ಮಾಧವನ್ ಅಭಿನಯದ ನೆಟ್‌ಫ್ಲಿಕ್ಸ್‌ ಸರಣಿ ‘ಡಿ-ಕಪಲ್ಡ್ ನಗರ ಪ್ರದೇಶದ ಗಂಡ ಹೆಂಡಿರ ಸಂಬಂಧದ ಬಿರುಕಿನ ಕತೆ. ಇದು ಚೆನ್ನಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ ಒಂದಷ್ಟು ಮಂದಿ ಕುಟುಕಿದ್ದಾರೆ. ಹಾಗಾದರೆ ಕುಟುಕುವಂಥದ್ದೇನಿದೆ ಮತ್ತು ಗುಟುಕಿಸುವಂಥದ್ದೇನಿದೆ?

ಈ ಮೊದಲು sit-com ಎಂಬ ವರ್ಗದ ಹಾಸ್ಯ ಧಾರಾವಾಹಿಗಳಿದ್ದವು. ಎಲ್ಲಾ ಪಾತ್ರಗಳೂ ಬಂದು ಒಂದು ಕಡೆ ಕೂತು ಮಾತನಾಡುವುದು, ಆ ಮಾತುಗಳಿಂದ ನೋಡುಗರನ್ನು ನಗಿಸುವುದು. ಇಂಗ್ಲೀಷಲ್ಲಿ ‘ಫ್ರೆಂಡ್ಸ್’, ‘ಬಿಗ್ ಬ್ಯಾಂಗ್ ಥಿಯರಿ’ಯಂಥವು ಯಶಸ್ವಿ ಸಿಟ್‌ ಕಾಮ್ ಮಾದರಿಗಳಾಗಿದ್ದರೆ ನಮ್ಮಲ್ಲಿ ‘ಪಾಪ ಪಾಂಡು’, ‘ಸಿಲ್ಲಿ-ಲಲ್ಲಿ’ ಅದೇ ಜಾನರ್‌ನವು. ಹೆಚ್ಚೂಕಡಿಮೆ ಅದೇ ಜಾತಿಯ ಎಳೆ ಹಿಡಿದು, ಆದರೆ ಒಂದೇ‌ ಕಡೆ ಕತೆ ನಡೆಯುವ ಬದಲು ವಿವಿಧ ಸನ್ನಿವೇಶ ಸೃಷ್ಟಿಸಿ ಆ ಪ್ರತಿ ಸನ್ನಿವೇಶದಲ್ಲೂ ಕಾಮಿಡಿ ಲೇಪನ ಮಾಡುವ ಪ್ರಯತ್ನ ನೆಟ್‌ಫ್ಲಿಕ್ಸ್‌ನ ಹೊಸ ಸರಣಿ ‘ಡಿ-ಕಪಲ್ಡ್’.

ವಿಷಯ ಮುಂದುವರಿಸುವ ಮುನ್ನ ಸರಣಿಯ ಒಂದು ಸನ್ನಿವೇಶದ ಬಗ್ಗೆ ಹೇಳಿಬಿಡುವುದು ಸೂಕ್ತ. ಕಾಲನಿಯ ಹೆಂಗಸರೆಲ್ಲ ರೌಂಡ್ ಟೇಬಲ್‌ ಹರಟೆಯಲ್ಲಿದ್ದಾರೆ‌. ಸಿಟ್ಟಿನಿಂದ ಅಲ್ಲಿಗೆ ನಡೆದು ಬರುವ ಶ್ರುತಿ (ಸುರ್ವೀನ್ ಚಾವ್ಲಾ) ಪಕ್ಕದ ಮನೆಯ ಭೂಮಿಕಾ ಬಳಿ “ನಿಮ್ಮ ಮನೆಯಲ್ಲಿ ನಿನ್ನ ಮಗಳ ಜತೆ ಕೂತು ನನ್ನ ಮಗಳು ಮೀನ್ ಗರ್ಲ್ಸ್ ಸಿನಿಮಾ ನೋಡಿದ್ದಾಳೆ, ಅದಕ್ಯಾಕೆ ನೋಡಲು ಬಿಟ್ಟೆ?” ಎಂದು ಪ್ರಶ್ನಿಸುತ್ತಾಳೆ. “ಹಾಂ.. ಏನಿದೆ ಅದ್ರಲ್ಲಿ, ಅದೇನು ಬೆತ್ತಲೆ ದೇಹ ತೋರಿಸುವ ಸಿನಿಮಾವಲ್ಲವಲ್ಲ” ಎನ್ನುತ್ತಾಳೆ ಭೂಮಿಕಾ. “ಹೌದು. ಆದರೆ 12 ವರ್ಷ ಪ್ರಾಯದ ಮಕ್ಕಳು ನೋಡಬಹುದಾದ ಸಿನಿಮಾ ಅದಲ್ಲ” ಎಂದು ಗದರುತ್ತಾಳೆ ಶ್ರುತಿ.

