ಕನ್ನಡ ಸಿನಿಮಾ | ಗರುಡ ಗಮನ ವೃಷಭ ವಾಹನ

ಕ್ರೈಂ- ಡ್ರಾಮಾ ಜಾನರ್‌ನಲ್ಲಿ ರಿಯಲಿಸ್ಟಿಕ್‌ ಗುಣದಿಂದಾಗಿ ‘ಗರುಡ ಗಮನ ವೃಷಭ ವಾಹನ’ ಪ್ರತ್ಯೇಕವಾಗಿ ನಿಲ್ಲುತ್ತದೆ. ತಣ್ಣಗಿನ ಕ್ರೌರ್ಯ, ಸ್ನೇಹದ ಕತೆ, ರೌಡಿಗಳನ್ನು ಮಟ್ಟಹಾಕುವ ಪೊಲೀಸ್ ತಂತ್ರಗಾರಿಕೆ, ಭ್ರಷ್ಟ ಬ್ಯೂರೋಕ್ರಸಿ ಮೇಲ್ನೋಟಕ್ಕೆ ಕಾಣಿಸಿದರೆ ಮನಸಿನ ವ್ಯಾಪಾರದ ದಟ್ಟ ಚಿತ್ರಣ ಕತೆಯ ಆಂತರ್ಯದಲ್ಲಿದೆ. ವಿಶಿಷ್ಟ ಮೆಟಫರ್‌ಗಳೊಂದಿಗೆ ಅಪ್ಪಟ ಮಂಗಳೂರಿನ ನೇಟಿವಿಟಿಯೊಂದಿಗೆ ಸಿನಿಮಾ ಕಟ್ಟಿದ್ದಾರೆ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ. ಚಿತ್ರತಂಡವನ್ನು ಸಮರ್ಪಕವಾಗಿ ದುಡಿಸಿಕೊಂಡು ಕನ್ನಡಕ್ಕೊಂದು ಅಪರೂಪದ ಸಿನಿಮಾ ಕೊಟ್ಟಿದ್ದಾರೆ.

ವರ್ಷಗಳ ಹಿಂದೆ ‘ಒಂದು ಮೊಟ್ಟೆಯ ಕತೆ’ ಸಿನಿಮಾ ನಟ, ನಿರ್ದೇಶಕರಾಗಿ ಗಮನ ಸೆಳೆದಿದ್ದರು ರಾಜ್ ಶೆಟ್ಟಿ. ಅಲ್ಲಿ ಅವರಿಗೆ ಬೋಳುತಲೆಯ ಅವಿವಾಹಿತ ಯುವಕನ ಪಾತ್ರವಿತ್ತು. ಇಲ್ಲಿ ಅದಕ್ಕೆ ವ್ಯತಿರಿಕ್ತವಾದ ಕ್ರೈಂ – ಡ್ರಾಮಾ ಸಿನಿಮಾದಲ್ಲಿ ಸ್ಕೋರ್ ಮಾಡಿದ್ದಾರೆ. ‘ಮೊಟ್ಟೆ’ಯ ಕತೆಯಲ್ಲಿ ಇಬ್ಬರು ನಾಯಕಿಯರಿದ್ದರು. ಇಲ್ಲಿ ನಾಯಕಿಯರೇ ಇಲ್ಲ. ಎರಡೂವರೆ ಗಂಟೆಗಳ ಅವಧಿಯಲ್ಲಿ ತಮ್ಮ ‘ಶಿವ’ ಪಾತ್ರದೊಂದಿಗೆ, ಸ್ನೇಹಿತ ಹರಿಯ ಪಾತ್ರವನ್ನು ತೂಗಿಸಿಕೊಂಡು ಬಿಗಿಯಾದ ಚಿತ್ರಕಥೆಯೊಂದಿಗೆ ಒಂದೊಳ್ಳೆಯ ಸಿನಿಮ್ಯಾಟಿಕ್ ಅನುಭವ ಕಟ್ಟಿಕೊಡುತ್ತಾರೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಕಲನ ವಿಭಾಗದಲ್ಲಿ ಅವರ ಕಲ್ಪನೆಗೆ ಅವಶ್ಯವಿರುವ ಬೆಂಬಲ ಸಿಕ್ಕಿದೆ.

