ಸಿತೇಶ್‌ ಸಿ ಗೋವಿಂದ್‌ ನಿರ್ದೇಶನದ ‘ಇದು ಎಂಥಾ ಲೋಕವಯ್ಯ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ‘ದಿ ಗ್ರೇಟ್ ಇಂಡಿಯನ್ ಕಿಚನ್’, ‘ಕಾದಲ್ ದಿ ಕೋರ್’ ಯಶಸ್ವೀ ಮಲಯಾಳಂ ಚಿತ್ರಗಳ ನಿರ್ದೇಶಕ ಜಿಯೋ ಬೇಬಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಮುಂದಿನ ತಿಂಗಳು ಆಗಸ್ಟ್‌ 9ರಂದು ಸಿನಿಮಾ ತೆರೆಕಾಣಲಿದೆ.

‘ಇದು ಎಂಥಾ ಲೋಕವಯ್ಯ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕರ್ನಾಟಕ – ಕೇರಳ ಗಡಿಭಾಗದಲ್ಲಿ ನಡೆಯುವ ಕತೆಯಿದು. ನಿರ್ದೇಶಕ ಸಿತೇಶ್‌ ಸಿ ಗೋವಿಂದ್‌ ಅವರು ಹೇಳುವಂತೆ ಎರಡು ದಿನಗಳಲ್ಲಿ ನಡೆಯುವ ಘಟನಾವಳಿ. ‘ಸಾಮಾಜಿಕ ವಿಡಂಬನಾತ್ಮಕ ಚಿತ್ರವಿದು. ‘ದಿ ಗ್ರೇಟ್ ಇಂಡಿಯನ್ ಕಿಚನ್’, ‘ಕಾದಲ್ ದಿ ಕೋರ್’ ಯಶಸ್ವೀ ಮಲಯಾಳಂ ಚಿತ್ರಗಳ ನಿರ್ದೇಶಕ ಜಿಯೋ ಬೇಬಿ ನಮ್ಮ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ಇದು ನಮ್ಮಲ್ಲಿನ ಪ್ರಾದೇಶಿಕ ಚಲನಚಿತ್ರ ಉದ್ಯಮಗಳ ನಡುವೆ ಬೆಳೆಯುತ್ತಿರುವ ಸಹಯೋಗಕ್ಕೆ ಮಾದರಿಯಾಗಿದೆ’ ಎನ್ನುತ್ತಾರೆ ನಿರ್ದೇಶಕ ಸಿತೇಶ್‌ ಗೋವಿಂದ್‌. ಚಿತ್ರದಲ್ಲಿ ಕನ್ನಡ, ಮಲಯಾಳಂ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ಸಮ್ಮಿಲನವಿದೆ. ಇದು ಗಡಿ ಪ್ರದೇಶದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣಕ್ಕೆ ಕನ್ನಡಿಯಾಗಿದೆ ಎನ್ನುವುದು ನಿರ್ದೇಶಕರ ಮಾತು.

ವಿಶಿಷ್ಟ ಕತೆ, ನಿರೂಪಣಾ ಶೈಲಿಯ ಮೂಲಕ ಸಿನಿಪ್ರಿಯರ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಮಲಯಾಳಂ ಚಿತ್ರನಿರ್ದೇಶಕ ಜಿಯೋ ಬೇಬಿ ಅವರು ಈ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ಅವರು ಮಾತನಾಡಿ, ‘ಈ ಅಪರೂಪದ ಹೈಪರ್‌ಲಿಂಕ್ ಚಿತ್ರವು ಒಂದು ಕುತೂಹಲಕಾರಿ ಘಟನೆಯೊಂದಿಗೆ ಶುರುವಾಗುತ್ತದೆ. ಸ್ಥಳೀಯ ಮೂಢನಂಬಿಕೆಗಳಿಂದ ಪ್ರಭಾವಿತವಾದ ಘಟನೆಗಳ ಸರಣಿಯನ್ನು ಎತ್ತಿತೋರಿಸುತ್ತದೆ. ಕೆಲವು ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುತ್ತದೆ. ಸಿತೇಶ್ ಸಿ ಗೋವಿಂದ್ ಅವರು ಕರ್ನಾಟಕ-ಕೇರಳ ಗಡಿಯ ಸಾಂಸ್ಕೃತಿಕ ಸತ್ವ ಮತ್ತು ಅಲ್ಲಿನ ಜನರ ವಿಶಿಷ್ಟ ರೀತಿಯ ನಂಬಿಕೆಗಳನ್ನು ಹೊರತರುವ ಒಳನೋಟವುಳ್ಳ ಸಾಮಾಜಿಕ ವ್ಯಾಖ್ಯಾನವನ್ನು ತಿಳಿಯಾದ ಹಾಸ್ಯದೊಂದಿಗೆ ಸಮತೋಲನಗೊಳಿಸಿ ಈ ಕತೆ ರಚಿಸಿದ್ದಾರೆ’ ಎನ್ನುತ್ತಾರೆ. ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂದಿನ ತಿಂಗಳು, ಆಗಸ್ಟ್ 9ರಂದು ಸಿನಿಮಾ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here