ಭಾರತದ ಫುಟ್ಬಾಲ್ ಪಿತಾಮಹ ನಾಗೇಂದ್ರ ಪ್ರಸಾದ್ ಸರ್ವಾಧಿಕಾರಿಯ ವ್ಯಕ್ತಿ ಚಿತ್ರ ಕಟ್ಟಿಕೊಡುವ ರೋಚಕ ಸಿನಿಮಾ ‘ಗೋಲೊಂದಾಜ್’. ಬೆಂಗಾಲಿ OTT ಹೊಯ್ಚೊಯ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಇದು ಸಾಕ್ಷ್ಯಚಿತ್ರದಂತಲ್ಲದೆ ಸಿನಿಮೀಯ ಅಂಶಗಳನ್ನು ಸೂಕ್ತರೀತಿ ಬಳಸಿಕೊಂಡ ಸಿನಿಮಾ.
‘ನಾಗೇಂದ್ರ ಪ್ರಸಾದ್ ಸರ್ವಾಧಿಕಾರಿ’ ಎಂಬ ಹೆಸರು ಕನ್ನಡಿಗರಿಗೆ ಭಾರಿ ಪರಿಚಿತವೇನಲ್ಲ. ನಮ್ಮಲ್ಲಿ ಫುಟ್ಬಾಲ್ ಪ್ರಿಯರು ಕೇರಳ-ಪಶ್ಚಿಮ ಬಂಗಾಳದಲ್ಲಿ ಇದ್ದಷ್ಟು ಇಲ್ಲ. ಹಾಗಾಗಿ ಭಾರತದ ಫುಟ್ಬಾಲ್ ಪಿತಾಮಹನ ಹೆಸರು ಕೇಳಿರದಿರುವ ಸಾಧ್ಯತೆಯೇ ಹೆಚ್ಚು. ಹೀಗೆ ನಮಗೆ ತಿಳಿಯದವರ ಬಗೆಗಿನ ವ್ಯಕ್ತಿಚಿತ್ರದ ಸಿನಿಮಾಗಳು ಇಷ್ಟವಾಗಬೇಕಿದ್ದರೆ ಅದು ಉತ್ತಮ ಗುಣಮಟ್ಟದ ಸಿನಿಮಾವೇ ಅಗಿರಬೇಕು. ಬಂಗಾಳಿ ಭಾಷೆಯ ‘ಗೋಲೊಂದಾಜ್’ ಅಂಥದ್ದೊಂದು ಸಿನಿಮಾ.
‘ಲಗಾನ್’ನಂತೆಯೇ ಇದು ಬ್ರಿಟಿಷರ ವಿರುದ್ಧ ಗೆಲ್ಲಲೇಬೇಕಾದ ಆಟವಾಡುವ ಸಿನಿಮಾ. ‘ಲಗಾನ್’ ಕಾಲ್ಪನಿಕ, ಆದರೆ ‘ಗೋಲೊಂದಾಜ್’ ನೈಜಕತೆ. ಬ್ರಿಟಿಷರು ಭಾರತೀಯರ ಜತೆಗೆ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ರಾಜಕೀಯ ಮೇಲಾಟದಲ್ಲಿ ಆಡಳಿತ ನಡೆಸುತ್ತಿದ್ದ ಅವರಿಗೆ ಆಟಗಳ ಬಗ್ಗೆ ಭಾರಿ ಅಂಜಿಕೆಯಿತ್ತು. ಅಕಸ್ಮಾತ್ ಮೈದಾನದಲ್ಲಿ ಸೋತರೆ ಎಂಬ ಅಂಜಿಕೆಗಿಂತ ಗೆದ್ದ ಸ್ಥಳೀಯರಿಗೆ ಗೆಲುವು ಸ್ಫೂರ್ತಿಯಾದೀತೆಂಬ ಭಯ. ಆ ಗೆಲುವಿನ ಸ್ಪೂರ್ತಿ ಸ್ವಾತಂತ್ರ್ಯದ ಹೋರಾಟವಾಗಿ ಪರಿವರ್ತನೆಯಾದೀತು ಎಂಬ ಆತಂಕ. ಹಾಗಾಗಿ ಬ್ರಿಟಿಷರ ಜತೆಗೆ ಆಟವಾಡುವುದು ದೇಶವಾಸಿಗಳಿಗೆ ನಿಷಿದ್ಧ.
