ಕತೆಯ ಆಶಯವನ್ನು ಇನ್ನಷ್ಟು ಸ್ಪಷ್ಟ ಮತ್ತು ಗಟ್ಟಿಯಾಗಿ ಕಟ್ಟಿಕೊಳ್ಳಬೇಕಾಗಿತ್ತು. ಆ ಮಗುವಿನ, ತಂದೆಯ ನೋವನ್ನು ಈ ಸಿನಿಮಾ ಚಿತ್ರಿಸಿದ ರೀತಿ ನೋಡಿದರೆ ಖಂಡಿತಾ ಅತ್ಯಾಚಾರೀ ಆಲೋಚನೆಯುಳ್ಳ ಮನಸ್ಸು ಬದಲಾಗುತ್ತದೆ. ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ SonyLIV ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಅತ್ಯಾಚಾರದಂತ ಘಟನೆಗಳನ್ನು ಆಧರಿಸಿ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲಿ ಅನೇಕ ಸಿನಿಮಾಗಳು ಮಾಧ್ಯಮದ ಮೂಲಕ ಜನರಿಗೆ ಸಿಕ್ಕ ಸುದ್ದಿ ಮತ್ತು ಸತ್ಯಗಳು ಬೇರೆ ಬೇರೆ ಎಂಬುದರ ಎಳೆಯನ್ನೇ ಇಟ್ಟುಕೊಂಡಿವೆ. ಮತ್ತು ಅವುಗಳಲ್ಲಿ ಬಹುತೇಕ ಸತ್ಯಘಟನೆಯಾಧಾರಿತ ಸಿನಿಮಾಗಳೇ ಇವೆ. ‘ಗಾರ್ಗಿ’ ಕೂಡ ಅಂಥದ್ದೇ ಅತ್ಯಾಚಾರದ ಘಟನೆಯನ್ನು ಆಧರಿಸಿದ ಸಿನಿಮಾ. ಒಂಬತ್ತು ವರ್ಷದ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ನಾಲ್ಕು ಜನ ಅದಾಗಲೇ ಸಿಕ್ಕಿಬಿದ್ದಿದ್ದಾರೆ. ಐದನೆಯ ವ್ಯಕ್ತಿಯೇ ಗಾರ್ಗಿಯ ತಂದೆ! ತನ್ನ ತಂದೆ ಈ ತಪ್ಪು ಮಾಡಿಲ್ಲ ಎಂದು ಸಾಬೀತು ಪಡಿಸಲು ಗಾರ್ಗಿ ಯತ್ನಿಸುತ್ತಾಳೆ. ಗೆಲ್ಲುತ್ತಾಳೆ ಮತ್ತು ಸೋಲುತ್ತಾಳೆ.
ಸಿನಿಮಾದಲ್ಲಿ ಕಾಡುವ ಕೆಲವು ಮಾತುಗಳಿವೆ. ‘ನೀನು ಪೂಜೆ, ದೇವರು, ಹರಕೆ ಎಲ್ಲಾ ನಂಬು. ನನ್ನನ್ನು ಮಾತ್ರ ನಂಬಬೇಡ. ಯಾಕಂದ್ರೆ ನಾನು ಹೆಣ್ಣು. ಗಂಡುಮಗ ಆಗಿದ್ರೆ ನಂಬ್ತಿದ್ದೆ ಅಲ್ವಾ?’ ಅಂತ ಕೇಳುತ್ತಾಳೆ. ಇದೊಂದು ಸರಳ ಮಾತು, ಆದರೆ ಅಷ್ಟು ಸರಳವಲ್ಲ. ಪ್ರಕರಣದ ಜಡ್ಜ್ ಒಬ್ಬ ಟ್ರಾನ್ಸ್‌ಜೆಂಡರ್. ಪಬ್ಲಿಕ್ ಪ್ರಾಸಿಕ್ಯೂಟರ್ ಅದರ ಬಗ್ಗೆ ವ್ಯಂಗ್ಯವಾಡಿದಾಗ ‘ಮಿಸ್ಟರ್ ಪಿ ಪಿ, ನನಗೆ ಗಂಡಿನ ಅಹಂಕಾರದ ಪರಿಚಯವೂ ಇದೆ. ಹೆಣ್ಣಿನ ನೋವಿನ ಪರಿಚಯವೂ. ಹಾಗಾಗಿ ಈ ಕೇಸಿಗೆ ನಾನೇ ಸರಿಯಾದ ವ್ಯಕ್ತಿ’ ಅನ್ನುತ್ತಾರೆ. ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಆಗುತ್ತದೆ. ಇದು ಹಳೆಯ ಮಾದರಿಯೇ ಆದರೂ ಸಿನಿಮಾ ತನ್ನ ಬಿಗಿಯಾದ ಕಟ್ಟುವಿಕೆಯಲ್ಲಿ ಗಮನ ಸೆಳೆಯುತ್ತದೆ. ಆ ಮಗುವಿನ ತಂದೆಯ ಪಾತ್ರ ಸರವಣನ್, ‘ತಾಯಿಯನ್ನು ಕಳೆದುಕೊಂಡ ಮಗಳನ್ನು ಎದೆಯಲ್ಲಿಟ್ಟುಕೊಂಡು ಬೆಳೆಸಿದ್ದೇನೆ. ಈಗ ನನ್ನ ಮಗಳು ನನ್ನನ್ನು ತಂದೆಯಾಗಿ ಅಲ್ಲ, ಒಬ್ಬ ಗಂಡಸಾಗಿ ನೋಡುತ್ತಿದ್ದಾಳೆ’ ಅನ್ನುವ ದೃಶ್ಯದಲ್ಲಿ ಅತ್ಯಾಚಾರಕ್ಕೊಳಗಾದ ಮಕ್ಕಳ ತಂದೆ ತಾಯ್ಗಳ ತೀರದ ಯಾತನೆ ಜೀವ ಹಿಂಡುತ್ತದೆ. ಈ ಇಡೀ ಪಾತ್ರದ ನೋವು ಅತ್ಯಂತ ಅಸಹನೀಯ.
ಕಡೆಗೂ ಸಿನಿಮಾ ವೃದ್ಧರೊಬ್ಬರಿಗೆ ವಿನಾಕಾರಣ ಶಿಕ್ಷೆ ಕೊಡಿಸಿದ್ದೇಕೆ? ಗಾರ್ಗಿ ಎಂಬ ಹೆಸರಿಟ್ಟುಕೊಂಡಾಕೆ ತಾನೇ ವಾದ ಹೂಡುವಂತಿದ್ದರೆ ಚೆನ್ನಾಗಿತ್ತು. ಬದಲಾಗಿ ಕೇಸೇ ಸಿಗದ ಹೊಸ ಲಾಯರ್ ಮೊರೆ ಹೋಗುತ್ತಾಳೆ. ಆ ಲಾಯರ್ ಪಾತ್ರವೂ ಸೊಗಸಾಗಿದೆಯಾದರೂ ಗಾರ್ಗಿಯ ಪ್ರಯತ್ನದ ಪಾಲನ್ನು, ಪಾತ್ರದ ಸ್ಕೋಪ್ ಅನ್ನು ಆ ಪಾತ್ರ ಕಡಿಮೆ ಮಾಡುತ್ತದೆ. ಇಂತಹ ವಿಷಯಗಳನ್ನು ಇಟ್ಟುಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಕನ್ನಡದಲ್ಲಿ ತೀರಾ ಕಡಿಮೆ. ಕತೆಯ ಆಶಯವನ್ನು ಇನ್ನಷ್ಟು ಸ್ಪಷ್ಟ ಮತ್ತು ಗಟ್ಟಿಯಾಗಿ ಕಟ್ಟಿಕೊಳ್ಳಬೇಕಾಗಿತ್ತು. ಉಳಿದಂತೆ ಈ ಸಿನಿಮಾವನ್ನು ಎಲ್ಲ ವಯೋಮಾನದ ಗಂಡಸರೂ ನೋಡಬೇಕು. ಬಹುಶಃ ಆ ಮಗುವಿನ, ತಂದೆಯ ನೋವನ್ನು ಈ ಸಿನಿಮಾ ಚಿತ್ರಿಸಿದ ರೀತಿ ನೋಡಿದರೆ ಖಂಡಿತಾ ಅತ್ಯಾಚಾರೀ ಆಲೋಚನೆಯುಳ್ಳ ಮನಸ್ಸು ಬದಲಾಗುತ್ತದೆ.