ತಮಿಳು ಸಿನಿಮಾ | ಜೈ ಭೀಮ್
ಈ ಸಿನೆಮಾ ನೋಡುತ್ತಾ ವೇಟ್ರಿಮಾರನ್ ನಿರ್ದೇಶನದ ‘ವಿಸಾರಣೈ’, ಮಾರಿ ಸೆಲ್ವರಾಜ್‌ರ ‘ಕರ್ಣನ್’ ನೆನಪಾಗಿಯೇ ಆಗುತ್ತದೆ. ಪೋಲೀಸ್ ವ್ಯವಸ್ಥೆಯ ಕ್ರೌರ್ಯವನ್ನೇ ಇವೆಲ್ಲವೂ ಹೇಳಿದರೂ ಒಂದೊಂದೂ ತಮ್ಮ ನಿರೂಪಣೆಯಲ್ಲಿ ಭಿನ್ನವಾಗಿವೆ. ‘ವಿಸಾರಣೈ’ ಕಡೆಗೂ ಒಂದು ವಿಷಾದವನ್ನು ಉಳಿಸುತ್ತದೆ. ಆದರೆ ‘ಜೈಭೀಮ್’ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗುತ್ತದೆ.
ದೊಡ್ಡ ದೊಡ್ಡ ಹೀರೋಗಳು ಒಂದು ಸೈದ್ಧಾಂತಿಕ ನಿಲುವು ತೆಗೆದುಕೊಳ್ಳುವಂತಾ ಸಿನೆಮಾ ಮಾಡುವುದು ತುಂಬಾ ಅಪರೂಪ. ನಿರಾಯಾಸವಾಗಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸುವ ಕತೆಗಳಾದರೆ ಒಳ್ಳೆಯದು ಅಂತ ಯೋಚಿಸೋರೇ ಹೆಚ್ಚು. ಆದರೆ ಸೂರ್ಯ ನಟಿಸಿರುವ ‘ಜೈ ಭೀಮ್’ ಸಿನೆಮಾವೇ ಒಂದು ದಿಟ್ಟ ನಿಲುವು. ಮೊಟ್ಟಮೊದಲಿಗೆ ಈ ನಿಲುವಿಗಾಗಿ ಚಿತ್ರದ ನಿರ್ಮಾಪಕರಾದ ಸೂರ್ಯ ಮತ್ತು ಜ್ಯೋತಿಕಾ ಅಭಿನಂದನಾರ್ಹರು.
ಇರುಳರ್ ಎಂಬ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನ ಮೇಲೆ ಸುಳ್ಳು ಕಳ್ಳತನದ ಆರೋಪ ಹೊರಿಸುವ ಪೋಲೀಸ್ ವ್ಯವಸ್ಥೆ, ಆ ಜನರನ್ನು ಅತ್ಯಂತ ಅಮಾನವೀಯವಾಗಿ ಗೋಳುಹೊಯ್ದುಕೊಳ್ಳುತ್ತದೆ. ಜೀವ ತೆಗೆಯಲೂ ಹೇಸುವುದಿಲ್ಲ. ರಾಜಕನ್ನು ಪೋಲೀಸ್ ಸ್ಟೇಷನ್‌ನಿಂದ ಕಾಣೆಯಾದಾಗ ಅವನ ಹೆಂಡತಿ ಸೆಂಗಣ್ಣಿ ಹೋರಾಟಗಾರ, ವಕೀಲ ಚಂದ್ರು ಬಳಿ ತನ್ನ ಸಮಸ್ಯೆ ಹೇಳಿಕೊಂಡು ಬರುತ್ತಾಳೆ. ಅಲ್ಲಿಂದ ಕತೆ ವಿವಿಧ ತಿರುವುಗಳಲ್ಲಿ ಸಾಗಿ, ನಾಪತ್ತೆಯಾದ ರಾಜಕನ್ನು ನಿಜಕ್ಕೂ ಏನಾದ ಎಂಬುದನ್ನು ಕಂಡುಹಿಡಿಯಲು ಪೂರ್ತಿ ಕಾನೂನಿನ ಹಾದಿಯನ್ನೇ ಹಿಡಿಯಲಾಗಿದೆ. ಎಲ್ಲಿಯೂ ಸಿನಿಮೀಯ ಅನಿಸುವುದಿಲ್ಲ, ಸೂರ್ಯ ಹೀರೋಯಿಸಂ ತೋರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಎಲ್ಲವೂ ಸಾಗುತ್ತದೆ. 1995ರ ಆಸುಪಾಸಿನಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನೆಮಾ ಇದು. ಇಲಿ, ಹಾವು ಹಿಡಿಯುವ ಇರುಳರ್ ಜನಾಂಗದ ಪರವಾಗಿ ಹೋರಾಡಿ ಕೆ.ಚಂದ್ರು ಎಂಬ ನಿಜದ ಹೀರೋ ನ್ಯಾಯ ಒದಗಿಸಿಕೊಟ್ಟಿದ್ದರು. ಚಂದ್ರು ಅವರ ಬದುಕಿನ ರೋಚಕ ಕಥಾನಕಗಳೆಷ್ಟೋ ಅದರ ಒಂದು ಭಾಗವನ್ನು ಸಿನೆಮಾ ಮಾಡುವ ಮೂಲಕ ಚಂದ್ರು ಅವರನ್ನೂ, ಭೂಮಿಯ ಮೇಲಿನ ನಮ್ಮದೇ ಸಹಜೀವಿಗಳ ಧಾರುಣ ಕತೆಯನ್ನೂ ಸಿನೆಮಾ ಪರಿಚಯಿಸಿದೆ.
