ಜಾನ್ ಅಬ್ರಹಾಂ ನಟನೆಯ ‘ಸತ್ಯಮೇವ ಜಯತೇ 2’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಭಿನ್ನ ಮನೋಧರ್ಮದ ಮೂರು ಪಾತ್ರಗಳಲ್ಲಿ ಜಾನ್ ಕಾಣಿಸಿಕೊಂಡಿದ್ದು, ಭರ್ಜರಿ ಆಕ್ಷನ್ ಪ್ಯಾಕೇಜ್ ಚಿತ್ರವಾಗುವ ಎಲ್ಲಾ ಲಕ್ಷಣಗಳೂ ಟ್ರೈಲರ್‌ನಲ್ಲಿ ಕಾಣಿಸುತ್ತವೆ.

ಹೈಆಕ್ಟೇನ್‌ ಆಕ್ಷನ್‌, ಭ್ರಷ್ಟಾಚಾರ, ರಾಜಕಾರಣ, ಭರ್ಜರಿ ಮೈಕಟ್ಟು… ‘ಸತ್ಯಮೇವ ಜಯತೇ 2’ ಟ್ರೈಲರ್ ನೋಡಿದಾಗ ನಟ ಜಾನ್ ಅಬ್ರಹಾಂ ನಟನೆಯ ಸಿನಿಮಾ ಪಕ್ಕಾ ಕಮರ್ಷಿಯಲ್‌ ಪ್ಯಾಕೇಜ್‌ನಂತೆ ಭಾಸವಾಗುತ್ತದೆ. ‘ಸತ್ಯಮೇವ ಜಯತೆ’ (2018) ಚಿತ್ರದಲ್ಲಿ ಜಾನ್‌ ವ್ಯವಸ್ಥೆಯ ವಿರುದ್ಧ ಬಡಿದಾಡುತ್ತಾ ದೇಶಪ್ರೇಮಿಯಾಗಿ ಗೋಚರಿಸಿದ್ದರು. ಸೀಕ್ವೆಲ್‌ನಲ್ಲಿಯೂ ಈ ಥೀಮ್‌ ಇದ್ದು, ಮೂರು ಜಾನ್ ಅಬ್ರಹಾಂಗಳಿದ್ದಾರೆ! ತಂದೆ ಹಾಗೂ ಭಿನ್ನ ಮನೋಧರ್ಮದ ಆತನ ಇಬ್ಬರು ಮಕ್ಕಳ ಪಾತ್ರಗಳಲ್ಲಿ ಜಾನ್ ಅಬ್ರಹಾಂ ಮೂರು ಪಾತ್ರದಲ್ಲಿ ನಟಿಸಿದ್ದಾರೆ. ಎಂದಿನಂತೆ ಮೈಹುರಿಗೊಳಿಸಿದ ದೇಹದೊಂದಿಗೆ ಅವರು ವೈರಿಗಳನ್ನು ಚೆಂಡಾಡುತ್ತಾರೆ. ಮತ್ತೊಂದು ಎಳೆಯಲ್ಲಿ ರಾಜಕೀಯ ಮೇಲಾಟಗಳೂ ಇವೆ.

‘ತನ್ ಮನ್‌ ಧನ್ ಸೆ ಬಡ್ಕರ್‌ ಜನ್‌ ಗಣ್ ಮನ್‌’, ‘ಮೇರೆ ಫಂಡಾ ದಂಡೀ ನಹೀ ಹೈ, ಮೇರೆ ಫಂಡಾ ದಂಡಾ ಹೈ’.. ಇಂತಹ ರಾಷ್ಟ್ರಪ್ರೇಮ ಕುರಿತ ಭರಪೂರ ಡೈಲಾಗ್‌ಗಳು ಚಿತ್ರದಲ್ಲಿವೆ. ರಾಜಕಾರಣಿ, ಪೊಲೀಸ್ ಮತ್ತು ರೈತ ಮುಖಂಡನಾಗಿ ಮೂರು ಪಾತ್ರಗಳಲ್ಲಿದ್ದಾರೆ ಜಾನ್‌. ಅನೂಪ್‌ ಸೋನಿ, ಹರ್ಷ್‌ ಛಾಯಾ, ಗೌತಮ್‌ ಕಪೂರ್ ಇತರೆ ಮುಖ್ಯ ಪಾತ್ರಗಳಲ್ಲಿದ್ದಾರೆ. ದಿವ್ಯಾ ಖೋಸ್ಲಾ ಕುಮಾರ್ ಈ ಚಿತ್ರದೊಂದಿಗೆ ಬಹಳ ದಿನಗಳ ನಂತರ ತೆರೆಗೆ ಮರಳುತ್ತಿದ್ದಾರೆ. ದೇಶಭಕ್ತಿಯ ಕಂಟೆಂಟ್ ಜೊತೆಗೆ ಬಾಲಿವುಡ್‌ ಮಸಾಲಾ ಸಿನಿಮಾಗಳಲ್ಲಿ ಕಡ್ಡಯಾವಾಗಿರುವ ಐಟಂ ಡ್ಯಾನ್ಸ್‌ ಇದೆ. ಈ ಹಾಡಿಗೆ ನೋರಾ ಫತ್ಹೇ ಕುಣಿದಿದ್ದಾರೆ. ಮಿಲಾಪ್ ಜವೇರಿ ನಿರ್ದೇಶನದ ಸಿನಿಮಾ ನವೆಂಬರ್ 25ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here