ಈ ಸರಣಿಯೂ ಹಾಗೆಯೇ. ಬೆತ್ತಲೆ ಮೈಯನ್ನೇನೂ ತೋರಿಸುವುದಿಲ್ಲ. ಆದರೆ ಮಕ್ಕಳು ನೋಡುವುದಕ್ಕೆ ಸೂಕ್ತವಲ್ಲ. ಕತೆಯ ಮೂಲ ಬಿಂದು ಆರ್ಯ ಅಯ್ಯರ್ (ಮಾಧವನ್) ಮತ್ತು ಶ್ರುತಿ ನಡುವಿನ ವಿಚ್ಛೇದನ. ಕತೆಗೆ ಡೈವೋರ್ಸ್ ಜೀವಾಳವಾದಾಗ್ಯೂ ಸೆಕ್ಸ್ ಕಾಮಿಡಿಯನ್ನು ಮನಸೋಯಿಚ್ಛೆ ತುರುಕಲಾಗಿರುವುದು ವಿಶೇಷ.

‘ಡಿ-ಕಪಲ್ಡ್’ ಕತೆ ಏನೆಂದರೆ, ಆರ್ಯನಿಗೂ ಶ್ರುತಿಗೂ ಸರಿಬರುವುದಿಲ್ಲ. ಹಾಗಾಗಿ ವಿಚ್ಛೇದನ ಪಡೆಯಲು ಒಪ್ಪಿತ ತೀರ್ಮಾನ ಮಾಡಿಕೊಳ್ಳುತ್ತಾರೆ. ಆದರೆ ಈ ವಿಚಾರವನ್ನು 12ರ ಹರೆಯದ ಮಗಳಿಗೆ ತಿಳಿಸುವುದು ಹೇಗೆ ಎಂಬುದು ಸವಾಲು. ಹಾಗಾಗಿ ಇಬ್ಬರ ನಡುವೆ ಎಲ್ಲವೂ ಸರಿಹೋಗದಿದ್ದರೂ, ಪರಸ್ಪರ ಅಷ್ಟಾಗಿ ಅನುಬಂಧ ಇಲ್ಲದಿದ್ದರೂ, ಮಗಳ ಸಲುವಾಗಿ ಒಂದೇ ಸೂರಿನಡಿ ಒಟ್ಟಿಗೇ ವಾಸಿಸುತ್ತಾರೆ. ಇದನ್ನು ಕೇಳಿ “ಅರರೆ.. ಮದುವೆ ಅಂದ್ರೆ ಮತ್ತಿನ್ನೇನು?” ಎಂದು ಅನುಭವಿ ವಿವಾಹಿತರು‌ ಪ್ರಶ್ನಿಸುವಂತಿಲ್ಲ. ಏಕೆಂದರೆ ಆ ಪ್ರಶ್ನೆಯನ್ನು ಈಗಾಗಲೇ ಅಲ್ಲೊಂದು ಪಾತ್ರದ ಮೂಲಕ ಕೇಳಿಸಿದ್ದಾರೆ ಚಿತ್ರಕತೆ – ಸಂಭಾಷಣೆ ಮಾಡಿದ ಮನು ಜೋಸೆಫ್.