ಸ್ಥಿತಿವಂತ ಕುಟುಂಬದ ನಾಗೇಂದ್ರ ಪ್ರಸಾದ್ ಸರ್ವಾಧಿಕಾರಿಗೆ ಫುಟ್ಬಾಲ್ ಬಗ್ಗೆ ಬಾಲ್ಯದಿಂದಲೂ ಒಲವಿತ್ತು. ಪುಟ್ಟ ನಾಗೇಂದ್ರ ಮೊದಲ ಬಾರಿ ಫುಟ್ಬಾಲ್ ನೋಡಿ ಬೆರಗಾಗುವ ಆ ದೃಶ್ಯವನ್ನು ನಿರ್ದೇಶಕ ದುರ್ಬೋ ಬ್ಯಾನರ್ಜಿ ಅದೆಷ್ಟು ಚಂದ ಕಟ್ಟಿಕೊಟ್ಟಿದ್ದಾರೆ ಎಂದರೆ ನಾವು ಬಾಲ್ಯದಲ್ಲಿ ಕಂಡ ಎಲ್ಲಾ ಬೆರಗುಗಳೂ ಕಣ್ಮುಂದೆ ಬಂದು ಹೋಗುತ್ತವೆ. ನಿಧಾನಗತಿಯ ದೃಶ್ಯಗಳನ್ನು ಅತಿ ಮಧುರವಾಗಿ ಬಳಕೆ ಮಾಡಿರುವುದೂ ಅಲ್ಲದೆ ಯುಕ್ತ ಘಳಿಗೆಯಲ್ಲೇ ಧ್ವನಿ ಏರಿಸುತ್ತಾ ಬರುವ ಹಿನ್ನೆಲೆ ಸಂಗೀತ ಸ್ವತಃ ಒಂದು ಪಾತ್ರವಾಗಿ ಹೊರಹೊಮ್ಮಿದೆ.
ಆ ಕಾಲದಲ್ಲಿ ಭಾರತೀಯರಿಗೆ ಫುಟ್ಬಾಲ್ ಕ್ಲಬ್ ಹೊಂದುವ ಅವಕಾಶವಿರಲಿಲ್ಲ. ಹಾಗಾಗಿ ಯುವ ನಾಗೇಂದ್ರ ಪ್ರಸಾದ್ ರಾಜಾಶ್ರಯದೊಂದಿಗೆ ಕ್ಲಬ್ ತೆರೆಯಲು ಯೋಜನೆ ಹಾಕುತ್ತಾನೆ. ಅದಕ್ಕಾಗಿ ಬ್ರಿಟಿಷರ ಪರ ಜೀಹುಜೂರ್ ಎಂಬ ರಾಜನನ್ನೇ ಆಯ್ಕೆ ಮಾಡುವುದು ಬುದ್ಧಿವಂತಿಕೆಯ ನಡೆ. ಸ್ವತಃ ಪೈಲ್ವಾನನಾಗಿದ್ದ ನಾಗೇಂದ್ರ ಪ್ರಸಾದ್ ವ್ಯಕ್ತಿತ್ವ ಪರಿಚಯಿಸಲು ಬಹುಪಾಲು ಕುಸ್ತಿ ಅಖಾಡವನ್ನೇ ಬಳಸಿಕೊಂಡಿರುವುದು ಒಳ್ಳೆಯ ರೂಪಕ. ಇದು ಆತ ಬಲಾಢ್ಯ ಎಂಬ ಸಂದೇಶವನ್ನು ವಾಚ್ಯವಾಗಿ ಹೇಳದೆಯೇ ದಾಟಿಸುತ್ತದೆ.
ಅನುಕೂಲಸ್ಥ ಮೇಲ್ಜಾತಿಯ ಕುಟುಂಬದ ಹುಡುಗನಾಗಿ ಆ ಕಾಲದಲ್ಲಿ ಬ್ರಿಟಿಷರ ಆಡಳಿತದಲ್ಲೇ ಕೆಲಸಕ್ಕೆ ಹಂಬಲಿಸದಿದ್ದದ್ದು ನಾಗೇಂದ್ರ ಪ್ರಸಾದ್ ಸರ್ವಾಧಿಕಾರಿಯ ದೊಡ್ಡತನ. ಅವರ ವ್ಯಕ್ತಿತ್ವದಲ್ಲಿನ ದೊಡ್ಡತನದ ಜತೆಗೇ ದಿಟ್ಟತನವನ್ನೂ ಪರಿಚಯಿಸಲು ನಿರ್ದೇಶಕರು ಆಯ್ಕೆ ಮಾಡಿಕೊಂಡದ್ದು ಅವರು ಪುಟ್ಬಾಲ್ ತಂಡದ ಆಯ್ಕೆಗೆ ಹಾಕಿದ ಮಾನದಂಡವನ್ನು. ಇತಿಹಾಸ ತಿರುವಿ ನೋಡುವಾಗ ಅವರ ಕ್ಲಬ್‌ನಲ್ಲಿ ಜಾತಿಭೇದವಿಲ್ಲದೆ ಎಲ್ಲರಿಗೂ ಅವಕಾಶವಿತ್ತು. ಅದನ್ನು ಸಿನಿಮಾದಲ್ಲಿ ತಂದ ರೀತಿ ಅತ್ಯುತ್ತಮ. ಫುಟ್ಬಾಲ್ ಆಸಕ್ತಿ ಹಾಗೂ ಆಡುವ ಶಕ್ತಿಯೊಂದೇ ಅವರಿಗೆ ಮಾನದಂಡವಾಗಿತ್ತು ಎಂಬುದನ್ನು ಮನದಟ್ಟು ಮಾಡಲು ನಿರ್ದೇಶಕರು ವಿವಿಧ ಪಾತ್ರಗಳನ್ನು ಪರಿಕರವಾಗಿಯೂ ಬಳಕೆ ಮಾಡಿದ್ದಾರೆ.
