ಕಳೆದ ವರ್ಷ ಮಾರ್ಚ್‌ನಲ್ಲಿ ಅಗಲಿದ ಸತೀಶ್‌ ಕೌಶಿಕ್‌ ಅವರ ಮಹತ್ವಾಕಾಂಕ್ಷೆಯ ಸಿನಿಮಾ ‘ಕಾಗಜ್‌ 2’ ಟ್ರೇಲರ್‌ ಬಿಡುಗಡೆಯಾಗಿದೆ. ಅವರು ರಚಿಸಿ, ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರವಿದು. ಅನುಪಮ್‌ ಖೇರ್‌, ದರ್ಶನ್‌ ಕುಮಾರ್‌ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಮಾರ್ಚ್‌ 1ರಂದು ಸಿನಿಮಾ ತೆರೆಕಾಣಲಿದೆ.

ಸತೀಶ್ ಕೌಶಿಕ್ ರಚಿಸಿ, ನಟಿಸಿರುವ ‘ಕಾಗಜ್ 2’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಅನುಪಮ್ ಖೇರ್ ಮತ್ತು ದರ್ಶನ್‌ ಕುಮಾರ್‌ ಚಿತ್ರದ ಪ್ರಮುಖ ಪಾತ್ರಧಾರಿಗಳು. ಸಾಮಾಜಿಕ ಕಳಕಳಿಯ ಸಂದೇಶವನ್ನು ಹೊಂದಿರುವ ಈ ಚಿತ್ರವನ್ನು ವಿ ಕೆ ಪ್ರಕಾಶ್‌ ನಿರ್ದೇಶಿಸಿದ್ದಾರೆ. ಟ್ರೇಲರ್‌ನಲ್ಲಿ ಸತೀಶ್ ಕೌಶಿಕ್ ಮಗಳನ್ನು ಚಿಕಿತ್ಸೆಗಾಗಿ ಆಸ್ಟತ್ರೆಗೆ ದಾಖಲಿಸಲು ಅಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿರುತ್ತಾರೆ. ಮಾರ್ಗ ಮಧ್ಯೆ ರಾಜಕಾರಣಿಯೊಬ್ಬರ ಚುನಾವಣಾ ಪ್ರಚಾರದಿಂದಾಗಿ ಟ್ರಾಫಿಕ್‌ ಜಾಮ್‌ ಆಗಿದೆ. ಗಾಯಗೊಂಡಿದ್ದ ಹೆಣ್ಣುಮಗಳು ಅಂಬುಲೆನ್ಸ್‌ನಲ್ಲೇ ಸಾವನ್ನಪ್ಪುತ್ತಾಳೆ. ತೀರಿಕೊಂಡ ತನ್ನ ಒಬ್ಬಳೇ ಮಗಳಿಗೆ ನ್ಯಾಯ ದೊರಕಬೇಕೆಂದು ಹೋರಾಟ ನಡೆಸುವ ತಂದೆಯ ಪ್ರಯತ್ನದ ಸುತ್ತ ಸಿನಿಮಾ ಸುತ್ತುತ್ತದೆ.

ಅನುಪಮ್ ಖೇರ್ ಪ್ರಕರಣದ ಪರವಾಗಿ ಹೋರಾಡುವ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದರ್ಶನ್ ಕುಮಾರ್‌ ಅನುಪಮ್ ಮಗನಾಗಿ ಕಾಣಿಸಿಕೊಂಡಿದ್ದಾರೆ. ನೀನಾ ಗುಪ್ತಾ ಅನುಪಮ್ ಅವರ ಪತ್ನಿಯಾಗಿ, ಸ್ಮೃತಿ ಕಲ್ರಾ ಸತೀಶ್ ಪತ್ನಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಟ್ರೇಲರ್‌ ಬಿಡುಡೆಯ ಸಂದರ್ಭದಲ್ಲಿ ದಿವಂಗತ ಸತೀಶ್‌ ಕೌಶಿಕ್‌ ಅವರನ್ನು ಕುರಿತು ಅನುಪಮ್‌ ಖೇರ್‌, ‘ಈ ಚಿತ್ರವನ್ನು ರಚಿಸಲು ನೀವು ಎಷ್ಟು ಶ್ರಮ ವಹಿಸಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ಈ ಚಿತ್ರದ ತೇಜಸ್ಸು ಜಗತ್ತಿಗೆ ತಲುಪುವಂತೆ ನಾವೆಲ್ಲರೂ ಪ್ರಯತ್ನಿಸುತ್ತೇವೆ’ ಎಂದಿದ್ದಾರೆ. ಚಿತ್ರವನ್ನು ಶಶಿ ಸತೀಶ್ ಕೌಶಿಕ್, ನಿಶಾಂತ್ ಕೌಶಿಕ್, ಗಣೇಶ್ ಜೈನ್ ಮತ್ತು ರತನ್ ಜೈನ್ ನಿರ್ಮಿಸಿದ್ದಾರೆ. ಸಿನಿಮಾ ಮಾರ್ಚ್‌ 1ರಂದು ಬಿಡುಗಡೆಯಾಗಲಿದೆ. ‘ಕಾಗಜ್‌’ ಭಾಗ ಒಂದರಲ್ಲಿ ಪಂಕಜ್ ತ್ರಿಪಾಠಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ Zee5ನಲ್ಲಿ ನೇರವಾಗಿ ಬಿಡುಗಡೆಯಾಗಿತ್ತು.

LEAVE A REPLY

Connect with

Please enter your comment!
Please enter your name here