ಆರ್ಯ ಅಯ್ಯರ್‌ ಹರಿತ ಮಾತಿನವ. ಯಾರನ್ನೇ ಆದರೂ ಮಾತಲ್ಲೇ‌‌ ಮೆಂಟ್ಲು ಮಾಡುವುದು ಇವನಿಗೆ ಕರಗತ. ಈ ಗುಣಗಳು ಸರಿಯಾಗಿ ಹಳಿಗೆ ಕೂರಬೇಕಾದ ಕಾರಣ ಆತ ಲೇಖಕ. ಆತನ ಕಾದಂಬರಿ ಟಾಪ್ ಟೂ ಸ್ಥಾನದಲ್ಲಿದೆ. ಹಾಗಾಗಿ ಟಾಪ್ ಒನ್ ಸ್ಥಾನದ ಚೇತನ್ ಭಗತ್ ಜೊತೆ ಅಲ್ಲಲ್ಲಿ ಕಿತ್ತಾಟ ನಡೆಯುತ್ತದೆ‌. ಚೇತನ್ ಭಗತ್ ಪಾತ್ರವನ್ನು ಸ್ವತಃ ಚೇತನ್ ಭಗತ್ ನಿರ್ವಹಿಸಿರುವುದರಿಂದ ಆಭಾಸಗಳು ಸಂಭವಿಸಿಲ್ಲ. ವಿಚ್ಛೇದನಕ್ಕೆ ಗಂಡ-ಹೆಂಡಿರ ನಡುವಿನ ಸಾಂಸ್ಕೃತಿಕ ಭಿನ್ನತೆ ಕಾರಣವಲ್ಲದಿದ್ದರೂ ಚೇತನ ಭಗತ್ ಇರುವ ಕಾರಣಕ್ಕೋ, ಅಥವಾ ಮಾಧವನ್ – ಸುರ್ವೀನ್ ಚಾವ್ಲಾ ಇರುವುದರಿಂದಲೋ ಏನೋ ಇಲ್ಲಿ ಹೆಂಡತಿ ಪಂಜಾಬಿ, ಗಂಡ ತಮಿಳ.

ಸ್ವತಃ ಲೇಖಕ, ಪತ್ರಕರ್ತನಾದ ಕಾರಣ ಮನು ಜೋಸೆಫ್ ತಮ್ಮೊಳಗಿನ ಅಭಿಪ್ರಾಯ, ದೃಷ್ಟಿಕೋನಗಳನ್ನೂ ತೆರೆಯ ಮೇಲೆ ತಂದಿದ್ದಾರೆ‌. ಅವೆಲ್ಲಿಯೂ ತಂದು ಸೇರಿಸಿದಂಥದ್ದು ಎಂದನಿಸುವುದಿಲ್ಲ. ಕತೆಯ ಜತೆ ಸುಲಲಿತವಾಗಿ ಲೀನವಾಗುತ್ತದೆ. ನಿತ್ಯ ಜೀವನದಲ್ಲಿ ನಡೆಯುವ ಘಟನೆಗಳಲ್ಲೇ ಇರುವ ವಿಡಂಬನೆ-ಹಾಸ್ಯ,-ಅಪಹಾಸ್ಯಗಳನ್ನೇ ಇಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಪ್ರಯತ್ನ ಅಷ್ಟಾಗಿ ಫಲ ಕೊಟ್ಟಿಲ್ಲ. ಏಕೆಂದರೆ ಅದೇ ವಿಡಂಬನೆ-ಹಾಸ್ಯ-ಅಪಹಾಸ್ಯ ಮಾಡುವ ಸಲುವಾಗಿಯೇ ದೃಶ್ಯಗಳನ್ನು ಹೆಣೆದಂತೆ ಹಲವು ಕಡೆಗಳಲ್ಲಿ ಥಟ್ಟನೆ ಅನಿಸುತ್ತದೆ.

