ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ‘ಇನಾಮ್ದಾರ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ರಂಜನ್ ಛತ್ರಪತಿ – ಚಿರಶ್ರೀ ಅಂಚನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಸಂಸ್ಕೃತಿ – ಆಚರಣೆಯ ಅನಾವರಣ ಇಲ್ಲಿದೆ ಎನ್ನುತ್ತಾರೆ ನಿರ್ದೇಶಕರು.
ಕರಾವಳಿ ಭಾಗದ ಸಂಸ್ಕೃತಿ, ನಂಬಿಕೆಗಳನ್ನು ಮೂಲ ವಸ್ಥುವಾಗಿರಿಸಿಕೊಂಡು ರಚಿಸಿರುವ ‘ಇನಾಮ್ದಾರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ‘ಕಾಂತಾರ’ ಸಿನಿಮಾ ಜನಪ್ರಿಯವಾದ ನಂತರ ಅದೇ ಮಾದರಿಯಲ್ಲಿ ವಿವಿಧ ಸ್ಥಳಗಳ ಮಣ್ಣಿನ ಕತೆಗಳನ್ನು ಹೇಳುವ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇದೇ ವಿಭಾಗಕ್ಕೆ ‘ಇನಾಮ್ದಾರ್’ ಚಿತ್ರವೂ ಸಹ ಸೇರುತ್ತದೆ. ಈ ಸಿನಿಮಾ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರಾವಳಿ ಭಾಗದ ಜನರು, ಅವರ ಆಚರಣೆಗಳ ಕುರಿತಾದ ಕತೆ ಹೊಂದಿದೆ. ಶಿವಾಜಿ ಮಹಾರಾಜರನ್ನು ಆರಾಧಿಸುವ ಉತ್ತರ ಕರ್ನಾಟಕ ಮೂಲದ ‘ಇನಾಮ್ದಾರ್’ ಕುಟುಂಬ ಮತ್ತು ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ಸಂಘರ್ಷದ ಕತೆಯನ್ನು ಈ ಸಿನಿಮಾ ಹೊಂದಿದೆ. ‘ಕಪ್ಪು ಸುಂದರಿಯ ಸುತ್ತ’ ಎಂಬ ಅಡಿಬರಹವನ್ನು ಈ ಸಿನಿಮಾಕ್ಕೆ ನೀಡಲಾಗಿದೆ.
ಬೆಳಗಾವಿ, ಕುಂದಾಪುರ, ಚಾಮರಾಜನಗರ ಇನ್ನೂ ಕೆಲವು ಊರುಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿದೆ. ಸಂದೇಶ್ ಶೆಟ್ಟಿ ಆಜ್ರಿ ಈ ಸಿನಿಮಾ ನಿರ್ದೇಶಿಸಿದ್ದು, ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣ ಮಾಡಿದ್ದಾರೆ. ಚಿತ್ರದ ಟ್ರೈಲರ್ ಮೂಲ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಂಜನ್ ಛತ್ರಪತಿ, ಪ್ರಮೋದ್ ಶೆಟ್ಟಿ, ಸಂದೇಶ್ ಶೆಟ್ಟಿ ಅಜ್ರಿ, ಚಿರಶ್ರೀ ಅಂಚನ್, ಎಸ್ತರ್ ನೊರೊನ್ಹಾ, ಶರತ್ ಲೋಹಿತಾಶ್ವ, ಎಂ ಕೆ ಮಠ, ಅವಿನಾಶ್, ಥ್ರಿಲ್ಲರ್ ಮಂಜು, ರಘು ಪಾಂಡೇಶ್ವರ, ಯಶ್ ಆಚಾರ್ಯ, ಕರಣ್ ಕುಂದರ್, ಚಿತ್ರಕಲಾ, ಸಂಜು ಬಸಯ್ಯ, ಮಹಾಬಲೇಶ್ವರ ಕ್ಯಾದಿಗೆ ಅಭಿನಯಿಸಿದ್ದಾರೆ. ಅಕ್ಟೋಬರ್ 27ರಂದು ಸಿನಿಮಾ ತೆರೆಕಾಣಲಿದೆ.