ಹಿಂದಿ ಚಿತ್ರರಂಗ ಕಂಡ ಪ್ರಮುಖ ಹಾಸ್ಯನಟರಲ್ಲೊಬ್ಬರಾದ ಜ್ಯೂನಿಯರ್ ಮೆಹಮೂದ್ ಇಂದು ಅಗಲಿದ್ದಾರೆ. ಹಿಂದಿ ಸಿನಿಮಾದ ಪ್ರಮುಖ ನಾಯಕನಟರೊಂದಿಗೆ ಅಭಿನಯಿಸಿರುವ ಅವರು ಹಲವು ಮರಾಠಿ ಸಿನಿಮಾಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.
‘ಜ್ಯೂನಿಯರ್ ಮೆಹಮೂದ್’ ಎಂದೇ ಪ್ರಸಿದ್ಧರಾಗಿದ್ದ ಹಿಂದಿ ಚಿತ್ರರಂಗದ ಖ್ಯಾತ ನಟ ನಯೀಮ್ ಸಯ್ಯದ್ (67) ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮುಂಬೈನ ಖಾರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು (ಡಿ.8) ಅಗಲಿದ್ದಾರೆ. ಜ್ಯೂನಿಯರ್ ಮೆಹಮೂದ್ ‘ಮೊಹಬ್ಬತ್ ಜಿಂದಗಿ ಹೈ’ (1966) ಚಿತ್ರದ ಮೂಲಕ ಬಾಲ ಕಲಾವಿದರಾಗಿ ತಮ್ಮ ಚಲನಚಿತ್ರ ವೃತ್ತಿಜೀವನ ಪ್ರಾರಂಭಿಸಿದ್ದರು. ‘ನೌನಿಹಾಲ್’, ‘ಕಾರವಾನ್’, ‘ಹಾಥಿ ಮೇರೆ ಸಾಥಿ’, ‘ಮೇರಾ ನಾಮ್ ಜೋಕರ್’, ‘ಸುಹಾಗ್ ರಾತ್’, ‘ಬ್ರಹ್ಮಚಾರಿ’, ‘ಕಟಿ ಪತಂಗ್’, ‘ಹರೇ ರಾಮ ಹರೇ ಕೃಷ್ಣ’, ‘ಗೀತ್ ಗಾತಾ ಚಲ್’, ‘ಇಮಾಂದಾರ್’, ‘ಬಾಪ್ ನಂಬರಿ ಬೇಟಾ ದಸ್ ನಂಬ್ರಿ’, ‘ಆಜ್ ಕಾ ಅರ್ಜುನ್’, ‘ಗುರುದೇವ್’ ಅವರು ನಟಿಸಿರುವ ಕೆಲವು ಮಹತ್ವದ ಸಿನಿಮಾಗಳು.
‘ಛೋಟೆ ಸರ್ಕಾರ್ ಮತ್ತು ಜುದಾಯಿ’, ‘ಪ್ಯಾರ್ ಕಾ ದರ್ದ್ ಹೈ ಮೀಠಾ ಮೀಥಾ ಪ್ಯಾರಾ ಪ್ಯಾರಾ’ ಮತ್ತು ‘ಏಕ್ ರಿಶ್ತಾ ಸಾಜೆದಾರಿ ಕಾ’ ಮುಂತಾದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಹಲವಾರು ಮರಾಠಿ ಚಲನಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ನಟನ ಅಂತ್ಯಕ್ರಿಯೆ ಇಂದು ಸಾಂತಾಕ್ರೂಜ್ ಖಬ್ರಸ್ತಾನ್‌ನಲ್ಲಿ ನಡೆಯಲಿದೆ. ಇವರ ಅಗಲಿಕೆಗೆ ಅವರ ಆಪ್ತರು, ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಜೂನಿಯರ್ ಮೆಹಮೂದ್ ಅವರು ಪತ್ನಿ ಲತಾ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.