ವಿಜಯ್ ಪ್ರಸಾದ್ ನಿರ್ದೇಶನದ ‘ಪರಿಮಳ ಲಾಡ್ಜ್’ ಚಿತ್ರಕ್ಕೆ ಏನ್ ಪ್ರಾಬ್ಲಂ ಆಗಿದೆ? ಸತೀಶ್ ಮತ್ತು ಯೋಗೀಶ್ ಮಧ್ಯೆ ನಿರ್ದೇಶಕ ವಿಜಯ್ ಪ್ರಸಾದ್ ಏನ್ ಮಾಡ್ತಾ ಇದ್ದಾರೆ ಅನ್ನೋ ಪ್ರಶ್ನೆ ಚಿತ್ರರಸಿಕರನ್ನು ಕಾಡುತ್ತಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ.

ವಿಜಯ ಪ್ರಸಾದ್ ಸಿನಿಮಾಗಳು ಅಂದಮೇಲೆ ಅವು, ಅನೌನ್ಸ್ ಆದ ಎಷ್ಟೋ ದಿನಗಳ ನಂತರ ಚಿತ್ರೀಕರಣ ಶುರು ಆಗೋದು, ಆಗಾಗ ನಿಂತು ಹೋಗೋದು, ನಂತರ ಎಷ್ಟೋ ದಿನಗಳ ನಂತರ ಬಿಡುಗಡೆ ಆಗೋದು, ನಾಯಕ, ನಾಯಕಿ ಬದಲಾಗೋದು ಇವೆಲ್ಲ ಸಹಜ. ಈಗ ಮತ್ತೆ ವಿಜಯ್ ಪ್ರಸಾದ್ ಅವರ ‘ಪರಿಮಳ ಲಾಜ್ಡ್’ನಲ್ಲೂ ಕೂಡ ಅಂಥದೊಂದು ಬದಲಾವಣೆಯ ಗಾಳಿ ಬೀಸಿದೆ. ವರುಷದ ಹಿಂದೆ ‘ಸಿದ್ಲಿಂಗು’ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಪರಿಮಳ ಲಾಡ್ಜ್ ಅನ್ನೋ ಸಿನಿಮಾ ಅನೌನ್ಸ್ ಆಗಿತ್ತು. ಪೋಟ್ರೋಮ್ಯಾಕ್ಸ್, ಲಾಡ್ಜು, ಹೀಗೆ ವಿಜಯ್ ಪ್ರಸಾದ್ ಅವರ ಚಿತ್ರಗಳ ಶೀರ್ಷಿಕೆಗಳು ವಿಭಿನ್ನ. ಕೆಲವೊಮ್ಮೆ ಮಡಿವಂತರಿಗೆ ಮುಜುಗರ ಕೂಡ.

ಇನ್ನು ಅವರ ಸಿನಿಮಾಗಳ ಸಂಭಾಷಣೆಯಂತೂ ಡಬಲ್ ಮೀನಿಂಗ್‌ನಲ್ಲಿ ಎತ್ತಿದ ಕೈ. ಆದರೆ ಈ ಬಾರಿ ‘ಪರಿಮಳ ಲಾಡ್ಜ್’ ಇನ್ನೂ ಮುಂದೆ ಹೋಗಿ ಸಲಿಂಗ ಕಾಮದ ವಿಷಯದಲ್ಲೂ ಕಾಮಿಡಿ ಮಾಡಿ ಒಂದು ಟ್ರೈಲರ್ ರಿಲೀಸ್ ಮಾಡಿತ್ತು. ಅದರಲ್ಲಿ ನಟ ಸತೀಶ್ ನೀನಾಸಂ ಕೂಡ ಇದ್ದರು. ಅದರಲ್ಲೂ ಎಂದಿನ ವಿಜಯ್ ಪ್ರಸಾದ್ ಅವರ ಎಂದಿನ ಟೇಸ್ಟ್ ಕಾಣಿಸಿತ್ತು. ಅದನ್ನು ನೋಡಿದವರಿಗೆ ಇದೆಲ್ಲ ಸತೀಶ್ ನೀನಾಸಂಗೆ ಬೇಕಿತ್ತಾ ಅನ್ನಿಸಿದ್ದು ನಿಜ. ಆದರೆ ಈಗ ಸತೀಶ್ ಅವರಿಗೆ ಅದು ತಡವಾಗಿ ಅರಿವಾದಂತಿದೆ. ಒಟ್ಟಿನಲ್ಲಿ ಕಾರಣ ಏನೋ ಗೊತ್ತಿಲ್ಲ. ಸತೀಶ್ ನೀನಾಸಂ ‘ಪರಿಮಳ ಲಾಡ್ಜ್’ನಿಂದ ಹೊರಗೆ ಬಂದಿದ್ದಾರೆ ಅನ್ನೋ ವಿಷಯ ಈಗ ವಿಜಯ್ ಪ್ರಸಾದ್ ಅವರ ಬಾಯಿಂದಲೇ ಹೊರಬಂದಿದೆ.

ಹಾಗಾಗಿ ಈಗ ಸತೀಶ್ ನೀನಾಸಂ ಪರಿಮಳ ಲಾಡ್ಜ್‌ನ ಕಸ್ಟಮರ್ ಅಲ್ಲ. ಹಾಗಾದ್ರೆ ಈಗ ಈ ಸಿನಿಮಾದ ಹೀರೋ ಯಾರು ಅಂತ ಕೇಳಿದ್ರೆ ಅದಕ್ಕೆ ಉತ್ತರ ಯೋಗಿ ಅಂತೆ. ಹಾಗಂತ ಸತೀಶ್ ಅವರ ಬದಲಿಗೆ ಯೋಗಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿಲ್ಲ. ಯಾಕಂದ್ರೆ ‘ಪರಿಮಳ ಲಾಡ್ಜ್’ನಲ್ಲಿ ಯೋಗಿ ಮೊದಲೇ ಇದ್ರು. ಹಾಗಾಗಿ ಈಗ ಹಾಳೂರಿಗೆ ಉಳಿದವನೇ ಗೌಡ ಅನ್ನೋ ರೀತಿಯಲ್ಲಿ, ‘ಪರಿಮಳ ಲಾಡ್ಜ್‌’ನಲ್ಲಿ ಇಳ್ಕೊಂಡವನೇ ನಾಯಕ ಅನ್ನೋ ರೀತಿ, ಯೋಗಿಯನ್ನು ನಾಯಕ ಎಂದು ಘೋಷಿಸಲಾಗಿದೆ. ಸತೀಶ್ ಅವರ ಪಾತ್ರಕ್ಕೆ ಬೇರೆಯವರು ಬರ್ತಾರಾ, ಆಕ್ಚುವಲಿ ಅವರಿಗೊಂದು ಪಾತ್ರ ಅಂತ ಇತ್ತಾ, ಅನ್ನೋ ಪ್ರಶ್ನೆಗಳಿಗೆಲ್ಲ ಸದ್ಯಕ್ಕೆ ಉತ್ತರ ಇಲ್ಲ.

LEAVE A REPLY

Connect with

Please enter your comment!
Please enter your name here