ಚಂದವಾಗಿ ಕತೆಗಳನ್ನು ಹೇಳಬಲ್ಲ, ಶಾಯರಿಗಳನ್ನು ರಚಿಸಿ ಅದನ್ನು ಅದ್ಭುತವಾಗಿ ಹೇಳಿ ರಂಜಿಸಬಲ್ಲ ಜಾದೂಗಾರ ಜಾವೇದ್‌ ಅಖ್ತರ್‌. ಹಿಂದಿ ಸಿನಿಮಾರಂಗದಲ್ಲಿ ಪ್ರಭಾವಶಾಲಿ ಸಂಭಾಷಣೆಗಳನ್ನು ಬರೆಯುವ, ಗೀತೆ ರಚನೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರಿಗೆ ಇಂದು 80ನೇ ಹುಟ್ಟುಹಬ್ಬ.

ಜಾವೇದ್ ಅಖ್ತರ್ ಓರ್ವ ಕವಿ, ಬಾಲಿವುಡ್‌ನ ಹಲವಾರು ಸಿನಿಮಾಗಳಿಗೆ ಚಿತ್ರಕಥೆ ಬರೆದವರು, ಗೀತೆ ರಚನೆಕಾರರಾಗಿ ಖ್ಯಾತರಾದವರು. ಚಂದವಾಗಿ ಕತೆಗಳನ್ನು ಹೇಳಬಲ್ಲ, ಶಾಯರಿಗಳನ್ನು ರಚಿಸಿ ಅದನ್ನು ಅದ್ಭುತವಾಗಿ ಹೇಳಿ ರಂಜಿಸಬಲ್ಲ ಜಾದೂಗಾರ. ಹಿಂದಿ ಸಿನಿಮಾರಂಗದಲ್ಲಿ ಪ್ರಭಾವಶಾಲಿ ಸಂಭಾಷಣೆಗಳನ್ನು ಬರೆಯುವ, ಗೀತೆ ರಚನೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಜಾವೇದ್ ಅಖ್ತರ್ ಅವರಿಗೆ ಇಂದು 80ನೇ ಹುಟ್ಟುಹಬ್ಬ. 1970ರ ದಶಕದಲ್ಲಿ ಹಿಂದಿ ಸಿನಿಮಾರಂಗದಲ್ಲಿನ ಬದಲಾವಣೆಗೆ ಕಾರಣರಾದವರು ಸಲೀಂ- ಜಾವೇದ್ ಜೋಡಿ. ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಆಗಿನ ಕಾಲದಲ್ಲಿದ್ದ ಪ್ರೀತಿ-ಪ್ರೇಮ ಪ್ರಧಾನ ಸಿನಿಮಾಗಳಿಂದ ಭಿನ್ನವಾಗಿ ಮಸಾಲಾ ಸಿನಿಮಾ, ದರೋಡೆಕೋರನ ಕತೆ ಹೇಳುವ ಆಕ್ಷನ್ ಸಿನಿಮಾ, ಬಾಂಬೆ ಅಂಡರ್‌ವರ್ಲ್ಡ್‌ನ ಕತೆ ಹೇಳುವ ಕ್ರೈಂ ಸ್ಟೋರಿಗಳಿಗೆ ಚಿತ್ರಕಥೆ ಬರೆದವರು. 1971- 1987ರವರೆಗೆ ಈ ಜೋಡಿ ಸುಮಾರು 24 ಸಿನಿಮಾಗಳಲ್ಲಿ ಕೆಲಸ ಮಾಡಿದ್ದು ಇದರಲ್ಲಿ 20 ಸಿನಿಮಾಗಳು ಯಶಸ್ಸು ಕಂಡಿದ್ದವು. ವಯೋಸಹಜ ಕಾರಣಗಳಿಂದಾಗಿ ಸಲೀಂ ಖಾನ್ ಸಿನಿಮಾ ರಂಗದಿಂದ ದೂರ ಸರಿದಿದ್ದರೂ ಜಾವೇದ್ ಅಖ್ತರ್ ಈಗಲೂ ಸಿನಿಮಾ -ಸಾಹಿತ್ಯ ಲೋಕದಲ್ಲಿ ಸಕ್ರಿಯರಾಗಿದ್ದಾರೆ.

ಚಿತ್ರಕಥೆಯಿಂದಲೇ ಗೆದ್ದ ಸಿನಿಮಾಗಳಿವು

ಜಂಜೀರ್ (1973) | ಅಮಿತಾಬ್ ಬಚ್ಚನ್‌ನ Angry Young Man ಲುಕ್ ಮರೆಯುವುದಕ್ಕೆ ಸಾಧ್ಯವೆ? ಅದ್ಭುತ ಸಂಭಾಷಣೆ ಮತ್ತು ವಿನೂತನ ರೀತಿಯ ನಿರೂಪಣೆ ಹೊಂದಿದ ಜಂಜೀರ್ ಸಿನಿಮಾದ ಚಿತ್ರಕಥೆ ಬರೆದಿದ್ದು ಇದೇ ಸಲೀಂ- ಜಾವೇದ್ ಜೋಡಿ. ಈ ಸಿನಿಮಾ ಮೂಲಕ ಜಾವೇದ್ ಆಖ್ತರ್ ತಾನು ಕವಿ ಮಾತ್ರವಲ್ಲ ಅದ್ಭುತವಾಗಿ ಸಿನಿಮಾ ಚಿತ್ರಕಥೆಯನ್ನೂ ಬರೆಯಬಲ್ಲೆ ಎಂದು ಸಾಬೀತುಪಡಿಸಿದ್ದರು.

ಶೋಲೆ (1975) | ರಮೇಶ್ ಸಿಪ್ಪಿ ನಿರ್ದೇಶಿಸಿದ ‘ಶೋಲೆ’ ಸಿನಿಮಾ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಧರ್ಮೇಂದ್ರ, ಹೇಮಾ ಮಾಲಿನಿ, ಜಯಾ ಭಾದುರಿ ಮತ್ತು ಅಮಿತಾಬ್ ಬಚ್ಚನ್ ನಟನೆಯ ಈ ಚಿತ್ರದ ಸಂಭಾಷಣೆ ಇಂದಿಗೂ ಹಸಿರಾಗಿದೆ. ಹಿಂದಿ ಸಿನಿಮಾರಂಗದಲ್ಲಿ ಸೂಪರ್ ಹಿಟ್ ಆಗಿದ್ದ ಶೋಲೆಯ ಚಿತ್ರಕಥೆ ಸಲೀಂ- ಜಾವೇದ್ ಜೋಡಿಯದ್ದಾಗಿತ್ತು.

ದೀವಾರ್ (1975) | ಯಶ್ ಚೋಪ್ರಾ ನಿರ್ದೇಶನದ ‘ದೀವಾರ್’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಶಶಿ ಕಪೂರ್ ನಿರ್ವಹಿಸಿದ ಪಾತ್ರಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ‘ಮೇ ಆಜ್ ಭೀ ಫೇಕೇ ಹುವೇ ಪೈಸೆ ನಹೀ ಉಠಾತಾ’, ‘ಮೇರೆ ಪಾಸ್ ಮಾ ಹೈ’ ಮೊದಲಾದ ಡೈಲಾಗ್‌ಗಳನ್ನು ಈಗಲೂ ಜನರು ನೆನಪಿಟ್ಟುಕೊಂಡಿದ್ದಾರೆ. ಈ ಕ್ರೈಂ ಥ್ರಿಲ್ಲರ್ ಸಿನಿಮಾದ ಕತೆಯೂ ಸಲೀಂ-ಜಾವೇದ್ ಜೋಡಿಯ ಲೇಖನಿಯಿಂದಲೇ ಮೂಡಿಬಂದಿದ್ದು.

ಡಾನ್ (1978) | ಚಂದ್ರ ಬಾರೋಟ್ ನಿರ್ದೇಶನದ ‘ಡಾನ್’ ಸಿನಿಮಾಕ್ಕೆ ಚಿತ್ರಕಥೆ ಬರೆದದ್ದು ಇದೇ ಸಲೀಂ- ಜಾವೇದ್ ಜೋಡಿ. ಅಮಿತಾಬ್ ಬಚ್ಚನ್‌ ದ್ವಿಪಾತ್ರದಲ್ಲಿ ನಟಿಸಿದ ಈ ಸಿನಿಮಾ ಆಕ್ಷನ್- ಥ್ರಿಲ್ಲರ್ ಆಗಿದ್ದು, ಆ ಕಾಲದಲ್ಲಿ ಬಾಕ್ಸ್‌ಆಫೀಸಿನಲ್ಲಿ ಭರ್ಜರಿ ಹಣ ಗಳಿಸಿತ್ತು.

ಮೈ ಆಜಾದ್ ಹೂನ್ (1989) | ಸಾಮಾಜಿಕ ಮತ್ತು ರಾಜಕೀಯ ನಿರೂಪಣೆಗಳ ಸಂಕೀರ್ಣತೆಗಳನ್ನು ಎತ್ತಿ ತೋರಿಸಿದ ಸಿನಿಮಾ ಇದು. ಅಮಿತಾಬ್ ಬಚ್ಚನ್ ಮತ್ತು ಶಬಾನಾ ಆಜ್ಮಿ ನಟನೆಯ ಈ ಸಿನಿಮಾಕ್ಕೆ ಜಾವೇದ್ ಅಖ್ತರ್ ಚಿತ್ರಕತೆ ಬರೆದಿದ್ದರು.

ಲಕ್ಷ್ಯ (2004) | ಫರ್ಹಾನ್ ಅಖ್ತರ್ ನಿರ್ದೇಶನ, ಅಮಿತಾಬ್ ಬಚ್ಚನ್, ಹೃತಿಕ್ ರೋಷನ್ ಮತ್ತು ಪ್ರೀತಿ ಝಿಂಟಾ ನಟನೆಯ ಈ ಸಿನಿಮಾದ ಚಿತ್ರಕತೆ ಜಾವೇದ್ ಅಖ್ತರ್ ಅವರದ್ದಾಗಿತ್ತು.

ಕನ್ನಡ ಸಿನಿಮಾ ನಂಟು | ಬಾಲಿವುಡ್ ಮಾತ್ರವಲ್ಲ ಜಾವೇದ್ ಅಖ್ತರ್- ಸಲೀಂ ಖಾನ್ ಜೋಡಿ ಕನ್ನಡ ಸಿನಿಮಾಕ್ಕೂ ಕಥೆ ಬರೆದಿದ್ದಾರೆ. ಡಾ ರಾಜ್ ಕುಮಾರ್, ಆರತಿ ನಟಿಸಿರುವ ‘ರಾಜಾ ನನ್ನ ರಾಜಾ’ ಮತ್ತು ಡಾ. ರಾಜ್ ಕುಮಾರ್, ಆರತಿ, ಜಯಮಾಲಾ ನಟನೆಯ ‘ಪ್ರೇಮದ ಕಾಣಿಕೆ’ ಈ ಎರಡು ಸಿನಿಮಾಗಳಿಗೆ ಕತೆ ಬರೆದವರು ಸಲೀಂ- ಜಾವೇದ್. ಈ ಎರಡೂ ಸಿನಿಮಾಗಳು ಹಿಟ್ ಆಗಿದ್ದವು.

LEAVE A REPLY

Connect with

Please enter your comment!
Please enter your name here