ಕ್ರೌರ್ಯವನ್ನು ತೋರಿಸಲು ಅಬ್ಬರಿಸಬೇಕಿಲ್ಲ. ಎತ್ತರದ ಆಳ್ತನ, ಸಿಕ್ಸ್ ಪ್ಯಾಕ್‌, ವಿಕ್ಷಿಪ್ತ ನಡವಳಿಕೆ, ವಿಲಕ್ಷಣ ಮುಖಲಕ್ಷಣ… ಅಗತ್ಯವೇ ಇಲ್ಲ. ಈ ಚಿತ್ರದಲ್ಲಿ ಒಂದು ಹಳೆಯ ಲುಂಗಿ, ಷರಟು ತೊಟ್ಟ ಶಿವ ಸೀದಾ – ಸಾದಾ ವ್ಯಕ್ತಿಯಾಗಿದ್ದುಕೊಂಡೇ ಪ್ರೇಕ್ಷಕರನ್ನು ದಂಗು ಬಡಿಸುತ್ತಾನೆ. ಅವನನ್ನು ನೋಡುವ ಪ್ರೇಕ್ಷಕರು ತಮ್ಮಲ್ಲೂ ಇಂತಹ ಶಿವ ಇರಬಹುದಲ್ಲವೇ ಎಂದು ಅರೆಕ್ಷಣ ಯೋಚಿಸಲಿಕ್ಕೂ ಸಾಕು! ಚಿತ್ರದ ‘ಶಿವ’ ಪಾತ್ರದ ಕಟ್ಟೋಣ ಹಾಗಿದೆ. ಚಿತ್ರಕ್ಕೆ ಸ್ವತಃ ತಾವೇ ಕತೆ ಹೆಣೆದಿರುವ ರಾಜ್ ಬಿ.ಶೆಟ್ಟಿ ಈ ಪಾತ್ರವನ್ನು ಜೀವಿಸಿದ್ದಾರೆ. ಮೇಕಪ್‌ ಇಲ್ಲದ, ಸಹಜ ನಟನೆಯಲ್ಲಿ ನೆನಪಿನಲ್ಲುಳಿಯುತ್ತಾರೆ. ‘ಹರಿ’ಯಾಗಿ ರಿಷಬ್ ಶೆಟ್ಟಿ, ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರದ್ದು ಉತ್ತಮ ಪಾತ್ರಪೋಷಣೆ.

