ಕನ್ನಡದ ಪ್ರಮುಖ ನಾಯಕನಟರಿಗೆ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರದೀಪ್‌ ರಾಜ್‌ ಇಂದು ಮುಂಜಾನೆ ಅಗಲಿದ್ದಾರೆ. ಕಿರಾತಕ, ಅಂಜದಗಂಡು, ಮಿಸ್ಟರ್‌ 420 ಅವರ ನಿರ್ದೇಶನದ ಯಶಸ್ವೀ ಸಿನಿಮಾಗಳು.

ಕನ್ನಡ ಚಿತ್ರನಿರ್ದೇಶಕ ಪ್ರದೀಪ್‌ ರಾಜ್‌ (47 ವರ್ಷ) ಬಹು ಅಂಗಾಂಗ ವೈಫಲ್ಯದಿಂದ ಇಂದು ಮುಂಜಾನೆ ಪಾಂಡಿಚೆರಿಯಲ್ಲಿ ಅಗಲಿದ್ದಾರೆ. ಕಳೆದ ವರ್ಷ ಅವರಿಗೆ ಕೋವಿಡ್‌ ಸೋಂಕು ತಗುಲಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರು ಕೋವಿಡ್‌ನಿಂದ ಚೇತರಿಸಿಕೊಂಡರೂ ಪೂರ್ಣ ಗುಣಮುಖರಾಗಿರಲಿಲ್ಲ. ಕಳೆದ ಆರು ತಿಂಗಳಿನಿಂದ ಅನಾರೋಗ್ಯ ಅವರನ್ನು ಬಾಧಿಸುತ್ತಿತ್ತು. ಇಂದು ಮುಂಜಾನೆ ತಮ್ಮ ತಂದೆಯ ಊರು ಪಾಂಡಿಚೆರಿಯಲ್ಲಿ ಅವರು ಇಹಲೋಕ ತ್ಯಜಿಸಿದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪದವೀದರರಾದ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾದೆಡೆಗೆ ಪ್ಯಾಷನ್‌ ಇತ್ತು. ಜಾಹೀರಾತು ಮೀಡಿಯಾದಲ್ಲಿ ಕೆಲ ವರ್ಷ ಕೆಲಸ ಮಾಡಿದ ಅವರು ಸಿನಿಮಾರಂಗ ಪ್ರವೇಶಿಸಿದರು. ತಮಿಳು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದ ನಂತರ ‘ಕಿರಾತಕ’ ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾದರು. ಇದು ‘ಕಲವಾಣಿ’ ತಮಿಳು ಚಿತ್ರದ ರೀಮೇಕ್‌. ಯಶ್‌ ಅಭಿನಯದ ‘ಕಿರಾತಕ’ ಸಿನಿಮಾ ಪ್ರದೀಪ್‌ ರಾಜ್‌ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಇದು ಯಶ್‌ ವೃತ್ತಿ ಬದುಕಿಗೂ ತಿರುವು ನೀಡಿದ ಸಿನಿಮಾ ಕೂಡ ಹೌದು.

ಇದಾದ ನಂತರ ಪ್ರದೀಪ್‌ ರಾಜ್‌ ನಿರ್ದೇಶನದ ‘ರಜನಿಕಾಂತ’ (ದುನಿಯಾ ವಿಜಯ್‌), ‘ಮಿಸ್ಟರ್‌ 420’ (ಗಣೇಶ್‌) ಚಿತ್ರಗಳೂ ಯಶಸ್ಸು ಕಂಡವು. ಕಿಚ್ಚು, ಬೆಂಗಳೂರು 560023 ಅವರ ನಿರ್ದೇಶನದ ಇತರೆ ಚಿತ್ರಗಳು. ಚೊಚ್ಚಲ ‘ಕಿರಾತಕ’ ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ಅದೇ ಶೀರ್ಷಿಕೆಯಡಿ ಸರಣಿ ಸಿನಿಮಾ ‘ಕಿರಾತಕ 2’ ನಿರ್ದೇಶಿಸುತ್ತಿದ್ದರು ಪ್ರದೀಪ್‌ ರಾಜ್‌. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ತೆರೆಗೆ ಸಿದ್ಧವಾಗಿದೆ.

LEAVE A REPLY

Connect with

Please enter your comment!
Please enter your name here