ಈ ಸಿನೆಮಾ ನೋಡುತ್ತಾ ವೇಟ್ರಿಮಾರನ್ ನಿರ್ದೇಶನದ ‘ವಿಸಾರಣೈ’, ಮಾರಿ ಸೆಲ್ವರಾಜ್‌ರ ‘ಕರ್ಣನ್’ ನೆನಪಾಗಿಯೇ ಆಗುತ್ತದೆ. ಪೋಲೀಸ್ ವ್ಯವಸ್ಥೆಯ ಕ್ರೌರ್ಯವನ್ನೇ ಇವೆಲ್ಲವೂ ಹೇಳಿದರೂ ಒಂದೊಂದೂ ತಮ್ಮ ನಿರೂಪಣೆಯಲ್ಲಿ ಭಿನ್ನವಾಗಿವೆ. ‘ವಿಸಾರಣೈ’ ಕಡೆಗೂ ಒಂದು ವಿಷಾದವನ್ನು ಉಳಿಸುತ್ತದೆ. ಆದರೆ ‘ಜೈಭೀಮ್’ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗುತ್ತದೆ. ಇದಕ್ಕೆ ಕಾರಣ ಕಾನೂನು, ಸಂವಿಧಾನ ಮತ್ತು ಅದನ್ನು ನಂಬಿದ ಚಂದ್ರು ಎಂಬ ವಕೀಲ. ಆದರೆ ಎಲ್ಲರಿಗೂ ಇಂತಹ ಅವಕಾಶ ಸಿಗುತ್ತದೆಯೇ? ಎಷ್ಟು ಜನ ಇಂತಹ ವಿನಾಕಾರಣ ಹಿಂಸೆಯನ್ನು ಸಹಿಸಿರಬಹುದು? ಎಷ್ಟು ಪ್ರಕರಣಗಳು ಬೆಳಕಿಗೇ ಬರದೇ ಹೂತುಹೋಗಿರಬಹುದು? ತಮಿಳುನಾಡಿನಲ್ಲಷ್ಟೇ ಅಲ್ಲ, ಇಂಥದ್ದು ದೇಶಾದ್ಯಂತ ನಡೆದಿರಬಹುದು, ನಡೆಯುತ್ತಲೇ ಇರಬಹುದು. ಸಿನೆಮಾ ಒಂದು ಅದಕ್ಕೆಲ್ಲ ಧ್ವನಿಯಾಗಬಹುದು ಎಂದು ‘ಜೈಭೀಮ್’ ತೋರಿಸಿದೆ.
“ಈ ಜಾತೀಲಿ ಕಳ್ರು ಜಾಸ್ತಿ ಸರ್”.ಅನ್ನುತ್ತಾನೆ ಒಬ್ಬ ಅಧಿಕಾರಿ “ಕಳ್ರು ಎಲ್ಲಿಲ್ಲ? ಯಾವ ಜಾತೀಲಿಲ್ಲ?” ಎಂಬರ್ಥದ ಪ್ರಶ್ನೆ ಕೇಳುತ್ತಾನೆ ಚಂದ್ರು ಪಾತ್ರಧಾರಿ ಸೂರ್ಯ. “ಈ ಕೇಸ್ ವಾಪಸ್ ತಗೋ..ನಿನಗೆ ಹಣದ ವ್ಯವಸ್ಥೆ ಮಾಡುತ್ತೇವೆ” ಅಂತ ಪೋಲೀಸರು ಸೆಂಗಣ್ಣಿಯನ್ನು ಕೇಳುತ್ತಾರೆ. ಅವಳು “ನಾವು ಈ ಕೇಸ್ ಸೋತರೂ ಪರವಾಗಿಲ್ಲ, ನಾಳೆ ನನ್ನ ಮಕ್ಕಳಿಗೆ ಕೊನೆವರೆಗೂ ಹೋರಾಡಿದೆವು ಅಂತ ಹೇಳಲು ಬಯಸ್ತೀನಿ. ಸ್ವಾಭಿಮಾನ ಬಲಿಕೊಟ್ಟು ಕೇಸ್ ಗೆಲ್ಲಬೇಕಾಗಿಲ್ಲ” ಅಂತಾಳೆ. ಇಂತಹ ಸಿನೆಮಾಗಳು OTT ಜೊತೆಗೆ ಥಿಯೇಟರ್‌ಗಳಲ್ಲು ತೆರೆಕಂಡು ಹೆಚ್ಚು ಜನರನ್ನು ತಲುಪಬೇಕು.