ಫುಟ್ಬಾಲ್ ಮೈದಾನದಲ್ಲಿ ಯಾರು ಯಾರು ಎಲ್ಲೆಲ್ಲಿರಬೇಕು ಎಂಬ ಯೋಜನೆ ಸಿದ್ಧಪಡಿಸುವುದನ್ನೂ ಯುವ ನಾಗೇಂದ್ರ ಗರಡಿಮನೆಯ ಉಸುಗಿನಲ್ಲೇ ಹಾಕುವಂತೆ ಚಿತ್ರಿಸಿರುವುದು ಪರಿಣಾಮಕಾರಿ ಚಿತ್ರಣ. ಆಟಗಾರನ ಹಿನ್ನೆಲೆ ಪರಿಚಯ ಮಾಡಿಸಿ ಮೈದಾನದಲ್ಲಿ ಆತನಿಗೆ ನೀಡುವ ಜವಾಬ್ದಾರಿಯನ್ನು ನಾಗೇಂದ್ರ ಪ್ರಸಾದ್ ಗರಡಿಮನೆಯ ಮರಳಿನಲ್ಲಿ ಬಿಡಿಸಿದ ಮೈದಾನದಲ್ಲಿ ಯೋಜನೆ ಹಾಕುವ ದೃಶ್ಯವನ್ನು ಚಿತ್ರದುದ್ದಕ್ಕೂ ಬಳಸಿರುವುದು ಪರಿಣಾಮಕಾರಿ ನಿರೂಪಣಾ ತಂತ್ರ.
ಕ್ಲಬ್ ಸ್ಥಾಪನೆಯ ನಂತರ ಗೌರವಾಧ್ಯಕ್ಷ ಎಂಬ ಅಮಲೇರಿದ ಅರಸ ಕೆಳಜಾತಿಯವರು ತನ್ನ ಕ್ಲಬ್‌ನಲ್ಲಿ ಆಡುವಂತಿಲ್ಲ ಎಂದು ಹುಕುಂ ಹೊರಡಿಸಿದಾಗ ಭಾರತೀಯರ ಪರ ಒಲವಿರುವ ರಾಜನ ಬಳಿ ಹೋಗುವುದು, ಅನುಕೂಲಸ್ಥ ಕುಟುಂಬಗಳಿಂದ ದೇಣಿಗೆ ಪಡೆಯುವ ಯೋಜನೆ ಹಾಕುವಲ್ಲೆಲ್ಲ ನಾಗೇಂದ್ರ ಪ್ರಸಾದ್ ವ್ಯಕ್ತಿತ್ವ ಇನ್ನಷ್ಟು ತೆರೆದುಕೊಳ್ಳುತ್ತಾ ಸಾಗುತ್ತದೆ.
