ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಡೆಬ್ಯೂ ಸಿನಿಮಾ ‘ಬನಾರಸ್’ ಆಡಿಯೋ ಹಕ್ಕುಗಳನ್ನು ‘ಲಹರಿ’ ದುಬಾರಿ ಮೊತ್ತಕ್ಕೆ ಖರೀದಿಸಿದೆ. ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸುತ್ತಿದ್ದಾರೆ.
ನಾಯಕ ನಟ ಹಾಗೂ ನಿರ್ಮಾಣ ಸಂಸ್ಥೆಯೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಬನಾರಸ್’ ಚಿತ್ರದ ಆಡಿಯೋ- ವಿಡಿಯೋ ಹಕ್ಕುಗಳು ಕನ್ನಡದ ಪ್ರತಿಷ್ಟಿತ ಆಡಿಯೋ ಸಂಸ್ಥೆ ಲಹರಿ ಪಾಲಾಗಿವೆ. ಈ ಚಿತ್ರವು ಕನ್ನಡ, ಹಿಂದಿ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಬರುತ್ತಿದ್ದು, ಆ ಎಲ್ಲಾ ಭಾಷೆಗಳ ಆಡಿಯೋ ಮತ್ತು ವಿಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿದೆ. ಸದ್ಯಕ್ಕೆ ಅದರ ಮೊತ್ತ ರಿವೀಲ್ ಆಗಿಲ್ಲವಾದರೂ, ಚೊಚ್ಚಲ ನಾಯಕ ನಟರೊಬ್ಬರ ಸಿನಿಮಾಗಳ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಲಹರಿ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿರುವುದಾಗಿ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಈ ಕುರಿತು ಲಹರಿ ಸಂಸ್ಥೆಯೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ‘ಹಲವು ಕಾರಣಕ್ಕೆ ಸುದ್ದಿಯಲ್ಲಿರುವ ‘ಬನಾರಸ್’ ಚಿತ್ರದ ಆಡಿಯೋ – ವಿಡಿಯೋ ಹಕ್ಕುಗಳನ್ನು ಖರೀದಿಸಿದ್ದಕ್ಕೆ ಹೆಮ್ಮೆ ಇದೆ’ ಎಂದಿದೆ. ‘ಒಲವೇ ಮಂದಾರ’ ಹಾಗೂ ‘ಬೆಲ್ ಬಾಟಮ್’ ಖ್ಯಾತಿಯ ನಿರ್ದೇಶಕ ಜಯತೀರ್ಥ ಡೈರೆಕ್ಟ್ ಮಾಡಿರುವ ಚಿತ್ರವಿದು. ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ಈ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಝೈದ್ ಡೆಬ್ಯೂ ಚಿತ್ರ ಹೊಸ ದಾಖಲೆ ಬರೆದಿದೆ. ಈ ಹೊಸ ಇತಿಹಾಸಕ್ಕೆ ಮೊದಲ ಕಾರಣ ಹಾಡುಗಳು, ಎರಡನೇ ಕಾರಣ ಲಹರಿ ಸಂಸ್ಥೆ.
ಲಹರಿ ಬರೀ ದೊಡ್ಡವರ ಸಿನಿಮಾಗಳಿಗಷ್ಟೇ ಸೀಮಿತವಾಗಿಲ್ಲ, ಸ್ಟಾರ್ ನಟರುಗಳಿಗಷ್ಟೇ ಮಣೆ ಹಾಕಲ್ಲ. ಕಲಾವಿದರು ಯಾರೇ ಇರಲಿ, ಸಿನಿಮಾ ಯಾವುದೇ ಇರಲಿ ಸಂಗೀತದಲ್ಲಿ ಹೊಸತನವಿದೆ, ಸಾಹಿತ್ಯ ಕೇಳುಗರನ್ನು ಆಕರ್ಷಿಸುತ್ತದೆ, ಹಾಡುಗಾರನ ಕಂಠದಲ್ಲಿ ನಾವೀನ್ಯತೆಯಿದೆ ಎಂತಾದರೆ ಸ್ಟಾರ್ ಡಮ್ ನೋಡಲ್ಲ. ಬದಲಾಗಿ ಕಲೆಗೆ ಬೆಲೆಕೊಡುತ್ತದೆ. ದಾಖಲೆ ಬೆಲೆ ಕೊಟ್ಟು ಪ್ರೋತ್ಸಾಹಿಸ್ತಾರೆ ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ. ಸದ್ಯ, ಇದಕ್ಕೆ ತಾಜಾ ಉದಾಹರಣೆ ’ಬನಾರಸ್’. ಬನಾರಸ್ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಯ ಆಡಿಯೋ ಹಾಗೂ ವಿಡಿಯೋ ರೈಟ್ಸ್ ನ ದುಬಾರಿ ಮೊತ್ತ ಕೊಟ್ಟೇ ಲಹರಿ ಹಾಗೂ ಟಿ ಸೀರೀಸ್ ಜಂಟಿಯಾಗಿ ಖರೀದಿಸಿವೆ. ಹಿಂದೆಂದೂ ಕೂಡ ಡೆಬ್ಯೂ ಹೀರೋನ ಸಿನಿಮಾದ ಎಲ್ಲಾ ಭಾಷೆಯ ಆಡಿಯೋ ಹಕ್ಕುಗಳ ರೈಟ್ಸ್ ಪಡೆದುಕೊಂಡಿರಲಿಲ್ಲ. ಇದೇ ಮೊದಲ ಭಾರಿಗೆ ಪ್ರತಿಷ್ಠಿತ ಆಡಿಯೋ ಕಂಪೆನಿಗಳು ಯುವನಟನ ಚೊಚ್ಚಲ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿವೆ. ಹೀಗಾಗಿ, ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಂತಾಗಿದೆ.