ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಘಟಶ್ರಾದ್ಧ’ ಸಿನಿಮಾ ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಚಿತ್ರದ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರಿಗೆ ಚಿತ್ರೋತ್ಸವ ಸಮಿತಿ ಆಹ್ವಾನ ನೀಡಿದ್ದು, ಅವರನ್ನು ಗೌರವಿಸಲಾಗುತ್ತಿದೆ. ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಸಿನಿಮಾ ‘ಘಟಶ್ರಾದ್ಧ’ ಎನ್ನುವುದು ವಿಶೇಷ.

ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’, ಭಾರತದ ಹೊಸ ಅಲೆಯ ಸಿನಿಮಾಗಳಿಗೆ ಇಂಬು ನೀಡಿದ ಸಿನಿಮಾ. 1978ರಲ್ಲಿ ತೆರೆಕಂಡ ಸಿನಿಮಾಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಆ ವರ್ಷ ರಾಷ್ಟ್ರ್ರ ಪ್ರಶಸ್ತಿಗೆ ಮೇರು ಚಿತ್ರನಿರ್ದೇಶಕರಾದ ಸತ್ಯಜಿತ್ ರೇ, ಮೃಣಾಲ್ ಸೆನ್, ಶ್ಯಾಮ್ ಬೆನಗಲ್, ಅಡೂರು ಗೋಪಾಲಕೃಷ್ಣನ್, ಅರವಿಂದನ್, ಜಾನ್ ಅಬ್ರಹಾಂ, ಗಿರೀಶ್‌ ಕಾರ್ನಾಡ್ ಅವರ ಚಿತ್ರಗಳ ಸ್ಪರ್ಧೆಯಲ್ಲಿದ್ದವು. ಈ ಚಿತ್ರಗಳೊಂದಿಗೆ ಸ್ಪರ್ಧಿಸಿ ‘ಘಟಶ್ರಾದ್ಧ’ ಸ್ವರ್ಣ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇದು ಚಿತ್ರ ಗಿರೀಶ್ ಕಾಸರವಳ್ಳಿಯವರ ಪ್ರಥಮ ಚಿತ್ರವೂ ಹೌದು. ಆಗ ಅವರಿಗೆ 26 ವರ್ಷವಷ್ಟೆ. ಚಿತ್ರವ ವಸ್ತು, ದೃಶ್ಯ ಸಂಯೋಜನೆ, ಸಿನಿಮಾತ್ಮಕ ಶಕ್ತಿಯನ್ನು ನಿರ್ದೇಶಕರಾದ ರೇ, ಸೇನ್, ಅಡೂರ್ ಪ್ರಶಂಸಿದ್ದರು.

ಕೇಂದ್ರ ಸರ್ಕಾರದ ಸಂಸ್ಥೆಯಾದ ಚಲನಚಿತ್ರ ನಿರ್ದೇಶನಾಲಯ 2009ರಲ್ಲಿ ಸಿನಿಮಾದ ಶತಮಾನೋತ್ಸವದ ನೆನಪಿಗಾಗಿ ಒಂದು ಯೋಜನೆ ಹಮ್ಮಿಕೊಂಡಿತ್ತು. 100 ವರ್ಷಗಳ ಸಿನಿಮಾ ಇತಿಹಾಸದಲ್ಲಿ ತಯಾರಾದ 20 ಶ್ರೇಷ್ಠ ಭಾರತೀಯ ಚಿತ್ರಗಳನ್ನು ಆಯ್ಕೆ ಮಾಡಿತ್ತು. ಈ ಪಟ್ಟಿಯಲ್ಲಿ ‘‍ಘಟಶ್ರಾದ್ಧ’ವೂ ಒಂದು. ಚಿತ್ರ ನೋಡಿ ಮೆಚ್ಚಿದ್ದ ಹಾಲಿವುಡ್‌ನ ಖ್ಯಾತ ನಿರ್ದೇಶಕರಾದ ಮಾರ್ಟಿನ್ ಸ್ಕಾರ್ಸೆಸ್ಸಿ ಹಾಗೂ ಜಾರ್ಜ್ ಲ್ಯೂಕಾಸ್ ಈ ಚಿತ್ರದ ಪುನರ್ ರೂಪೀಕರಣಕ್ಕೆ ಮುಂದಾಗಿದ್ದರು. ‘ಸೆಲ್ಯೂಲಾಯ್ದ್ ಮ್ಯಾನ್’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರನಿರ್ದೇಶಕ ಶಿವೇಂದ್ರ ಸಿಂಗ್ ದುಂಗಾರ್‌ಪುರ್ ಅವರ ಸಿನಿಮಾ ಪೌಂಡೇಶನ್ ಈ ಇಡೀ ಪುನರ್ ನವೀಕರಣದ ರೂವಾರಿಯಾಗಿದ್ದರು.

ಇದೀಗ ಚಿತ್ರಕ್ಕೆ ಇನ್ನೊಂದು ವಿಶೇಷ ಗರಿ ಸೇರುತ್ತಿದೆ. ಪ್ರತಿಷ್ಠಿತ ವೆನಿಸ್ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ವಿಶ್ವ ಸಿನಿಮಾದ ಒಂದು ಕ್ಲಾಸಿಕ್ ಚಿತ್ರ ಎಂದು ಪರಿಗಣಿಸಿ ಪ್ರದರ್ಶಿಸಲಾಗುತ್ತಿದೆ. ಚಿತ್ರೋತ್ಸವದಲ್ಲಿ ಈ ಚಿತ್ರದ ಮೂರು ಪ್ರದರ್ಶನಗಳಿವೆ. ನಿರ್ದೇಶಕ ಗಿರೀಶ್ ಕಾಸರವಳ್ಳಿಯವರನ್ನು ಚಿತ್ರೋತ್ಸವ ಸಮಿತಿ ಆಹ್ವಾನಿಸುತ್ತಿದ್ದು, ಅವರನ್ನು ಗೌರವಿಸಲಾಗುತ್ತಿದೆ. ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ‘ಘಟಶ್ರಾದ್ಧ’ ಪಾತ್ರವಾಗುತ್ತಿದೆ. ಸಾಹಿತಿ ಡಾ ಯೂ ಆರ್‌ ಅನಂತಮೂರ್ತಿ ಅವರ ಸಣ್ಣಕತೆ ಆಧರಿಸಿದ ಈ ಚಿತ್ರದ ನಿರ್ಮಾಪಕರು ಸದಾನಂದ ಸುವರ್ಣ. ಎಸ್ ರಾಮಚಂದ್ರರ ಛಾಯಾಗ್ರಹಣ ಮಾಡಿದ್ದ ಚಿತ್ರಕ್ಕೆ ಬಿ ವಿ ಕಾರಂತ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here