ಇದೇ ಡಿಸೆಂಬರ್‌ 15ರಂದು ತೆರೆಕಾಣುತ್ತಿದೆ. ಶಂಕರ್‌ ಆರಾಧ್ಯ ನಿರ್ದೇಶನದ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಇತ್ತೀಚೆಗಷ್ಟೇ ಟ್ರೇಲರ್‌ ಮತ್ತು ಹಾಡುಗಳ ಮೂಲಕ ಸುದ್ದಿಯಾಗಿದ್ದ ‘ಮಾಯಾನಗರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಡಿಸೆಂಬರ್‌ 15ರಂದು ಸಿನಿಮಾ ತೆರೆಕಾಣುತ್ತಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಶಂಕರ್ ಆರಾಧ್ಯ ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ಅನೀಶ್ ತೇಜೇಶ್ವರ್ ಮತ್ತು ಶ್ರಾವ್ಯ ರಾವ್‌ ನಟಿಸಿದ್ದಾರೆ. ಈ ಕುರಿತು ಮಾತನಾಡಿರುವ ನಿರ್ದೇಶಕರು, ‘ಚಿತ್ರದಲ್ಲಿ ಅನೀಶ್ ಅವರನ್ನು ಬೇರೆ ಬೇರೆ ಶೇಡ್‌ಗಳಲ್ಲಿ ತೋರಿಸಿದ್ದೇನೆ. ಕಥೆಗೆ ಅನುಗುಣವಾಗಿ ಸಾಕಷ್ಟು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಅದ್ಧೂರಿಯಾಗಿದೆ. ಕ್ಲೈಮ್ಯಾಕ್ಸ್ ಸನ್ನಿವೇಶ ನಿಜಕ್ಕೂ ಸವಾಲಿನ ಕೆಲಸವಾಗಿತ್ತು’ ಎನ್ನುತ್ತಾರೆ.

ಜೋಗ್‌ ಫಾಲ್ಸ್‌ನಲ್ಲಿ ವಿಶೇಷವಾಗಿ ಚಿತ್ರೀಕರಣ ನಡೆಸಿರುವುದಾಗಿ ಹೇಳುತ್ತಾರವರು. ‘ಜೋಗ್ ಫಾಲ್ಸ್‌ನಲ್ಲಿ ಶೂಟಿಂಗ್ ನಡೆಸಲು ಸುಮಾರು ಎರಡು ವಾರಗಳ ಕಾಲ ತಯಾರಿ ನಡೆಸಿದ್ದೇವೆ. ಈವರೆಗೂ ಯಾರು ಆ ರೀತಿ ಜೋಗ್ ತೋರಿಸಿಲ್ಲ. ಅದನ್ನು ಸಿನಿಮಾ ನೋಡಿಯೇ ಫೀಲ್ ಮಾಡಬೇಕು. ಅದೇ ರೀತಿ ಶೃಂಗೇರಿ, ಚಿಕ್ಕಮಗಳೂರು, ಹೊನ್ನಾವರ, ಮಾಗಡಿ, ತುಮಕೂರು ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ’ ಎಂದಿದ್ದಾರೆ. Sandalwood Pictures ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಮಾಸ್ ಮಾದ, ವಿಕ್ರಮ್ ಮೋರ್ ಫೈಟ್ ಕಂಪೋಸ್ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಮದನ್ – ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಕುಮಾರ್ ಸಂಕಲನ, ಶ್ರೀನಿವಾಸ್ ಛಾಯಾಗ್ರಹಣ ಚಿತ್ರಕ್ಕಿದೆ. ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್, ಚಿಕ್ಕಣ್ಣ, ಭರತ್ ಸಾಗರ್, ಗಿರಿ ದಿನೇಶ್ ಚಿತ್ರದ ಇತರೆ ಕಲಾವಿದರು.

LEAVE A REPLY

Connect with

Please enter your comment!
Please enter your name here