ಗುರುರಾಜ್ ಕುಲಕರ್ಣಿ ನಿರ್ದೇಶನದಲ್ಲಿ ಸೆಟ್ಟೇರಿರುವ ಚಿತ್ರದಲ್ಲಿ ಬಾಲಾಜಿ ಶರ್ಮಾ, ಸಾಗರ್ ಮತ್ತು ಚೈತ್ರಾ ಕೋಟೂರ್ ಪೊಲೀಸ್ ಅಧಿಕಾರಿಗಳಾಗಿ ನಟಿಸುತ್ತಿದ್ದಾರೆ. ಶಾಲಾ ಬಾಲಕಿಯೊಬ್ಬಳ ಕೊಲೆಯ ಸುತ್ತ ನಡೆಯುವ ಕತೆ.
‘ಚಾರ್ಜ್ ಶೀಟ್’ ಎಂದರೆ ಪೋಲೀಸ್ ಭಾಷೆಯಲ್ಲಿ ತನಿಖಾ ವರದಿ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ಯುವ ಪ್ರತಿಭೆಗಳ ತಂಡವೊಂದು ‘ಚಾರ್ಜ್ ಶೀಟ್’ ಶೀರ್ಷಿಕೆಯಡಿ ಸಿನಿಮಾ ಆರಂಭಿಸಿದೆ. ಚಿತ್ರದ ಮೊದಲ ದೃಶ್ಯಕ್ಕೆ ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಕ್ಲ್ಯಾಪ್ ಮಾಡಿದರೆ, ಥ್ರಿಲ್ಲರ್ ಮಂಜು ಕ್ಯಾಮೆರಾ ಚಾಲನೆ ಮಾಡಿದರು. ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಬಾಲಾಜಿಶರ್ಮ, ಸಾಗರ್ ಹಾಗೂ ಬಿಗ್‌ಬಾಸ್ ಖ್ಯಾತಿಯ ನಟಿ ಚೈತ್ರಾ ಕೋಟೂರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಚಿತ್ರವನ್ನು ಗುರುರಾಜ್ ಕುಲಕರ್ಣಿ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕ ಡಾ.ಸುನಿಲ್ ಕುಂಬಾರ್ ಅವರೇ ಚಿತ್ರಕ್ಕೆ ಕತೆ ರಚಿಸಿದ್ದು, ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
“ಚಿತ್ರದ ಕಥೆ, ಟೈಟಲ್ ನಿರ್ಮಾಪಕರದು. ನಾನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ. ಶಾಲೆಯ ಹುಡುಗಿಯೊಬ್ಬಳ ಕೊಲೆಯಾಗಿರುತ್ತದೆ. ಆ ಕೊಲೆಯ ತನಿಖೆಯ ಸುತ್ತ ನಡೆಯುವ ಕಥೆಯೇ ‘ಚಾರ್ಜ್ ಶೀಟ್’. ಬಹಳ ದಿನಗಳಿಂದ ನನಗೆ ನಾಗೇಂದ್ರ ಅರಸ್ ಅವರ ಜೊತೆ ಕೆಲಸ ಮಾಡಬೇಕೆಂದು ಆಸೆಯಿತ್ತು. ಈ ಚಿತ್ರದಲ್ಲಿ ಅವರು ಕ್ರೈಂ ಕಥೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಟಿ ಸಂಜನಾ ನಾಯ್ಡು ಅವರು ಸ್ಪೆಷಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಬಹಳಷ್ಟು ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ” ಎಂದ ಚಿತ್ರದ ಬಗ್ಗೆ ನಿರ್ದೇಶಕ ಗುರುರಾಜ್ ಕುಲಕರ್ಣಿ ಮಾಹಿತಿ ನೀಡಿದರು.
ನಿರ್ಮಾಪಕ ಸುನಿಲ್ ಕುಂಬಾರ್ ಮಾತನಾಡಿ, “ಲಾಕ್‌ಡೌನ್ ಸಂದರ್ಭದಲ್ಲಿ ಹುಟ್ಟಿದ ಕಥೆಯಿದು. ಲಾಕ್‌ಡೌನ್ ಸೈಡ್ ಎಫೆಕ್ಟ್ ಎಂದೂ ಹೇಳಬಹುದು. ವಿಶೇಷ ನಿರೂಪಣೆಯಿರುವ ಸಿನಿಮಾ. ಪಶ್ಚಿಮ ಬಂಗಾಳ ಮೂಲದ ಉಮಾ ಚಕ್ರವರ್ತಿ ಹಾಗೂ ಚೆನ್ನೈನ ಎಸ್.ಆರ್.ರಾಜನ್ ಚಿತ್ರನಿರ್ಮಾಣದಲ್ಲಿ ಸುನಿಲ್ ಕುಂಬಾರ್ ಅವರಿಗೆ ಜೊತೆಯಾಗಿದ್ದಾರೆ. ‘ಕನ್ನಡ ಭಾಷೆ ಬರದಿದ್ದರೂ ಅಭಿಮಾನದಿಂದ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ’. ಆದರೆ ಇದು ಸಂಪೂರ್ಣ ಕನ್ನಡದ ಕಲಾವಿದರೇ ಸೇರಿ ಮಾಡುತ್ತಿರುವ ಚಿತ್ರ” ಎಂದರು.
ನಾಯಕಿ ಚೈತ್ರಾ ಕೋಟೂರ್ ಅವರಿಗೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ. “ಮೊದಲ ಬಾರಿಗೆ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರ ಮಾಡುತ್ತಿದ್ದೇನೆ. ಒಂದು ತನಿಖಾ ವರದಿಯನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ಎಳೆಎಳೆಯಾಗಿ ಈ ಚಿತ್ರದಲ್ಲಿ ಬಿಚ್ಚಿಡುತ್ತಿದ್ದೇವೆ” ಎಂದರವರು. ಮೂಲತಃ ಫೋಟೊಗ್ರಾಫರ್ ಅದ ಬಾಲಾಜಿ ಶರ್ಮಾ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್ ಆಫೀಸರ್. ಥ್ರಿಲ್ಲರ್ ಮಂಜು ಸಾಹಸ, ರಂಗಸ್ವಾಮಿ ಛಾಯಾಗ್ರಹಣ, ಎಂ.ತಿರ್ಥೋ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಬಾಲ್ ರಾಜವಾಡಿ, ಮಹೇಶ್, ಶೈಲೇಶ್, ಸುನಂದಾ,
ಗಿರೀಶ್ ಜತ್ತಿ, ಗುರುರಾಜ್ ಹೊಸಕೋಟೆ ಚಿತ್ರದ ಇತರೆ ಕಲಾವಿದರು.