ಸಿನಿಮಾ ಪೂರ್ತಿ 19ನೆಯ ಶತಮಾನದ ಭಾವ ನೀಡುವಾಗ ಕಲಾ ನಿರ್ದೇಶನ ಪಾತ್ರ ಮುಖ್ಯವಾಗಿ ಎದ್ದು ಕಾಣುತ್ತದೆ. ಕಲಾ ನಿರ್ದೇಶಕನಿಗೆ ಬಣ್ಣಗಳ ಬಳಕೆಯ ಜ್ಞಾನ ಮಾತ್ರವಲ್ಲದೆ ಜನಬಳಕೆಯಲ್ಲಿದ್ದ ಪರಿಕರಗಳ ಬಗೆಗೆ ಅಧ್ಯಯನವೂ ಇರುವುದಕ್ಕೆ ದೃಶ್ಯಗಳು ಸಾಕ್ಷಿ ಹೇಳುತ್ತವೆ. ಅಷ್ಟೇ ಪ್ರಮುಖವಾಗಿ ಕಾಡುವುದು ಛಾಯಾಗ್ರಾಹಕ ಸೌಮೀಕ ಹಲ್ದಾರ್. ಐತಿಹಾಸಿಕ ಚಿತ್ರಗಳಲ್ಲಿ ವೈಡ್ ಶಾಟ್ ಇಡುವ ಛಾಯಾಗ್ರಾಹಕನಿಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಈತ ನದಿ ದಂಡೆಯ ದೃಶ್ಯಗಳಲ್ಲಿ ಮೀಟರುಗಟ್ಟಲೆ ಹಿನ್ನೆಲೆ ಕಾಣುವಂತೆ, ಇಬ್ಬರೂ ನಡೆದು ಬರುವಾಗ ಹಿಂದಿನ ಅಷ್ಟೂ ಉದ್ದದ ದಾರಿ ಕಾಣುವಂತೆ ಚಿತ್ರಿಸಿರುವ ಕಾರಣ ಇದು ಬ್ರಿಟಿಷ್ ಆಡಳಿತದ ಕಾಲಘಟ್ಟದಲ್ಲೇ ಚಿತ್ರೀಕರಿಸಿಟ್ಟ ಸಿನಿಮಾ ಎಂಬ ಭ್ರಮೆಗೆ ನಮ್ಮನ್ನು ದೂಡುತ್ತದೆ.
ಎರಡೂವರೆ ಗಂಟೆ ಸಿನಿಮಾದಲ್ಲಿ ಮೊದಲ ಒಂದೂವರೆ ಗಂಟೆಯಲ್ಲೇ ಬಹುತೇಕ ಕಥಾಭಾಗ ಮುಗಿಯುತ್ತದೆ. ಆದರೆ ಕುತೂಹಲ ಶುರುವಾಗುವುದೇ ಕತೆ ಮುಗಿದ ಮೇಲೆ. ಕೊನೆಯ ಒಂದು ಗಂಟೆಯ ಕಾಲ ಭಾರತೀಯರು – ಬ್ರಿಟಿಷರ ನಡುವೆ ನಡೆಯುವ ಫುಟ್ಬಾಲ್ ಆಟದ ಒಂದಂಶ ಸ್ಪೋರ್ಟ್ ಚಾನಲ್‌ನಲ್ಲಿ ಕಾಣುವ ಆಟದಂತೆಯೇ ಇದ್ದರೆ ಮತ್ತೊಂದು ಅಂಶ ಬ್ರಿಟಿಷರ ಹಠಮಾರಿತನ, ಗೆಲ್ಲಲು ಆಯ್ಕೆ ಮಾಡುವ ವಾಮಮಾರ್ಗ, ಅವೆಲ್ಲವನ್ನೂ ಎದುರಿಸುವ ನಾಗೇಂದ್ರ ಪ್ರಸಾದ್ ಹಾಗೂ ಗೆಲುವಿಗಾಗಿ ಹಪಾಹಪಿಸುವ ಭಾರತೀಯ ಆಟಗಾರರ ಭಾವನೆಗಳಿಗೆ ಮೀಸಲು. ನಾಗೇಂದ್ರ ಪ್ರಸಾದ್ ಸರ್ವಾಧಿಕಾರಿ ಪಾತ್ರವನ್ನು ಬಂಗಾಳಿ ರಾಜಕೀಯದಲ್ಲೂ ಸಕ್ರಿಯವಾಗಿರುವ ನಟ ದೇವ್ ಲೋಪಗಳಿಲ್ಲದೆ ಸರಿದೂಗಿದ್ದಾರೆ.
ಐದು ಕೋಟಿ ರೂಪಾಯಿ ಖರ್ಚು ಹಾಕಿ ನಿರ್ಮಿಸಿದ ‘ಗೋಲೊಂದಾಜ್’ ಗಲ್ಲಾಪೆಟ್ಟಿಗೆಯಲ್ಲಿ ಹತ್ತು ಕೋಟಿಗೂ ಅಧಿಕ ಗಳಿಸಿದೆ. ಪ್ರಸ್ತುತ ಬಂಗಾಳಿ ಕಂಟೆಂಟ್‌ಗೇ ಮೀಸಲಾದ ಹೊಯ್ಚೊಯ್ ಒಟಿಟಿಯಲ್ಲಿ ಸ್ಟ್ರೀಂ ಆಗುತ್ತಿದೆ. ಹೊಯ್ಚೊಯ್ ಕಂಟೆಂಟನ್ನು ಪ್ರೈಮ್ ವಿಡಿಯೋ ಚಂದಾದಾರರು ಹೆಚ್ಚುವರಿ ಸಬ್‌ಸ್ಕ್ರಿಪ್ಷನ್ ನೀಡಿ ನೋಡಬಹುದು.