ಅಂಗಡಿ ಬೀದಿಯಲ್ಲಿ ತ್ರಿಶೂಲಾಕಾರದ ಕಡ್ಡಿ ಹಿಡಿದು ನಿಂತ ‘ಬಾಲಕ ಶಿವ’, ಕದ್ರಿಯಲ್ಲಿ ಪಾಪ ಪ್ರಾಯಶ್ಚಿತ್ತಕ್ಕಾಗಿ ನೀರಿನಲ್ಲಿ ಮುಳುಗೇಳಲು ಬಂದ ಹರಿಯನ್ನು ನೋಡುವ ಶಿವ, ಶಾಸಕನಿಂದ ಕಪಾಳಕ್ಕೆ ಹೊಡೆಯಿಸಿಕೊಂಡು ಮನೆಗೆ ಬಂದು ಜೋರು ದನಿಯಲ್ಲಿ ಅಳುವ ಇನ್‌ಸ್ಪೆಕ್ಟರ್‌, ಮಂಗಳಾದೇವಿ ಎದುರಿನ ಶಿವನ ಹುಲಿ ಕುಣಿತ… ಹೀಗೆ ಚಿತ್ರದಲ್ಲಿನ ಕೆಲವು ಸನ್ನಿವೇಶಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ. ಇನ್‌ಸ್ಪೆಕ್ಟರ್‌ ನಿರೂಪಣೆಯೊಂದಿಗೆ ಸಾಗುವ ಕತೆ ಅಂತಿಮವಾಗಿ ಇನ್‌ಸ್ಪೆಕ್ಟರ್‌ ಸನ್ನಿವೇಶಗಳೊಂದಿಗೆ ಮುಕ್ತಾಯವಾಗುತ್ತದೆ. ವಿರೋಧಿಗಳನ್ನು ಹಣಿಯಲು ಸ್ಕೆಚ್‌ ಹಾಕುವ ಸಂದರ್ಭದಲ್ಲಿ ಗಲಾಟೆ ಮಾಡುತ್ತಿದ್ದ ಆಟವಾಡುವ ಮಕ್ಕಳನ್ನು ಶಿವನ ಸ್ನೇಹಿತ ಗದರುತ್ತಾನೆ. “ಅವರನ್ನೇಕೆ ಗದರೋದು, ಮಕ್ಕಳು ಆಡಿಕೊಳ್ಳಲಿ” ಎನ್ನುತ್ತಾನೆ ಶಿವ. ಕೊನೆಯಲ್ಲಿ ಮಕ್ಕಳಿಂದಲೇ ಕಂಟಕ ಎದುರಾಗುತ್ತದೆ ಹರಿಗೆ. ಹೀಗೆ, ಮೆಟಫರ್‌ಗಳನ್ನಿಟ್ಟು ಸಿನಿಮಾ ನಿರೂಪಿಸುತ್ತಾ ಹೋಗುತ್ತಾರೆ ನಿರ್ದೇಶಕರು. ಸರಿ-ತಪ್ಪುಗಳ ಲೆಕ್ಕಾಚಾರ ಅರಿವಾಗುವುದರೊಳಗೆ ಶಿವ, ಹರಿಯ ಅಂತ್ಯವಾಗುತ್ತದೆ. ನಿರ್ದೇಶಕ ರಾಜ್ ಶೆಟ್ಟಿ ಪ್ರೇಕ್ಷಕರಿಗೊಂದಿಷ್ಟು ಪ್ರಶ್ನೆಗಳನ್ನು ಬಿಟ್ಟು ಸಿನಿಮಾ ಮುಕ್ತಾಯಗೊಳಿಸುತ್ತಾರೆ. ಈ ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ. ಸಾಧ್ಯವಾದಷ್ಟೂ ದೊಡ್ಡ ಪರದೆ ಮೇಲೆ ಉತ್ತಮ ಸೌಂಡ್‌ಸಿಸ್ಟಮ್ ಇರುವ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದರೆ ಪರಿಪೂರ್ಣ ಅನುಭವ ದಕ್ಕಿಸಿಕೊಳ್ಳಬಹುದು.

ನಿರ್ಮಾಪಕ­ರು : ರವಿ ರೈ ಕಳಸ, ವಚನ್ ಶೆಟ್ಟಿ, ಶ್ರೀಕಾಂತ್ ಮತ್ತು ವಿಕಾಸ್‌ | ನಿರ್ದೇಶನ : ರಾಜ್ ಬಿ. ಶೆಟ್ಟಿ | ಛಾಯಾಗ್ರಹಣ ಮತ್ತು ಸಂಕಲನ : ಪ್ರವೀಣ್ ಶ್ರಿಯಾನ್ | ಸಂಗೀತ : ಮಿಥುನ್ ಮುಕುಂದನ್‌ | ತಾರಾಬಳಗ : ರಾಜ್ ಬಿ. ಶೆಟ್ಟಿ, ರಿಷಬ್ ಶೆಟ್ಟಿ, ಗೋಪಾಲ್ ಕೃಷ್ಣ ದೇಶಪಾಂಡೆ

LEAVE A REPLY

Connect with

Please enter your comment!
Please enter your name here