ಅವಳಿ ಸಹೋದರರು ಹೀರೋಗಳಾಗಿ ನಟಿಸಿರುವ ಕತೆ ‘ಬೈ ಒನ್ ಗೆಟ್ ಒನ್‌ ಫ್ರೀ’. ಬಹುಭಾಷಾ ನಟ ಕಿಶೋರ್ ಇಲ್ಲಿ ಮನ್ಮಥ ಹೆಸರಿನ ಪೋಸ್ಟ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಹರೀಶ್ ಅನಿಲ್‌ಗಾಡ್ ನಿರ್ದೇಶನದ ಸಿನಿಮಾ ಈ ಬಾರ ತೆರೆಗೆ ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ವಿಭಿನ್ನ ಶೈಲಿಯ ಚಿತ್ರಗಳು, ಬಗೆಬಗೆಯ ಶೀರ್ಷಿಕೆಯೊಂದಿಗೆ ನಿರ್ಮಾಣವಾಗುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ಬೈ ಒನ್ ಗೆಟ್‌ಒನ್ ಫ್ರೀ’. ಚಿತ್ರದ ಶೀರ್ಷಿಕೆ ಹೇಗೆ ಆಕರ್ಷೀಣೀಯವಾಗಿದೆಯೋ ಹಾಗೆ ಈ ಚಿತ್ರದ ಮತ್ತೊಂದು ಆಕರ್ಷಣೆ ಅಂದರೆ ಅವಳಿ ಸಹೋದರರು. ಮೂಲತಃ ಮೈಸೂರಿನವರಾದ ಮಧುರಾಜ್ ಹಾಗೂ ಮನುರಾಜ್ ಅವಳಿ ಸಹೋದರರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ನಟ ಕಿಶೋರ್ ಇಲ್ಲಿ ಮನ್ಮಥ ಹೆಸರಿನ ಪೋಸ್ಟ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಹರೀಶ್ ಅನಿಲ್‌ಗಾಡ್ ನಿರ್ದೇಶನದ ಈ ಚಿತ್ರದಲ್ಲಿ ಸಸ್ಪೆನ್ಸ್ – ಥ್ರಿಲ್ಲರ್ ಜೊತೆಗೆ ಹಾರರ್ ಶೇಡ್ ಕತೆಯಿದೆ.

ಈ ಕಥೆಯಲ್ಲಿ ಅವಳಿ ಹುಡುಗರ ನಡವಳಿಕೆಗಳು ಒಂದೇ ಆಗಿದ್ದರೂ ಒಬ್ಬ ಸ್ಲೋ ಮತ್ತೊಬ್ಬ ಫಾಸ್ಟ್.  ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಅಗಲಿದ ನಟ ಪುನೀತ್‌ರನ್ನು ನೆನೆದು ಭಾವುಕವಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್, “ಇವರು ಮಾಡಿಕೊಂಡಿದ್ದ ಕತೆಯೇ ತುಂಬಾ ಚೆನ್ನಾಗಿತ್ತು. ಅದರಲ್ಲಿ ಒಂದು ಪರಿಚಯದ ಮುಖ ಬೇಕಾಗಿತ್ತು, ಅದನ್ನು ನನ್ನ ಕೈಲಿ ಮಾಡಿಸಿದ್ದಾರೆ. ಮನ್ಮಥ ಎಂಬ ಪೋಸ್ಟ್‌’ಮ್ಯಾನ್ ಪಾತ್ರ. ಅವಳಿ ಜವಳಿ ಹುಡುಗರು ತಮ್ಮ ಹಿಂದಿನ ಕಥೆಯನ್ನು ಹುಡುಕುತ್ತಾ ಹೋದಾಗ ಅಲ್ಲೊದು ಪ್ರೀತಿ ಹುಟ್ಟಿಕೊಳ್ಳುತ್ತೆ. ಈಚೆಗೆ ಸಾವು ನೋವುಗಳ ಮಧ್ಯೆಯೂ ನಮ್ಮಲ್ಲಿ ದ್ವೇಷ ಹುಟ್ಟಿಕೊಳ್ಳುತ್ತಿದೆ. ಈ ಥರದ ದ್ವೇಷದ ವಾತಾವರಣದಲ್ಲಿ ಇದೊಂದು ಪ್ರೀತಿಯ ಕಥೆ. ಇಲ್ಲಿ ಪತ್ರಗಳನ್ನು ಸಾಗಿಸುವವನದ್ದೇ ಒಂದು ಪ್ರೇಮಕಥೆಯಿದೆ. ಒಂದು ಹೊಸತಂಡ, ಕಮರ್ಷಿಯಲ್ ಸಿನಿಮಾ ಮಾಡಿ ಬಿಡುಗಡೆ ಮಾಡುತ್ತಿದೆ” ಎಂದರು.

