ಕನ್ನಡ ಚಿತ್ರರಂಗದಲ್ಲಿ ‘ನೆನಪಿರಲಿ’ ಪ್ರೇಮ್ ಎಂದರೆ ಅದು ಸದಭಿರುಚಿ ಚಿತ್ರಗಳಿಗೆ ಇನ್ನೊಂದು ಹೆಸರು. ರಮೇಶ್ ಅರವಿಂದ್ ಅವರ ನಂತರ ಕನ್ನಡ ಪ್ರೇಕ್ಷಕರು ಇನ್ನೊಬ್ಬ ಫ್ಯಾಮಿಲಿ ನಟನಿಗೆ ಮಣೆ ಹಾಕಿದ್ದು ಅಂದ್ರೆ ಅದು ನೆನಪಿರಲಿ ಪ್ರೇಮ್ ಅವರಿಗೆ. ಆ ನಂಬಿಕೆಯನ್ನು ಇಲ್ಲಿಯವರೆಗೂ ಉಳಿಸಿಕೊಂಡು ಬಂದಿರುವ ಪ್ರೇಮ್ ಈಗ ತಮ್ಮ ವೃತ್ತಿಜೀವನದ ಮಹತ್ವದ ಚಿತ್ರದ ಬಿಡುಗಡೆಯ ಸಂತಸದಲ್ಲಿದ್ದಾರೆ.

ಚಿತ್ರಮಂದಿರಗಳು ಮತ್ತೆ ಆರಂಭವಾದಾಗಿನಿಂದ ಸ್ಟಾರ್ ಚಿತ್ರಗಳು ಒಂದರ ನಂತರ ಇನ್ನೊಂದು ತೆರೆಗೆ ಬರಲು ರೆಡಿಯಾಗುತ್ತಿವೆ. ಕೆಲವು ಚಿತ್ರಗಳು ಓಟಿಟಿಗಳಲ್ಲೇ ಬಿಡುಗಡೆಯಾಗುತ್ತಿದ್ದರೆ, ಇನ್ನು ಕೆಲವು ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಹೀಗೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲು ಅದ್ದೂರಿಯಾಗಿ ಸಜ್ಜಾಗಿರುವ ಚಿತ್ರ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’. ಇತ್ತೀಚೆಗೆ ‘ಸಲಗ’ ಮತ್ತು ‘ಕೋಟಿಗೊಬ್ಬ 3’ ಚಿತ್ರಗಳು ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಿದ್ದವು. ಇವುಗಳ ಬೆನ್ನಲ್ಲೇ ಧನಂಜಯ ಅವರ ‘ರತ್ನನ್ ಪ್ರಪಂಚ’ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಈಗ ‘ಪ್ರೇಮಂ ಪೂಜ್ಯಂ’ ಚಿತ್ರ ಚಿತ್ರಮಂದಿರಗಳತ್ತ ಮುಖ ಮಾಡಿದೆ. ಮುಂದಿನ ತಿಂಗಳು ಅಂದರೆ ನವೆಂಬರ್ 12ಕ್ಕೆ ‘ಪ್ರೇಮಂ ಪೂಜ್ಯಂ’ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ದರ್ಶನ ಕೊಡಲಿದೆ.

ಈಗಾಗಲೇ ಚಿತ್ರರಂಗದಲ್ಲಿ ಹಲವಾರು ಸಾಫ್ಟ್ ಲವ್ ಸ್ಟೋರಿಗಳನ್ನು ಕೊಟ್ಟಿರುವ ನಟ ಪ್ರೇಮ್ ಈ ಚಿತ್ರದ ಮೂಲಕ ಪ್ರೀತಿಯ ಇನ್ನೊಂದು ಆಯಾಮವನ್ನು ಅನಾವರಣಗೊಳಿಸಲಿದ್ದಾರೆ. ಇದುವರೆಗಿನ ಈ ಚಿತ್ರದ ಪೋಸ್ಟರ್‌ಗಳು ಮತ್ತು ಟೀಸರ್‌ಗಳು ಇದೊಂದು ನವಿರಾದ ಪ್ರೇಮ ಕಥೆ ಎಂಬುದನ್ನು ಸಾರಿ ಹೇಳುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್ ಇದಕ್ಕೆ ಇನ್ನೊಂದು ಸಾಕ್ಷಿ. ಪ್ರೇಮ್ ಅವರಿಗೆ ರಾಘವೇಂದ್ರ ನಿರ್ದೇಶನದ ಈ ಚಿತ್ರದ ಮೇಲೆ ಅಪಾರ ಭರವಸೆ ಇದೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಇನ್ನಷ್ಟು ದೊಡ್ಡದಾಗಿ ಬೆಳೆಯುವ ನಂಬಿಕೆ ಅವರದ್ದು. ಅದಕ್ಕೆ ಪುಷ್ಠಿ ಕೊಡುವಂತೆ ಈಗಾಗಲೇ ಪ್ರೇಮ್ ಅಭಿನಯದಲ್ಲಿ ಅದ್ದೂರಿ ಬಜೆಟ್‌ನ ಚಿತ್ರವೊಂದು ಶುರುವಾಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಾಕಷ್ಟು ಸದ್ದು ಮಾಡಿದೆ. ಹಾಗಾಗಿ ‘ಪ್ರೇಮಂ ಪೂಜ್ಯಂ’ ಚಿತ್ರ ಪ್ರೇಮ್ ಅವರ ವೃತ್ತಿಜೀವನದಲ್ಲಿ ಮಹತ್ವದ ಚಿತ್ರ ಎಂದರೆ ತಪ್ಪಿಲ್ಲ.

LEAVE A REPLY

Connect with

Please enter your comment!
Please enter your name here