ಟ್ವಿಟರ್‌ನಲ್ಲಿ ವಿಡಿಯೋ ಹರಿಬಿಟ್ಟು ಹೇಗೆ ಕ್ಷಣಮಾತ್ರದಲ್ಲಿ ವ್ಯಕ್ತಿಯನ್ನು ದೊಡ್ಡವನನ್ನಾಗಿಯೂ ಚಿಕ್ಕವನನ್ನಾಗಿಯೂ ಮಾಡಬಹುದು‌ ಎಂಬುದು, ಪರಸ್ಪರ ದೂರವಾಗುವಾಗ ಮೊದಲು ಮಾಡಬೇಕಾದ ಕೆಲಸ ಫೇಸ್‌ಬುಕ್‌ನಲ್ಲಿ ರಿಲೇಶನ್‌ಶಿಪ್ ಸ್ಟೇಟಸ್ ಬದಲಾಯಿಸುವುದು ಎನ್ನುವುದು – ಇಂಥ ವಿಚಾರಗಳೆಲ್ಲ ನೋಡುವಾಗ ಖುಷಿ ಕೊಡುವಂತೆ ಚಿತ್ರಿಸಲಾಗಿದೆ. ಮೂವತ್ತು ನಿಮಿಷ, ಕೆಲವೊಮ್ಮೆ ಮತ್ತೂ ಕಡಿಮೆ ಇರುವ ಅಧ್ಯಾಯಗಳು ತಲೆನೋವು ತರಿಸುವುದಿಲ್ಲ. ಮಾಧವನ್ ನಟನೆ ಬಗ್ಗೆ ದೂಸರಾ ಮಾತಿಲ್ಲ. ಹಾಗೆ ನೋಡಿದರೆ ನಟನೆ ಇಂಥವರದ್ದು ಒಳ್ಳೆಯದಿಲ್ಲ ಎನ್ನುವಂತಿಲ್ಲ. ಅಲ್ಲರೂ ಅವರವರ ಪಾತ್ರವನ್ನು ಸೊಗಸಾಗಿಯೇ ನಿರ್ವಹಿಸಿದ್ದಾರೆ.

ಹಾಸ್ಯಕ್ಕೆ ಬಳಸಿಕೊಂಡಿರುವ ಎಲ್ಲಾ ವಸ್ತುಗಳು ಎಲ್ಲರಿಗೂ ಹಿತ ಅನಿಸುವಂಥದ್ದಲ್ಲ. ಸಂಬಂಧ, ಸನ್ಯಾಸಿ, ಧರ್ಮ, ತೃತೀಯ ಲಿಂಗಿಗಳು, ಸಲಿಂಗ ಕಾಮಿಗಳು, ದಪ್ಪಗಿರುವ ಮಹಿಳೆಯರು, ದಡ್ಡ ಪುರುಷರು – ಎಲ್ಲರನ್ನೂ ಇಲ್ಲಿ ನಗೆಪಾಟಲಿಗೆ ಈಡು ಮಾಡಲಾಗಿದೆ. ಬಡತನದ ಲೇವಡಿಯಿದೆ, ಉಳ್ಳವರ ವಿಡಂಬನೆಯಿದೆ. ಹೋಟೆಲ್ ಮಾಣಿಯ ಛೇಡನೆಯಿದೆ, ಕೂತುಣ್ಣುವವರ ದೂಷಣೆಯಿದೆ. ಇವೆಲ್ಲವುಗಳ ನಡುವೆ ಢೋಂಗಿ ಪರಿಸರವಾದಿಯ ತೋರಿಕೆಯ ಕಾರ್ಯಕ್ರಮ ನೋಡಿ ನೀವು ನಕ್ಕೇ ನಗುತ್ತೀರಿ. ಉಳಿದ ಕಡೆಗಳಲ್ಲಿ ಚಿತ್ರಕಥೆ ಬರೆದವರ ಮತ್ತು ನಿರ್ದೇಶನ ಮಾಡಿದವರ ಯೋಚನಾ ಲಹರಿ ನೆನೆಸಿ ವಿಷಾದಿಸಿ ನಗುತ್ತೀರಿ. ಹಾಗೋ ಹೀಗೋ, ನಗೋದಂತೂ ಖರೆ.