ನಂತರ ನಿರ್ಮಾಪಕ ಹಾಗೂ ನಾಯಕನಟ ಮಧು ಮಾತನಾಡುತ್ತ, “ಸಾಮಾನ್ಯವಾಗಿ ಟ್ವಿನ್ಸ್ ಕಥೆಗಳನ್ನು ಕಾಮಿಕ್ ಆಗಿ ತೋರಿಸುತ್ತಾರೆ, ನಾವು ಅವರು ರಿಯಲ್ಲಾಗಿ ಹೇಗಿರುತ್ತಾರೋ ಅದೇ ರೀತಿ ಪ್ರೆಸೆಂಟ್ ಮಾಡಿದ್ದೇವೆ. ಅವರ ಜೊತೆ ಒಂದು ಪಾತ್ರ ಬ್ಲೆಂಡ್ ಆಗಿ ಸಾಗುತ್ತದೆ. ನಾವು ಚಿಕ್ಕವರಿದ್ದಾಗಿಂದಲೂ ಆಕ್ಟ್  ಮಾಡುತ್ತಾ ಬಂದಿದ್ದೇವೆ. ಇದೊಂದು ಟ್ರಾವೆಲ್ ಕಥೆ, ಮನ್ಮಥನ ಪಾತ್ರದ ಮೇಲೆ ಕಥೆ ಸಾಗುತ್ತದೆ” ಎಂದು ಹೇಳಿದರು. ನಂತರ ನಟ ಮನು ಮಾತನಾಡಿ, “ಚಿತ್ರದಲ್ಲಿ ಕಿಶೋರ್ ಅವರ ಪಾತ್ರವೇ ಪ್ರಮುಖವಾಗಿದೆ. ಪ್ರಥಮಾರ್ಧದಲ್ಲಿ ಸಿಟಿಯಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದುಕೊಂಡು ನಂತರ ಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ, ಬೆಂಗಳೂರು ಹಾಗೂ ಮುರುಡೇಶ್ವರದಲ್ಲಿ  ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ. ಹುಡುಗಾಟದಲ್ಲಿ ಶುರುವಾಗುವ ಅವಳಿ ಜವಳಿಯ ಆಟಗಳು ದ್ವಿತಿಯಾರ್ಧದಲ್ಲಿ ಗಂಭೀರ ಸ್ವರೂಪ ಪಡೆಯುತ್ತಾ, ಒಂದು ಹುಡುಕಾಟದಲ್ಲಿ ಕೊನೆಯಾಗುತ್ತದೆ” ಎಂದರು. ಚಿತ್ರದ ನಾಯಕಿ ರೋಷನಿ ತೇಲ್ಕರ್, “ನನ್ನ ಪ್ರೊಫೆಷನ್ನೇ ಬೇರೆ, ಅನಿರೀಕ್ಷಿತವಾಗಿ ಈ ತಂಡದಲ್ಲಿ ಸೇರಿಕೊಂಡೆ. ಸೀರಿಯಲ್‌ಗಳಲ್ಲಿ ನೆಗೆಟಿವ್ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ನನಗೆ ಈ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿತು” ಎಂದರು. ಚಿತ್ರದ ಮತ್ತೊಬ್ಬನಾಯಕನಟಿಯಾಗಿ ರಿಶಿತಾ ಮಲ್ನಾಡ್ ಇದ್ದಾರೆ. ದಿನೇಶ್‌ಕುಮಾರ್ ಮತ್ತು ಅನಿಲ್ ಸಿಜೆ ಸಂಗೀತ ಸಂಯೋಜನೆ, ಅಭಿಷೇಕ್ ಮೃತ್ಯುಂಜಯ ಪಾಂಡೆ ಮತ್ತು ವಿಶ್ವಜಿತ್‌ರಾವ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ಚಿತ್ರಕ್ಕಿದೆ. ಉಷಾ ಭಂಡಾರಿ, ಬಾಲ ರಾಜವಾಡಿ, ಗೌರೀಶ್‌ ಅಕ್ಕಿ, ಪ್ರಶಾಂತ್‌ರಾಯ್ ಮತ್ತಿತರರು ನಟಿಸಿದ್ದಾರೆ. ಈ ವಾರ ಸಿನಿಮಾ ಬಿಡುಗಡೆಯಾಗುತ್ತಿದೆ.

ಚಿತ್ರತಂಡ

LEAVE A REPLY

Connect with

Please enter your comment!
Please enter your name here