‘ಜೈ ಭೀಮ್’ ಎಂಬ ಟೈಟಲ್ ನೋಡಿ ಅನೇಕರು ಸೂರ್ಯ ಅಂಬೇಡ್ಕರರ ಪಾತ್ರ ಮಾಡಿದ್ದಾರೆಂದು ಭಾವಿಸಿದ್ದೆ ಹೆಚ್ಚು. ಆದರೆ ಇದು ಬೇರೆಯೇ ಕತೆ. ಆದರಿಲ್ಲಿ ಅಂಬೇಡ್ಕರ್ ಇದ್ದಾರೆ. ಸಂವಿಧಾನ ಕೊಟ್ಟ ಶಕ್ತಿಯ ರೂಪದಲ್ಲಿ. ಕಾನೂನಿನ ರೂಪದಲ್ಲಿ. ಪೋಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಿದರೆ ಜನರಿಗೆ ನ್ಯಾಯ ದೊರಕಿಸಲು ಇನ್ಯಾರೂ ಬೇಕಾಗಿಲ್ಲ ಎಂಬುದು ಸಿನೆಮಾದ ಮಾತು. ಅದು ನಿಜ ಕೂಡ. ರಕ್ತ ಕುದಿಯುವಂತಾ ಸನ್ನಿವೇಶದಲ್ಲೂ ಸೂರ್ಯ ಮತ್ತು ಪ್ರಕಾಶ್‍ರಾಜ್ ತಮ್ಮ ಪಾತ್ರಗಳನ್ನು ಸಮಚಿತ್ತದಿಂದ ನಿರ್ವಹಿಸಿದ ರೀತಿ ಮಾತ್ರ ಅವರಿಬ್ಬರ ಪ್ರಬುದ್ಧ ನಟನೆಗೆ ಸಾಕ್ಷಿ. ಧ್ರಾವಿಡ ಸಂಸ್ಕೃತಿ, ಸ್ಥಳೀಯ ಸಂಸ್ಕೃತಿಗಳನ್ನು ಎತ್ತಿಹಿಡಿಯುವ, ನೈಜತೆಗೆ ಹತ್ತಿರವಾಗಿರುವ, ಪ್ರತಿಭಟನಾತ್ಮಕ ಧೋರಣೆಯೊಂದಿಗೆ ಸಿನೆಮಾವನ್ನು ಒಂದು ಅಸ್ತ್ರವೆಂದು ನಂಬಿರುವಂತಾ ಕತೆಗಳು ತಮಿಳಿನಲ್ಲಿ ಹೆಚ್ಚೆಚ್ಚು ಬರುತ್ತಿವೆ. ಮತ್ತು ಅವು ತನ್ಮೂಲಕ ಇಡೀ ದಕ್ಷಿಣ ಭಾರತದ ಸಿನೆಮಾಗಳನ್ನೂ ಪ್ರಭಾವಿಸುತ್ತಿವೆ. ‘ಜೈ ಭೀಮ್’ ಅದಕ್ಕೆ ಮತ್ತೊಂದು ಸೇರ್ಪಡೆ. ಸೂರ್ಯ ತರದ ಹೀರೋಗಳ ಸಾತ್ ಇರುವುದು ಇಂತಹ ಸಿನೆಮಾಗಳ ಶಕ್ತಿಯನ್ನೂ ಹೆಚ್ಚಿಸುತ್ತದೆ. ಸೂರ್ಯ ದಂಪತಿಗೆ, ನಿರ್ದೇಶಕ ಜ್ಞಾನವೇಲ್‍ಗೆ ಅಭಿನಂದನೆಗಳು.
ನಿರ್ಮಾಪಕರು : ಸೂರ್ಯ ಮತ್ತು ಜ್ಯೋತಿಕಾ | ನಿರ್ದೇಶಕ : ಟಿ.ಜೆ.ಜ್ಞಾನವೇಲ್ | ಛಾಯಾಗ್ರಹಣ : ಎಸ್.ಆರ್.ಕಥಿರ್ | ಸಂಗೀತ : ಸೀನ್ ರಾಲ್ಡಾನ್ | ತಾರಾಬಳಗ : ಸೂರ್ಯ, ಲಿಜೋಮೋಲ್ ಜೋಸ್, ಕೆ.ಮಣಿಕಂಠನ್, ಪ್ರಕಾಶ್ ರಾಜ್, ರಜಿಶಾ ವಿಜಯನ್, ಗುರು ಸೋಮಸುಂದರಂ
(‘ಜೈ ಭೀಮ್’ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ)