‘ರಾಜಕೀಯವು ನನಗೆ ವೃತ್ತಿಯಲ್ಲ. ಇದು ಜನರಿಗಾಗಿ ಮಾಡುವ ಪವಿತ್ರ ಕೆಲಸ. ಅದಕ್ಕಾಗಿ ನಾನು ಬಹಳ ಸಮಯದಿಂದ ತಯಾರಿ ನಡೆಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದೇನೆ’ ಎಂದಿದ್ದಾರೆ ನಟ ವಿಜಯ್‌. ನಿನ್ನೆ ಅವರ ನೇತೃತ್ವದಲ್ಲಿ ‘ತಮಿಳಗ ವೆಟ್ರಿ ಕಳಗಂ’ ನೂತನ ರಾಜಕೀಯ ಪಕ್ಷ ಘೋಷಣೆಯಾಗಿದೆ.

ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್‌ ನೂತನ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ ಘೋಷಿಸಿದ್ದಾರೆ. ತಮ್ಮ ಪಕ್ಷವು ಪಾರದರ್ಶಕ, ಜಾತಿ ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಮೂಲಭೂತ ರಾಜಕೀಯ ಬದಲಾವಣೆ ಕಡೆಗೆ ಒತ್ತು ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ‘ನಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ ಅನ್ನು ನೋಂದಾಯಿಸಲು ನಾವು ಇಂದು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದೇವೆ. ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಜನರು ಬಯಸುವ ಮೂಲಭೂತ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ. ರಾಜಕೀಯವು ನನಗೆ ವೃತ್ತಿಯಲ್ಲ. ಇದು ಜನರಿಗಾಗಿ ಮಾಡುವ ಪವಿತ್ರ ಕೆಲಸ. ಅದಕ್ಕಾಗಿ ನಾನು ಬಹಳ ಸಮಯದಿಂದ ತಯಾರಿ ನಡೆಸುತ್ತಿದ್ದೇನೆ. ರಾಜಕೀಯ ನನಗೆ
ಹವ್ಯಾಸವಲ್ಲ. ಅದು ನನ್ನ ಬಹುದಿನದ ಆಸೆ. ನಾನು ಅದರಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ ವಿಜಯ್‌.

2024ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ‘2024ರ ಲೋಕಸಭೆ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದಿಲ್ಲ. ಬೇರೆ ಯಾವುದೇ ಪಕ್ಷವನ್ನು ಸಹ ಬೆಂಬಲಿಸುವುದಿಲ್ಲ. ಸಾಮಾನ್ಯ ಮತ್ತು ಕಾರ್ಯಕಾರಿ ಮಂಡಳಿ ಸಭೆಗಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆʼ ಎಂದು ವಿಜಯ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ವಿಜಯ್‌ ಅಭಿನಯದ ‘ಲಿಯೋ’ ಸಿನಿಮಾ ತೆರೆಕಂಡು ಯಶಸ್ವಿಯಾಗಿತ್ತು. ಪ್ರಸ್ತುತ ಅವರು ವೆಂಕಟ್ ಪ್ರಭು ನಿರ್ದೇಶನದ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌’ ಚಿತ್ರದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಮೈಕ್ ಮೋಹನ್, ಪ್ರಶಾಂತ್, ಪ್ರಭುದೇವ, ಸ್ನೇಹಾ, ಲೈಲಾ, ಜಯರಾಮ್, ಮೀನಾಕ್ಷಿ ಚೌಧರಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here