ಬರಹಗಾರ ಆರ್ಯ ನೆಟ್‌ಫ್ಲಿಕ್ಸ್‌ನ ತಂಡವನ್ನು ಭೇಟಿಯಾಗುವುದಿದೆ. “ನಿಮ್ಮ ಜೋಕುಗಳು ಪ್ರಯೋಜನವಿಲ್ಲ. ನಿಂದನಾತ್ಮಕವಾಗಿದೆ, ಈ ಕಾಲದಲ್ಲಿ ಇದೆಲ್ಲ ನಡೆಯುವುದಿಲ್ಲ” ಎಂದು ನೆಟ್‌ಫ್ಲಿಕ್ಸ್ ಪ್ರತಿನಿಧಿ ಹೇಳುತ್ತಾಳೆ. ಇದು ಯಾರನ್ನಾದರೂ ಉದ್ದೇಶಿಸಿ ಮಾಡಿದ ವ್ಯಂಗವೋ ಅಥವಾ ಚಿತ್ರ ನಿರ್ಮಾತೃಗಳು ಮಾಡಿಕೊಂಡ ಸ್ವಯಂ ವ್ಯಂಗ್ಯವೋ ಎಂಬಲ್ಲಿ ಅವರಿಗೂ ಗೊಂದಲವಿದ್ದಂತಿದೆ. ಇವುಗಳನ್ನೆಲ್ಲ ಮೂಲತಃ ಸರಳ ಇಂಗ್ಲೀಷಲ್ಲಿ ಚಿತ್ರಿಸಲಾಗಿದ್ದು ಹಿಂದಿ, ತಮಿಳು ಮತ್ತು ತೆಲುಗಿಗೆ ಡಬ್ ಮಾಡಲಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿರುವ ಹಾರ್ದಿಕ್ ಮೆಹ್ತಾ ನಿರ್ದೇಶನದ ಈ ಸರಣಿ ವಯಸ್ಕರನ್ನೇ ಉದ್ದೇಶಿಸಿ ಮಾಡಲಾಗಿದೆ. ಆದರೆ ಮನಃಪೂರ್ವಕ ಆನಂದಿಸಬೇಕಿದ್ದರೆ ನಮ್ಮಲ್ಲಿರುವ ಪ್ರೌಢಿಮೆಯನ್ನು ಕೆಲಕಾಲ ಬದಿಗಿಟ್ಟು ನೋಡಬೇಕು‌. ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ತೆರೆಮೇಲೆ ಬರುವ ಅಷ್ಟನ್ನೂ ಲಘುವಾಗಿ ತೆಗೆದುಕೊಂಡರೆ ನಗು ನಿಮ್ಮದಾಗುತ್ತದೆ. ಮತ್ತೂ ಸರಳವಾಗಿ ಹೇಳುವುದಾದರೆ ನಿಮ್ಮ ವಯಸ್ಸು ಇಪ್ಪತ್ತೆಂಟರ ಒಳಗಿದ್ದರೆ ನಕ್ಕು ಹಗುರಾಗಬಹುದು. ಅದಕ್ಕಿಂತ ಹೆಚ್ಚು ಪ್ರಾಯದವರು ಹಗುರವಾಗಿ ನಗಬಹುದು.

LEAVE A REPLY

Connect with

Please enter your comment!
Please enter your name here