ಕನ್ನಡ ಕಿರುತೆರೆಯ ಚಿರಪರಿಚಿತ ನಟಿ ಗಗನ ಕುಂಚಿ ಎರಡು ನೂತನ ಸಿನಿಮಾಗಳ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸುಗಮ ಫಿಲಂಸ್‌ ಬ್ಯಾನರ್‌ನಡಿ ತಯಾರಾಗುತ್ತಿರುವ ಎರಡು ಸಿನಿಮಾಗಳಿಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಗುರುಕುಮಾರ್‌ ಮತ್ತು ವಿಜಯ್‌ ಆರ್‌ ಈ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ.

‘ದೊಡ್ಮನೆ ಸೊಸೆ’, ‘ಗಟ್ಟಿಮೇಳ’, ‘ಮಹಾದೇವಿ’ ಸೀರಿಯಲ್‌ಗಳ ಮೂಲಕ ನಟಿ ಗಗನ ಕುಂಚಿ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಿತರಾಗಿದ್ದಾರೆ. ‘ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಫ್ಯಾಮಿಲಿ ವಾರ್‌’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಅವರು ‘ಸುಬ್ರಹ್ಮಣ್ಯಪುರಂ’ ತಮಿಳು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇದೀಗ ಗಗನ ಎರಡು ಕನ್ನಡ ಚಿತ್ರಗಳ ನಾಯಕಿಯಾಗಿ ನಟಿಸಲಿದ್ದಾರೆ. ಎರಡೂ ಚಿತ್ರಗಳು ಸುಗಮ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿವೆ. ಪ್ರೊಡಕ್ಷನ್ ನಂ ೧ ಚಿತ್ರವನ್ನು ಗುರುಕುಮಾರ್ ಪಿ ನಿರ್ದೇಶಿಸಲಿದ್ದಾರೆ. ತೆಲುಗಿನ ‘ವಾಲ್ಟೇರ್ ವೀರಯ್ಯ’, ‘ವೆಂಕಿಮಾಮ’ ಚಿತ್ರಗಳಿಗೆ ಸಹನಿರ್ದೇಶಕರಾಗಿ ಗುರುಕುಮಾರ್ ಕಾರ್ಯನಿರ್ವಹಿಸಿದ್ದಾರೆ. ಎರಡನೇ ಚಿತ್ರವನ್ನು ವಿಜಯ್ ಆರ್ ನಿರ್ದೇಶಿಸುತ್ತಿದ್ದಾರೆ. ‘ಕಥಾರ್ ಭಾಷಾ ಎಂದ್ರಾ ಮುತ್ತುರಾಮಲಿಂಗಂ’, ‘ಮಾವೀರನ್’, ‘ವಿರುಮನ್’, ‘ಆಕ್ಷನ್’, ‘ಜೈ ಭೀಮ್’ ಮುಂತಾದ ಚಿತ್ರಗಳಿಗೆ ಸಹನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಅನುಭವಿ ಅವರು. ಗುರುಕುಮಾರ್ ಹಾಗೂ ವಿಜಯ್ ಇಬ್ಬರಿಗೂ ಇವು ಸ್ವತಂತ್ರ್ಯ ನಿರ್ದೇಶನದ ಚೊಚ್ಚಲ ಚಿತ್ರಗಳು. ಎರಡೂ ಚಿತ್ರಗಳು ಎರಡು ಭಾಗಗಳಲ್ಲಿ ಬರುತ್ತಿರುವುದು ವಿಶೇಷ.

ಗಗನ ಕುಂಚಿ ಬಾಲನಟಿಯಾಗಿ ಪರಿಚಯವಾದವರು. 2009ರಲ್ಲಿ ಉದಯ ಟೀವಿಯಲ್ಲಿ ಪ್ರಸಾರವಾದ ‘ಕಾಲಚಕ್ರ’ ಧಾರಾವಾಹಿಯಲ್ಲಿ ನಟಿಸಿದ ಅವರು, ಅದರ ಮರುವರ್ಷವೇ ರಮೇಶ್‍ ಅರವಿಂದ್‍ ಅಭಿನಯದ ‘ಹೆಂಡ್ತೀರ್‌ ದರ್ಬಾರ್’ ಚಿತ್ರದಲ್ಲಿ ನಟಿಸಿದರು. ನಂತರ ಸುಮಾರು ಆರು ವರ್ಷಗಳ ಕಾಲ ಚಿಂಟು ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ ಗಗನ, 2017ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ದೊಡ್ಮನೆ ಸೊಸೆ’ ಧಾರಾವಾಹಿಯ ನಾಯಕಿಯಾದರು. ಆ ನಂತರ ತಮಿಳಿನ ‘ಸುಬ್ರಹ್ಮಣ್ಯಪುರಂ’, ಕನ್ನಡದ ‘ಮಹಾದೇವಿ’, ‘ಗಟ್ಟಿಮೇಳ’ ಧಾರಾವಾಹಿಗಳಲ್ಲಿ ನಾಯಕಿಯಾಗಿ ಜನಪ್ರಿಯತೆ ಗಳಿಸಿದರು. ಜೀ ಕನ್ನಡದಲ್ಲಿ ಪ್ರಸಾರವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್’ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ.

ಮಾಡಲಿಂಗ್‍ನಲ್ಲೂ ಅವರ ಹೆಜ್ಜೆ ಗುರುತು ಇದೆ. ‘ಮಿಸ್‍ ಕರ್ನಾಟಕ ಇಂಟರ್ ನ್ಯಾಷನಲ್‍’ ಸ್ಪರ್ಧೆಯ ಮೊದಲ ರನ್ನರ್ ಅಪ್‍ ಆಗಿದ್ದರು. ಕಾಲೇಜಿನಲ್ಲಿ ಓದುವಾಗ ‘ಬೆಂಗಳೂರು ಟೈಮ್ಸ್ ಫ್ರೆಶ್‍ ಫೇಸ್‍’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಹಿರಿತೆರೆ ಎಂಟ್ರಿಯ ಬಗ್ಗೆ ಮಾತನಾಡುವ ಗಗನ ಕುಂಚಿ, ‘ಈ ಹಿಂದೆಯೂ ಕೆಲವು ಅವಕಾಶಗಳು ಬಂದಿದ್ದವು. ಆದರೆ, ಕತೆ ಮತ್ತು ಪಾತ್ರ ಇಷ್ಟವಾಗದ ಕಾರಣ, ಯಾವೊಂದು ಚಿತ್ರವನ್ನೂ ಒಪ್ಪಿರಲಿಲ್ಲ. ಈಗ ಒಪ್ಪಿರುವ ಕಥೆಗಳಲ್ಲಿ ನನ್ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್‍ ಇದೆ. ಒಬ್ಬ ನಟಿಯಾಗಿ ಎಲ್ಲ ತರಹದ ಪಾತ್ರಗಳನ್ನು ಮಾಡಬೇಕೆಂಬುದು ನನ್ನ ಅಭಿಲಾಷೆ. ಈ ಚಿತ್ರಗಳಲ್ಲಿ ನನ್ನ ಪ್ರತಿಭೆ ತೋರಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಈ ಚಿತ್ರಗಳ ಮೂಲಕ ನಾಯಕಿಯಾಗಬೇಕೆಂಬ ಬಹಳ ವರ್ಷಗಳ ಕನಸು ನನಸಾಗಿದೆ’ ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here