‘ವೈಶಂಪಾಯನ ತೀರ’ ಚಿತ್ರದ ಟಾಂಬಾಯ್ ಪಾತ್ರದಲ್ಲಿ ಗಮನ ಸೆಳೆದಿದ್ದ ನಟಿ ನಾಗಶ್ರೀ ಬೇಗಾರ್. ನೂತನ ಸಿನಿಮಾ ‘ಜಲಪಾತ’ದಲ್ಲಿನ ಅವರ ಫಸ್ಟ್‌ಲುಕ್, ವಿಶೇಷ ವೀಡಿಯೋ ಮೂಲಕ ರಿವೀಲ್ ಆಗಿದೆ.
ನಟಿಯರಾದ ನಭಾ ನಟೇಶ್, ಸಂಗೀತಾ ಶೃಂಗೇರಿ ಅವರ ನಂತರ ಶೃಂಗೇರಿಯ ಮತ್ತೊಬ್ಬರು ಪ್ರತಿಭೆ ನಾಗಶ್ರೀ ಬೇಗಾರ್ ಸಿಲ್ವರ್‌ಸ್ಕ್ರೀನ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಅವರು ನಾಯಕಿಯಾಗಿ ನಟಿಸಿರುವ ‘ಜಲಪಾತ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿನ ನಾಗಶ್ರೀ ಬೇಗಾರ್ ಕ್ಯಾರಕ್ಟರ್ ಲುಕ್ ಬಿಡುಗಡೆಯಾಗಿದೆ. ಈ ಹಿಂದೆ ‘ಹುಚ್ಚಿಕ್ಕಿ’ ಕಿರುಚಿತ್ರದಲ್ಲಿ ಹೆಸರು ಮಾಡಿದ್ದ ಅವರು ಇತ್ತೀಚಿನ ‘ವೈಶಂಪಾಯನ ತೀರ’ ಚಿತ್ರದ ಟಾಂಬಾಯ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ‘ಜಲಪಾತ’ ಚಿತ್ರದಲ್ಲಿ ಮೂರು ಭಿನ್ನ ಶೇಡ್ ಇರುವ ಸಂಕೀರ್ಣ ಪಾತ್ರದಲ್ಲಿ ನಟಿಸಿದ್ದಾರೆ. ಮಲೆನಾಡಿನ ಪ್ರಾದೇಶಿಕ ಭಾಷೆಯನ್ನು ಅವರು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ ಎನ್ನುವುದು ಚಿತ್ರತಂಡದ ಮಾತು.
https://www.instagram.com/reel/CvToT_aoCv3/?igshid=MzRlODBiNWFlZA==
ಯಕ್ಷಗಾನ, ನಾಟಕ, ನೃತ್ಯದಲ್ಲಿ ಪರಿಣತಿ ಇರುವ ನಾಗಶ್ರೀ ಹಲವು ಪ್ರತಿಷ್ಠಿತ ನಾಟಕೋತ್ಸವ, ಯುವ ಜನೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಮಾಯಾಮೃಗ’ ಧಾರಾವಾಹಿಯಲ್ಲಿ ನಟಿಸಿದ್ದ ಅವರು ಕೆಲವು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸವಾಲಿನ ಪಾತ್ರಗಳಲ್ಲಿ ನಟಿಸಬೇಕೆನ್ನುವುದು ಅವರ ಆಶಯ. ‘ಬಾಲ್ಯ ಕಳೆದದ್ದು ಶೃಂಗೇರಿಯಲ್ಲಿ. ಅಲ್ಲಿನ ಪರಿಸರ – ಸಾಂಸ್ಕೃತಿಕ ಹಿನ್ನೆಲೆ ನಟಿಯಾಗಿ ರೂಪುಗೊಳ್ಳಲು ನನಗೆ ನೆರವಾಯ್ತು. ಪಾತ್ರಗಳ ನಿರ್ವಹಣೆಗೆ ಅದರ ಒಳತೋಟಿಯನ್ನು ಹಿಡಿದು ಜೀವಿಸಬೇಕು. ನಟಿಯಾಗಿ ನನಗೆ ಸವಾಲಾಗುವಂಥ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ ನಾಗಶ್ರೀ.